ಅಕ್ಕನೆಡೆಗೆ- ವಚನ – 47-
ಅರಿವು’ ಜಾಗೃತಗೊಳಿಸುವ ಪರಿ
ಎಲ್ಲ ಎಲ್ಲವನರಿದು ಫಲವೇನಯ್ಯಾ
ತನ್ನ ತಾನರಿಯಬೇಕಲ್ಲದೆ?
ತನ್ನಲಿ ಅರಿವು ಸ್ವಯವಾಗಿರಲು
ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನಾ
ನೀನರಿವಾಗಿ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ
‘ಅರಿವು’ ಎನ್ನುವುದು ಆಂತರಿಕ ಪ್ರಜ್ಞೆಯ ಜಾಗೃತಿ. ತಿಳುವಳಿಕೆ, ತಿಳಿಯುವುದು, ತಿಳಿಯಿತು, ಈ ಎಲ್ಲಾ ಶಬ್ದಗಳು ನೇರವಾಗಿ ಅರಿವಿಗೆ ಸಂಬಂಧಿಸುತ್ತದೆ. ಈ ಆಂತರಿಕ ಪ್ರಜ್ಞೆ ಜಾಗೃತವಾಗಬೇಕಾದರೆ, ಬಸವಣ್ಣನ ಶರಣ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ಶರಣರಿಗಿಂತಲೂ ಮೊದಲು ಬುದ್ಧ ಬೋಧಿ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿ, ಜ್ಞಾನೋದಯ (Enlightenment) ಪಡೆದ ಬಗೆಯನ್ನು ಓದಿನಿಂದ ಬಾಹ್ಯಾರ್ಥದಲ್ಲಿ ತಿಳಿದುಕೊಳ್ಳಬಹುದು. ಅದನ್ನು ಸ್ವಾನುಭವದಲ್ಲಿ ತಿಳಿಯುವ ಮಾರ್ಗ ಕಠಿಣ ಎನಿಸುತ್ತದೆ. ಅವನು ಬಹಳ ಚಿಕ್ಕ ವಯಸ್ಸಿನಲ್ಲಿ ರಾಜ್ಯ, ಆಡಳಿತ, ಹೆಂಡತಿ ಮತ್ತು ಮಗುವನ್ನು ತ್ಯಜಿಸಿ ತಪಸ್ಸು ಮಾಡಿದ, ಹಾಗಾಗಿ ಸಾಧನೆ ಸಾಧ್ಯವಾಗಿಸಿದ ಎನ್ನುವ ನಂಬಿಕೆ ನಮ್ಮೊಳಗೆ ಮನೆ ಮಾಡಿರುತ್ತದೆ. ಆ ನಂಬಿಕೆಯನ್ನು ಮುರಿದು ಸ್ವಾನುಭವದಿಂದ ತಿಳಿಯುವ ಮಾರ್ಗದ ಕಾಣ್ಕೆಯೇ “ಬಸವಣ್ಣನ ಇಷ್ಟಲಿಂಗ ಪೂಜೆ”. ಬುದ್ಧನಂತೆ ಸಂಸಾರ ತ್ಯಜಿಸುವುದಾಗಲಿ, ಸನ್ಯಾಸ ಪಡೆದು ಕಾಡಿಗೆ ಹೋಗುವುದಾಗಲಿ, ಸಮಾಜದೊಂದಿಗೆ ಸಂಪರ್ಕ ಕಡಿದುಕೊಳ್ಳುವುದಾಗಲಿ, ಯಾವುದನ್ನೂ ಬಸವಾದಿ ಶರಣರು ಒಪ್ಪುವುದಿಲ್ಲ. ಇಷ್ಟಲಿಂಗ ಪೂಜೆಯಿಂದಲೆ ವಿಕಾಸದೆಡೆಗೆ ಸಾಗುವ ಮಾರ್ಗವನ್ನು ತೋರಿಸಿ ಕೊಟ್ಟರು. ಹಾಗಾಗಿ ಅನೇಕ ಶರಣ ದಂಪತಿಗಳನ್ನು ಕಾಣಲು ಸಾಧ್ಯ. ಎಲ್ಲರೂ ಮೊದಲು ಭಕ್ತರಾಗಿ ನಂತರ ಶರಣರಾಗುತ್ತಾರೆ. ಲಿಂಗ ಪೂಜೆಯಿಂದ ವ್ಯಕ್ತಿಗೆ ತನ್ನ ಸ್ವರೂಪದ ದರ್ಶನವಾಗುತ್ತದೆ. ಅಗ ಅರಿವು ಜಾಗೃತ ಸ್ಥಿತಿಯನ್ನು ತಲುಪಿ, ವ್ಯಕ್ತಿಯ ವ್ಯಕ್ತಿತ್ವ ವಿಭಿನ್ನವಾಗಿ ಕಾಣಲು ಆರಂಭಿಸುತ್ತದೆ. ಆದ್ದರಿಂದಲೇ ಶರಣರು ನಮ್ಮ ಮಧ್ಯೆ ಇನ್ನೂ ಜೀವಂತವಾಗಿದ್ದಾರೆ.
ಇಷ್ಟಲಿಂಗ ಎಲ್ಲಿಂದ ಬಂತು? ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟಬಹುದು. ಚೆನ್ನಬಸವಣ್ಣ ತನ್ನ ವಚನದಲ್ಲಿ ಹೇಳಿದ ಪ್ರಕಾರ ಅದು ಬಸವಣ್ಣನ ಹೊಟ್ಟೆಯಲ್ಲೇ ಹುಟ್ಟಿತು ಎಂದು ತಿಳಿದು ಬರುತ್ತದೆ. ಇದರಿಂದ ಈ ಲಿಂಗದ ಪರಿಕಲ್ಪನೆಯ ಜನಕ ಬಸವಣ್ಣ ಎನ್ನುವುದು ಸ್ಪಷ್ಟವಾಗುತ್ತದೆ. ಸ್ವತಃ ಬಸವಣ್ಣನೇ, “ಎನ್ನೊಳಗಿರ್ದು ನಿನ್ನ ತೋರಲಿಕೆ ನೀನೇ ರೂಪಾದೆ” ಎನ್ನುವ ಮಾತು ಪುಷ್ಟೀಕರಿಸುತ್ತದೆ. ಆ ಕಾರಣಕ್ಕಾಗಿ ಬಸವಣ್ಣನಿಗೆ ಲಿಂಗದೀಕ್ಷೆ ಗುರುವಿನ ಮುಖಾಂತರ ಆಗದೆ, ತನ್ನ ಅರಿವೇ ತನಗೆ ಗುರು ಆಯಿತೆಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಅಕ್ಕನ ವಚನವನ್ನು ಓದಿದರೆ ಅರ್ಥೈಸಿಕೊಳ್ಳುವ ಒಂದು ಹೊಳವು ಸಿಗುತ್ತದೆ.
ಈ ವಚನದಲ್ಲಿ ಅಕ್ಕ ಪ್ರಭುನ್ನುದ್ದೇಶಿಸಿ ‘ಅರಿವು’ ಕುರಿತು ಮೊದಲು ಪ್ರಶ್ನೆ ಮಾಡಿ, ನಂತರ ಉತ್ತರ ಕಂಡುಕೊಳ್ಳುವಲ್ಲಿ ಸಫಲವಾಗಿರುವುದನ್ನು ಗ್ರಹಿಸುತ್ತೇವೆ. ಅವಳು ಬಹಳ ಸೂಕ್ಷ್ಮವಾದ ತನ್ನ ಒಳಪಯಣವನ್ನು ಕೈಗೊಂಡು, ತೀರಾ ಆಂತರಿಕ ನೆಲೆಯಲ್ಲಿ ನಿಂತು, ಸ್ವಾನುಭವದ ಮೂಸೆಯಿಂದ ಈ ವಚನ ರಚಿಸಿದ್ದಾಳೆ. ಅದಕ್ಕಾಗಿ ಅದನ್ನು ತಿಳಿಯುವ ಮೊದಲು, ಹಾವಿನಾಳ ಕಲ್ಲಯ್ಯನ, ಇದೇ ತರಹದ ವಚನವನ್ನು ಅರ್ಥೈಸಿಕೊಳ್ಳುತ್ತ ತಿಳಿಯುವ ಪ್ರಯತ್ನ ಮಾಡಬಹುದು. ಕಲ್ಲಯ್ಯನ ವಚನ ಹೀಗಿದೆ,
“ಅರಿವೆ ಗುರು ಆಚಾರವೆ ಶಿಷ್ಯ
ಜ್ಞಾನವೆ ಲಿಂಗ ಪರಿಣಾಮವೆ ತಪ
ಸಮತೆಯೆಂಬುದೆ ಯೋಗದಾಗು ನೋಡಾ
ಈಸುವನರಿಯದೆ ವೇಷವ ಧರಿಸಿ
ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು”
ಇದರಲ್ಲಿ ವ್ಯಕ್ತಿಯೊಳಗಿನ ಅರಿವು ಗುರುವೆಂದು ಹೇಳುತ್ತ ಆಚಾರವೇ ಶಿಷ್ಯ ಎಂದಿದೆ. ಪ್ರತಿನಿತ್ಯ ಲಿಂಗಧ್ಯಾನದಲ್ಲಿ ಹೋದರೆ, ಆಗ ಲಿಂಗ ಜ್ಞಾನದ ಪ್ರತೀಕವಾಗಿ ಕಾಣಿಸುತ್ತದೆ. ಲಿಂಗ ಧರಿಸಿದವರ ನಡೆ-ನುಡಿ ಒಂದಾಗಿ, ಅದರ ಪರಿಣಾಮದಿಂದ ತಪಸ್ಸು ಸಾಧಿಸುತ್ತದೆ. ಆ ತಪಸ್ಸು ವ್ಯಷ್ಟಿ-ಸಮಷ್ಟಿಯ ಸಾಮರಸ್ಯದ ಆಗು ಮಾಡುತ್ತದೆ. ಅಂದರೆ ವ್ಯಕ್ತಿಯ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಪ್ರಜ್ಞೆ ಎರಡೂ ಒಂದಾಗಿ ಸತ್ಕಾರ್ಯಗಳಿಗೆ ಮಹತ್ವ ಕೊಡುತ್ತದೆ. ಈ ಸಮಾನತೆಯು ಲಿಂಗವಂತರ ಶಿವಯೋಗದ ಲಿಂಗಧ್ಯಾನದಿಂದ ಸಾಧ್ಯ. ಅದನ್ನು ಬಿಟ್ಟು ಈ ಎಲ್ಲಾ ಸೂಕ್ಷ್ಮತೆಗಳನ್ನು ಅರಿಯದೆ, ಬಿಳಿ, ಕಾವಿ ಬಣ್ಣಗಳ ಬಟ್ಟೆ ಧರಿಸಿ, ತಲೆ ಬೋಳು ಮಾಡಿಕೊಂಡರೆ ಅರ್ಥವಿಲ್ಲ. ಇದನ್ನು ಕಂಡ ಆ ಮಹಾಲಿಂಗ ಕಲ್ಲೇಶ್ವರನು ನಗುತ್ತಾನೆ ಎನ್ನುವುದು ಕಲ್ಲಯ್ಯನ ಅಭಿಮತ.
“ತನ್ನ ತಾ ಅರಿದವಂಗೆ ಅರಿವೇ ಗುರು” ಎಂದು ಮುಕ್ತಾಯಕ್ಕನೂ ಹೇಳುತ್ತಾಳೆ. ಶರಣರ ಈ ಲಿಂಗಪೂಜೆಯಲ್ಲಿ ಆಗುವ ಅನುಭಾವವೇ “ಲಿಂಗಾಂಗ ಸಾಮರಸ್ಯ”. ಈ ವಿಧಾನವನ್ನು ಅಕ್ಕ ರೂಢಿಸಿಕೊಂಡು ಬಸವಾದಿ ಶರಣರನ್ನು ಅನುಸರಿಸಿ, ಅವರನ್ನು ಕಾಣಲು ಹಂಬಲಿಸಿ, ಅವರ ಸಂಗ ಬಯಸಿ ಬಂದು, ಅವರೊಂದಿಗೆ ಬೆರೆಯುತ್ತಾಳೆ. ಕಲ್ಯಾಣದಲ್ಲಿ ಸತ್ಸಂಗದ ಪ್ರಭಾವದಿಂದ ಆದ ಆನಂದವನ್ನು ತನ್ನ ಅನೇಕ ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ. ಅದೇ ತರಹದಲ್ಲಿ ಲಿಂಗಾಂಗ ಸಾಮರಸ್ಯದ ಆನಂದವನ್ನು ಅರಿವಿನ ಮೂಲಕ ಈ ವಚನದಲ್ಲಿ ಅಭಿವ್ಯಕ್ತಿಸಲಾಗಿದೆ.
ನಾವು ಈ ಜಗತ್ತಿನಲ್ಲಿ ಹುಟ್ಟಿ ಬಂದ ಮೇಲೆ ಕುಟುಂಬದೊಂದಿಗೆ ಮೊದಲು ಬೆರೆತು ಬೆಳೆಯುತ್ತೇವೆ. ನಂತರ ಸಮಾಜದೊಂದಿಗೆ ಸಂಪರ್ಕ ಸಾಧಿಸುತ್ತೇವೆ. ನಮ್ಮ ಬದುಕು, ಈ ಜೀವನ, ಇದನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಯಾವತ್ತೂ ನಮ್ಮ ಸುತ್ತಲಿನ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತೇವೆ. ಅರಿವಿನ ಸ್ವರೂಪ ದರ್ಶನ ಮಾಡದೆ, ಇಡೀ ಜೀವನ ಕಳೆದು ಹೋಗುತ್ತದೆ. ಒಂದು ದಿನ ಸಾವು ಎದುರಿಗೆ ಬಂದು ಧುತ್ತೆಂದು ನಿಂತಾಗ, ಆ ಸಮಯ ತಾನಾಗಿಯೇ ಅರಿವಿನ ದರ್ಶನ ಮಾಡಿಸುತ್ತದೆ. ಆಗ ಮನುಷ್ಯನ ಬಳಿ ಸಮಯ ಇರುವುದಿಲ್ಲ, ಮೀರಿ ಹೋಗಿರುತ್ತದೆ. ಅದಕ್ಕೇ ಬಸವಣ್ಣ ಹೇಳುವುದು, “ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ” ಎಂದು. ಆಯುಷ್ಯ ಕ್ಷೀಣಿಸುವ ಮುನ್ನ ಅರಿವಿನ ದರ್ಶನ ಅಂದರೆ ನಮ್ಮೊಳಗೆ ಆ ದರ್ಶನವಾಗಬೇಕು.
ಅದಕ್ಕೆ ಅಕ್ಕ ಹೇಳುವುದು, ಏನೆಲ್ಲಾ ತಿಳಿದುಕೊಂಡರೂ, ಮೊದಲು ತನ್ನನ್ನು ತಾನು ತಿಳಿಯದಿದ್ದರೆ, ಎಲ್ಲಾ ವ್ಯರ್ಥ. “ತನ್ನಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?” ಎಂದು ಅಕ್ಕ ಪ್ರಶ್ನಿಸುವ ಉದ್ದೇಶ ಆ ಅರಿವು ನಮ್ಮೊಳಗೇ ಇದೆ ಎಂದರ್ಥ. ಇತರರ ಬಳಿ ಹೋಗಿ ಕೇಳುವ ಅವಶ್ಯಕತೆ ಇಲ್ಲ ಎನ್ನುವ ವಿಡಂಬನಾತ್ಮಕ ಮಾತು. ಇಲ್ಲಿ ಅಕ್ಕ ಚೆನ್ನಮಲ್ಲಿಕಾರ್ಜುನನನ್ನು ‘ಅರಿವು’ ಶಬ್ದಕ್ಕೆ ರೂಪಕವಾಗಿ ಬಳಸುತ್ತಾಳೆ. ಅರಿವು ಅಂದರೆ ಚೆನ್ನಮಲ್ಲಿಕಾರ್ಜುನ! ತನಗೆ ‘ಅರಿವು’ ಎಂದರೆ ಜ್ಞಾನೋದಯ ಆಯಿತೆಂದು ವೈಭವೀಕರಿಸಿ ಅಕ್ಕ ಹೇಳುವುದಿಲ್ಲ. ಅಲ್ಲಿ ಅಹಮಿಕೆಯ ಲವಲೇಶವು ಹುಡುಕಿದರೂ ಸಿಗುವುದಿಲ್ಲ. ಆ ಸರಳತೆಗೆ ಕಾರಣ ಅರಿವಿನೊಳಗಿರುವ ಅವನು “ಲಿಂಗ ಪತಿ”. ಅವನು ದಾರಿ ತೋರಿದಂತೆ ಅದನ್ನು ಅರಿಯಲು ಸಾಧ್ಯವಾಯಿತು ಎಂದು ನಿವೇದಿಸಿಕೊಳ್ಳುವ ವಿನಮ್ರ ಭಾವ “ಶರಣ ಸತಿ” ಯಾಗುವ ಪರಿ ಅಕ್ಕನಲ್ಲಿದೆ. ಅಂತಹ ಇಷ್ಟಲಿಂಗ ಪೂಜೆ, ಲಿಂಗಾಂಗ ಸಾಮರಸ್ಯದ ಅನುಭಾವ, ವ್ಯಷ್ಟಿ-ಸಮಷ್ಟಿ ಪ್ರಜ್ಞೆಯ ಜಾಗೃತಿಯನ್ನು ಈ ವಚನ ಮೂಡಿಸುತ್ತದೆ. ಆ ಕಾರಣಕ್ಕಾಗಿ ಅಕ್ಕ ಮತ್ತು ಬಸವಾದಿ ಶರಣರು ನಿತ್ಯ ಸ್ಮರಣೀಯರು. ನಾವು ಅದೇ ಹಾದಿಯಲ್ಲಿ ಸಾಗುತ್ತ ಸುಂದರ ಜೀವನಶೈಲಿಯತ್ತ ಪಯಣಿಸೋಣ.
ಸಿಕಾ