ಗಂಧರ್ವರಂತಹ ಅಪರೂಪದ ಅಭಿನೇತ್ರಿ ಕುರಿತು…
ಮರಾಠಿ ರಂಗಭೂಮಿಯಲ್ಲಿ ಬಾಲ ಗಂಧರ್ವರ ‘ಸ್ತ್ರೀ ಪಾತ್ರ’ ಹಲವು ದಂತಕತೆಗಳನ್ನೇ ಸೃಷ್ಟಿಸಿದ ದಾಖಲೆಗಳಿವೆ. ಅವರು ನಾಟಕದಲ್ಲಿ ಉಡುವ ಸೀರೆ, ತೊಡುವ ಕುಪ್ಪಸ ಅವುಗಳ ರೀತಿ – ರಿವಾಜು, ಮಾಡಿಕೊಳ್ಳುವ ಅಲಂಕಾರ, ಮೋಹಕ ಹೆಣ್ದನಿ, ಹಾಡುನಟಿಯ ಅಪ್ಪಟ ರಂಗ ಸಂವೇದನೆಗಳನ್ನು ಆವಾಹಿಸಿಕೊಂಡು ಮೈ ಮನಸು ತುಂಬಿ ತುಳುಕಿಸುವಂತೆ ಅಭಿನಯಿಸುವಲ್ಲಿ ಗಂಧರ್ವರಿಗೆ ಗಂಧರ್ವರೇ ಸಾಟಿ. ಅವರ ಸ್ತ್ರೀ ಪಾತ್ರಗಳ ಮಾಂತ್ರಿಕತೆ ಅದೆಷ್ಟು ಪ್ರಭಾವಶಾಲಿ ಆಗಿತ್ತು ಎನ್ನುವುದಕ್ಕೆ ಮರಾಠಿ ಮಹಿಳೆಯರ ಜನಮಾನಸದಲ್ಲಿ ಹಲವು ಕಟ್ಟುಕತೆಗಳೇ ಹುಟ್ಟಿಕೊಂಡಿದ್ದು ಉತ್ಪ್ರೇಕ್ಷೆಯೇನಲ್ಲ.
ಗಂಧರ್ವರ ಹಾಗೆ ಸೀರೆ ಉಟ್ಟು ಕೊಳ್ಳುವುದು, ಮೇಕಪ್ ಮಾಡಿಕೊಳ್ಳುವುದು, ಅವರ ಹೆಣ್ತನ ಅಭಿನಯದ ನವಿರು ಭಾವಗಳನ್ನು ಸಾಮಾನ್ಯ ಮಹಿಳೆಯರು ಸಹಿತ ನಿತ್ಯದ ಬದುಕಲಿ ಅನುಕರಿಸುತ್ತಿದ್ದರು. ಆ ಕಾಲದ ಹೆಣ್ಣಿನ ಫ್ಯಾಷನೇಟಿಂಗ್ ತಾರುಣ್ಯಕ್ಕೆ ‘ಬಾಲಗಂಧರ್ವ ಮಾದರಿಯೇ’ ನಿರ್ಮಾಣ ಆಗಿತ್ತು. ಸಣ್ಣದೊಂದು ನಿದರ್ಶನ ಹೀಗಿದೆ:
ಮದುವೆಯಾದ ಹೊಸತರಲ್ಲಿ ಮರಾಠಿ ಹುಡುಗಿಯರು ತಮ್ಮ ಗಂಡನನ್ನು ಮೆಚ್ಚಿಸಲು ತುಂಬಾ ಸೊಗಸಾಗಿ ಗಂಧರ್ವರಂತೆ ಸೀರೆಯುಟ್ಟು, ಅಷ್ಟೇ ಸೊಗಸಾದ ಮೇಕಪ್ ಮಾಡಿಕೊಂಡು ಅದನ್ನೊಮ್ಮೆ ನಿಲುಗನ್ನಡಿಯಲ್ಲಿ ನೋಡಿಕೊಂಡು ತಮಗೆ ಮೇಕಪ್ ತೃಪ್ತಿಯೆನಿಸಿದ ಮೇಲೆ ಅವರು ತಮ್ಮ ಗಂಡನ ಮುಂದೆ ಪ್ರದರ್ಶನದಂತೆ ನಿಂತು ಪ್ರಶ್ನಿಸುತ್ತಿದ್ದುದು ಹೀಗೆ : ” ರೀ ನಾನು ಬಾಲಗಂಧರ್ವರಂತೆ ಕಾಣಸ್ತೀನಾ ” ಅಂತ. ಚಂದ್ರಮಂಚ ದಾಂಪತ್ಯದ ಚೆಲುವಿಯರೇ ಹೀಗೆ ಕೇಳುತ್ತಿದ್ದರೆಂದರೇ ಬಾಲಗಂಧರ್ವರ ಸ್ತ್ರೀ ಪಾತ್ರ ಸೌಂದರ್ಯದ ಪ್ರಖರ ಪ್ರಭಾವ ಮತ್ತದರ ಚೆಲುವಿನ ರಂಗಶಕ್ತಿ ಯಾವ ಪ್ರಮಾಣದ್ದೆಂಬುದು ಊಹೆಗೂ ಮೀರಿದ್ದು. ಅಂತೆಯೇ ಅದನ್ನು ಮರಾಠಿ ರಂಗಭೂಮಿಯ ‘ಗಂಧರ್ವಕನ್ಯ ಯುಗವೆಂದೇ’ ಕರೆದವರುಂಟು.
ಕನ್ನಡ ರಂಗಭೂಮಿಯಲ್ಲೂ ಅಂತಹ ಲಾವಣ್ಯಮಯದ ಕೆಲವು ನಿದರ್ಶನಗಳಿವೆ. ಅವು ಅರವತ್ತರ ದಶಕದ ಆರಂಭದ ದಿನಮಾನಗಳು. ದಾವಣಗೆರೆಯಲ್ಲಿ ಗದುಗಿನ ಅಜ್ಜರ ನಾಟಕ ಕಂಪನಿ ಮೊಕ್ಕಾಂ ಮಾಡಿತ್ತು. ಆಗ ಅಲ್ಲಿ ನಲವಡಿ ಶ್ರೀಕಂಠ ಶಾಸ್ತ್ರೀ ವಿರಚಿತ ‘ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ’ ನಾಟಕದ ಅದ್ದೂರಿ ಪ್ರದರ್ಶನ. ಅಷ್ಟೊತ್ತಿಗಾಗಲೇ ಅಜ್ಜರ ಕಂಪನಿಯ ಮಲ್ಲಮ್ಮ ನಾಟಕ ನಾಡಿನ ತುಂಬಾ ಹೆಸರು ಮಾಡಿತ್ತು. ವರನಟ ಡಾ. ರಾಜಕುಮಾರ್ ಖಾಯಷ್ ಪಟ್ಟು ನಾಟಕ ನೋಡಲು ದಾವಣಗೆರೆಗೆ ಬರುತ್ತಾರೆ. ಸಂಪೂರ್ಣ ನಾಟಕ ನೋಡಿ ಪ್ರಭಾವಿತರಾಗುತ್ತಾರೆ.
ರಂಗಪಾರ್ಟಿಯೊಳಗೆ ಪ್ರವೇಶಿಸಿ ಪಾತ್ರಧಾರಿಗಳನ್ನು ಅಭಿನಂದಿಸುವ ಹಂಬಲ ಅವರಿಗೆ. ಹಾಗೆ ಬಂದವರೇ ಹೇಮರೆಡ್ಡಿ ಮಲ್ಲಮ್ಮಗೆ ಕೈ ಮುಗಿದು “ನೀವು ನಿಜಕ್ಕೂ ಮಹಾತಾಯಿ” ಎಂದು ಭಾವಪರವಶರಾಗಿ ವರ್ಣಿಸ ತೊಡಗುತ್ತಾರೆ. ತತ್ ಕ್ಷಣ ಎಲ್ಲಾ ಸ್ತ್ರೀ ಪಾತ್ರದಾರಿಗಳು ಡಾ. ರಾಜಕುಮಾರರ ಬಳಿ ಓಡೋಡಿ ಬಂದು ತಾವೆಲ್ಲರೂ ‘ಪುರುಷರು’ ಎಂಬುದನ್ನು ಪರಿಚಯಿಸಿಕೊಳ್ಳುತ್ತಾರೆ. ರಾಜಕುಮಾರ ಅಕ್ಷರಶಃ ಚಕಿತರಾಗಿ ಅವರೆಲ್ಲರಿಗೂ ಕೈ ಮುಗಿದು ತಮ್ಮ ಹೃತ್ಪೂರ್ವಕ ಪ್ರೀತಿ, ಮೆಚ್ಚುಗೆ ತೋರುತ್ತಾರೆ. ಉಡುಗೊರೆಯಂತೆ ಒಂದು ರಂಗಗೀತೆಯನ್ನು ಹಾಡಿ ಕಲಾವಿದರ ಮನ ತಣಿಸುತ್ತಾರೆ. ಅಜ್ಜರ ಕಂಪನಿ ಕಲಾವಿದೆಯರ ಅಭಿನಯ ಕಂಡ ಪಂಡರಿಬಾಯಿ ಅವರದು ಅಂತಹದೇ ಅನುಭವ.
ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯಸಂಘ ಇವತ್ತಿಗೂ ‘ಅಜ್ಜರ ಕಂಪನಿ’ ಎಂತಲೇ ಹೆಸರುವಾಸಿ. ಅದು ಎಂಬತ್ತಾರು ವರ್ಷಗಳಷ್ಟು (೧೯೩೭) ಹಿರಿದಾದ ಕಂಪನಿ. ಗಾನಯೋಗಿ ಶ್ರೀ ಪಂಚಾಕ್ಷರ ಗವಾಯಿಗಳು ಸ್ಥಾಪಿಸಿದ ಮತ್ತು ಉದಾತ್ತ ರಂಗಸಂಕಲ್ಪಗಳನ್ನು ಕಾಪಿಟ್ಟುಕೊಂಡಿರುವ, ಪುರುಷರೇ ಅಭಿನಯಿಸುವ ಏಕೈಕ ವೃತ್ತಿ ನಾಟಕ ಕಂಪನಿ ಅದಾಗಿದೆ. ಅದರ ಹಲವು ವಿಶಿಷ್ಟ ರಂಗಪರಂಪರೆಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಮಾಡುವುದು ಒಂದಾಗಿದೆ. ಹಾಗೆಂದು ಅವರದು ಸ್ತ್ರೀ ವಿರೋಧಿ ನಿಲುವೆಂದು ಭಾವಿಸಬೇಕಿಲ್ಲ. ಮಹಿಳೆಯರೇ ಸ್ತ್ರೀ ಪಾತ್ರಗಳನ್ನು ಮಾಡುವುದಕ್ಕಿಂತ ಪುರುಷರು ಸ್ತ್ರೀ ಪಾತ್ರ ಮಾಡುವ ಅಗ್ಗಳಿಕೆ, ಅಗಾಧ ರಂಗಪ್ರಜ್ಞಾಪ್ರಭೆ ಪಂಚಾಕ್ಷರ ಗವಾಯಿಗಳ ಕಾಲದಿಂದಲೂ ಹಚ್ಚಿಟ್ಟ ಕರ್ಪೂರದಂತೆ ಅನೂಚಾನ ಪ್ರವಹಿಸಿಕೊಂಡು ಬಂದಿದೆ.
ಪ್ರಸ್ತುತ ಅಜ್ಜರ ಕಂಪನಿಯ ಹಿರಿಯ ಕಲಾವಿದ ಮಹಾದೇವ ಹೊಸೂರು ನಮ್ಮ ನಡುವಿನ ಕನ್ನಡದ ಬಾಲಗಂಧರ್ವರೇ ಆಗಿದ್ದಾರೆ. ಶ್ರೇಷ್ಠ ಅಭಿನೇತ್ರಿಯಲ್ಲಿ ಇರಬೇಕಾದ ಅರಳು ಮಲ್ಲಿಗೆಯಂತಹ ನೃತ್ಯ, ಗಾಯನ, ಅಭಿನಯ ಈ ಮೂರು ಪ್ರತಿಭೆಗಳು ಹಾಳತವಾಗಿ ಮಹಾದೇವನಲ್ಲಿ ಮುಪ್ಪುರಿಗೊಂಡಿವೆ. ಸಾದ್ವಿಪಾತ್ರಕ್ಕೆ ಹೇಳಿ ಮಾಡಿಸಿದಂತಹ ರೂಪಲಾವಣ್ಯ. ಇವರ ಅಭಿನಯದ ನಾಟಕಗಳನ್ನು ನೋಡುವ ಯಾರಿಗಾದರೂ ಮಹಾದೇವ ಸಾಕ್ಷಾತ್ ‘ಅಭಿನೇತ್ರಿ’ ಎನ್ನುವ ಸೂಕ್ಷ್ಮಾನುಭೂತಿ. ಪ್ರತಿಯೋರ್ವ ಪ್ರೇಕ್ಷಕ ಪ್ರಭುವಿನ ಇಂತಹ ನಿಚ್ಚಳ ಅನುಭವ ಸಾಸಿವೆಯಷ್ಟು ಸುಳ್ಳಲ್ಲ. ಅವರ ಅಭಿನಯದ ನಾಟಕಗಳನ್ನು ನೋಡುವ ಎಂಥವರಲ್ಲೂ ಅವರು ಪುರುಷರಾಗಿದ್ದು ಸ್ತ್ರೀ ಪಾತ್ರ ಮಾಡುತ್ತಿದ್ದಾರೆಂಬ ಎಳ್ಳರ್ಧ ಕಾಳಿನಷ್ಟೂ ಸಂಶಯ ಬರಲು ಸಾಧ್ಯವೇ ಇಲ್ಲ. ಹೀಗೆಂದೇ ಸ್ಫುರದ್ರೂಪಿ ಅಭಿನೇತ್ರಿ ಮೇಲಿನ ಪ್ರೀತಿಯ ಪರಾಕಾಷ್ಠೆ ನೂರಕ್ಕೆ ನೂರರಷ್ಟು ದಿವಿನಾದ ಪ್ರಭಾವ ಮೂಡಿಸದಿರದು.
ಹೆಣ್ಣಿನ ಚೆಲುವೆಲ್ಲ ಮೈವೆತ್ತು ಮಹಾದೇವ ಸ್ತ್ರೀ ಪಾತ್ರಗಳ ಅಭಿನಯಕ್ಕೆ ಜೇನುಕಂಠದ ಹೊಸದೊಂದು ಮಧುರ ರೂಪ ತುಂಬಿದ್ದಾರೆ. ಅವರ ಅಭಿನಯದ ಅಕ್ಕ ಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ದ್ರೌಪದಿ, ಸಮಗಾರ ಭೀಮವ್ವ, ಕೊರವಂಜಿ ಅಲ್ಲದೇ ಸಾಮಾಜಿಕ ನಾಟಕದ ಹತ್ತಾರು ಸ್ತ್ರೀ ಪಾತ್ರಗಳಿಗೆ ಮೃದುತ್ವ ಮತ್ತು ಮಾಧುರ್ಯ ತುಂಬಿದ ಸೂಕ್ಷ್ಮಜ್ಞ. ರಂಗದ ಮೇಲಿನ ಈ ಹಾಡುನಟಿಯನ್ನು ಕಂಡ ಅನೇಕರ ಭಾವಭಿತ್ತಿ ಅವಳನ್ನು ಪರಿಚಯಿಸಿಕೊಳ್ಳುವ, ಒಡನಾಟ ಬೆಳೆಸುವ, ಸಾಂಗತ್ಯಕ್ಕೆ ಹಾತೊರೆವ ಉತ್ಕಟ ಹಂಬಲ. ಇನ್ನೂ ಮುಂದುವರೆದು ಅವಳ ಮದುವೆಯಾಗಿದೆಯಾ.? ಎಂದು ವಿಚಾರಿಸುವ, ಅವಳ ಪರ್ಸನಲ್ ಫೋನ್ ನಂಬರ್ ಸಂಗ್ರಹಿಸುವ ಪ್ರಯತ್ನಗಳು ಎಲ್ಲಾ ಊರುಗಳ ಕ್ಯಾಂಪುಗಳಲ್ಲಿ ಜರುಗುತ್ತವೆ. ಅದು ಪುರುಷ ಸಹಜ ಯುವಪ್ರೇಕ್ಷಕರ ವಾಂಛೆಭರಿತ ಮನೋಭಿಲಾಷೆ. ಇಂತಹ ಸಂದಿಗ್ದ ಸಂದರ್ಭಗಳನ್ನು ಅಭಿನೇತ್ರಿ ಮಹಾದೇವ ಜಾಣತನದಿಂದಲೇ ನಿಭಾಯಿಸುತ್ತಾರೆ.
ಇರಕಲಗಡ ಮೊಕ್ಕಾಮಿನಲ್ಲಿ ರಕ್ತರಾತ್ರಿ ನಾಟಕ. ಮಹಾದೇವ ಅಭಿನಯದ ದ್ರೌಪದಿ ಪಾತ್ರವನ್ನು ಕಂಡು ಮನ್ಸೂರ ಸುಭದ್ರಮ್ಮ ಖುಷಿಪಟ್ಟು ಸ್ವಯಂಪ್ರೇರಿತರಾಗಿ ರಂಗದ ಮೇಲೆ ಬರುತ್ತಾರೆ. ಹಾಗೆಬಂದು “ನನ್ನ ತರುವಾಯ ದ್ರೌಪದಿ ಪಾತ್ರಕ್ಕೆ ಮಹಾದೇವ ಅಕ್ಷರಶಃ ನ್ಯಾಯ ದೊರಕಿಸಿದ್ದಾರೆ.” ಎಂದು ಮನಸು ತುಂಬಿ ಸುಭದ್ರಮ್ಮ ತಮ್ಮ ಮೆಚ್ಚುಗೆ ಹಂಚಿಕೊಂಡಿದ್ದಾರೆ. ಸುಭದ್ರಮ್ಮನಿಂದ ಸರ್ಟಿಫಿಕೇಟ್ ಪಡೆದ ಧನ್ಯತೆ. ಹೌದು ಸುಭದ್ರಮ್ಮ ಅವರ ಗುಣಮಟ್ಟದ ದ್ರೌಪದಿ ಪಾತ್ರಾಭಿನಯ ಇದುವರೆಗೆ ಭಲೇ ಭಲೇ ಮಹಿಳಾ ಕಲಾವಿದೆಯರಿಂದಲೇ ಸಾಧ್ಯವಾಗಿಲ್ಲ.
ಮಹಾದೇವ ಕಲಾವಿದೆ ಮಾತ್ರವಲ್ಲದೇ ನಾಟಕಕರ್ತೃವೂ ಹೌದು. “ಮತ್ತೊಮ್ಮೆ ಬಾ ಮುತ್ತೈದೆಯಾಗಿ ” ಎಂಬ ಇತ್ತೀಚಿನ ಅವರ ನಾಟಕ ನೂರಾರು ಪ್ರಯೋಗ ಕಂಡಿದೆ. ಹಿರಿಯ ಕಲಾವಿದರಾದ ಕಲಕೇರಿ ಗುರುಸ್ವಾಮಿ, ಚಿಂದೋಡಿ ಬಂಗಾರೇಶ್ ಈ ನಾಟಕದ ಮಹಾದೇವ ಅವರ ನಾಯಕಿ ಪಾತ್ರ ನೋಡಿ ಶಹಬ್ಬಾಶ್ ಎಂದು ಬೆನ್ನು ಚಪ್ಪರಿಸಿದ್ದಾರೆ. ಜಮಖಂಡಿ ತಾಲೂಕಿನ ಹೊಸೂರು ಮಹಾದೇವ ಹುಟ್ಟೂರು. ಕಡುಬಡತನದ ಕೃಷಿಕ ಕುಟುಂಬ. ತಾನು ಓದುತ್ತಿದ್ದ ಐದನೇ ಈಯತ್ತೆಯ ಶಾಲಾ ವಾರ್ಷಿಕೋತ್ಸವದ ‘ದೇವಿ’ಪಾತ್ರದೊಂದಿಗೆ ರಂಗಭೂಮಿ ಪ್ರವೇಶ.
ತಮ್ಮೂರಿನ ತೇಲಿ ರಾಚಪ್ಪನವರ ರೇಣುಕಾದೇವಿ ನಾಟ್ಯಸಂಘದಲ್ಲಿ ಎಂಟು ವರ್ಷಗಳ ಕಾಲ ರಂಗಸೇವೆ. ತದನಂತರ ಅಜ್ಜರ ಕಂಪನಿ ಸೇರಿ ವೃತ್ತಿ ರಂಗಭೂಮಿಯ ಚರಿತ್ರೆಯಲ್ಲಿ ಅವರ ಸ್ತ್ರೀ ಪಾತ್ರ ಇತಿಹಾಸ ನಿರ್ಮಿಸಿದೆ. ಅಭಿನಯದ ಜತೆಗೆ ಪ್ರಸ್ತುತ ಅಜ್ಜರ ಕಂಪನಿಯ ಉಸ್ತುವಾರಿ. ಯಾವುದೇ ರಂಗಶಾಲೆಯಲ್ಲಿ ತರಬೇತಿ ಪಡೆಯದ ವೃತ್ತಿ ನಾಟಕ ಕಂಪನಿಯೆಂಬ ರೆಪರ್ಟರಿ ಮೂಲಕ ಅದೂ ಸ್ತ್ರೀ ಪಾತ್ರದೊಂದಿಗೆ ಅವರ ರಂಗಾನುಸಂಧಾನ ಅಕ್ಷರಶಃ ಅಗಾಧವಾದುದು. ರಂಗವ್ಯವಹಾರಕ್ಕೆ ಅರ್ಪಿಸಿಕೊಂಡ ಇಂಥವರು ಸಾಮಾನ್ಯವಾಗಿ ವಿರತಿಪ್ರಜ್ಞೆ ಹೊಂದಿದವರಾಗಿರುತ್ತಾರೆ. ಆದರೆ ಕುಟುಂಬ ವತ್ಸಲರಾದ ಮಹಾದೇವಗೆ ಮಡದಿ ಭಾರತಿ, ಇಬ್ಬರು ಮುದ್ದಾದ ಮಕ್ಕಳು ಮತ್ತು ಅಪ್ಪ ಅಮ್ಮ ಇದ್ದಾರೆ. ಹೀಗೆ ಅವರದು ಸಂತೃಪ್ತ ಕುಟುಂಬ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕರ್ನಾಟಕದ ತುಂಬೆಲ್ಲಾ ಅಭಿಮಾನಿಗಳು ನೀಡಿರುವ ನೂರಾರು ಪ್ರಶಸ್ತಿಗಳು ಮಹಾದೇವರ ಮುಡಿಯೇರಿವೆ. ಬೆಂಗಳೂರು ಕೇಂದ್ರಿತ ಕಿರುತೆರೆಗಳ ಕಣ್ಣಿಗೆ ಮಹಾದೇವ ತಾನು ಕಾಣಿಸಬೇಕೆಂಬ ಹೆಬ್ಬಯಕೆ.
ಅಶ್ವಿನಿ ರೆಕಾರ್ಡಿಂಗ್ ಕಂಪನಿಯು ಮಹಾದೇವ ಅಭಿನಯದ ಹೇಮರೆಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ, ಕೊರವಂಜಿ, ಬಂಜೆತೊಟ್ಟಿಲು, ನಾಗಲಿಂಗ ಲೀಲೆ, ಮಲಮಗಳು, ಮಹಾದೇವ ವಿರಚಿತ ಮತ್ತೊಮ್ಮೆ ಬಾ ಮುತ್ತೈದೆಯಾಗಿ… ಹೀಗೆ ಆರೇಳು ಮಹತ್ವದ ನಾಟಕಗಳನ್ನು ಚಿತ್ರೀಕರಿಸಿ ಮಾರುಕಟ್ಟೆಗೆ ತರಲು ಸಿದ್ಧಗೊಳಿಸಿದೆ. ತನ್ಮೂಲಕ ನಾಡಿನಾದ್ಯಂತ ಎಲ್ಲರಿಗೂ ನಾಟಕಗಳು ತಲುಪಬಲ್ಲವು. ಹಾಗೆಯೇ ಅವು ಯು ಟ್ಯೂಬ್ ಮೂಲಕವು ದೊರಕಬಲ್ಲವು. ಪ್ರಸ್ತುತ ಅಜ್ಜರ ಕಂಪನಿ ಗದಗ ಸನಿಹದ ಮುಳಗುಂದ ಪಟ್ಟಣದಲ್ಲಿ ಮೊಕ್ಕಾಂ. ಅಲ್ಲಿ ಅಕ್ಕಮಹಾದೇವಿ ನಾಟಕ. ಮಹಾದೇವಣ್ಣನೇ ಅಕ್ಕನ ಪಾತ್ರದಲ್ಲಿ.
ಮಲ್ಲಿಕಾರ್ಜುನ ಕಡಕೋಳ
9341010712