ಭಾರತದ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ

ಭಾರತದ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿ

(ಅಕ್ಟೋಬರ್ 31 ಪುಣ್ಯತಿಥಿಯ ನಿಮಿತ್ತ)

ಇಂದಿನ ಬಾಂಗ್ಲಾದೇಶವು 1971 ಕ್ಕೂ ಮುನ್ನ ಪೂರ್ವ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿತ್ತು. ಆಗಿನ ಅಧ್ಯಕ್ಷರಾದ ಜನರಲ್ ಆಯುಬ್ ಖಾನ್ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳನ್ನು ಆಳುತ್ತಿದ್ದನು. ಆದರೆ ಅಲ್ಲಿನ ಮಿಲಿಟರಿಯವರ ದುರಾಡಳಿತದಲ್ಲಿ ಕೊಲೆ ಸುಲಿಗೆ ದರೋಡೆ ಮತ್ತು ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಇದರಿಂದ 10 ಮಿಲಿಯನ್ ಗಿಂತಲೂ ಹೆಚ್ಚು ಜನ ವಲಸಿಗರು ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿ ಬರುತ್ತಿದ್ದರು. ಆ ಸಮಯದಲ್ಲಿ ಪೂರ್ವ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಭಾರತೀಯ ಪ್ರಧಾನ ಮಂತ್ರಿ ಕೇವಲ 13 ದಿನಗಳಲ್ಲಿ ಪಾಕಿಸ್ತಾನದ ಸೇನಾ ಬಲವನ್ನು ಹಿಮ್ಮೆಟ್ಟಿಸಿ ಸೋಲಿಸಿದರು. ಮುಂದೆ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂದು ನಾಮಕರಣ ಮಾಡಲಾಯಿತು. ಇದನ್ನು ಕಂಡು ದಂಗಾದ ವಿಶ್ವದ ಸರ್ವೋತ್ಕೃಷ್ಟ ನಾಯಕರು ಭಾರತದ ಆ ಮಹಿಳಾ ಪ್ರಧಾನಿಯನ್ನು ಅತ್ಯಂತ ಧೈರ್ಯಶಾಲಿ ಮಹಿಳೆ ಎಂದು ಕರೆದರು.

ವಿಶ್ವದ ಉಕ್ಕಿನ ಮಹಿಳೆ ಎಂದು ಹೆಸರಾದ ಬ್ರಿಟನ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಕೂಡ ಆಕೆಯಿಂದ ಪ್ರಭಾವಿತಳಾಗಿ ಆಕೆಯನ್ನು ಭಾರತದ ಉಕ್ಕಿನ ಮಹಿಳೆ ಎಂದು ಕರೆದರು. ಸ್ವತಹ ವಿರೋಧ ಪಕ್ಷದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಆಕೆಯನ್ನು ದುರ್ಗೆ ಎಂದು ಕರೆದಿದ್ದರು. ಹೀಗೆ ತನ್ನ ಧೈರ್ಯ, ಸಮಯ ಪ್ರಜ್ಞೆ ಮತ್ತು ಚಾತುರ್ಯದಿಂದ ಎಲ್ಲರ ಮನ ಗೆದ್ದ ಆ ಮಹಿಳಾ ಪ್ರಧಾನಿ ನಮ್ಮೆಲ್ಲರ ಹೆಮ್ಮೆಯ ಮಹಿಳಾ ಮಹಾನಾಯಕಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ.

 

ಸ್ವಾತಂತ್ರ್ಯಕ್ಕೂ ಮುನ್ನ ಪಾಕಿಸ್ತಾನದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಲು ದೇಶದ ಆಂತರಿಕ ಭದ್ರತಾ ಕಾರಣಗಳಿಂದ ಸಾಧ್ಯವಿಲ್ಲದೆ ಹೋದಾಗ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಮಾತುಕತೆ ನಡೆಸಿ, ದೇಶದ ಇತಿಹಾಸದಲ್ಲಿಯೇ ಮೊಟ್ಟ ಮೊದಲು ಓರ್ವ ವಿರೋಧ ಪಕ್ಷದ ನಾಯಕನನ್ನು ಭಾರತದ ನಿಯೋಗವೊಂದರ ಸದಸ್ಯರನ್ನಾಗಿ ಕಳುಹಿಸಿದ್ದು ಶ್ರೀಮತಿ ಇಂದಿರಾ ಗಾಂಧಿ.

ದೇಶದಿಂದ ಬಡತನ ನಿರ್ಮೂಲನೆ ಮತ್ತು ಹಸಿರು ಕ್ರಾಂತಿಯ ಹರಿಕಾರಳಾಗಿ, ಬಡವರ ಆಶಾ ಜ್ಯೋತಿಯಾಗಿ ಕಾರ್ಯನಿರ್ವಹಿಸಿದ್ದು, ಬ್ರಿಟನ್ ನಿಂದ ಬರುತ್ತಿದ್ದ ಗೋಧಿಯ ಆಮದು ನಿಂತು ಹೋದಾಗ ಭಾರತದಲ್ಲಿ ಹಸಿರು ಕ್ರಾಂತಿಯ ಮೂಲಕ ಹಸಿವು ಮುಕ್ತ ಆತ್ಮ ನಿರ್ಭರ ಭಾರತವನ್ನಾಗಿ ಮಾಡಿದ ವ್ಯಕ್ತಿ ಶ್ರೀಮತಿ ಇಂದಿರಾಗಾಂಧಿ.

ದೇಶದಲ್ಲಿ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಸುಮಾರು 14ಕ್ಕೂ ಹೆಚ್ಚು ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸಿದ್ದು ಇಂದಿರಾ ಗಾಂಧಿ.

ಮೊಟ್ಟಮೊದಲ ನ್ಯೂಕ್ಲಿಯರ್ ಟೆಸ್ಟ್ ಭಾರತದಲ್ಲಿ ನಡೆಯಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಪ್ರೋತ್ಸಾಹ ಮತ್ತು ಎಲ್ಲ ಬಗೆಯ ಆರ್ಥಿಕ ಸಹಕಾರಗಳನ್ನು ನೀಡಿದ್ದು ಶ್ರೀಮತಿ ಇಂದಿರಾಗಾಂಧಿ.

ಸ್ವತಂತ್ರ ಖಲಿಸ್ತಾನ ಸ್ಥಾಪನೆಗೆ ಹೋರಾಟ ನಡೆಸುತ್ತಿದ್ದ ಪಂಜಾಬಿನ ಸಿಖ್ಖರ ಗುರು ಎಂದು ಕರೆಯಲ್ಪಟ್ಟ ಬಿಂದ್ರನವಾಲೆಯನ್ನು ಹತ್ತಿಕ್ಕಲು ‘ಆಪರೇಷನ್ ಬ್ಲೂ ಸ್ಟಾರ್’ ಮಿಲಿಟರಿ ಕಾರ್ಯಾಚರಣೆಯನ್ನು ಆತನ ನಿವಾಸ ಸ್ಥಾನವಾಗಿದ್ದ ಅಮೃತಸರದ ಸ್ವರ್ಣ ದೇವಾಲಯದ ಮೇಲೆ ದಾಳಿ ಮಾಡಿ ಆತನನ್ನು ಹತ್ಯೆ ಮಾಡಿದ್ದು ಶ್ರೀಮತಿ ಇಂದಿರಾಗಾಂಧಿಯವರ ಆದೇಶದ ಮೇರೆಗೆ. ಹೀಗೆ ಹೆಣ್ಣು ಮಕ್ಕಳು ಹೊರಬರದೇ ಇರುವಂತಹ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ದೇಶವೊಂದರ ಮಹಿಳಾ ಪ್ರಧಾನಿಯಾಗಿ ದೇಶವನ್ನು ತನ್ನ ಚಾಣಾಕ್ಷ ಮತ್ತು ಚತುರ ನಡೆಗಳಿಂದ ಮುನ್ನಡೆಸಿದ ನಾಯಕಿ ಶ್ರೀಮತಿ ಇಂದಿರಾ ಗಾಂಧಿ.

19 ನವೆಂಬರ್ 1917 ರಲ್ಲಿ ಇಂದಿನ ಅಲಹಾಬಾದ್ ಎಂದು ಕರೆಯಲ್ಪಡುವ ಪ್ರಯಾಗರಾಜದಲ್ಲಿ ಜನಿಸಿದ ಇಂದಿರಾ ಅವರ ತಂದೆ ಜವಾಹರ್ ಲಾಲ್ ನೆಹರು ಮತ್ತು ತಾಯಿ ಕಮಲಾ ನೆಹರು. ಅಲಹಾಬಾದ್ ನ ತಮ್ಮ ಮನೆ ಆನಂದ ಭವನದಲ್ಲಿ ಬೆಳೆದ ಇಂದಿರಾ ಅವರು ಸ್ವಾಭಾವಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಔಪಚಾರಿಕ ಶಿಕ್ಷಣದಿಂದ ದೂರವಾಗಿದ್ದ ಅವರು ತಮ್ಮ 10ನೇ ತರಗತಿಯನ್ನು ಪೂರೈಸಿದರು. ಈ ಸಮಯದಲ್ಲಾಗಲೇ ತಾಯಿಗೆ ಕ್ಷಯರೋಗ ಉಂಟಾದ ಹಿನ್ನೆಲೆಯಲ್ಲಿ ತಾಯಿಯ ಚಿಕಿತ್ಸೆಗಾಗಿ ಆಕೆ ವಿದೇಶಕ್ಕೆ ಹೋಗಿ ನೆಲೆಸಬೇಕಾಗಿತ್ತು. ಮುಂದೆ ತಮ್ಮ 18ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಇಂದಿರಾ ತಮ್ಮ ಶಿಕ್ಷಣವನ್ನು ಮುಂದುವರಿಸಲು ರವೀಂದ್ರನಾಥ್ ಟ್ಯಾಗೋರ್ ಅವರ ಶಾಂತಿನಿಕೇತನದ ವಿಶ್ವ ಭಾರತಿ ಸಂಸ್ಥೆಗೆ ಸೇರಿಕೊಂಡರು. ಅಲ್ಲಿ ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರು ಇಂದಿರ ಅವರಿಗೆ ‘ಪ್ರಿಯದರ್ಶಿನಿ ಎಂದು ನಾಮಕರಣ ಮಾಡಿದರು.

ಮುಂದೆ ಬ್ರಿಟನ್ನಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ಮಾಡಿದಳಾದರು ಆಕೆಗೆ ಪದವಿ ಪೂರೈಸಲು ಸಾಧ್ಯವಾಗಲಿಲ್ಲ. ಆದರೆ ಕಾರ್ಯನಿಮಿತ್ತ ಆಕೆ ಹಲವಾರು ರಾಷ್ಟ್ರಗಳನ್ನು ಸಂದರ್ಶಿಸಿದಳು. ಇದರಿಂದಾಗಿ ಆಕೆಗೆ ಹಲವಾರು ದೇಶಗಳ ಜೀವನ ಶೈಲಿ ಮತ್ತು ಅಲ್ಲಿಯ ರಾಜಕೀಯ,ಔದ್ಯಮಿಕ ಮತ್ತು ಸಾಮಾಜಿಕ ತೊಂದರೆಗಳ ಅರಿವಿನ ಕುರಿತ ಜ್ಞಾನ ದೊರೆಯಿತು. ಇದರ ಜೊತೆ ಜೊತೆಗೆ ಆಕೆಯ ತಂದೆ ಜವಹರಲಾಲ್ ನೆಹರು ಅವರು ತಮ್ಮ ಸ್ವತಂತ್ರ ಹೋರಾಟದ ಸಮಯದ ಜೈಲುವಾಸದಲ್ಲಿದ್ದಾಗ ನಿರಂತರವಾಗಿ ಮಗಳಿಗೆ ಜ್ಞಾನ ನೀಡುವ ಸಲುವಾಗಿ ಬರೆಯುತ್ತಿದ್ದ ಪತ್ರಗಳು ಆಕೆಯಲ್ಲಿ ಜಾಗತಿಕ ಇತಿಹಾಸ ಮತ್ತು ಸಾಮಾಜಿಕ ಇತಿಹಾಸದ ಕುರಿತ ಅವಗಾಹನೆಗೆ ಪುಷ್ಠಿ ನೀಡಿತು.

ಮರಳಿ ಭಾರತಕ್ಕೆ ಬಂದ ನಂತರ ತಾನು ಪ್ರೀತಿಸಿದ ಮತ್ತು ಈಗಾಗಲೇ ತನ್ನೊಂದಿಗೆ ವಿವಿಧ ಕಡೆಗಳಲ್ಲಿ ಚಿಕ್ಕಂದಿನಿಂದಲೇ ವಿದ್ಯಾಭ್ಯಾಸ ಮಾಡುತ್ತಿದ್ದ ಫಾರಶಿ ವ್ಯಕ್ತಿ ಫಿರೋಜ್ ಗಾಂಧಿಯವರನ್ನು 1942 ರಲ್ಲಿ ಆಕೆ ವಿವಾಹವಾದಳು. ಚಿಕ್ಕಂದಿನಿಂದಲೇ ಗಾಂಧೀಜಿಯವರ ಜೊತೆ ಆಪ್ತವಾಗಿದ್ದ ಇಂದಿರಾ ಮೇಲೆ ಗಾಂಧೀಜಿಯವರ ಪ್ರಭಾವ ಪುಟ್ಟ ವಯಸ್ಸಿನಲ್ಲಿಯೇ ಇತ್ತು. ಗಾಂಧೀಜಿಯವರ ಸ್ವದೇಶಿ ಚಳುವಳಿಗೆ ಬೆಂಬಲ ನೀಡಿದ ಇಂದಿರಾ ತನ್ನ ಸಂಬಂಧಿಯೊಬ್ಬರು ತನಗಾಗಿ ಪ್ಯಾರಿಸ್ ನಿಂದ ತಂದ ನವೀನ ವಿನ್ಯಾಸದ ವಸ್ತ್ರಗಳನ್ನು ಮತ್ತು ಗೊಂಬೆಗಳನ್ನು(ಗೊಂಬೆಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಇಂದಿರಾ) ನಯವಾಗಿ ತಿರಸ್ಕರಿಸಿದರು. ನಂತರ ಪತಿಯೊಂದಿಗೆ ಗಾಂಧೀಜಿಯವರ ಅಸಹಕಾರ ಚಳುವಳಿ ಮತ್ತು ಸ್ವತಂತ್ರ ಹೋರಾಟದಲ್ಲಿ ಆಕೆ ಪಾಲ್ಗೊಂಡು ಜೈಲುವಾಸವನ್ನು ಕೂಡ ಅನುಭವಿಸಿದಳು.

ಕೌಟುಂಬಿಕವಾಗಿ ಅತ್ಯಂತ ಸರಳ ಜೀವನ ಶೈಲಿಯನ್ನು ಹೊಂದಿದ್ದ ಇಂದಿರಾ ಮತ್ತು ಫಿರೋಜ್ ಗಾಂಧಿಯವರು ರಾಜೀವ್ ಮತ್ತು ಸಂಜಯ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದರು. ಮುಂದೆ 1947 ರಲ್ಲಿ ಭಾರತ ಸ್ವತಂತ್ರ ಹೊಂದಿದಾಗ, ದೆಹಲಿಯಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಗಲಭೆಪೀಡಿತ ಪ್ರದೇಶಗಳಲ್ಲಿ ಆಕೆ ಕಾರ್ಯನಿರ್ವಹಿಸಿದರು.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ತಂದೆ ಜವಹರಲಾಲ್ ನೆಹರು ಅವರು ಆಯ್ಕೆಯಾದಾಗ, ಅವರಿಗೆ ವೈಯುಕ್ತಿಕ ಆಪ್ತ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಇದು ಅವರ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿತು. ಮುಂದೆ ತನ್ನ ಪತಿ ಫಿರೋಜ್ ಗಾಂಧಿಯವರು ಲೋಕಸಭಾ ಸದಸ್ಯ ಸ್ಥಾನಕ್ಕೆ ಚುನಾವಣೆಗೆ ನಿಂತಾಗ ಹಲವಾರು ಚುನಾವಣಾ ಪ್ರಚಾರದ ಸಭೆಗಳಲ್ಲಿ ಪಾಲ್ಗೊಂಡು ಪತಿಯ ಜಯಕ್ಕೆ ಕಾರಣರಾದರು.

1955ರಲ್ಲಿ ಆಕೆ ಕೇಂದ್ರೀಯ ಚುನಾವಣೆ ಮತ್ತು ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. 1956ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದರು.1959 ರಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದರು. 1960ರಲ್ಲಿ ಫಿರೋಜ್ ಗಾಂಧಿ ನಿಧನ ಹೊಂದಿದರು.

1964 ರಲ್ಲಿ ಜವಾಹರ ಲಾಲ್ ನೆಹರು ಅವರು ನಿಧನ ಹೊಂದಿದಾಗ, ತೆರವಾದ ಸ್ಥಾನಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿಯಾಗಿ ನಿಯುಕ್ತರಾದಾಗ ಈಗಾಗಲೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಇಂದಿರಾ ಗಾಂಧಿ, ಶಾಸ್ತ್ರೀಯವರ ಮಂತ್ರಿಮಂಡಲದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಗಾಂಧಿಯವರ ನಂತರ ತಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ಇನ್ನೋರ್ವ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಆಕೆ ತಮ್ಮ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಮುಂದೆ 1968 ರಲ್ಲಿ ತಾಶ್ಕೆಂಟ್ ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಲು ಹೋದ ಭಾರತದ ಪ್ರಧಾನಿ ಮರಣ ಹೊಂದಿದಾಗ ದೇಶದ ಮುಂದಿನ ಪ್ರಧಾನಿ ಯಾರಾಗಬೇಕೆಂಬ ಪ್ರಶ್ನೆ ಉದ್ಭವಿಸಿತು. ಆ ಸಮಯದಲ್ಲಿ ಅತ್ಯಂತ ಪ್ರಬಲ ಆಕಾಂಕ್ಷಿಯಾಗಿದ್ದ ಮೊರಾರ್ಜಿ ದೇಸಾಯಿ ಅವರನ್ನು ಮೂಲೆಗುಂಪು ಮಾಡಲು ಮತ್ತೊಂದು ಬಣ ಸಜ್ಜಾಗಿದ್ದು ಈಗಾಗಲೇ ‘ಗೂಂಗಿ ಗುಡಿಯಾ‘ ಎಂದು ರಾಮ್ ಮನೋಹರ್ ಲೋಹಿಯಾರಿಂದ ಕರೆಯಲ್ಪಟ್ಟ ಇಂದಿರಾ ಅವರನ್ನು ಪ್ರಧಾನಿಯನ್ನಾಗಿಸಿದರೆ ಆಡಳಿತದ ಮೇಲೆ ತಮ್ಮ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಉಳಿದವರ ಹಂಚಿಕೆಯಾಗಿತ್ತು. ಅಂತೆಯೇ ಪ್ರಧಾನಮಂತ್ರಿಯಾಗಿ ನಿಯುಕ್ತರಾದ ಇಂದಿರಾ ಗಾಂಧಿ ಮುರಾರ್ಜಿ ದೇಸಾಯಿಯವರ ಗುಂಪಿನ ಪ್ರತಿರೋಧದ ನಡುವೆಯೂ, ಅತ್ಯಂತ ಜನಪರ ಕಾರ್ಯಕ್ರಮಗಳನ್ನು ಕೈಗೊಂಡರು.

ಜನವರಿ 1966ರಿಂದ ಮಾರ್ಚ್ 1977ರವರೆಗೆ ಭಾರತದ ಪ್ರಧಾನಮಂತ್ರಿಯಾಗಿ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿದರು. ಸೆಪ್ಟೆಂಬರ್ 1967ರಿಂದ ಮಾರ್ಚ್ 1977ರವರೆಗೆ ಪರಮಾಣು ಶಕ್ತಿ ಖಾತೆಯ ಸಚಿವರಾಗಿದ್ದರು. ಸೆಪ್ಟೆಂಬರ್ 5, 1967ರಿಂದ 1969ರವರೆಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಹೊಣೆಯನ್ನೂ ಹೊತ್ತರು. ಜೂನ್ 1970ರಿಂದ ನವೆಂಬರ್ 1973ರವರೆಗೆ ಗೃಹ ಸಚಿವಾಲಯದ ನೇತೃತ್ವವನ್ನು ಶ್ರೀಮತಿ ಗಾಂಧಿ ವಹಿಸಿಕೊಂಡಿದ್ದರು. ಜೂನ್ 1972ರಿಂದ 1977 ಮಾರ್ಚ್ ತಿಂಗಳವರೆಗೆ ಬಾಹ್ಯಾಕಾಶ ಖಾತೆಯ ಸಚಿವೆಯಾಗಿದ್ದರು. ಜನವರಿ 1980ರಿಂದ ಅವರು ಯೋಜನಾ ಆಯೋಗದ ಅಧ್ಯಕ್ಷೆಯಾಗಿದ್ದರು. ಜನವರಿ 14, 1980ಕ್ಕೆ ಮತ್ತೆ ಪ್ರಧಾನ ಮಂತ್ರಿಯಾದರು.

ಗರೀಬಿ ಹಠಾವೋ ಎಂಬ ಘೋಷಣೆಯ ಮೂಲಕ ಭಾರತ ದೇಶದ ಬಡತನ ನಿರ್ಮೂಲನೆಗೆ ಶ್ರೀಕಾರ ಹಾಕಿದ ಆಕೆ ಜನರ ಮೂಲಭೂತ ಅವಶ್ಯಕತೆಗಳಾದ ಆಹಾರ ವಸತಿ ಮತ್ತು ಉದ್ಯೋಗಗಳ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿದರು. ಹಸಿರು ಕ್ರಾಂತಿಯ ಪರಿಣಾಮವಾಗಿ ದೇಶವು ಆಹಾರದ ನಿರ್ವಹಣೆಯಲ್ಲಿ ಸ್ವಾವಲಂಬಿಯಾಯಿತು.

20 ಅಂಶಗಳ ಯೋಜನೆಯ ಮೂಲಕ ಉಳುವವನೇ ಭೂಮಿಯ ಒಡೆಯ, ಉಚಿತ ಶಿಕ್ಷಣ, ಬಾಲಕಿಯರಿಗಾಗಿ ಹಾಸ್ಟೆಲ್ ಗಳ ನಿರ್ಮಾಣ, ರೋಜಗಾರ್ ಯೋಜನೆ,ಆವಾಸ ಯೋಜನೆ, ವೃದ್ಧರಿಗಾಗಿನ ಪಿಂಚಣಿ ಯೋಜನೆಗಳು, ವಿಧವಾ ವೇತನಗಳು, ಅಂಗವಿಕಲರಿಗಾಗಿ ಮತ್ತು ಕುಪೋಷಣೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಖ್ಯಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರಿಗಾಗಿ ವಿಶೇಷ ಯೋಜನೆಗಳು ಮತ್ತು ಆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಇಂದಿರಾ ಗಾಂಧಿಯವರದು.

ಅದಾಗ್ಯೂ ಆಕೆಯ ರಾಜಕೀಯ ಜೀವನ ಹಲವಾರು ಏರಿಳಿತಗಳನ್ನು ಹೊಂದಿತ್ತು. 1975ರಲ್ಲಿ ನಡೆದ ಚುನಾವಣೆಯಲ್ಲಿ ಪುತ್ರ ಸಂಜಯ್ ಗಾಂಧಿಯವರ ಸಹಾಯದಿಂದ ಹಲವಾರು ಚುನಾವಣಾ ಅಕ್ರಮಗಳನ್ನು ಮಾಡಿದ್ದಾರೆ ಎಂಬ ಆರೋಪಗಳನ್ನು ಮಾಡಿ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಿದಾಗ, ಇಂದಿರಾ ಗಾಂಧಿಯವರ ಆಯ್ಕೆಯನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿತು. ಆ ಸಮಯದಲ್ಲಿ ಇಂದಿರಾ ಗಾಂಧಿಯವರು ರಾಷ್ಟ್ರಪತಿಗಳ ಮೇಲೆ ಒತ್ತಾಯವನ್ನು ಹೇರಿ ದೇಶದ ಮೇಲೆ ಎಮರ್ಜೆನ್ಸಿಯನ್ನು ಹೇರಿದರು. ಎಲ್ಲಾ ರಾಜ್ಯ ಸರ್ಕಾರಗಳು ನಿಷ್ಕ್ರಿಯವಾಗಿ ಕೇವಲ ಕೇಂದ್ರ ಸರ್ಕಾರದ ಮೂಲಕ ಇಡೀ ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಪತ್ರಿಕೆಗಳ ಮೇಲೆ ಕೂಡ ನಿಯಂತ್ರಣ ಹೇರಲಾಯಿತು. ಸುಮಾರು ಎರಡು ವರ್ಷಗಳ ಕಾಲ ದೇಶವು ತುರ್ತು ಪರಿಸ್ಥಿತಿಯನ್ನು ಎದುರಿಸಿದ ಈ ಸಮಯದಲ್ಲಿ ಇಂದಿರಾ ಗಾಂಧಿಯವರು ಹೆಚ್ಚಿನ ಪ್ರಮಾಣದ ಅವಿರೋಧವನ್ನು ಮತ್ತು ಅಷ್ಟೇ ಪ್ರಮಾಣದ ಬೆಂಬಲವನ್ನು ಪಡೆದರು. ಮುಂದೆ 1979ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಂತ ಹೀನಾಯವಾಗಿ ಇಂದಿರಾ ಅವರ ಪಕ್ಷ ಸೋತಿತು.
ಜನತಾ ಪಕ್ಷ ಅಧಿಕಾರಕ್ಕೆ ಬಂದಿತು. ಆದರೆ ತಮ್ಮದೇ ರಾಜಕಾರಣದ ಒಳಸುಳಿಗಳಲ್ಲಿ ಸಿಕ್ಕು ಬಿದ್ದ ಆ ಪಕ್ಷದ ನೇತಾರರ ಒಗ್ಗಟ್ಟಿನ ಕೊರತೆಯಿಂದಾಗಿ ಕೇವಲ ಎರಡು ವರ್ಷಗಳಲ್ಲಿ ಮೂರು ಜನ ಪ್ರಧಾನಿಗಳನ್ನು ದೇಶವು ಕಾಣುವಂತಾಯಿತು. ಇದೇ ಸಮಯದಲ್ಲಿ ಒರಿಸ್ಸಾ ರಾಜ್ಯದ ಬೆಲ್ಚಿಯಲ್ಲಿ ನಡೆದ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಇಂದಿರಾ ಗಾಂಧಿಯವರು ಅಲ್ಲಿನ ಜನರನ್ನು ಸಾಂತ್ವನಿಸಿದ ಪರಿ ಎಲ್ಲರನ್ನು ಸೆಳೆಯಿತು. ಮುಂದೆ 1981 ರಲ್ಲಿ ಜನತಾ ಸರ್ಕಾರ ಬಿದ್ದು ಹೋಗಿ ಮರು ಚುನಾವಣೆ ನಡೆದಾಗ
516 ಸೀಟುಗಳಲ್ಲಿ 350ಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಇಂದಿರಾಗಾಂಧಿಯವರು ಮತ್ತೆ ಪ್ರಧಾನಿ ಹುದ್ದೆಗೇರಿದರು.
ಸಂಸತ್ ಸದಸ್ಯರಾಗಿ ಮಂತ್ರಿಯಾಗಿ ಹಲವಾರು ಖಾತೆಗಳನ್ನು ನಿಭಾಯಿಸಿದ್ದ, ಜೊತೆಗೆ ಗೃಹಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಇಂದಿರಾ ಅವರಿಗೆ ಇದೀಗ ದೇಶದ ಅಭಿವೃದ್ಧಿಯೆಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿದ್ದು ಭಾರತವು ಆರ್ಥಿಕವಾಗಿ, ಸಾಮಾಜಿಕವಾಗಿ, ಬಾಹ್ಯಾಕಾಶ ವಿಭಾಗದಲ್ಲಿ, ಸಾಂಸ್ಕೃತಿಕವಾಗಿ ತನ್ನ ಔನ್ನತ್ಯದ ಶಿಖರವನ್ನೇರಲು ಇಂದಿರಾ ಅವರ ಅನೇಕ ಪ್ರಗತಿಪರ ಯೋಜನೆಗಳು ಕಾರಣವಾದವು.

ಆದರೆ ದುರ್ದೈವವಶಾತ್ ಸ್ವತಂತ್ರ ಖಲಿಸ್ಥಾನ ಸ್ಥಾಪನೆಯ ರೂವಾರಿ ಬಿಂದ್ರನ್ ವಾಲೆಯನ್ನು ಹತ್ತಿಕ್ಕಲು ಆತ ತನ್ನ ಸೈನ್ಯದೊಡನೆ ಅಡಗಿದ್ದ ಅಮೃತಸರದ ಸ್ವರ್ಣ ಮಂದಿರದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಇಂದಿರಾ ಗಾಂಧಿಯವರು ಸಿಕ್ಕರ ಧಾರ್ಮಿಕ ಭಾವನೆಗಳಿಗೆ
ನೀಡಿದ ಪೆಟ್ಟು ಎಂದು ಎಲ್ಲಾ ಸಿಖ್ ಜನತೆ ಭಾವಿಸಿತು. ಇಲ್ಲಿ ದೇಶದ ಹಿತದೃಷ್ಠಿಯಿಂದಾಗಿ ಬಿಂದ್ರನ ವಾಲೆಯಂತಹ ಭಯೋತ್ಪಾದಕನನ್ನು ಮಟ್ಟ ಹಾಕುವುದು ಅತ್ಯಂತ ಅವಶ್ಯಕವಾಗಿತ್ತು ಎಂಬುದನ್ನು ಪರಿಗಣಿಸದ ಸಿಖ್ ಸಮುದಾಯದ ಕೆಲ ಜನರು ಇಂದಿರಾಗಾಂಧಿಯವರನ್ನು 1984 ಅಕ್ಟೋಬರ್ 31 ರಂದು ಆಕೆಯದೆ ಆಪ್ತರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಕೇಹರ್ ಸಿಂಗ್ ಎಂಬ ಇಬ್ಬರು ಸಿಕ್ಕರ ಮೂಲಕ ಗುಂಡಿಟ್ಟು ಕೊಲ್ಲಿಸಿದರು.

ಭಾರತ ದೇಶದ ಅತ್ಯಂತ ಯಶಸ್ವಿ ಮಹಿಳಾ ಪ್ರಧಾನಿಯ ಪುಟ್ಟ ದೇಹವನ್ನು ದುಷ್ಕರ್ಮಿಗಳು ಸಿಡಿಸಿದ ಗುಂಡುಗಳು ರಕ್ತದ ಮಡುವಿನಲ್ಲಿ ಬೀಳಿಸಿದವು. ಆಸ್ಪತ್ರೆಯಲ್ಲಿ ಇಂದಿರಾ ಗಾಂಧಿಯವರು ಮರಣ ಹೊಂದಿದರು.

ಇಡೀ ಜಗತ್ತು ಕಂಡ ಅತ್ಯಂತ ಧೈರ್ಯಶಾಲಿ ಮಹಿಳೆ ಈ ರೀತಿಯ ಸಾವನ್ನು ಕಂಡದ್ದು ವಿಪರ್ಯಾಸವೇ ಸರಿ. ರಾಜಕೀಯ ನಿಲುವುಗಳು ಏನೇ ಇರಲಿ…. ಭಾರತ ದೇಶದ ಬಡ, ದೀನ ದುರ್ಬಲರ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾದ ಇಂದಿರಾ ಗಾಂಧಿ ಅವರ ಕಾರ್ಯಗಳ ಮೂಲಕ ಅಮರರಾಗಿದ್ದಾರೆ. ಇಂದಿಗೂ ಚುನಾವಣೆಯ ಸಮಯದಲ್ಲಿ ಇಂದಿರಾ ಪಕ್ಷಕ್ಕೆ ಓಟು ನೀಡುತ್ತೇವೆ ಎನ್ನುವ ಹಲವಾರು ಜನ ನಮ್ಮ ಕಣ್ಣ ಮುಂದೆ ಇದ್ದಾರೆ. ಶತಶತಮಾನಗಳ ಕಾಲ ಆಕೆಯನ್ನು ನೆನೆಯುವ ಜನ ಇದ್ದೇ ಇರುತ್ತಾರೆ ಎಂಬ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಳ್ಳುತ್ತ.

ವೀಣಾ ಹೇಮಂತ್ ಗೌಡ ಪಾಟೀಲ್. ಮುಂಡರಗಿ, ಗದಗ್.

Don`t copy text!