ಪುಣೆಯಿಂದ ಎಲಿಫೆಂಟಾ ಕೇವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ.

ಪುಣೆಯಿಂದ ಎಲಿಫೆಂಟಾ ಕೇವ್ಸ್ ಎನ್ನುವ ಅದ್ಭುತ ದ್ವೀಪಕ್ಕೆ ಪ್ರವಾಸ…

 

ಮುಂದುವರೆದ ಅಂತಿಮ ಭಾಗ-೪

ಎಲಿಫೆಂಟಾ ಕೇವ್ಸ್ ಗೆ ಪ್ರಯಾಣಿಸಲು ಇರುವ ಒಂದೇ ಒಂದು ಮಾರ್ಗವೆಂದರೆ “ಗೇಟ್ ವೇ ಆಫ್ ಇಂಡಿಯಾ”. ಇಂಗ್ಲೆಂಡ್ ಸಾಮ್ರಾಜ್ಯದ ಚಕ್ರವರ್ತಿ 5-ನೆಯ ಜಾರ್ಜ್ ಮತ್ತು ರಾಣಿ ಮೇರಿ ದೆಹಲಿಯ ದರ್ಬಾರ್ ನಲ್ಲಿ ಭಾಗವಹಿಸಲು ಹಡಗಿನ ಮೂಲಕ ಕ್ರಿ.ಶ 1911 ರಲ್ಲಿ ಮುಂಬೈ ಬಂದರ್(ಪೋರ್ಟ್) ಗೆ ಬಂದಿಳಿದರಂತೆ.ಅಲ್ಲಿಯವರೆಗೂ ಇಂಗ್ಲೆಂಡ್ ಸಾಮ್ರಾಜ್ಯದ ಯಾವೊಬ್ಬ ಚಕ್ರವರ್ತಿಯು ಭಾರತಕ್ಕೆ ಭೇಟಿ ಕೊಟ್ಟಿರಲ್ಲವಂತೆ.ಇದು ಅಂದಿನ ದಿನಮಾನಗಳಲ್ಲಿ ಜಾಗತಿಕ ಸುದ್ದಿ ಸುದ್ದಿಯಾಗಿತ್ತು.ಹೀಗಾಗಿ ಭಾರತದಲ್ಲಿದ್ದ ಅಂದಿನ ಬ್ರಿಟಿಷ್ ಸರಕಾರ ಈ ಘಟನೆಯನ್ನು ಸ್ಮರಣೀಯವಾಗಿಸಲು 1913 ರಲ್ಲಿ “ಗೇಟ್ ವೇ ಆಫ್ ಇಂಡಿಯಾ”(ಭಾರತದ ಹೆಬ್ಬಾಗಿಲು ) ನಿರ್ಮಾಣಕ್ಕೆ ಶಿಲನ್ಯಾಸ ಮಾಡಿತು.

ಇಂಡೋ-ಸಾರ್ಸೈನಿಕ್ ಶೈಲಿಯಲ್ಲಿ ನಿರ್ಮಿಸಿರುವ ‘ಗೇಟ್ ವೇ ಆಫ್ ಇಂಡಿಯಾದ ವಾಸ್ತುಶಿಲ್ಪಿ ಗ್ಯಾಮನ್ ಇಂಡಿಯಾ ಕಂಪನಿಯ “ಜಾರ್ಜ್ ವಿಟವೇಟ್”.ಈ ಕಟ್ಟಡಕ್ಕೆ ಭದ್ರ ತಳಪಾಯವನ್ನು ನಿರ್ಮಿಸಲು 37 ಅಡಿ ಎತ್ತರದ ಆರ್.ಸಿ.ಸಿ ಯ ಭಾರಿ ಗೋಡೆಯನ್ನು ಸಮುದ್ರದಲ್ಲಿ ಮುಳುಗಿಸಿ ಬುನಾದಿಯನ್ನು ನಿರ್ಮಿಸಿದ್ದಾನಂತೆ.ಈ ಕಟ್ಟಡ 85 (26 meter) ಫೀಟ್ ಎತ್ತರ, 15(45 meter) ಫೀಟ್ ಸುತ್ತಳತೆಯ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ.ಕಟ್ಟಡದ ಮೇಲ್ಭಾಗದಲ್ಲಿರುವ ಗೋಳಾಕೃತಿಯ ಗುಂಬಜದ ವ್ಯಾಸ 48 ಫೀಟ್.ಈ ಕಟ್ಟಡಕ್ಕೆ ಹಳದಿ ಬಣ್ಣದ (ಖೋರಾಡಿ ಬಾಸಾಲ್ಟ್) ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದ್ದು 21 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭವ್ಯವಾದ ಈ ಸ್ಮಾರಕದ ಎದುರು ತಲೆ ಎತ್ತಿ ನೋಡಿದಾಗ, ಇದಕ್ಕೆ “ಭಾರತದ ಹೆಬ್ಬಾಗಿಲು” ಎಂದು ಹೆಸರಿಟ್ಟದ್ದು ಸಾರ್ಥಕವೆನಿಸುತ್ತದೆ

ಗೇಟ್ ವೇ ಆಫ್ ಇಂಡಿಯಾ ಸ್ವಾತಂತ್ರ್ಯ ನಂತರ ಇಂಗ್ಲೆಂಡ್ ಸಾಮ್ರಾಜ್ಯ ನಿರ್ಗಮನದ ದ್ವಾರವಾಗಿತ್ತು. 28ನೇ ಫೆಬ್ರುವರಿ 1948 ರಂದು ಬ್ರಿಟಿಷರ ಕೊನೆಯ ಸೇನಾ ತುಕಡಿ ಗೇಟ್ ವೇ ಆಫ್ ಇಂಡಿಯಾ ಮೂಲಕ ಹಡಗಿನಲ್ಲಿ ಕುಳಿತುಕೊಂಡು ಭಾರತವನ್ನು ಬಿಟ್ಟು ನಿರ್ಗಮಿಸಿದರು.ಇಂತಹ ಸಾವಿರ ಸಾವಿರ ಸ್ವಾತಂತ್ರ ಹೋರಾಟದ ಕಥನಗಳಿಗೆ ಸಾಕ್ಷಿಯಾಗಿ ನಿಂತಿದೆ ಈ ಹೆಬ್ಬಾಗಿಲು. 26/11ರ ಮುಂಬೈ ಘಟನೆಗೆ ಕಾರಣರಾದ ಲಷ್ಕರ್ ಐ ತೈಯಬಾ ಸಂಘಟನೆಯ 10 ಉಗ್ರರು ಇದೇ “ಗೇಟ್ ವೇ ಆಫ್ ಇಂಡಿಯಾ” ಮೂಲಕ ಮುಂಬೈಯನ್ನು ಪ್ರವೇಶಿಸಿ ನಡೆಸಿದ ನರಮೇದದ ಘಟನೆ ನೆನೆದು ಕಣ್ಣೀರು ಮೂಡಿದವು.ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹುತಾತ್ಮರಾದರಾದವರಿಗೆ ಮನಸ್ಸಿನಲ್ಲಿಯೇ ಶಾಂತಿ ಕೋರುತ್ತಾ ಎಲಿಫೆಂಟಾ ಗುಹೆಗಳಿಗೆ ಪ್ರಯಾಣಿಸಲು “ಮೋಟಾರ್ ಲಾಂಚ್” ಗಳ ಕಡೆಗೆ ಹೊರಟೆವು.

ಗೇಟ್ ವೇ ಆಫ್ ಇಂಡಿಯಾದಿಂದ ಅರಬ್ಬಿ ಸಮುದ್ರದ ಓಮನ್ ಭಾಗದಲ್ಲಿರುವ ಎಲಿಫೆಂಟಾ ಗುಹೆಗಳು ಇರುವ ದ್ವೀಪಕ್ಕೆ ಹೋಗಿ ಬರಲು 250 ರೂಗಳ ಟಿಕೆಟ್ ತೆಗೆದುಕೊಂಡು ಮೋಟಾರ್ ಲಾಂಚ್ ಏರಿ ಹೊರಟೆವು.20 ಕಿಲೋ ಮೀಟರ್ ದೂರವಿರುವ ಈ ದ್ವೀಪಕ್ಕೆ ಲಾಂಚ್ ನಲ್ಲಿ ಒಂದು ಗಂಟೆಯ ಪ್ರಯಾಣ.ದಂಡೆಯಿಂದ ಐದು ಆರು ಕಿಲೋ ಮೀಟರ್ ದೂರ ಹೋದಂತೆಲ್ಲ ಸಮುದ್ರದ ನಡುವೆ 6-7 ನೂರು ಮೀಟರ್ ಉದ್ದದ ದೊಡ್ಡ ದೊಡ್ಡ ಮೂರ್ನಾಲ್ಕು ಹಡಗುಗಳು ಲಂಗರ್ ಹಾಕಿಕೊಂಡು ನಿಂತಿದ್ದವು. ಆ ಹಡಗುಗಳ ಮೇಲೆ ದೂರದಿಂದಲೇ ‘ನೋ ಸ್ಮೋಕಿಂಗ್’ ಎಂಬ ಬೋರ್ಡುಗಳು ಎದ್ದು ಕಾಣುತ್ತಿದ್ದವು. ಕುತೂಹಲದಿಂದ ಆ ಹಡಗುಗಳ ಬಗ್ಗೆ ವಿಚಾರಿಸಿದಾಗ, ವಿದೇಶಗಳಿಂದ ಕಚ್ಚಾ ತೈಲವನ್ನು ಹೊತ್ತು ತರುವ ಹಡಗುಗಳಿಂದ ಮರುಪೂರ್ಣಗೊಳಿಸಿಕೊಂಡು ಪೈಪ್ ಲೈನ್ ಗಳ ಮೂಲಕ ತೈಲ ಶುದ್ಧೀಕರಣ ಕೇಂದ್ರಕ್ಕೆ ಕಚ್ಚಾ ತೈಲವನ್ನು ರವಾನಿಸುತ್ತವೆ ಎಂದು ತಿಳಿದುಬಂತು.ಹಾಗೆಯೇ ಸಾಗರದಲ್ಲಿ ಸಾಗುತ್ತಿರುವ ದೊಡ್ಡ ದೊಡ್ಡ ಹಡಗುಗಳು,ಮೀನುಗಾರರ ದೋಣಿಗಳು, ಪ್ರಯಾಣಿಕರನ್ನು ಹೊತ್ತುಕೊಂಡು ಸಾಗುತ್ತಿರುವ ಲಾಂಚ್ ಗಳನ್ನು ಕಣ್ತುಂಬಿಕೊಳ್ಳುವ ನಮ್ಮ ಅದೃಷ್ಟವನ್ನು ನೆನೆದು ಖುಷಿ ಅನಿಸಿತು. ತೇಲುತ್ತಾ,ಬಳುಕುತ್ತಾ, ತುಳುಕುತ್ತಾ ಸಾಗುತ್ತಿರುವ ಲಾಂಚ್ ನಲ್ಲಿ ಕುಳಿತುಕೊಂಡು ದೂರ ದೂರದವರೆಗೆ ಕಣ್ಹ ಹಾಯಿಸುತ್ತ ಸಮುದ್ರದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ ಲಾಂಚ್ ದಂಡೆಗೆ ಬಂದು ಲಂಗರ್ ಹಾಕಿತು.

ಲಂಗರ್ ಹಾಕಿದ ಸ್ಥಳದಿಂದ ಎಲಿಫೆಂಟಾ ಗುಹೆಗಳಿರುವ ದ್ವೀಪ ಹೆಚ್ಚು ಕಡಿಮೆ ಒಂದು ಕಿಲೋಮೀಟರನಷ್ಟು ದೂರ. ವೃದ್ದರು, ಮಕ್ಕಳು,ನಡೆಯಲಾಗದಿದ್ದವರು, ಹಾಗೂ ಮೋಜನ್ನು ಅನುಭವಿಸಬೇಕೆನ್ನುವವರು 15 ರೂಪಾಯಿ ಟಿಕೆಟ್ ತೆಗೆದುಕೊಂಡು ಟಾಯ್ ಟ್ರೈನ್ (ಚಿಕ್ಕ ರೈಲ) ನ ಮೂಲಕ ದ್ವೀಪವನ್ನು ತಲುಪಬಹುದು.ಈ ದ್ವೀಪವನ್ನು “ಘರ್ ಪುರಿ” ಎಂದು ಕರೆಯುತ್ತಾರೆ. 1911ರ ಜನಗಣತಿಯ ಅಂಕಿ ಸಂಖ್ಯೆಗಳಂತೆ ಈ ದ್ವೀಪದಲ್ಲಿ 318 ಹೆಣ್ಣು, 329 ಗಂಡು ಒಟ್ಟು 627 ಜನಸಂಖ್ಯೆಇದ್ದು, ಇದರ ಸ್ಥಳೀಯ ಆಡಳಿತಕ್ಕಾಗಿ ಪಂಚಾಯಿತಿಯು ಇದೆ. ಹಿಂದೂ, ಮರಾಠಿ, ಜೈನ, ಬೌದ್ಧ, ಕ್ರೈಸ್ತ, ಹಾಗೂ ಜೋರಾಸ್ಟ್ರಿಯನ್ ಜನಾಂಗಗಳು ಈ ದ್ವೀಪದಲ್ಲಿದ್ದು ಮರಾಠಿ, ಹಿಂದಿ ಹಾಗೂ ಗುಜರಾತಿ ಭಾಷೆಗಳನ್ನು ಮಾತನಾಡುತ್ತಾರೆ.17ನೇ ಶತಮಾನದಲ್ಲಿ ಘರ್ ಪುರಿ ದ್ವೀಪ ಪ್ರವೇಶಿಸಿದ ಪೋರ್ಚುಗೀಸರು ಶಿಲೆಗಳಲ್ಲಿ ಕೊರೆದ ಆನೆಗಳ ಬೃಹತ್ ಶಿಲ್ಪಗಳನ್ನು ಕಂಡು ಬೆರಗಾಗಿ ಎಲಿಫೆಂಟಾ ಕೇವ್ಸ ಎಂದು ಕರೆದರಂತೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ದ್ವೀಪವನ್ನು ಎಲಿಫೆಂಟಾ ಕೇವ್ಸ್ ಎಂಬ ಹೆಸರಿಂದ ಗುರುತಿಸಲು ಪ್ರಾರಂಭವಾಯಿತು.ಇತ್ತಿತ್ತಲಾಗಿ ಮಹಾರಾಷ್ಟ್ರ ಸರ್ಕಾರ ಬೃಹತ್ ಶಿಲೆಯಲ್ಲಿ ಕೊರೆದ ಇಲ್ಲಿನ ಆನೆಯ ಶಿಲ್ಪವನ್ನು ಮುಂಬೈನ ಜೀಜಾಬಾಯಿ (ಪಾರ್ಕ್) ಉದ್ಯಾನಕ್ಕೆ ಸ್ಥಳಾಂತರಿಸಿ ಪ್ರತಿಷ್ಠಾಪಿಸಿದೆ.ಆ ಉದ್ಯಾನಕ್ಕೆ ಭೇಟ್ಟಿ ನೀಡಿದರೆ ಅಲ್ಲಿರುವ ಬೃಹತ್ ಕಲ್ಲಿನ ಆನೆಯ ಶಿಲ್ಪವನ್ನು ಕಾಣಬಹುದು.

ಗಟ್ಟಿ ಕಲ್ಲಿನಿಂದ ನಿರ್ಮಾಣವಾಗಿರುವ ಈ ದ್ವೀಪ ಸಮುದ್ರಮಟ್ಟದಿಂದ 150 ಮೀಟರ್ ಎತ್ತರದಲ್ಲಿದ್ದು, ಪೂರ್ವ ಪಶ್ಚಿಮ 8 ಕಿಲೋಮೀಟರ್, ಉತ್ತರ ದಕ್ಷಿಣ 2 ಕಿಲೋಮೀಟರಗಳಷ್ಟು ಸಮುದ್ರದಲ್ಲಿ ಚಾಚಿಕೊಂಡಿದೆ. ಈ ದ್ವೀಪದ ಒಟ್ಟು ವಿಸ್ತೀರ್ಣ 2,03,451 ಚದುರ ಕಿಲೋ ಮೀಟರ್.ಎರಡನೂರು ಪ್ರವಾಸಿ ಸ್ನೇಹಿ ಮೆಟ್ಟಿಲುಗಳನ್ನು ಏರಿ ಮೇಲೆ ಹೋದರೆ ಬೆಟ್ಟವನ್ನು ಕೊರೆದು ನಿರ್ಮಿಸಿರುವ ಗುಹಾಂತರ ದೇವಾಲಯಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತವೆ.

ಈ ಗುಹೆಗಳು ಕ್ರಿಸ್ತಪೂರ್ವ 2 ಶತಮಾನದಿಂದ ಕ್ರಿಸ್ತಶಕ 9 ನೇ ಶತಮಾನದ ಅವಧಿಯಲ್ಲಿ ನಿರ್ಮಾಣವಾಗಿವೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಬೆಟ್ಟವನ್ನೇ ಕೊರೆದು ನಿರ್ಮಿಸಿರುವ ಮೊದಲನೆಯ ಗುಹೆ 60,000 ಚದುರ ಅಡಿ ವಿಸ್ತೀರ್ಣ ಹೊಂದಿದ್ದು 15 ಮೀಟರಗಿಂತಲೂ ಎತ್ತರವಾಗಿ ಮೂರು ಮುಖ್ಯ ಪ್ರಾಂಗಣಗಳಿಂದ ವಿಂಗಡಿಸಲ್ಪಟ್ಟಿದೆ.ಒಳಗೆ ಬೆಟ್ಟವನ್ನೇ ಕೊರೆದು ನಿರ್ಮಿಸಿರುವ ಸಾಲು ಕಂಬಗಳು. ಆರು ಮೀಟರಿಗಿಂತಲೂ ಎತ್ತರವಿರುವ ನಟರಾಜ, ಶಿವ ಪಾರ್ವತಿ, ಅರ್ಧನಾರೀಶ್ವರ, ಶಿವಲಿಂಗ ಹಾಗೂ ವಿಶೇಷವಾಗಿ ಸದಾಶಿವ ( ಬ್ರಹ್ಮ,ವಿಷ್ಣು, ಶಿವ) ತ್ರಿಮೂರ್ತಿಯ ಶಿಲ್ಪ ಕಣ್ಸೆಳೆಯುತ್ತದೆ. ತ್ರಿಮೂರ್ತಿ ಶಿಲ್ಪ ರಾಷ್ಟ್ರಕೂಟರ ಲಾಂಛನವನ್ನು ಹೋಲುತ್ತದೆ. ತ್ರಿಮೂರ್ತಿ ಶಿಲ್ಪವೊಂದನ್ನು ಹೊರತುಪಡಿಸಿ ಉಳಿದೆಲ್ಲ ಶಿಲ್ಪಗಳು ವಿರೂಪಗೊಂಡಿವೆ. ಕಾರಣವೆಂದರೆ ಅಂದು ಆಳ್ವಿಕೆಯಲ್ಲಿದ್ದ ಪೋರ್ಚುಗೀಸರು ಬಂದೂಕಿನಿಂದ ಈ ಶಿಲ್ಪಗಳಿಗೆ ಗುರಿ ಇಟ್ಟು ಗುಂಡನ್ನು ಹಾರಿಸುವುದರ ಮೂಲಕ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಮತ್ತೊಂದು ವಾದದ ಪ್ರಕಾರ 9 ನೇ ಶತಮಾನದಿಂದ ಆಳ್ವಿಕೆಯಲ್ಲಿದ್ದ ಗುಜರಾತನ ನವಾಬರ ಕಾಲಕ್ಕೆ ವಿರೂಪಗೊಂಡವು ಎಂದು ಹೇಳುತ್ತಾರೆ.

ಸುಮಾರು12 ಮೀಟರ್ ಗಿಂತ ಎತ್ತರವಾಗಿ ಬೆಟ್ಟವನ್ನು ಕೊರೆದು ನಿರ್ಮಿಸಿರುವ ಏಳು ಗುಹೆಗಳಿದ್ದು ಅವುಗಳಲ್ಲಿ ಐದು ಗುಹೆಗಳಲ್ಲಿರುವ ಶಿಲ್ಪಗಳು ಶಿವ ಪುರಾಣವನ್ನು ಪ್ರತಿನಿಧಿಸುತ್ತವೆ.ಇನ್ನೆರಡು ಗುಹೆಗಳಲ್ಲಿ ಬುದ್ಧನಿಗೆ ಸಂಬಂಧಪಟ್ಟ ಶಿಲ್ಪಗಳಿವೆ.ಬೌದ್ಧರ ಸ್ತೂಪಗಳನ್ನು ಹೋಲುವ ಮರಳಿನ ದಿನ್ನೆಗಳನ್ನು ಇಲ್ಲಿ ಕಾಣಬಹುದು.ಹೀಗಾಗಿ ಇಲ್ಲಿಯ ಗುಹಾ ಶಿಲ್ಪಗಳು ಶಾತವಾಹನರು, ವಾಕಾಟಕರು,ಮೌರ್ಯರು,ಗುಪ್ತರು ಚಾಲುಕ್ಯರು,ರಾಷ್ಟ್ರಕೂಟರು ಹಾಗೂ ಐದರಿಂದ ಒಂಬತ್ತನೇ ಶತಮಾನದಲ್ಲಿ ಆಳ್ವಿಕೆಯಲ್ಲಿದ್ದ ಸಿಲ್ಲ ಅರಸರ ಕಾಲದಲ್ಲಿ ನಿರ್ಮಾಣವಾಗಿವೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯ.ಮೊದಲನೆಯ ಗುಹೆ ಮಾತ್ರ ಸುಸ್ಥಿತಿಯಲ್ಲಿದ್ದು.ಉಳಿದ ಗುಹೆಗಳು ಮಳೆ ನೀರಿನಿಂದ ತೊಟ್ಟಿಕ್ಕುತ್ತಾ ನೆಲ ಜಾರುಬಂಡೆಯಂತಾಗಿವೆ. ಅಲ್ಲೂ ಸುಂದರವಾದ ಶಿವ-ಪಾರ್ವತಿ, ನಟರಾಜ,ಹಾಗೂ ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ಶಿಲ್ಪಗಳನ್ನು ಕಾಣಬಹುದು.

ಇಂದು ನಾವು ಬೌದ್ಧಿಕವಾಗಿ, ತಾಂತ್ರಿಕವಾಗಿ ಬಹಳಷ್ಟು ಬೆಳೆದು ನಿಂತಿದ್ದೇವೆ ಎಂದು ಹೆಮ್ಮೆಯಿಂದ ಜಂಬ ಕೊಚ್ಚಿಕೊಳ್ಳುತ್ತೇವೆ. ಆದರೆ ಜೆಸಿಬಿ, ಕ್ರೇನ್, ರಾಕ್ ಕಟರ್ ನಂತ ದೊಡ್ಡ ದೊಡ್ಡ ಯಂತ್ರೋಪಕರಣಗಳಿಲ್ಲದಿದ್ದ ಆ ದಿನಗಳಲ್ಲೂ ಇಂಥ ಬೃಹತ್ ಬೆಟ್ಟಗಳನ್ನೇ ಕೊರೆದು ಪ್ರಮಾಣ ಭದ್ದ ಹಾಗೂ ಜೀವಂತಿಕೆಯನ್ನು ಹೊರಸೂಸುವ ಶಿಲ್ಪಗಳನ್ನು ಸೃಷ್ಟಿಸಿದ ಅಂದಿನ ತಂತ್ರಜ್ಞರು,ಶಿಲ್ಪಿಗಳಿಗೆ ಹಾಗೂ ಇಂತಹ ಶ್ರೇಷ್ಠ ಶಿಲ್ಪಕಲೆ ನಿರ್ಮಿಸಲು ಪ್ರೋತ್ಸಾಹ ನೀಡಿದ ರಾಜ ಮಹಾರಾಜರಿಗೆ ಮನದಲ್ಲಿಯೇ ತಲೆಬಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅಭಿಮಾನ ತಾಳುತ್ತ ದ್ವೀಪದಿಂದ ಹೊರ ಬರುವಷ್ಟರರಲ್ಲಾಗಲೇ ಸೂರ್ಯ ಪಶ್ಚಿಮ ದಿಕ್ಕಿನ ಕಡೆಗೆ ನಿಧಾನವಾಗಿ ಇಳಿಯುತ್ತಿದ್ದ. ಕೊನೆಯ ಲಾಂಚ್ ನ್ನು ತಪ್ಪಿಸಿಕೊಂಡರೆ ಬೆಳಗಾಗುವವರೆಗೆ ದ್ವೀಪದ ತೆರೆದ ಬಯಲಿನಲ್ಲಿ ಕಳೆಯಬೇಕಾಗುತ್ತದಲ್ಲ ಎಂದು ಒಲ್ಲದ ಮನಸ್ಸಿನಿಂದ ಲಾಂಚ್ ನ್ನು ಏರಿ ಗೆಟ್ ವೇ ಆಫ್ ಇಂಡಿಯಾ ಕಡೆ ಹೊರಟೆವು.

ಯುನೆಸ್ಕೋ 1887 ರಲ್ಲಿ ಇಡೀ ದ್ವೀಪವನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ.ಹೀಗಾಗಿ ಇದು ಪುರಾತತ್ವ ಇಲಾಖೆಯ ವಶದಲ್ಲಿದೆ. ಮಹಾರಾಷ್ಟ್ರ ಸರ್ಕಾರ ಈ ದ್ವೀಪದ ಪರಿಸರ ಸ್ವಚ್ಛತೆ, ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಶೌಚಾಲಯಗಳು ಮತ್ತು ಕುಡಿಯುವ ನೀರನ್ನು ಹೊರತುಪಡಿಸಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಿಲ್ಲ. ಪ್ರವಾಸಿಗರಿಗೆ ಪಾನಿಪುರಿ, ಸೇವಪುರಿ, ವಡಾ ಪಾವ್ ಗಳಂತ ಸ್ನಾಕ್ಸಗಳು ದೊರಕುತ್ತವೆ. ಮೆಟ್ಟಿಲಗುಂಟ ಮುತ್ತು-ಮಣಿ,ಸರ,ಕಪ್ಪೆ ಚಿಪ್ಪು,ಕವಡೆ, ಶಂಖ, ತ್ರಿಮೂರ್ತಿ ಅರ್ಧನಾರೀಶ್ವರ,ಶಿವ,ಪಾರ್ವತಿ, ನಟರಾಜರ ಪ್ರತಿ ಕೃತಿಗಳನ್ನು ಮಾರುವ ಸಣ್ಣ ಸಣ್ಣ ವ್ಯಾಪಾರಿಗಳ ನೂರಾರು ಮಳಿಗೆಗಳನ್ನು ಕಾಣಬಹುದು.

ಎಲಿಫೆಂಟಾ ಕೆವ್ಸ್ ಗಳನ್ನು ಸಂದರ್ಶಿಸಬೇಕೆಂಬ ನನ್ನ ಅರ್ಧ ಶತಮಾನದ ಕನಸು ಈಡೇರಿದ ಖುಷಿಯನ್ನು ಅನುಭವಿಸುತ್ತಾ ಮರಳಿ ಗೂಡಿನ ಕಡೆಗೆ ಹೊರಟೆವು…

ಗವಿಸಿದ್ದಪ್ಪ ಕೊಪ್ಪಳ

Don`t copy text!