ಶಿಕ್ಷಕರೆಂದರೆ 

ಶಿಕ್ಷಕರೆಂದರೆ 
ಎಲ್ಲರಿಗೂ ತಿಳಿದಂತೆ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚಾರಣೆಯನ್ನು ‌ಆಚರಿಸಲಾಗುತ್ತದೆ. ಅದರಂತೆ ಈ ಶಿಕ್ಷಕರು ಅಂದ ತಕ್ಷಣ ಎಲ್ಲರಿಗೂ ಯಾರದರೂ ಒಬ್ಬ ವ್ಯಕ್ತಿ ನೆನಪಾಗಿಯೇ ಬಿಡುತ್ತಾರೆ. ಹೇಗೆ ಮನುಷ್ಯನ ಜೀವನದಲ್ಲಿ ತಂದೆ ತಾಯಿ ಮಹತ್ವರೋ ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲಾವೊಂದು ಸಂದರ್ಭದಲ್ಲಿ ಒಬ್ಬ ಗುರು ಇದ್ದೇ ಇರುತ್ತಾರೆ. ನಮ್ಮ ಭಾರತೀಯ ಸಮಾಜದಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ.

ಗುರುವಿಗೆ ಬ್ರಹ್ಮ ವಿಷ್ಣು ಮಹೇಶ್ವರರಿಗೂ ಹೋಲಿಸಲಾಗುತ್ತದೆ. ಕಲ್ಲಿನಂಥ ಜಡ ಮನುಜರನ್ನು ಕೆತ್ತಿ ಮೂರ್ತಿಯನ್ನಾಗಿಸಿ ಅವರ ಉಜ್ವಲ ಭವಿಷ್ಯ‌ರೂಪಿಸುವ ಏಕೈಕ ಕಾಯಕ ಶಿಕ್ಷಕನದ್ದಾಗಿರುತ್ತದೆ. ಬೇರೆ ಕೆಲಸಗಳಲ್ಲಿ ನಿರ್ಜೀವ ವಸ್ತುಗಳೋ, ಕಡತಗಳೋ, ಗಣಕಯಂತ್ರದ ಜೊತೆಯೋ ಕೆಲಸ ಮಾಡಬೇಕಾಗುತ್ತದೆ. ಆದರೆ‌ ಶಿಕ್ಷಕರು ಹಾಗಲ್ಲ ಪ್ರತಿ ಬಾರಿ ಹೊಸ ಹೊಸ ಚೈತನ್ಯ ಭರಿತ ಯುವ ಜನತೆಯೊಂದಿಗೆ ನಿರಂತರ ಶ್ರಮಿಸುತ್ತಾರೆ. ಯಾರೇ ಯಶಸ್ವೀ ವ್ಯಕ್ತಿಯನ್ನೇ ಸಂದರ್ಶಿಸಿ ಅವರು ಆ‌‌ ಯಶಸ್ಸು ಪಡೆಯಲು, ಸಾಧನೆ ಗೈಯಲು ಒಂದಲ್ಲಾ ಒಂದು ಸಂದರ್ಭದಲ್ಲಿ ಶಿಕ್ಷಕ ಎಂಬ ಮಾಂತ್ರಿಕನ ಮಾಯದ ಬಗ್ಗೆ ಮಾತನಾಡುತ್ತಾರೆ. ತನ್ನ ಕೈಯಿಂದ ಏನೂ ಮಾಡಲಸಾಧ್ಯ ಎಂದು ಕೈಚೆಲ್ಲಿ ಕುಳಿತಾಗ ನಮ್ಮೊಳಗಿನ ಪ್ರತಿಭೆಗಳನ್ನು ಹೊರತೆಗೆದು‌ ನಾವೂ ಇತರರಂತೆ ಏನಾದರೂ ಮಾಡಲು ಸಾಧ್ಯ ಎಂದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ‌ ನಮ್ಮನ್ನು‌ ‌ನಿತ್ಯ‌ ಹುರಿದುಂಬಿಸುವ ವ್ಯಕ್ತಿ ಶಿಕ್ಷಕನಾಗಿರುತ್ತಾನೆ.

ಎಲ್ಲರೂ ಶಿಕ್ಷಕರ ಬಗ್ಗೆ ಹೊಗಳುತ್ತೇವೆ ಹೌದು, ಆದರೆ ಒಬ್ಬ ಶಿಕ್ಷಕ ನಿಜಕ್ಕೂ ಉತ್ತಮ ಶಿಕ್ಷಕನಾಗಿ ಸದಾಕಾಲ‌ ಉಳಿಯಬೇಕೆಂದರೆ ತನ್ನ ಜೀವನದಲ್ಲಿ ಪಾಲಿಸಬೇಕಾದ ಶಿಸ್ತು, ಬದ್ಧತೆ, ಪ್ರಾವೀಣ್ಯತೆ, ಪ್ರಾಮಾಣಿಕತೆ ಅಷ್ಟಿಷ್ಟಲ್ಲ. ಯುವ ಪೀಳಿಗೆಯನ್ನು ಉದ್ದೇಶಿಸಲು ಪಣ ತೊಟ್ಟ ಶಿಕ್ಷಕರು ತಪ್ಪುಗಳನ್ನು ಮಾಡದ ರೀತಿಯಲ್ಲಿ ‌‌ಬದುಕಲು ಪ್ರಯತ್ನಿಸಬೇಕಾಗುತ್ತದೆ. ಯಾವುದು ‌ಸರಿ‌ ಯಾವುದು ಸರಿಯಲ್ಲ ಎಂಬುದನ್ನು ನೋಡಿ ಹೆಜ್ಜೆ ಇಡಬೇಕಾಗುತ್ತದೆ.
ಅಯ್ಯೋ!! ಶಿಕ್ಷಕರು ಅಂದರೆ ಏನೂ ಕೆಲಸ ಸಿಗದೇ ಇರುವಾಗ ಮಾಡುವಂಥ ಜಾಬ್ ಅಂದುಕೊಳ್ಳುವುದಲ್ಲ. ಯಾರೇ‌ ಆಗಲಿ ಶಿಕ್ಷಕ ವೃತ್ತಿಯನ್ನು ಆಯ್ಕೆಯಾಗಿ ಸ್ವೀಕರಿಸುವಾಗ‌ ತನ್ನನ್ನು ತಾನು ಒಮ್ಮೆ ಪ್ರಶ್ನಿಸಿಕೊಳ್ಳದೇ ಇರುವುದಿಲ್ಲ. ಏಕೆಂದರೆ ಮೊದಲು ಗುರುಗಳೆಂದರೆ ಭಯ ಭಕ್ತಿ ಗುರುವೇ ದೇವತಾರೂಪ‌ ಎಂಬ ಭಾವನೆ ಇತ್ತು. ಈಗೀಗ ಶಿಕ್ಷಣದ ಅತೀವಾದ ಖಾಸಗೀಕರಣದಿಂದಾಗಿ ಅದೊಂದು ಬರೀ ಹುದ್ದೆ ಎಂಬಂತೆ ಬಿಂಬಿತವಾಗುತ್ತಿದೆ. ಅದನ್ನು ಮೀರಿ ಬೆಳೆಯುವವನೇ ಉತ್ತಮ ಶಿಕ್ಷಕನಾಗಲು ಸಾಧ್ಯ. ಶಿಕ್ಷಕ ಎಂದರೆ ಅಸಂಖ್ಯಾತ ವಿಚಾರಗಳ ಬಗ್ಗೆ ತನ್ನದೇ ಆದ ನಿಲುವು ಇಟ್ಟುಕೊಂಡು ಅದೇ‌ ನಿಲುವಿನೊಂದಿಗೆ ಬದುಕು ಸಾಗಿಸೋದು ಸುಮ್ಮನೇ ಶಿಕ್ಷಕ ಆಗುವಂಥದಲ್ಲ. ಶಿಕ್ಷಕನಾಗುವವನಿಗೆ ತಾನು‌‌‌ ಶಿಕ್ಷಕನೇ ಆಗಬೇಕೆಂಬ ಛಲ ವಿರಬೇಕಾಗುತ್ತದೆ. ನಮ್ಮ ಪೀಳಿಗೆಯ ಭವಿಷ್ಯವೇ‌ ತನ್ನ ಕೈಯಲ್ಲಿರುವಾಗ ಆ ಚಿಗುರೊಡೆವ ಕನಸುಗಳು ಬಲಿತ ಹೆಮ್ಮೆರವಾಗುವವರೆಗೂ ನೀರೆರೆವ ಪುಣ್ಯ ಕಾರ್ಯ ಮಾಡುವಷ್ಟು ಪ್ರಬುದ್ಧ ಮನಸ್ಸು ಶಿಕ್ಷಕನಿಗೆ‌ ಇರ ಬೇಕಾಗುತ್ತದೆ . ಯಾವುದೋ ಒಂದು ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿ ಗುರುತಿಸಿಕೊಂಡರೆ ಸಾಕು ಅಂತ ಈ ವೃತ್ತಿಗೆ ಬರುವ ಸಾಹಸ ಮಾಡುವಂತಿಲ್ಲ. ತನ್ನ ಮಕ್ಕಳಿಗಿಂತ ಜನಸಾಮಾನ್ಯರ ಮಕ್ಕಳನ್ನೂ ಸರಿದಾರಿಗೆ ನಡೆಸುವ ಕಾಳಜಿ ವಹಿಸಬೇಕಾಗುತ್ತದೆ. ತನ್ನ ಖಾತೆಗೆ ಬಂದಷ್ಟು ಸಿಲಬಸ್ ಮುಗಿಸಿ‌ ಒಂದಿಷ್ಟು‌ ನೋಟ್ಸ್ ಕೊಟ್ಟು ಜಾಗ ಖಾಲಿಮಾಡುವ ಕೆಲಸ ಇದಲ್ಲ. ಮಕ್ಕಳೊಂದಿಗೆ ಬರೀ ಪಠ್ಯದ ಪಾಠಗಳನ್ನು ಮಾಡುವುದಲ್ಲ. ಐದಾರು ತಾಸುಗಳಿಗಾಗಿ ವಿದ್ಯಾರ್ಥಿಗಳಿಗೆ ಬಣ್ಣ ಬಣ್ಣದ ವಸ್ತ್ರಗಳನ್ನು ತೊಡಿಸಿ ಕ್ಯಾಂಪಸ್ ಒಳಗಿರುವ ತನಕ‌ ಶಿಸ್ತು ಕಲಿಸೋದಲ್ಲ. ಕೊನೇ ತನಕ ಜೊತೆಗೆ ಬರುವಂಥ‌ ಜೀವನದ ಪಾಠವನ್ನು ಕಲಿಸಬೇಕಾಗುತ್ತದೆ.

ಕಾಂಪೌಂಡ್‌ ಆಚೆಗೆ ಬದುಕಿನ ಪ್ರತೀಹಂತದಲ್ಲೂ ಪ್ರತೀ ಪಾತ್ರದಲ್ಲೂ ಉಡುವ ಬಣ್ಣದ ಬಟ್ಟೆಗಳೋಂದಿಗೆ ಬಳಕೆಯಾಗುವಂಥ ಶಿಸ್ತನ್ನು ಕಲಿಸಬೇಕಾಗುತ್ತದೆ. ಶಿಕ್ಷಕ ಎಂದರೆ ವೇತನ ನೋಡಿ ಅದಕ್ಕನುಸಾರ ಮಾಡುವ ವೃತ್ತಿಯಂತೂ ಅಲ್ಲವೇ ಅಲ್ಲ. ಪಾಠಗಳಾಚೆಗೆ, ಶಾಲಾ ಕಾಲೇಜಿನಾಚೆಗೆ, ಪರೀಕ್ಷೆ ಅಂಕಗಳಾಚೆಗೆ, ಬೆಳಗಿನ ಗಂಟೆ ಸಾಯಂಕಾಲದ ಗಂಟೆಗಳ ನಡುವಿನಾಚೆಗೂ ಶಿಕ್ಷಕನಾಗಿಯೇ ಉಳಿದಿರಬೇಕಾಗುತ್ತದೆ. ಎಲ್ಲಿ ಯಾವಾಗ ಯಾವ ಸಂದರ್ಭದಲ್ಲಿ ಯಾವ ಸಮಯದಲ್ಲಿ ವಿದ್ಯಾರ್ಥಿ ಸಿಕ್ಕರೂ ತನ್ನೊಳಗೆ ಯಾವ ತೊಂದರೆ ಅಡಗಿದ್ದರೂ ಉತ್ತಮ ಜೀವನ ನಡೆಸಿ ಎಂದು‌ ಎಲ್ಲರಿಗೂ ಧನಾತ್ಮಕವಾದ ಮಾತುಗಳನ್ನಾಡಬೇಕಾಗುತ್ತದೆ. ತನ್ನ ಬದುಕಿನಲ್ಲಿ ‌ಅದೆಷ್ಟು‌ ಕಷ್ಟಗಳಿದ್ದರೂ ಮಕ್ಕಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸುವವರೇ ನಿಜವಾದ ಶಿಕ್ಷಕರಾಗಲು ಸಾಧ್ಯವಾಗುತ್ತದೆ.
ಆದ್ದರಿಂದ ಶಿಕ್ಷಕ ಎಂದರೆ ಸುಮ್ಮನೇ ಬೇರಾವ ಕೆಲಸ ಸಿಕ್ಕಿಲ್ಲ ಎಂದು ಶಿಕ್ಷಕನಾದೆ ಎಂಬ ವಿಚಾರವಲ್ಲ. ಶಿಕ್ಷಕನಾಗುವವನು ಶಿಕ್ಷಕ ವೃತ್ತಿಗಾಗಿ ತನ್ನನ್ನು ತಾನು ಸಿದ್ಧ ಪಡಿಸಿಕೊಳ್ಳಬೇಕಾಗುತ್ತದೆ. ನಿತ್ಯ ಹಸನ್ಮುಖಿಯಾಗಿ ತರಗತಿಯೊಳಗೆ ಹೋಗಿ ಮುದುಡಿದ ಮೊಗ್ಗುಗಳಂತಿರುವ ಮಕ್ಕಳಿಗೆ ಹೂವಾಗಿ ಅರಳಿಸಿ ತಮ್ಮ ಪರಿಮಳ ಹರಡುವಂಥವರನ್ನಾಗಿ ಬೆಳೆಸುವ ಜವಾಬ್ದಾರಿ ಹೊತ್ತು ನಿಲ್ಲಬೇಕಾಗುತ್ತದೆ. ಏನೋ ಸುಮ್ಮನೇ ಶಿಕ್ಷಕನಾದೆ ಎಂಬಂತೆ ವರ್ತಿಸದೇ ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ತನ್ನ ಜ್ಞಾನ, ಅನುಭವ, ಪಾಠ ಪ್ರವಚನಗಳ ಶೈಲಿಯನ್ನು ಬದಲಿಸುತ್ತಾ ಇರಬೇಕಾಗುತ್ತದೆ. ತರಗತಿಯ ಸಮಯ ಮುಗಿದರಾಯಿತು ಎಂದು ಸಂಕುಚಿತತೆ ಬಿಟ್ಟು ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಯಾವ ಸಂದರ್ಭದಲ್ಲಿ ಯಾವ ವಿಚಾರ ವಿಷಯದ ಬಗ್ಗೆ ಚರ್ಚಿಸಿದರೆ ಲೇಸು ಎಂದು ಚಿಂತಿಸಿ ಅದಕ್ಕೆ ತಕ್ಕ ಮಾತುಕತೆ ನಡೆಸಬೇಕಾಗುತ್ತದೆ. ಶಾಲೆ, ಕಾಲೇಜು, ಶಿಕ್ಷಣ ಇಲಾಖೆ ಅಲ್ಲದೇ ಮೇಲಾಧಿಕಾರಿ ಹೇಳುವ ಕರ್ತವ್ಯಗಳಿಗೂ ಮೀರಿ ತನ್ನ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ.
ಶಿಕ್ಷಕರೆಂದರೆ ರಟ್ಟಿಸಿಕೊಂಡ ಪಾಠವನ್ನು ಮಕ್ಕಳ ಮುಂದೆ ಹಾಡಿ ಬರುವುದು ಅಲ್ಲ. ಹೊಡೆದು ಬಡಿದು ಕಿವಿ ಹಿಂಡಿ ಕಲಿಸುವ ಕಾಲವೂ ಇದಲ್ಲ. ಸನ್ನಿವೇಷಕ್ಕನುಸಾರ ಉತ್ತಮ ಶಿಕ್ಷಕನು, ಗೆಳೆಯನೂ, ಪೋಷಕನೂ, ಸಹಪಾಠಿಯೂ, ಸಮಾಲೋಚಕನೂ, ಸಲಹೆಗಾರನೂ ಆಗುವುದರ ಜೊತೆಗೆ, ಮೂಕ ಪ್ರೇಕ್ಷಕನಾಗಿಯೂ ಒಮ್ಮೊಮ್ಮೆ ಮಕ್ಕಳ ಮನದಾಳದ ಮಾತುಗಳನ್ನು ಕೇಳಬೇಕಾಗುತ್ತದೆ. ಕೆಲ ಶಿಕ್ಷಕರು ಮಕ್ಕಳೊಂದಿಗೆ ತುಂಬಾ ಸಲಿಗೆಯಿಂದಿರುವಾಗ ಕೆಲ ಮಕ್ಕಳು ಅವರನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುವ ತಪ್ಪು‌‌ನಿರ್ಧಾರ ಮಾಡಿಬಿಡುತ್ತಾರೆ ಅದರಂತೆ ಸಹೋದ್ಯೋಗಿಗಳೂ ಸಹ ಇಲ್ಲ ಸಲ್ಲದ ಕಾಮೆಂಟ್ ಮಾಡುತ್ತಾರೆ. ಆದರೆ ನಿಜವಾದ ಶಿಕ್ಷಕನಿಗೆ ಯಾವಾಗ ಮಕ್ಕಳೊಂದಿಗೆ ಹೇಗೆ ಬೆರೆಯಬೇಕೆಂಬ ವೈಚಾರಿಕ ಮೋಭಾವವಿರಬೇಕಾಗುತ್ತದೆ.
ಈಗೀಗ ಮಕ್ಕಳ ನಡತೆ ಬದಲಾಗುತ್ತಿದೆ ಪೋಷಕರಿಗೂ ಒಂದೋ ಎರಡೋ ಮಕ್ಕಳಿರುವುದರಿಂದ ಅವನ್ನೇ ಪ್ರಿನ್ಸ್ ಪ್ರಿನ್ಸೆಸ್ ಎಂಬ ಕಾನ್ಸೆಪ್ಟ್ ಗಳಿಂದ ಅತೀಯಾಗಿ ಮುದ್ದಿಸಿ ಅವರ ಬೀಳಿಗೆಗೆ ‌ಸ್ವತಃ ಪೋಷಕರೇ ಕಾರಣವಾಗುತ್ತಿದ್ದಾರೆ. ಮಕ್ಕಳಿಗೆ ಅತ್ತ ತಂದೆ ತಾಯಿಯ ಭಯವೂ ಇಲ್ಲ ಇತ್ತ ಶಿಕ್ಷಕ ಎಂಬ ಗೌರವವೂ ಇಲ್ಲ. ಬದಲಿಗೆ ಸ್ವಂತ ಪೋಷಕರನ್ನೇ ಹೆದರಿಸಿ ಬ್ಲಾಕ್ ಮೇಲ್ ಮಾಡುವಂಥ ಸ್ವಭಾವ ಬೆಳೆಸಿಕೊಂಡು ಶಿಕ್ಷಕರನ್ನೂ ಹಾಗೇಯೇ ಬಳಸಿಕೊಳ್ಳುತ್ತಿದ್ದಾರೆ ಇದರಿಂದ ನಮ್ಮ ಸಂಸ್ಕೃತಿಯ ಅಂತಃ ಪತನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತಿದೆ.
ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ಪೋಷಕರಿಗಿಂತ ಶಿಕ್ಷಕರಿಗೆ ಹೆಚ್ಚಾಗಿ ಬಿಟ್ಟಿದೆ. ಮಕ್ಕಳೆಂದರೆ ಇಂಗ್ಲಿಷ್ ಸಲೀಸಾಗಿ ಮಾತನಾಡುವುದನ್ನು ಕಲಿತು ರ್ಯಾಂಕ್ ತರುವ ಮಿಷನ್‌ಗಳನ್ನಾಗಿ ಮಾಡುತ್ತಿರುವ ನಮ್ಮ ಸಮಾಜದ ಗ್ರೇಡೇಷನ್ ಬದಲಿಸಬೇಕಾಗುವ ಅನಿವಾರ್ಯತೆ ‌ಇದೆ. ಇದು ಶಿಕ್ಷಕರಿಂದ ಬಹುಮಟ್ಟಿಗೆ ಸಾಧ್ಯ. ವಿದ್ಯಾರ್ಥಿಗಳು ಒಂದು ಹಂತಕ್ಕೆ ತಮ್ಮ ಮನೆಯವರನ್ನು ನಂಬದಿದ್ದರೂ ತಮ್ಮ ಶಿಕ್ಷಕರನ್ನು ನಂಬುವ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಫೇವರಿಟ್ ಟೀಚರ್ ಗಳೆಂದರೆ ಮಕ್ಕಳಿಗೆ ಪಂಚಪ್ರಾಣ ಇಂಥ ಮಕ್ಕಳ ನೆಚ್ಚಿನ ಶಿಕ್ಷಕರಾಗಲು ಎಲ್ಲಾ ಶಿಕ್ಷಕರು ಪ್ರಯತ್ನಿಸಬೇಕಾಗುತ್ತದೆ.
ಕೆಲ ಸಂದರ್ಭಗಳಲ್ಲಿ ಕೆಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿಚಾರದಲ್ಲೂ ಹೆಚ್ಚುಹೆಚ್ಚಾಗಿ ಕುಗ್ಗಿಸುತ್ತಿರುತ್ತಾರೆ. ಅವರೆಂಥಾ ಕೆಲಸ ಮಾಡಿದರೂ ನಿನ್ನಿಂದ ಅದೆಲ್ಲಾ ಅಸಾಧ್ಯ ಎಂದು ವಿದ್ಯಾರ್ಥಿಗಳ ಆತ್ಮವಿಶ್ವಾಸ ಕೊಲ್ಲುತ್ತಿರುತ್ತಾರೆ. ಇಂಥ ಕೆಟ್ಟತನದಿಂದ ಒಂದು ಮಗು ಮತ್ತೇ ತನ್ನ ಜೀವನದಲ್ಲಿ ತಾನು ಎಲ್ಲರಂತೆ ಏನಾದರೂ ಸಾಧಿಸಬಲ್ಲ ಎಂಬ ಆತ್ಮಸ್ಥೈರ್ಯ ಕುಂದಿಸಿಕೊಂಡರೆ ಇದಕ್ಕೆ ಕಾರಣನಾದ ಶಿಕ್ಷಕ ಮಾತ್ರ ತನ್ನ ವೃತ್ತಿಗೆ ಕಳಂಕ ಎಂದರೂ ತಪ್ಪಾಗಲಾರದು. ತನ್ನ ಮೇಲೆ ವಿಶ್ವಾಸ ಇಟ್ಟು ಶಾಲಾ ಕಾಲೇಜುಗಳಿಗೆ ಕಳುಹಿಸಿದ ಮುಗ್ಧ ತಂದೆ ತಾಯಿಯರ ಬಗ್ಗೆ ಯೋಚಿಸಿ ಶಿಕ್ಷಕರು ಮಕ್ಕಳೊಂದಿಗೆ ಸರಿಯಾಗಿ ವರ್ತಿಸಬೇಕು. ಯಾವ ಮಗುವೂ ದಡ್ಡನಲ್ಲ. ಕೆಲವರು ಬೇಗ ಕಲಿಯಬಹುದು, ಕೆಲವರಿಗೆ ಹೆಚ್ಚು ಕಾಲ ಬೇಕಾಗಬಹುದು ಅದನ್ನರಿತು ತಾಳ್ಮೆಯಿಂದ ಶಿಕ್ಷಕ ವೃತ್ತಿಯನ್ನು ನಿಭಾಯಿಸಬೇಕು. ಅದನ್ನು ವಿದ್ಯಾರ್ಥಿಗಳೂ ತಿಳಿದು ನಡೆಯಬೇಕು. ನಮ್ಮ ಮನೆಯವರಿಗಿಂತ ಹೆಚ್ಚು ಕಾಳಜಿ ವಹಿಸುವ ಶಿಕ್ಷಕರು ಯಾವುದೇ ಪ್ರತಿ ನಿರೀಕ್ಷೆ ಇಲ್ಲದೇ ತನಗಾಗಿ ಇಷ್ಟೆಲ್ಲಾ ಸಹಕಾರ ನೀಡುತ್ತಿರುವಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಇದರ ಜೊತೆಗೆ ಈ ಮೊಬೈಲ್‌ಗಳು ಎಫ್‌ಬಿ. ವಾಟ್ಸ‌ಆ್ಯಪ್‌ಗಳು ಬಂದು ಮಕ್ಕಳನ್ನು ಕೆಡಿಸುತ್ತಿರುವುದು ಒಂದೆಡೆಯಾದರೆ ಶಿಕ್ಷಕ ರನ್ನು ಇನ್ನೂ ತೊಂದರೆಗೀಡುಮಾಡುತ್ತಿರುವುದು ಇನ್ನೊಂದೆಡೆಯಾಗಿದೆ. ಅನಾವಶ್ಯಕ ವಾಗಿ ವಿದ್ಯಾರ್ಥಿಗಳು ಮಾಡುವ ಮೆಸೇಜ್‌ ಕರೆಗಳು, ಅದಕ್ಕುತ್ತರಿಸಿಲ್ಲ ವೆಂದರೆ ಬೇಜಾರಾಗುವ ಮಕ್ಕಳು, ಯಾವ ಸಮಯಕ್ಕೆ ಯಾವ ವಿಚಾರಕ್ಕಾಗಿ ಶಿಕ್ಷಕರನ್ನು ಸಂಪರ್ಕಿಸಬೇಕು ಎಂಬ ಅನಿವಾರ್ಯತೆ ತಿಳಿಯದೇ ಬೇಕಾಬಿಟ್ಟಿ ಶಿಕ್ಷಕರನ್ನು ಸಂಪರ್ಕಿಸಿ‌ ಕಿರಿಕಿರಿ ಮಾಡುವಂಥ ಘಟನೆಗಳು ಒಂದೆಡೆ ಯಾದರೆ, ಇವೇ ಸಾಮಾಜಿಕ ಜಾಲ ತಾಣಗಳನ್ನು, ಅವಶ್ಯಕ ಸಂದರ್ಭದಲ್ಲಿ ಬಳಸಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಶಿಕ್ಷಕರನ್ನು ಸಂಪರ್ಕ ಮಾಡಿಕೊಂಡು ಬೆಳೆಯುತ್ತಿರುವುದೂ ಉಂಟು.
ಒಮ್ಮೊಮ್ಮೆ ಶಿಕ್ಷಕರು ಮಕ್ಕಳನ್ನು ‌ತಮ್ಮ‌ ರಾಜಕೀಯ ಪಕ್ಷಪಾತಗಳಿಗೂ ಬಳಸಿಕೊಂಡು ಶಿಕ್ಷಣ ಸಂಸ್ಥೆಗಳಲ್ಲಿ ತಾನೇ ದೊಡ್ಡವನು ಎಂದು ಬೀಗುವವರೂ ಕಡಿಮೆ ಇಲ್ಲ. ಮಕ್ಕಳನ್ನು‌ ತಮ್ಮ‌‌ ಸ್ವಂತ ಹಿತಾಸಕ್ತಿಗಳಿಗಾಗಿ‌ ಬಳಸಿಕೊಂಡು ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ‌ ಶಿಕ್ಷಣ ಸಂಸ್ಥೆಗಳು ಎಂದರೆನೇ ಹೇಸಿಗೆ ಬರುವ ರೀತಿಯಲ್ಲಿ ಅನುಭವ‌ನೀಡುತ್ತಾರೆ. ಯಾರೋ ಒಬ್ಬ ಶಿಕ್ಷಕ ತನ್ನ ಸಂಸ್ಥೆಯಲ್ಲಿ ರಾಜಕೀಯ ಮಾಡಿ ಯಾವ ದೊಡ್ಡ ಅಧಿಕಾರವೋ ಸಿರಿತನವೋ ಗಿಟ್ಟಿಸಿಕೊಳ್ಳಲು ಅಸಾಧ್ಯ. ಇಂಥ ಕೆಟ್ಟ ಕಾಮಾನೆಗಳನ್ನು ಬಿಟ್ಟು ಶಿಕ್ಷಕ ಎಂಬ ಹುದ್ದೆಗೆ ಧಕ್ಕೆ ತರದಂತೆ ಕೆಲಸ ಮಾಡಿಕೊಂಡು ಹೋದರೆ ಸಾಕು. ಇದರ ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಹಿರಿಯ ಸಿಬ್ಬಂದಿಗಳು ಅಥವಾ ಮೇಲಾಧಿಕಾರಿಯಾದ ಶಿಕ್ಷಕನು ತನಗಿಂತ‌ ಕಿರಿಯರನ್ನು ಹಾಗೂ ತನಗಿಂತ ಕಡಿಮೆ ಹುದ್ದೆಯಲ್ಲಿ ಇರುವವರೊಂದಿಗೆ ವರ್ತಿಸುವ ವರ್ತನೆಯ ಬಗ್ಗೆ ಕಾಳಜಿ ವಹಿಸಬೇಕಗುತ್ತದೆ ಏಕೆಂದರೆ ವಿದ್ಯಾರ್ಥಿಗಳು ಎಲ್ಲಾ ಕಡೆಯಿಂದಲೂ ಶಿಕ್ಷಕರನ್ನು ಗಮನಿಸುತ್ತಿರುತ್ತಾರೆ. ಶಿಕ್ಷಕರಾದವರು ಮಕ್ಕಳ ಮುಂದೆ ಮಾತ್ರ ಉತ್ತಮರು ಎಂದು ತೋರಿಸಿ ತಮ್ಮೊಡನೆ ಕೆಲಸ ಮಾಡುವವರೊಂದಿಗೆ ಅತೀ ಸಣ್ಣತನದಿಂದ ನಡೆದುಕೊಳ್ಳುತ್ತಿರುತ್ತಾರೆ ಅದಲ್ಲದೇ ತಮ್ಮ ಕುಟುಂಬ ಸದಸ್ಯರೊಂದಿಗೂ ಕೇವಲವಾಗಿ ನಡೆಯುತ್ತಿರುತ್ತಾರೆ ಶಾಲಾಕಾಲೇಜಿನ ಆವರಣದಲ್ಲೇ ಇಂಥ ಘಟನೆಗಳನ್ನು ನೋಡುವ ಸಂದರ್ಭಗಳೂ ಎದುರಾಗುತ್ತಿರುತ್ತವೆ ಇಂಥವೆಲ್ಲಾ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಮಾಣ ಬೀರುತ್ತವೆ ಎಂಬುದನ್ನು ಶಿಕ್ಷಕರು ಅರಿಯಬೇಕಾಗುತ್ತದೆ.
ಅದಕ್ಕಾಗಿ ಈ ಶಿಕ್ಷಕ ವೃತ್ತಿ ಇಂದಿನ ಸಮಾಜದಲ್ಲಿ ಆಧುನಿಕ ಕಾಲದಲ್ಲಿ ಇನ್ನಷ್ಟು ಉನ್ನತಕ್ಕೇರುವ ಅನಿವಾರ್ಯ ಇದೆ. ನಮ್ಮ ಶಿಕ್ಷಣ ಸಂಸ್ಥೆಗಳು ದೇಶವನ್ನು ಇನ್ನಷ್ಟು ಮುಂದೆ ಸಾಗಿಸುವ ಕೆಲಸ ಮಾಡಬೇಕಾಗಿದೆ. ಜೊತೆಗೆ ಇಂದಿನ ಮಕ್ಕಳಲ್ಲಿ ಹಿಂದಿಗಿಂತ‌ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತಿವೆ, ಮಾನಸಿಕ ಖಿನ್ನತೆಯಂತೂ ಈಗ ಸಾಮಾನ್ಯವಾಗಿಬಿಟ್ಟಿದೆ. ಮಕ್ಕಳಲ್ಲಿ ವಿಚಿತ್ರ ವರ್ತನೆಗಳಿಗೆ ಹಲವಾರು ವಿಷಯಗಳು ಕಾರಣವಾಗಿವೆ ಅದಕ್ಕಾಗಿ ಶಿಕ್ಷಕರು ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಂಡು ತಮ್ಮ ಪಾಠ ಪ್ರವಚನಗಳ ಮುಖಾಂತರ ಮುದ ನೀಡಬೇಕು. ಅನುರಾಗ, ಅನುಕಂಪ, ಸಹನೆಯಿಂದ ಅವರ ಸಮಸ್ಯೆಗಳನ್ನು ಪರಿಹರಿಸಿ ಮಾನಸಿಕವಾಗಿ ಸದೃಢರನ್ನಾಗಿ ಮಾಡುವ ಅನಿವಾರ್ಯತೆ ಇದೆ. ಯಾವ ಕೆಲಸದಲ್ಲೂ ತಪ್ಪಾದರೂ ನಡೆಯುತ್ತದೆ ಆದರೆ ಶಿಕ್ಷಕ ಕೆಲಸದಲ್ಲಿ ತಪ್ಪಾದರೆ ಒಂದು ದೇಶ ಹಾಳಾಗುತ್ತದೆ. ಅದನ್ನರಿತು ಈ ಹುದ್ದೆಯನ್ನಲಂಕರಿಸಿದವರೆಲ್ಲಾ ತಿಳಿದು ನಡೆಯಬೇಕಾಗಿದೆ ಆದ್ದರಿಂದ ಇಂದಿನ ದಿನಗಳಲ್ಲಿ ಶಿಕ್ಷಕರೆಂದರೆ ಬ್ರಹ್ಮನಾಗದಿದ್ದರೂ ತರತಮಗಳಿಲ್ಲದೇ ಎಲ್ಲರೊಂದಿಗೂ ಬಂಧುವಾಗಿಯಾದರೂ ಉಳಿಯಬೇಕಾಗಿದೆ. ಶಿಕ್ಷಕರೆಂದರೆ ವಿಷ್ಣುವಾಗದಿದ್ದರು ನಿಷ್ಪಕ್ಷಪಾತ ವಿಚಾರವಂತನಾಗಬೇಕಾಗಿದೆ ಮಹೇಶ್ವರ ನಾಗದಿದ್ದರೂ ಎಲ್ಲರ ಹಿತೈಷಿಗಳಾಗಿರಬೇಕಾಗಿದೆ.

-ಪ್ರೊ. ಫರ್ಹಾನಾಜ್ ಮಸ್ಕಿ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ
ಸಹಾಯಕ ಪ್ರಾಧ್ಯಾಪಕರು,
ಸ.ಪ್ರ.ದ.ಕಾಲೇಜು ನೆಲಮಂಗಲ.

Don`t copy text!