ಶಿಕ್ಷಕರಿಗೊಂದು ಸಂಕಲ್ಪ ಸಂಹಿತೆ

ಶಿಕ್ಷಕರಿಗೊಂದು ಸಂಕಲ್ಪ ಸಂಹಿತೆ

ಶಿಕ್ಷಣದ ಆಶಯ ವಿದ್ಯಾರ್ಥಿಗಳಲ್ಲಿ ಜೀವನ ಪ್ರಜ್ಞೆಯನ್ನು ಅರಳಿಸುವುದು. ಈ ದೃಷ್ಟಿಯಲ್ಲಿ ನಮಗೆ ಬೇಕಾಗಿರುವುದು ಅನುಕರಣೆಯ ಶಿಕ್ಷಣವಲ್ಲ, ಅನುಭವದ ಶಿಕ್ಷಣ. ಜಾಣ್ಮೆಯ ಶಿಕ್ಷಣವಲ್ಲ, ಜೀವನ ಶಿಕ್ಷಣ. ವಿದ್ವತ್ತಿನ ಶಿಕ್ಷಣವಲ್ಲ, ವಿವೇಕದ ಶಿಕ್ಷಣ. ಉಪಾಯದ ಶಿಕ್ಷಣವಲ್ಲ, ಉಪಯುಕ್ತ ಶಿಕ್ಷಣ. ನಮ್ಮ ಬೋಧನೆಗೆ ಬದುಕಿನ ಸ್ಪರ್ಶವಿರಬೇಕು. ಸಂಸ್ಕೃತಿಯ ಸಂಸ್ಕಾರವಿರಬೇಕು.

ವಿದ್ಯಾರ್ಥಿಗಳಲ್ಲಿ ಕೇವಲ ವಿಷಯ ತುಂಬಬಾರದು ವಿವೇಚನೆ ತುಂಬಬೇಕು. ನಾವು ನೀಡುವ ಶಿಕ್ಷಣ ಹೊರಗಿನಿಂದ ಬಿಡುವ ಬೆಳಕಾಗಬಾರದು. ಒಳಗಿರುವುದನ್ನು ಪ್ರಕಾಶ ಗೊಳಿಸುವಂತಿರಬೇಕು.

ವಾಸ್ತವವಾಗಿ ಮಕ್ಕಳಲ್ಲಿ ದೈವ ಶ್ರದ್ಧೆ, ಕರ್ತವ್ಯ ಪ್ರಜ್ಞೆ, ಸಮಯ ಪ್ರಜ್ಞೆ, ಹೊಣೆಗಾರಿಕೆ, ಸಹಕಾರ ಭಾವ, ಪರಧರ್ಮ ಸಹಿಷ್ಣತೆ, ಕಾಯಕ ನಿಷ್ಠೆ, ಸಾಹಸ ಪ್ರವೃತ್ತಿ, ಸ್ನೇಹ ಸಂಪನ್ನತೆ, ಸಹನಾಭಾವ, ಪರಿಸರ ಪ್ರೇಮ, ಲೋಕ ಪ್ರೀತಿ ಇವೆಲ್ಲಕ್ಕೂ ಮಿಗಿಲಾಗಿ ಆತ್ಮ ವಿಶ್ವಾಸ ಮತ್ತು ಆತ್ಮ ಗೌರವ ಗುಣಗಳನ್ನು ಅರಳಿಸಬೇಕು. ಹಾಗೆ ಅರಳಿಸಬೇಕಾದರೆ ಶಿಕ್ಷಕನು ಮೊದಲು ಈ ಎಲ್ಲಾ ಗುಣಗಳ ಗಣಿಯಾಗಿರಬೇಕು. ಶಿಕ್ಷಕನಾದವನು ಮನಸ್ಸು- ಮಾತು – ಕೃತಿ ಈ ಮೂರರ ಸಾಮರಸ್ಯದ ಸಂಗಮವಾಗಿರಬೇಕು.

ಇಲ್ಲಿ Teacher ಎಂಬ ಶಬ್ದದಲ್ಲಿ ಏಳು ಅಕ್ಷರಗಳಿವೆ. ಆ ಒಂದೊಂದು ಅಕ್ಷರವು ಒಂದೊಂದು ಲಕ್ಷಣವನ್ನು ಹೇಳುತ್ತದೆ. T ಎನ್ನುವುದು Totality – ಪೂರ್ಣತೆ, E ಎನ್ನುವುದು Eligibility – ಅರ್ಹತೆ,A ಎನ್ನುವುದು Accountability – ಬದ್ದತೆ,C ಎನ್ನುವುದು Clarity – ಸ್ಪಷ್ಟತೆ, H ಎನ್ನುವುದು Honesty- ಪ್ರಾಮಾಣಿಕತೆ, E – ಎನ್ನುವುದು Elasticity- ಪ್ರಫುಲ್ಲತೆ, ಕೊನೆಯ R ಎನ್ನುವುದು Reality – ವಸ್ತುನಿಷ್ಠತೆ.ಇವನ್ನು ಒಂದು ರೀತಿಯಲ್ಲಿ ಸಪ್ತಸೂತ್ರಗಳೆಂದರೂ ಸಲ್ಲುತ್ತದೆ.
ಶಿಕ್ಷಕನ ಕೇವಲ ಪಾಠಾನುಭವಿ ಆದರಷ್ಟೇ ಸಾಲದು ಅವನಿಗೆ ಲೋಕಾನುಭವವು ಅಷ್ಟೇ ಅಗತ್ಯ. ಈ ಲೋಕ ಅನುಭವ ಮುದ್ರಿತ ಪುಸ್ತಕಗಳಲ್ಲಿ ದೊರೆಯುವಂತದ್ದಲ್ಲ. ಪರಿಸರದ ಪ್ರಭಾವದಿಂದ ಪಡೆಯುವಂತದ್ದು. ಪರಸ್ಪರ ಸಂಬಂಧದಿಂದ ಬರುವಂತದ್ದು. ಕಲಿಕೆಯಲ್ಲಿ ವ್ಯಕ್ತಿ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಕೆಲವಿದ್ದರೆ ಕುಟುಂಬ – ಸಮಾಜ – ರಾಷ್ಟ್ರ ಮತ್ತು ವಿಶ್ವ ಸಂಬಂಧಿ ವಿಷಯಗಳು ಸಾಕಷ್ಟಿರುತ್ತವೆ. ಅದರಲ್ಲೂ ಜಗತ್ತೆಲ್ಲ ಒಂದಾಗುತ್ತಿರುವ ಇಂದಿನ ಜಾಗತೀಕರಣದ ಸನ್ನಿವೇಶದಲ್ಲಂತೂ ಲೋಕಜ್ಞಾನದ ಅಗತ್ಯ ಅಷ್ಟಿಷ್ಟಲ್ಲ. ಇದು ಜ್ಞಾನ ದಾನ ಮಾಡಬೇಕಾದ ಶಿಕ್ಷಕನಿಗೆ ಉಳಿದೆಲ್ಲರಿಗಿಂತ ಹೆಚ್ಚು ಅಗತ್ಯವೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಶಿಕ್ಷಕನೆಂದರೆ ಬೇರೇನೂ ಅಲ್ಲ, ಅವನು ಜ್ಞಾನ ಕೋಶ. ಇದರೊಂದಿಗೆ ಶಿಕ್ಷಕನಿಗೆ ಇರಬೇಕಾದ ಮತ್ತೊಂದು ಲಕ್ಷಣವೆಂದರೆ ವೃತ್ತಿ ಗೌರವ. ಅವರು ಅರಿವು ನೀಡುವ ಗುರು ಎಂಬ ಕಾರಣದಿಂದ ಇಡೀ ಸಮುದಾಯವೇ ಗೌರವಿಸುತ್ತದೆ. ಆ ಗೌರವವೇ ಅವರ ವೃತ್ತಿ ಗೌರವಕ್ಕೆ ಪ್ರೇರಣೆಯಾಗಬೇಕು. ಯಾವ ಬಗೆಯ ಮಕ್ಕಳೇ ಇರಲಿ, ಅವರ ಶಿಕ್ಷಣಕ್ಕೆ ಮೂರು ರಕ್ಷೆಗಳು ಬೇಕು. ಹೆತ್ತವರು – ಶಿಕ್ಷಕರು – ಸಮಾಜ ಈ ಮೂರು ವ್ಯವಸ್ಥೆಗಳಿಂದಲೇ ಮಕ್ಕಳು ಪ್ರಭಾವಿತರಾಗಬೇಕು.

ಬದುಕಿನ ಭವಿಷ್ಯದ ಬೆಳಕು ಕಾಣಬೇಕು. ಈ ಮೂರೂ ವರ್ಗದ ವ್ಯಕ್ತಿಗಳಿಗೆ ಭೂಮಿಯಷ್ಟು ತಾಳ್ಮೆ, ಸುಳಿಯುವ ಗಾಳಿಯಷ್ಟು ಸಮದೃಷ್ಟಿ, ಹರವಿನ ಆಕಾಶದಷ್ಟು ವಿಶಾಲ ಹೃದಯ, ಹರಿಯುವ ನೀರಿನಷ್ಟು ಪರಿಶುದ್ಧತೆ ಮತ್ತು ಉರಿಯುವ ಅಗ್ನಿಯಷ್ಟು ಉಜ್ವಲತೆ ಪಂಚಭೂತಗಳ ಪ್ರಮಾಣವಿರಬೇಕು ಅವಿದ್ದರೆ ಮಾತ್ರ ಮಕ್ಕಳ ಸಮಗ್ರ ಶಿಕ್ಷಣ ಸಾಧ್ಯವಾಗುತ್ತದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದರೂ ನೈತಿಕವಾಗಿ ಹಿಂದುಳಿದಿರುವುದು ಅಷ್ಟೇ ಸತ್ಯ. ಅನೇಕ ಸಮಸ್ಯೆಗಳು ಇಂದಿಗೂ ಕಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ಇರುವ ಏಕೈಕ ಆಸರೆ ಭರವಸೆಯ ಬೆಳಕೆಂದರೆ ನಮ್ಮ ಶಿಕ್ಷಕರು. ಶಿಕ್ಷಕರು ಸತ್ಸಂಕಲ್ಪ ಮಾಡಿ ಅದರಂತೆ ಸೇವೆ ಸಲ್ಲಿಸಿದರೆ ಮಾತ್ರ ಈ ದೇಶದ ನವ ನಿರ್ಮಾಣ ಸಾಧ್ಯ. ಈ ನಿರ್ಮಾಣ ಕಾರ್ಯ ಉಳಿದ ಯಾವ ತಜ್ಞರಿಂದಲೂ ಆಗಲು ಸಾಧ್ಯವಿಲ್ಲ. ಶಿಕ್ಷಣ ತಜ್ಞರಿಂದ ಮಾತ್ರ ಸಾಧ್ಯ ಇಲ್ಲಿ ಶಿಕ್ಷಣ ತಜ್ಞರು ಎಂದರೆ ಶಿಕ್ಷಕರೇ ಹೊರತು ಬೇರಾರೂ ಅಲ್ಲ. ಉಳಿದ ತಜ್ಞರು ರಸ್ತೆ, ಸೇತುವೆ, ಜಲಾಶಯ, ಬಹು ಅಂತಸ್ತಿನ ಕಟ್ಟಡ, ಇತ್ಯಾದಿಗಳನ್ನು ನಿರ್ಮಿಸಬಹುದು. ಅದ್ಭುತವೆನಿಸುವ ಸಾಧನ ಸಲಕರಣೆಗಳನ್ನು ಕಂಡುಹಿಡಿಯಬಹುದು. ಬೃಹತ್ ಯಂತ್ರ ಸ್ಥಾವರಗಳನ್ನು ಸ್ಥಾಪಿಸಬಹುದು. ಊಹೆಗೂ ನಿಲುಕದ ಸಂಪರ್ಕ ಸಂವಹನ ತಂತ್ರಗಳನ್ನು ಶೋಧಿಸಬಹುದು. ಇವೆಲ್ಲ ಭೌತಿಕ ಸೌಲಭ್ಯ ಸವಲತ್ತುಗಳಿಗೆ ಸಂಬಂಧಿಸಿದವು. ಆದರೆ ಇವೆಲ್ಲಕ್ಕಿಂತ ಮೂಲಾಧಾರವಾಗಿ ಇರಬೇಕಾದದ್ದು ನೈತಿಕ ನಿಷ್ಠೆ. ಇದನ್ನು ಬಾಲ್ಯದಲ್ಲಿಯೇ ಬೆಳೆಸಲು ಶಿಕ್ಷಕರಿಗೆ ಮಾತ್ರ ಸಾಧ್ಯವಿದೆ. ಒಬ್ಬ ಕವಿ ಒಂದು ಕಡೆ “ಉಸಿರಾಗಿ ಹೋಗಿ ಬರುವ ಗಾಳಿಗೆ ದಾರಿ ತಿಳಿದಿರಬೇಕು ಅದು ಒಮ್ಮೆ ದಾರಿ ತಪ್ಪಿದರೆ ಗಾಳಿ ಬೀದಿ ಪಾಲು ದೇಹ ಮಣ್ಣು ಪಾಲು” ಎಂದಿದ್ದಾನೆ. ಅಂತೆಯೇ ನಮ್ಮ ರಾಷ್ಟ್ರದ ಬದುಕಿಗೆ ಶಿಕ್ಷಕರು ಉಸಿರೆಂದು ನಾವು ತಿಳಿದಿದ್ದೇವೆ. ಅವರು ಮಕ್ಕಳ ಒಳ ಹೊರಗನ್ನು ಅರ್ಥ ಮಾಡಿಕೊಳ್ಳುವಲ್ಲಿ ತಪ್ಪಿದರೆ ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದಿದ್ದರೆ ಆ ಮಕ್ಕಳ ಭವಿಷ್ಯವೇ ಹಾಳಾಗಿಬಿಡುತ್ತದೆ. ಈ ಬಗೆಗೆ ಪೋಷಕರಲ್ಲೂ ಜಾಗೃತಿ ಉಂಟು ಮಾಡಬೇಕಾಗಿದೆ. ಸಹಸ್ರಾರು ಮಕ್ಕಳ ಭವಿಷ್ಯವನ್ನು ರೂಪಿಸುವ ಬಹುದೊಡ್ಡ ಅವಕಾಶ. ಆದ್ದರಿಂದಲೇ ಶಿಕ್ಷಕ ವೃತ್ತಿ ಇತರೆಲ್ಲ ವೃತ್ತಿಗಳಿಗಿಂತ ಶ್ರೇಷ್ಠ ಮತ್ತು ಪವಿತ್ರವಾದದ್ದು. ಶಿಕ್ಷಕರ ಸತ್ಸಂಕಲ್ಪ ಹೀಗಿರಲಿ
೧) ನಿಮ್ಮ ವೃತ್ತಿಯ ಬಗೆಗೆ ನಿಮಗೆ ಪೂರ್ಣ ಅಭಿಮಾನವಿರಲಿ.
೨) ಶಿಕ್ಷಣ ಸೇವೆ ಪವಿತ್ರವಾದದ್ದು ಎಂಬುದನ್ನು ಮರೆಯದಿರಿ.
೩) ಮುಗ್ಧ ಮಕ್ಕಳಿಗೆ ಜ್ಞಾನ ದಾನ ಒಂದು ಪುಣ್ಯದ ಕಾರ್ಯ.
೪) ನಿಮ್ಮ ಸೇವೆಯಲ್ಲಿ ಅವಿರಳ ಶ್ರದ್ಧೆ ಮತ್ತು ಬದ್ಧತೆಯಿರಲಿ.
೫) ಶಿಕ್ಷಕರಿಗೆ ಸಾರ್ವಜನಿಕ ಸಭ್ಯತೆ ಅಪೇಕ್ಷಣೀಯವಾದುದು.
೬) ಸರ್ಕಾರ – ಸಾರ್ವಜನಿಕರ ಮಧ್ಯೆ ನೀವೊಂದು ಸೇತುವೆ ಇದ್ದಂತೆ.
೭) ದೀನದಲಿತರ ಮಕ್ಕಳ ಬಗೆಗೆ ವಿಶೇಷ ಗಮನವಿರಲಿ.
೮) ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿ.
೯) ಪೋಷಕರಿಗೆ ಅವರ ಹೊಣೆಗಾರಿಕೆಯನ್ನು ಮನವರಿಕೆ ಮಾಡಿ.
೧೦) ನಿಮ್ಮ ಸೇವೆಯಲ್ಲಿ ಎಂದೂ ಉದಾಸೀನ ತಲೆದೋರದಿರಲಿ.
೧೧) ಕಾಲದ ಮಹತ್ವವನ್ನು ಮಕ್ಕಳಲ್ಲಿ ಮೈಗೂಡಿಸಬೇಕು. ೧೨) ಸಂಭಾವನೆಗಿಂತ ಸೇವೆ ಮುಖ್ಯವೆಂಬುದು ನೆನಪಿರಲಿ.
೧೩) ಶಿಕ್ಷಕರ ವೇಷ ಭೂಷಣಗಳು ತುಂಬಾ ಸರಳವಾಗಿರಬೇಕು.
೧೪) ಜಾತಿ ಮತ ಮತ್ತು ರಾಜಕೀಯಗಳಿಂದ ದೂರವಿರಬೇಕು.
೧೫) ತರಗತಿಗೆ ಹೋಗುವ ಮುನ್ನ ಪೂರ್ಣ ಸಜ್ಜಾಗಿರಬೇಕು.
೧೬) ‘ಕಲಿಸುತ್ತಲೇ ಕಲಿ’ ಎಂಬುದರ ಅರ್ಥ ತಿಳಿದಿರಬೇಕು. ದಿನಚರಿ ಬರೆಯಬೇಕು.
೧೭) ಸೇವೆ ಸಲ್ಲಿಸುವ ಸಂಸ್ಥೆಯ ಆಸ್ತಿಪಾಸ್ತಿಗಳ ಧರ್ಮದರ್ಶಿಗಳಂತಿರಬೇಕು. ೧೮) ಯಾವ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬಾರದು.
೧೯) ಮಕ್ಕಳಲ್ಲಿ ಮುಖ್ಯವಾಗಿ ರಾಷ್ಟ್ರೀಯ ಪ್ರಜ್ಞೆ ಬೆಳೆಸಬೇಕು.
೨೦) ನಿತ್ಯವೂ ಆತ್ಮ ನಿರೀಕ್ಷೆ ಮಾಡಿಕೊಳ್ಳಬೇಕು.
ಈ ಅಂಶಗಳು ಕೇವಲ ಸಾಂಕೇತಿಕ ಪಟ್ಟಿ.ನಿಮ್ಮ ಸೇವಾ ಅನುಭವವೇ ಮಾರ್ಗದರ್ಶಕ.

ನವ ಭಾರತದ ನಿರ್ಮಾಣದ ಪ್ರಕ್ರಿಯೆಯಲ್ಲಿರುವ ನಾವುಗಳು ಈ ಸಂದರ್ಭದಲ್ಲಿ ಶಿಕ್ಷಕರೆಲ್ಲ ಶುದ್ಧ ಸಂಕಲ್ಪ ಮಾಡಬೇಕು. ಭಾರತೀಯರೆಲ್ಲ ಒಂದು ಭೌಗೋಳಿಕ ನೆಲೆಯಲ್ಲಿ ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಸಮೃದ್ಧ ಮತ್ತು ನೆಮ್ಮದಿಯ ರಾಷ್ಟ್ರವನ್ನಾಗಿ ಮಾಡಬೇಕೆಂದು ಹಂಬಲಿಸಿದ್ದ ಸ್ವಾತಂತ್ರ ಹೋರಾಟಗಾರರ ಆಶಯವನ್ನು ಈಡೇರಿಸಲು ದೃಢ ನಿರ್ಧಾರ ಮಾಡಬೇಕು. ಕೇವಲ ಸಂಕಲ್ಪ ಮಾಡಿದರಷ್ಟೇ ಸಾಲದು ಸಕ್ರಿಯವಾಗಿ ಪ್ರಯತ್ನವನ್ನು ಮಾಡಬೇಕು. ಅಂತಹ ಚಿಂತನೆಗೆ ಕ್ರಿಯಾಶೀಲತೆಗೆ ವಿಚಾರಗಳು ಪ್ರೇರಕವಾಗಬೇಕು. ನಮಗೆ ಮುಕ್ತ ಮನಸ್ಸಿದ್ದರೆ ಅದು ಸಾಧ್ಯ. “ಸಂಶಯದ ಸಂತೆಯಲ್ಲಿ ಸರಕು ಹುಡುಕಿದರೆ ಅದು ಸಿಗುವುದಿಲ್ಲ, ಅನುಮಾನದ ಅಂಗಡಿಯಲ್ಲಿ ಅಭಿಮಾನದ ಸ್ವಭಾವ ಸಿಕ್ಕಲಾರದು“. ಬೇಕಾಗಿರುವುದು ದೃಢಸಂಕಲ್ಪ ಮತ್ತು ಪ್ರಯತ್ನಿಶೀಲತೆ.
ಒಟ್ಟಾರೆ ಇಲ್ಲಿ ಹೇಳಿದ ಮಾತುಗಳು ಕೇವಲ ಕೊಳಲ ಮೇಲೆ ಸುಳಿದ ಗಾಳಿಯಂತಾಗಬಾರದು. ಕೊಳಲ ಒಳಗೆ ಇಳಿದು ಮಧುರ ದನಿಯಾಗಿ ಹೊಮ್ಮಬೇಕು ಎನ್ನುವುದೇ ಬರಹದ ಸದಾಶಯ.

ಶ್ರೀಮತಿ ರೇಖಾ ಪಾಟೀಲ
ಇತಿಹಾಸ ಉಪನ್ಯಾಸಕರು
ರಾಯಚೂರು

Don`t copy text!