ಅಕ್ಕನೆಡೆಗೆ-ವಚನ – 45
ಶರಣ ಸಂಗದ ಸತ್ಸಂಗದಲಿ
ಅಯ್ಯಾ ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯ
ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕುವೆನಯ್ಯಾ
ಅಯ್ಯಾ ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾ ಚೆನ್ನಮಲ್ಲಿಕಾರ್ಜುನ
ಅಕ್ಕಮಹಾದೇವಿ ಎಂದರೆ ಹುಟ್ಟುತ್ತಲೇ ವೈರಾಗ್ಯ ನಿಧಿ ಹಾಗೂ ಹುಟ್ಟು ಅನುಭಾವಿ ಎನ್ನುವ ಮಾತು ಸಾರ್ವತ್ರಿಕ ಸತ್ಯ. ಅವಳಿಗಿದ್ದ ಹುಡುಕಾಟಕ್ಕೆ ಶರಣರ ಸಂಗವೇ ಉತ್ತರ ನೀಡಬಹುದೆಂದು ಮೊದಲೇ ತಿಳಿದುಕೊಂಡಿದ್ದಳು. ಹಾಗಾಗಿ ಶರಣರ ಬಳಿ ಹೋಗಬೇಕು, ಅವರೊಂದಿಗೆ ಸಮಯ ಕಳೆಯಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದಳು. ಅವಳಲ್ಲಿ ಸದಾ ಜೀವಂತವಾಗಿದ್ದ ಮಹದಾಸೆ ಎಂದರೆ ಕಲ್ಯಾಣದ ಕಡೆ ನಡೆಯಬೇಕು ಶರಣರೊಂದಿಗೆ ಸಮಯ ಕಳೆಯಬೇಕೆಂದು ಅವಳ ಜೀವದ, ಜೀವನದ ತುಡಿತ. ಮೇಲಿನ ವಚನವು ಇಂತಹುದೇ ಆಶಯ ಹೊಂದಿದೆ.
ಅಯ್ಯಾ ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯ
ಶರಣರು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಹತ್ತಿಕ್ಕಿ ಗೆದ್ದವರು. ಅವರು ಜ್ಞಾನಿಗಳು, ನುಡಿದಂತೆ ನಡೆಯುವವರು, ಸತ್ಯದ ಹಾದಿ ತುಳಿದ ವಾಸ್ತವವಾದಿಗಳು, ಬದುಕಿನಲ್ಲಿ ಇರಬಹುದಾದ ಕತ್ತಲೆಯನ್ನು ಹೊಡೆದೋಡಿಸಿದವರು, ಬೆಳಕಿನ ದೀವಟಿಗೆ ಹಿಡಿದು ತಾವು ನಡೆದದ್ದಲ್ಲದೆ, ಇಂದಿಗೂ ನಮ್ಮನ್ನು ನಡೆಸುತ್ತಿರುವವರು, ಹೀಗೆಲ್ಲಾ ನಾವು ಅವರನ್ನು ಅರ್ಥೈಸಿಕೊಳ್ಳಬಹುದು. ಅವರಲ್ಲಿದ್ದ ಇಂತಹ ಗುಣಧರ್ಮ, ಮನೋಧರ್ಮಕ್ಕೆ ಅವರುಗಳೇ ರಚಿಸಿದ ವಚನಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಬಸವಣ್ಣನ ಕೆಳಗಿನ ವಚನದಿಂದ ಶರಣರು ಹೇಗೆ ಕತ್ತಲೆಯನ್ನು ಕಳೆದರು? ಅವರು ಎಂಥ ಅನುಭಾವಿಗಳು? ಎನ್ನುವುದನ್ನು ಹೇಳುತ್ತದೆ.
“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ”
ಶರಣರ ಸಮಕಾಲೀನಳಾದ ಕಸಗುಡಿಸುವ ಸತ್ಯಕ್ಕನ ಪ್ರಾಮಾಣಿಕತೆ, ನಿಷ್ಠೆ ‘ಸತ್ಯಶರಣರು’ ಎನ್ನುವ ಪದಕ್ಕೆ ಮಾದರಿಯಾಗುತ್ತದೆ.
“ಲಂಚವಂಚನಕ್ಕೆ ಕೈಯಾನದಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ
ಶರಣರು ಎಲ್ಲಾ ರೀತಿಯ ತಿಳುವಳಿಕೆ ಹೊಂದಿದ ಸರಳ ವ್ಯಕ್ತಿತ್ವದವರಾಗಿದ್ದರು. ಪ್ರಾಮಾಣಿಕತೆ, ಭದ್ಧತೆ, ವಿನಮ್ರತೆ, ನಿಷ್ಟೆಯುಳ್ಳವರು. ಹೀಗೆ ಇರಲು ಹೇಗೆ ಸಾಧ್ಯ? ಎಂದು ನಮಗೆ ನಾವು ಪ್ರಶ್ನಿಸಿಕೊಂಡರೆ ಉತ್ತರವಿಲ್ಲ. ಸಾಮಾನ್ಯವಾಗಿ ‘ಎಲ್ಲವೂ ನನ್ನಿಂದಲೇ, ನಾನೇ ಸಂಪಾದಿಸಿದ್ದು’ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಶರಣರ ಚಿಂತನೆ ಹಾಗಿರಲಿಲ್ಲ. ಅವರು ಯಾವುದನ್ನೂ ತಮ್ಮಿಂದಲೇ ಎಂದು ಹೇಳಿದವರಲ್ಲ, ಅದಕ್ಕೇ ಅವರು ಮಹಾನುಭಾವಿಗಳು.
ಜೇಡರ ದಾಸಿಮಯ್ಯನ ಈ ವಚನ ಅದಕ್ಕೆ ಸೂಕ್ತ ಉದಾಹರಣೆ.
“ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ”
ಹೀಗೆ ಶರಣರು ತಮ್ಮ ಬದುಕಿನಲ್ಲಿ ನಾನು, ನನ್ನದು ಎನ್ನುವ ಕತ್ತಲೆ ಕಳೆದುಕೊಂಡವರು. ಅಂತಹ ಸತ್ಯಶರಣರ ಪರಿಯನ್ನು ಏನೆಂದು ಹೇಳಲಿ ಎಂದು ಬೆರಗಾಗಿ ಅಕ್ಕ ನುಡಿಯುತ್ತಾಳೆ.
ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕುವೆನಯ್ಯಾ
ಅನುಭವ ಮತ್ತು ಅನುಭಾವದ ವ್ಯತ್ಯಾಸವೆಂದರೆ, ಪಂಚೇಂದ್ರಿಯಗಳಾದ ಕಣ್ಣು, ಕವಿ, ಮೂಗು, ಬಾಯಿ ಮತ್ತು ಚರ್ಮದ ಮೂಲಕ ಸುಖಿಗಳಾಗುವುದು ಅನುಭವ, ಈ ಪಂಚೇಂದ್ರಿಯಗಳನ್ನು ಮೀರಿದ ಅನುಭವವೇ ಅನುಭಾವ. ಹಾಗಾಗಿ ಶರಣರು ಕೇವಲ ಅನುಭವಿಗಳಲ್ಲ, ಮಹಾನುಭಾವಿಗಳು ಎಂದು ಅಕ್ಕ ಹೇಳುತ್ತಾಳೆ.
ಅವರ ಮನ ಹೇಗೆಂದರೆ ಘನವನ್ನು ಒಳಗೊಂಡಂತೆ. ಘನವೆಂದರೆ ಎಲ್ಲಾ ರೀತಿಯಿಂದಲೂ ತಿಳಿದ ಗಟ್ಟಿಗರು. ನಿಸ್ವಾರ್ಥವಾಗಿ ಬದುಕಿದವರು. ‘ನಾನು’ ಎನ್ನುವ ಅಹಂ ಬದಿಗಿಟ್ಟು, ಅದನ್ನು ಹತ್ತಿರ ಸುಳಿಯಗೊಡದವರು. ಇದನ್ನು ಅಲ್ಲಮ ಪ್ರಭುಗಳ ವಚನದ ಮುಖಾಂತರ ಅರ್ಥೈಸಬಹುದು.
“ನಾನು ಘನ ತಾನು ಘನವೆಂಬ
ಹಿರಿಯರುಂಟೆ ಜಗದೊಳಗೆ
ಹಿರಿದು ಕಿರಿದೆಂದಲ್ಲಿ ಏನಾಯಿತ್ತು
ಹಿರಿದು ಕಿರಿದೆಂಬ ಶಬ್ದವಡಗಿದರೆ
ಆತನೆ ಶರಣ ಗುಹೇಶ್ವರಾ”
‘ನಾನು’ ಎನ್ನುವ ಘನದಲ್ಲಿ ಹಿರಿಯರು ಕಿರಿಯರು ವ್ಯತ್ಯಾಸವಿಲ್ಲದಂತೆ, ಸಮಾನತೆಯ ದೃಷ್ಟಿ ಇದ್ದಲ್ಲಿ, ಅವನೇ ಶರಣ ಎಂದು ಅಲ್ಲಮನ ವ್ಯಾಖ್ಯಾನ.
ಆನೆ ಘನವೆಂದರೆ ಅಂಕುಶ ಕಿರಿದು ಎಂದು ಹೇಳಲಾಗುವುದಿಲ್ಲ. ದೊಡ್ಡ ಗುಡ್ಡ ಘನವೆಂದರೆ ವಜ್ರವನ್ನು ಚಿಕ್ಕದೆಂದು ಹೇಳಲು ಸಾಧ್ಯವಿಲ್ಲ. ಕತ್ತಲೆಯನ್ನು ಘನವೆಂದರೆ ಬೆಳಕನ್ನು ಕಿರಿದು ಎನ್ನಲಾಗದು. ಮರೆವು ಘನವೆಂದರೆ ನೆನೆಯುವ ಮನಸು ಕಿರಿದಲ್ಲ. ಹೀಗೆ ಬಸವಣ್ಣನ ವಚನ ಘನದ ಮಹಿಮೆಯನ್ನು ಎತ್ತಿ ಹಿಡಿಯುತ್ತದೆ.
“ಕರಿ ಘನ: ಅಂಕುಶ ‘ಕಿರಿದೆ’ನ್ನ ಬಹುದೆ?
ಬಾರದಯ್ಯಾ
ಗಿರಿ ಘನ: ವಜ್ರ ‘ಕಿರಿದೆ’ನ್ನ ಬಹುದೆ?
ಬಾರದಯ್ಯಾ
ತಮ್ಮಂಧ ಘನ: ಜ್ಯೋತಿ ‘ಕಿರಿದೆ’ನ್ನ ಬಹುದೆ?
ಬಾರದಯ್ಯಾ
ಮರಹು ಘನ: ನಿಮ್ಮ ನೆನೆವ ಮನ ‘ಕಿರಿದೆ’ನ್ನ ಬಹುದೆ?
ಬಾರದಯ್ಯಾ ಕೂಡಲಸಂಗಮದೇವಾ
ಅಯ್ಯಾ ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾ ಚೆನ್ನಮಲ್ಲಿಕಾರ್ಜುನ
ಇಷ್ಟಲಿಂಗದ ಪರಿಕಲ್ಪನೆಯಿಂದಾಗಿ ಶರಣರಾದವರ ವ್ಯಕ್ತಿತ್ವ ವಿಶೇಷವಾಗಿ ವಿಕಸಿತಗೊಂಡಿದೆ. ವ್ಯಕ್ತಿಯನ್ನು ರೂಪಾಂತರ (Transformation) ಗೊಳಿಸುವಲ್ಲಿ ಇಷ್ಟಲಿಂಗ ಪೂಜಾ ವಿಧಾನದ ಕೊಡುಗೆ ಅಪಾರ. ಎಲ್ಲಾ ಶರಣರು ನಿತ್ಯ ಲಿಂಗಪೂಜೆ ಮಾಡುತ್ತ ವೈಯಕ್ತಿಕ ನೆಲೆಯಲ್ಲಿ ವಿಕಾಸಗೊಂಡು, ಕಾಯಕ ನಿಷ್ಟೆಯಿಂದ ಬದುಕಿದರು. ಅವರು ಏಕದೇವೋಪಾಸನೆ ಮಾಡುತ್ತ ಲಿಂಗವಲ್ಲದೆ ಮತ್ತಾವ ದೇವರನ್ನೂ ಆರಾಧಿಸಿದವರಲ್ಲ. ‘ಎನ್ನ ಕರಸ್ಥಲದಲ್ಲಿ ಬಂದು ಚುಳುಕಾದಿರಯ್ಯಾ’ ಎನ್ನುವಲ್ಲಿ ಆತ್ಮಜ್ಯೋತಿಯ ಪ್ರತೀಕವಾದ ಲಿಂಗದಲ್ಲಿ ಇಡೀ ಜಗತ್ತು ಕಂಡ ಭಾವ. ಅಂತಹ ಶರಣರನ್ನು ಅಕ್ಕ ಲಿಂಗಸುಖಿಗಳು ಎಂದು ಕರೆಯುತ್ತ, ಅವರ ಸಂಗದೊಂದಿಗೆ ಸಮಯ ಕಳೆಯಲು ಬಯಸುತ್ತಾಳೆ.
ಹನ್ನೆರಡನೆಯ ಶತಮಾನದಲ್ಲಿ “Feathers of own kind gather together” ಎಂಬ ಇಂಗ್ಲಿಷ್ ಉಕ್ತಿಯಂತೆ ಸಮಾನ ಮನಸ್ಕರೆಲ್ಲಾ ಒಂದೆಡೆ ಸೇರಿದರು. ಬಸವ ಚಳುವಳಿಯ, ಬಸವ ತತ್ವದ, ಬಸವ ಸಂಸ್ಕೃತಿಯ, ಸಾಮಾಜಿಕ ಕ್ರಾಂತಿಯಲ್ಲಿ ದೂರ ದೂರದಿಂದ ನಡೆದು ಬಂದು ಭಾಗಿಯಾದರು. ಅಕ್ಕಮಹಾದೇವಿಯು ಮನುಷ್ಯನಿಗೆ ಒಳ್ಳೆಯ ಸಂಗದ ಅವಶ್ಯಕತೆ ಇದೆ ಎನ್ನುವ ಮಾತನ್ನು ಈ ವಚನದ ಮೂಲಕ ಸಾಬೀತು ಪಡಿಸುತ್ತಾಳೆ. ನಾವು ಎಲ್ಲಿ, ಎಂತಹ ಸಂಗದಲ್ಲಿ ಇರಬೇಕೆನ್ನುವುದನ್ನು ನಾವೇ ನಿರ್ಧರಿಸಬೇಕು. ಹಾಗೆ ಅಕ್ಕನಂತೆ ನಿರ್ಧರಿಸುವಾಗ ಅಕ್ಕನಷ್ಟೇ ವಿನಮ್ರತೆ, ವಿನಯಶೀಲತೆ, ಸಮರ್ಪಣೆ ಇದ್ದರೆ ಮಾತ್ರ ಹೀಗೆ ಮಾಡಲು ಸಾಧ್ಯವಾದೀತು!
ಸಿಕಾ