ನಿದ್ದೆಯೆಂಬ ಜೋಕಾಲಿ (ಮದಿರೆ).
ಹುಟ್ಟು ಸಾವು ಎರಡರ ಮಧ್ಯೆ ನಿದ್ದೆ ಅರೆಸಾವು ಹೌದಲ್ವಾ,
ನಿದ್ದೆ ಎನ್ನುವುದು ಪ್ರತಿಜೀವಿಗೆ ಸಿಕ್ಕ ವರದಾನ,ದಣಿದ ದೇಹಕ್ಕೆ ನಿದ್ದೆ ಔಷಧಿ ಇದ್ದಂಗೆ ನೋಡ್ರಿ,ಎಷ್ಟೆ ಕೆಲಸ ಮಾಡಿದ್ರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ರೆ ಮರುದಿನ ಮತ್ತೊಂದು ಹೊಸದಿನ ಹುರುಪಿನ, ಹುಮ್ಮಸ್ಸಿನ ಉತ್ಸಾಹ,ಉಲ್ಲಾಸ, ಸಂತೋಷ ಪಡೆಯಬಹುದು.
ಈ ನಿದ್ದಿ ಕತಿನಾ ಬ್ಯಾರೆನ ಐತಿ ಬುಡ್ರಿ, ಇದರಗರ ಎಷ್ಟ ನಮೂನೆ ನಿದ್ದಿ ಸಡಗರ ಒಬ್ರೊಬ್ರಿಗೆ ಒಂದಂತರಹದ ನಿದ್ದಿ ಚಪಲ ನೋಡ್ರಿ,
ಹಾಂ ಹಂಗ ಮತೆ ಗಾದೆ ಮಾತುಗಳು ಅದಾವರಿ ಸಾಕಷ್ಟು
ಬೇಗ ಮಲಗು ಬೇಗ ಏಳು ಅಂತ
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ,
ನಿದ್ದೆಗೆ ಮದ್ದಿಲ್ಲ ವಜ್ರಕ್ಕೆ ಬೆಲೆಯಿಲ್ಲ .
ಆದರೆ ಇವಾಗ ನಿದ್ದೆ ಬರೋ ಗುಳಿಗೆ ವೈದ್ಯಕೀಯ ಲೋಕದಲ್ಲಿ ಕಂಡುಹಿಡಿದಿದ್ದಾರೆ. ಆದರೆ ನಿದ್ದೆ ಜಾಸ್ತಿ ಮಾಡೋದನ್ನು ಕಡಿಮೆ ಕಡಿಮೆ ಮಾಡಲಿಕ್ಕೆ ಗುಳಿಗೆ ಔಷಧಿ ಇಲ್ಲ,
ನಿದ್ದಿ ಮಾಡಿದಂಗ ನಟನೆ ಮಾಡೋರನು ಎಬ್ಬಿಸುವುದು ಕಷ್ಟ ನೋಡ್ರಿ,ಅದ್ಕೆ ಬಸವಣ್ಣನವರ ಒಂದು ವಚನದಲ್ಲಿ ಹೇಳ್ತಾರೆ,
ನಿದ್ದೆಯಲ್ಲಿರುವವರ ಎಬ್ಬಿಸಬಹುದು ನಿದ್ದೆ ಬಂದಂತೆ ನಟಿಸುವವರ ಎಬ್ಬಿಸಲಾಗದು,,ಎಂದು
ಅಂದಂಗ ನಿದ್ದಿ ಮಾಡೋ ವಿಧಾನ ಒಬ್ಬೊಬ್ರದ್ ಒಂದೊಂದು ತರಹ ಇರುತ್ತೆ ನೋಡ್ರಿ
ಕುಂಭಕರ್ಣನ ನಿದ್ದಿ ಗೊತ್ತಲ್ರಿ ಆರು ತಿಂಗಳತನಕ ಮಲಗತಿದ್ದನಂತ ಎಬಿಸಬೇಕಾದರೆ ನಗಾರಿ ಡೊಳ್ಳು ಬಾರಿಸತಿದ್ರಂತ ಎಂತಹ ನಿದ್ದಿ ಇರಬೇಕು ಆತಂದರ ನೋಡಿ,ಸುಖಪುರುಷ,
ಮತ್ತೆ ಗೊರಕಿ ನಿದ್ದಿ ಒಬ್ಬಬ್ರೂದು ಬಗಲಗ ಮಲಕೊಂಡೋರು ನಿದ್ದಿ ಮಾಡಿರಬಾರದು ಆತರಹ ಶಬ್ದ ಮೂಗುಬಾಯಿಯ ಸೈರನ್ಸ ಪೇಪರ್ ತಗದಬಿಟ್ಟಿರತಾರ ನೋಡ್ರಿ ಗೊರ್ ಗೊರ್ ಅಂತ
ಒಂದೊಂದು ತರಹ ವಿಚಿತ್ರ ಸಂಗೀತ ಒಬ್ರೊಬ್ರ ನಿದ್ದಿ ಸ್ಟೈಲ್ ನೋಡಿ,
ಬಾಯಿ ತಕ್ಕೊಂಡು ನಿದ್ದಿ ಮಾಡೋದು ಕೆಲವೊಬ್ಬರಿಗಂತು ಅಭ್ಯಾಸ ಏನೇನು ಒಳಗೋಗಿ ಹೊರಗಬರತಾವ ದೇವರಿಗೆ ಗೊತ್ತು ಅವರಿಗೆ ಗೊತ್ತು,
ಒಬ್ಬೊಬ್ರಂತು ನಿದ್ದಿಗಣ್ಣಾಗ ಎದ್ದು ಬಾಗಿಲು ತೆಗೆದು, ಹೊರಗಡೆ ಹೋಗ್ತಾರಂತ,ಕೇಳಿನಿ,ನೋಡಿನಿ,
ಇನ್ನೂ ಪ್ರಯಾಣ ಮಾಡುವಾಗ ನಿದ್ದೆಯ ಫಜೀತಿ ಎಲ್ಲರೂ ಅನುಭವಿಸಿರತಾರೆ ನೋಡ್ರಿ, ಬಸ್ನಲ್ಲಿ,ಟ್ರೇನ್ ನಲಿ,ಅದರಾಗ ಗಂಡಸರ ಬಗಲಗ ಹೆಣ್ಮಕ್ಕಳ ಪಜೀತಿ ಅಂತೂ ಒಂದೊಂದು ಸಲ ಜಗಳನ ನಡದಬಿಡತಾವ , ತೂಕಡಿಸುತ್ತಾ ತೂಕಡಿಸುತ್ತಾ ಡುಮಕ್ಂತ ಬಗಲಗಕುಂತಗೊಂಡ ಹೆಣ್ಮಗಳು ಮೇಲೆ ಬಿದ್ದಾಗ ಹೇ ಏನಿದು ಬಗಲಗ ಹೆಣ್ಮಕ್ಕಳ ಕುತಗಂಡರಂತ ಕಬರು ಇಲ್ಲಾ ನಿಮಗ ನಿದ್ದಿಮಾಡೋರು ಮನಿಯೊಳಗ ಮಾಡಬೇಕು ಹಿಂಗ ಬಸ್ಸಿನಾಗ ನಿದ್ದಿಮಾಡಿ ಬ್ಯಾರೆದೊರಿಗೆ ತೊಂದರೆಕೊಡುದಾ ಅಂತ,ಅಂದಾಗ ಅವಾಗ ಆತ ಅದೇನು ನಿದ್ದಿ ಏನು ಹೇಳಿಕೇಳಿ ಬರುತ್ತಾ,ಏನೋ ಸ್ವಲ್ಪ ತೂಕಡಿಕೆ ಬಂದಂಗಾತು ಇಷ್ಟಕ ನೀ ಎಷ್ಟು ರಾಮಾಯಣ ಮಾಡಿತಿಅಂತ ಜಗಳಾನ ಶುರುವಾಗಿ ಬಿಟ್ಟಿತು,
ಈ ನಿದ್ದಿ ಮಾಡೋ ಸಂಭ್ರಮದಾಗ ಇಳಿಯುವ ಊರು ಬಿಟ್ಟು, ಇಳಿಯುವ ಸ್ಥಳ ಬಿಟ್ಟು ಮುಂದಿನ ಸ್ಟಾಪ್ ಗೆ ಇಳಿದ ಪ್ರಸಂಗಗಳು ಎಷ್ಟೋ ಆಗಿರುತ್ತವೆ ಕೆಲವರಿಗೆ ನಿದ್ದೆಬಡಕರಿಗೆ, ನೋಡಿ
ನಮ್ಮಪತಿದೇವರ ಪಜೀತಿ ಒಂದು ಕೇಳಿ, ಒಂದ್ಸಲ ರೆಕಾರ್ಡಿಂಗ್ ಮುಗಿಸಿ ಚರ್ಚಗೇಟ್ನಿಂದ ಅಂಧೇರಿ ಗೆ ಬರಬೇಕಾದರೆ ರಾತ್ರಿ ಕೊನೆಯ ವಿರಾರ್ ಟ್ರೇನ್ ಬರಬೇಕಾದರೆ ಆರಾಮಸೆ ನಿದ್ದೆ ಹೊಡದರಾ ಅವರು ಇಳಿಯೋ ಅಂಧೇರಿ ಸ್ಟಾಪ್ ಹೋಗಿ ಕೊನೆಯ ಸ್ಟಾಪ್ ವಿರಾರ್ ಬಂದರೂ ಇನ್ನೂ ನಿದ್ದಿ ಯಲಿ ಮುಳುಗಿದ್ದು ನೋಡಿ ಪಕ್ಕದಲ್ಲಿರುವ ಒಬ್ಬ ಪುಣ್ಯಾತ್ಮ ಸರ್ ಇದು ಲಾಸ್ಟ್ ಸ್ಟಾಪ್ ಇಳಿಯೋಣ ಬನ್ನಿ ಅಂದಾಗ ಓ ಇದು ಅಂಧೇರಿ ನಾ ಅಂದಾಗ ಅಲ್ಲ ಸರ್ ವಿರಾರ್ ಅಂದಾಗ , ಅಯ್ಯೋ ನಾ ಅಂಧೇರಿ ಯಲಿ ಇಳಿಬೇಕೀತ್ತು ಅಂದಾಗ, ಸರ್, ಈಗ ಬೆಳಿಗ್ಗೆಯವರೆಗೆ ಎಲ್ಲಿ ಇರತಿರಾ ಬನ್ನಿ ನನ್ಜೊತೆಗೆ ನಮ್ ರೂಂನಲ್ಲಿ ಮಲಗಿಕೊಂಡು ಬೆಳಿಗ್ಗೆ ಬರುವಿರಂತೆ ಅಂದಾಗ ಅವರ ಜೊತೆ ಹೋಗಿ ಬೆಳಿಗ್ಗೆ ವಾಪಾಸು ಬಂದರಂತೆ ಇದನು ಕೇಳಿ ನಾನಂತೂ ನಕ್ಕಿದ್ದೆ ನಕ್ಕಿದ್ದು,
ಮನೆಯಲ್ಲಿ ಸಹ ಪೇಪರ್ ಓದ್ತಾ ಕುರ್ಚಿ ಮೇಲೆ ಕುಳಿತಾಗ ಓದ್ತಾ ಓದ್ತಾ ನಿದ್ದೆ ಮಾಡ್ತಾ ಆಕಡೆ ಒಂದುಸಲ ಡುಮಕ್ ಈಕಡೆ ಡುಮಕ್ ಅನ್ನೋದರೊಳಗ ಎಚ್ಚರ ಆಗೋದು,
ಇನ್ನೂ ಟಿವಿ ನ್ಯೂಸ್ ಕೇಳ್ತಾ ಕೇಳ್ತಾ ನಿದ್ದೆ ಮಾಡೋದು ಅವರಿಗೆ ಟೀವಿ ಹಚ್ಚಿಕೊಂಡು ನಿದ್ದಿ ಮಾಡಿದರೆ ಲಾಲಿಹಾಡಿದಂಗ ಅನಿಸತೈತಿ ಏನೋ ಅವರಿಗೆ .
ಓ ಲಾಲಿ ಅಂದತಕ್ಷಣ ,ಸಣ್ಣ ಕಂದಮ್ಮಗಳ ಮಲಗಿಸೋ ಹಾಡುಗಳು ಜಾನಪದಗಳಲ್ಲವೆ ,ಅಂತಹ ಅದ್ಭುತ ಶಕ್ತಿ ಜಾನಪದರ ನುಡಿಗಳಲ್ಲಿವೆ,
“ತೊಟ್ಟಿಲದೊಳಗೊಂದು ತೊಳೆದ ಮುತ್ತನ ಕಂಡೆ
ಹೊಳ್ಳೆ ಮೇಲಾಗಿ ಮಲಗ್ಯಾನ ಕಂದೈಗ
ಮುತ್ತಿನ ದ್ರೃಷ್ಟಿ ತೆಗೆದೇನ”, ಎನ್ನುವ ತಾಯಿಯ ಹಾಡಿಗೆ ಮಗುನಿದ್ರೆಯಲಿ ತೇಲಾಡುತೆ,
ಮಗು ನಿದ್ದೆಗಣ್ಣಲಿ ನಗ್ತಾ ಇರುತ್ತೆ,
ಗಪ್ಚುಪ್ ಮಿಸಗಲಾರದಂಗ ಮಲಗಿಸಿಬಿಡುವ ಶಕ್ತಿ ತಾಯಿಯ ಪ್ರೀತಿಯಲಿದೆ,
ಮತ್ತೆ ತಾಯಿಯು ನಿದ್ರೆ ಬಿಟ್ಟು ನೀರಡಿಕೆ ಬಿಟ್ಟು ಹಗಲಿರುಳು ಮಕ್ಕಳ ಹಾರೈಕೆ ಮಾಡಲು ಶ್ರಮವಹಿಸ್ತಾಳೆ,
ಕೆಲ ಮಕ್ಕಳು ಹೀಗೂ ಇರುತ್ತವೆ ಜೋಗುಳ ತೂಗಿ ಹಾಡೋವರೆಗೂ ಮಲಗತಾವ ತೂಗೋದು ಹಾಡೋದು ನಿಲ್ಲಿಸಿದ ತಕ್ಷಣವೇ ಮತೆ ಎಚ್ಚರವಾಗಿ ಬಿಡತಾವ,ಅವಾಗಂತು ತಾಯಿ ಇದೆಂತಹ ನಿದ್ದಿ ನಿನ್ನದು ಕೋಳಿ ನಿದ್ದಿ ಅಂತ,ಮತೆ ಲಾಲಿ ಹಾಡ್ತಾ
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗೋ ಮಗುವೆ, ಜೋ ಜೋ ಜೋಅಂತ ಮತೆ ಹಾಡಿ ಮಲಗಿಸ್ತಾಳೆ ತಾಯಿ.
ಹೀಗೆ ನಿದ್ದೆ ಒಂದೊಂದು ಸಲ ಪಜೀತಿ ಎಬ್ಬಿಸಿ ಯಡವಟ್ಟು ಮಾಡಿಬಿಡುತೈತೆ ಒಂದೊಂದು ಸಲ,ಕವಿ, ಸಮ್ಮೇಳನದಲಿ ನಿದ್ದೆಗಣ್ಣಲಿ ಏನೇನೋ ಓದುವರು ಇರ್ತಾರೆ,ಕೇಳುವವರು ಸಹ ಒಂದೊಂದು ಸಲ ನಿದ್ದೆಗೈದು ಪಕ್ಕದವರ ಚಪ್ಪಾಳೆ ಸದ್ದಿಗೆ ಎದ್ದುತಾವು ಚಪ್ಪಾಳೆ ಬಾರಿಸ್ತಾರೆ ಕೇಳಿದ ಹಾಗೆ ನಟಿಸುತ್ತಾ,
ಇನ್ನೂ ಕ್ಲಾಸಿನಲ್ಲಿ ನಿದ್ದೆ, ಟೀಚರ್ ಗೆ ಮಕ್ಕಳಿಗೂ ಸಹ ಪಜೀತಿ ಮಾಡಿರುವಂತೆ ಮಾಡುತೆ ಒಂದೊಂದು ಸಲ,
ನಾ ಆರನೆ ತರಗತಿಯಲ್ಲಿ ಓದುವಾಗ ಒಂದು ಘಟನೆ ನೆನಪಿದೆ, ವೀರಭದ್ರಯ್ಯ ಸರ್ ಅಂತ ಒಬ್ಬರು ಕನ್ನಡ ಹೇಳುವ ಟೀಚರ್ ಹಾಜರಿ ತಗೊಂಡು ಸ್ಟಲ್ಪ ಪಾಠ ಮಾಡಿ ಬೋರ್ಡ್ ಮೇಲೆ ಪ್ರಶ್ನೆಕೊಟ್ಟು ಕುರ್ಚಿ ಮೇಲೆ ಕೂತಗೊಂಡು ನಿದ್ದಿಹೊಡಿಕತಬಿಟ್ರು, ನಾವೆಲ್ಲಾ ಹುಡುಗಿಯರು ಗುಜುಗುಜು ಮಾತಾಡಿದರೂ ಅವರು ನಿದ್ರಾಲೋಕದಲಿದ್ದರು,
ಅದೇ ಸಮಯಕ್ಕೆ ಸರಿಯಾಗಿ ಬಿಓ ಸಾಹೇಬರು ಶಾಲಾ ಸಮೀಕ್ಷಕರು ನಮ್ಮ ಕ್ಲಾಸ್ ಗೆ ಒಳಗೆಬಂದಬಿಟ್ರು,ಬಂದವರೆ ಮೇಷ್ಟ್ರಿಗೆ ತರಾಟೆತಗೊಂಡಬಿಟ್ರು ಏನ್ರೀ ನೀವು ಶಾಲೆಗೆ ಮಕ್ಕಳಿಗೆ ಪಾಠ ಮಾಡಲಿಕ್ಕೆ ಬರ್ತಿರೋ ನಿದ್ದೆ ಮಾಡಲಿಕ್ಕೆ ಬರ್ತಿರೋ,ಅಂತ ಬೈಯ್ದು ಬನ್ನಿ ನನ್ಜೊತೆಗೆಅಂತ ಆಫೀಸಿಗೆ ಕರ್ಕೊಂಡು ಹೋಗಿ ಬಿಟ್ರು,ನಮ್ಸರ್ಂತು ಹೌಹಾರಿ ಬಿಟ್ಟಿದ್ದರು,ಹಿಂಗ ನೋಡಿರಿ ನಿದ್ದೆಯೆಂಬ ಸವಾರಿ ಏಲ್ಲಿಲ್ಲಿಗೆ ಕರಕೊಂಡಹೋಗತೈತಿ ಅಂತ ಗೊತ್ತಾಗೊದಿಲ್ಲ ನೋಡಿ,
ಇನ್ನೂ ಮಕ್ಕಳ ನಿದ್ದೆ ಶಾಲೆಯಲ್ಲಿ ಹೇಗೆ ಪಜೀತಿಗೆಬ್ಬಸಿತ್ತು ಅಂದರೆ
ಹಿಂದಿ ಟೀಚರ್ ಪಾಠ ಮಾಡ್ತಾ ಇರುವಾಗ ದಿಲ್ಲಿ ಮೆ ಕುತುಬ್ ಮಿನಾರ್ ಹೈ,ಅಂತ ಹೇಳ್ತಾ ಇರುವಾಗ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಹುಡುಗ ನಿದ್ದೆ ಮಾಡ್ತಾ ಇರೋದು ಗಮನಕ್ಕೆ ಬರುತ್ತದೆ ಟೀಚರ್ ಆ ಹುಡುಗನ ಎಬ್ಬಿಸಿ,ಹೇ ನಾ ಹೇಳ್ತಾ ಇದ್ದೆ ಹೇಳು ನೋಡೋಣ ಅಂದಾಗ,
ಆ ಹುಡುಗ ನಿದ್ದೆಗಣ್ಣಲಿ ದಿಲ್ ಮೆ ಕುತ್ತಾ ಬಿಮಾರ್ ಹೈ ಅಂತ ಹೇಳಿದಾಗ ಎಲ್ಲರೂ ನಕ್ಕಿದ್ದೆ ನಕ್ಕಿದ್ದು,
ಇನ್ನೂ ಮನೆಯಲ್ಲಿಯ ನಿದ್ದೆ ಅವಾಂತರನೂ ಆಗುತ್ತವೆ ನೋಡಿ, ಹಿಂಗ ನಮ್ಗೆಳತಿ ಯಪ್ಪಾರೆ , ಇವತ್ತು ಎಂತಹ ನಿದ್ದಿ ದಾಳಿವಡ್ಲಿ ,ಅಂಗ ಟಿವಿ ನೋಡಕೆಂತ ಕುಂತಗೊಂಡಿನ,ನಿದ್ದಿ ಹತ್ತಿದ್ದ ಗೊತ್ತಿಲ್ಲ, ರಾತ್ರಿ ಏಳುವರೆಗೆ , ಗಂಡ ಮಗ ಬಂದ ಮೇಲೆ ಬಾಗಿಲು ತೆಗೆದರೆ ಆಯ್ತು ಅಂತ ,ಆದರೆ ನಿದ್ದೇನು ನಮ್ ಕೈಯಂದನು ನೋಡ್ರಿ ಮಲಗಿದಾಳೆ ಆರಾಮ್ಸೆ. ರಾತ್ರಿ 11-30ಗೆ ಗಂಡ ಮಗ ಬಂದು ಬಾಗಿಲು ಕರೆಗಂಟೆ ಬಾರಿಸ್ತಾರೆ, ಮೊಬೈಲಿಂದ
ಕಾಲ್ ಮಾಡ್ತಾ ಇದ್ದಾರೆ,ಬಾಗಿಲ ಚಿಲಕ ಸಪ್ಪಳ ಮಾಡ್ತಾ ಇದ್ದಾರಂತ, ಜಪ್ಪಯ್ಯ ಅಂದ್ರೂ ಮಿಸಗವಳ್ಳು, ಏನಾಗಿದೆಯೋ ಏನೋ ಅಂತ ಅವರಿಗೆ ಭಯ, ಆದರೆ ಈಕಿಗ ಮಾತ್ರ ಸಕ್ಕರಿನಿದ್ದಿ, ಮತ್ತೆ ಜೋರಾಗಿ ಒದರಿಂದ ಆ ಮ್ಯಾಲೆ ಎಚ್ಚರ.ಅಯಿತಂತೆ,ಬಾಗಿಲು ತೆಗೆದ ಮೇಲೆ ,ಗಂಡ ಮಗ ಏನಿದು ಎಂತಹ ನಿದ್ದಿ ಇಷ್ಟೇಲ್ಲಾ ಬೆಲ್ಬಾರಸ್ತಿವಿ, ಮೊಬೈಲ್ ನಿನ್ ಬಗಲಗ ಐತಿ ಪೋನ್ ಮಾಡಕತ್ತಿವಿ ಸ್ವಲ್ಪನೂ ಎಚ್ಚರ ಇಲ್ಲ ನಿನಗೆ, ಕುಂಭಕರ್ಣನಕಿಂತ ಬಲ ಬಿಡು ನೀನು ತರಾಟೆಗೆ ತಗೆದುಕೊಂಡದ್ದನ್ನು ಹೇಳಿ ಹೇಳಿ ನಗಕತ್ತಿದ್ಲು, ನೋಡಿ,
ಮತ್ತೆ ಈ ನಿದ್ದಿಗಂತೂ ನಮ್ಕಡೆ,ಹಿಂಗನೂ ಅಂತಾರೆ,
ಮದ್ಯಾಹ್ನ ಮಲಗಿರೇನ್ರಿ,ಅಂದಾಗ, ಇಲ್ಲಾ ಸುಮ್ನೆ ಅಡ್ಡಾಗಿದ್ದೆ ಅನ್ನೋದು,
ಸುಮ್ನೆ ಮಲಗಿದ್ದೆ ಅಂಗ ಜಂಪ್ ಹತೈತಿನೋಡಿರಿ,
ಆಕಳಿಕೆ ಬಂದರೆ ತೂಕಡಿಕೆ ಬಂದಂಗ ನೋಡ್ರಿ
ಅಯ್ಯೋ ನಿದ್ದಿ ಮುಚ್ಚಿಮುಳಗೈತಿ ನೋಡ್ರಿ,
ನಿದ್ದಿ ಇಲ್ಲ ನೀರಡಿಕೆ ಇಲ್ಲ
ಕಣ್ಣಾಗ ಎಣ್ಣಿಬತ್ತಿ ಹಾಕೆಂಡು ಎಚ್ಚರ ಅದಿನಿ ನೋಡ್ರಿ, ಅನ್ನೋದು
ಅದೆಂಗ ನಿದ್ದಿಗೆಡತಾರನ ನೋಡಿ,ನಮಗ ಊಟ ಇಲ್ದಿದ್ರೆ ನಡಿತೈತಿ ಆದರೆ ಕಣ್ತುಂಬ ನಿದ್ದಿ ಬೇಕು ನೋಡ್ರಿ, ನಿದ್ದಿ ಮಾಡಿದರೆ ಮನುಷ್ಯ ಲವಲವಿಕೆಯಿಂದ ಇರುತ್ತಾರೆ ನೋಡಿ ಹೌದಲ್ಲವಾ,
ಒಬ್ಬೊಬ್ರಂತು ನಿದ್ದಿ ಗಣ್ಣಲ್ಲಿ ಸಹ ಅಷ್ಟು ಚುರುಕು ಇರ್ತಾರೆ ನೋಡಿ,ಅವರಿಗೆ ನಿದ್ದಿ ಗಣ್ಣಾಗ ಕೇಳು ಕರೆಕ್ಟ್ ಹೇಳ್ತಾರೆ, ಅಷ್ಟೊಂದು ನೆನಪು ಅವರಿಗೆ ಅಂತಾ,
ಕುಡುಕರಂತೂ ನೋಡಿ ಅವರಿಗೆ ಗಟಾರ, ರೋಡ್,ಮನೆ ಯಾವುದು ಗೊತ್ತಾಗೊದಿಲ್ಲ ಕುಡಿದ ಅಮಲಿನಲ್ಲಿ ಎಲ್ಲಿಯಾದರೂ ನಿದ್ದೆಗಣ್ಣಲಿ ನಿದ್ದೆಗೈಯತಾರೆ,
ಕೆಲವರಿಗೆ ಹೊಸ ಜಾಗದಲ್ಲಿ ನಿದ್ದೆ ಬರೋದಿಲ್ಲ, ಕೆಲವರಿಗೆ ಎಲ್ಲಿಯಾದರೂ ನಿದ್ದೆ ಮಾಡ್ತಾರೆ,
ಈ ನಿದ್ದೆಯೆಂಬ ಮದಿರೆ ಜೋಕಾಲಿ ಇದ್ದಂಗ ನೋಡಿ,ತಣ್ಣನೆಯ ಗಾಳಿಗೆ ತೂರಿ ನಸುನಕ್ಕು ಕುಣಿದು ನಿದ್ರೆ ಎಂಬ ಮಾಯೆ ಕಣ್ಮುಚ್ಚಿಸಿ ಆನಂದ ಲೋಕದಲಿ ನಿದ್ರಾದೇವಿ ಹಾಸಿಗೆ ಹಾಸಿ ಬಿಡ್ತಾಳೆ ನೋಡಿ,
ಪರೀಕ್ಷೆ ಮುಂದೆ ಕೆಲ ಮಕ್ಕಳು ನಿದ್ದೆಗೆಟ್ಟು ಓದಿ, ಪರೀಕ್ಷೆ ಕೊಡುವ ಸಮಯದಲ್ಲಿ ನಿದ್ರಾವಸ್ತೆಯಲಿ ತಪ್ಪುಉತ್ತರ ಕೊಟ್ಟು ಪೇಚಾಡಿದವರು ಇದ್ದಾರೆ,
ಇನ್ನೂ ವಾಹನ ಚಾಲಕರಂತು ತುಂಬಾ ಮುತುವರ್ಜಿಯಿಂದ ಗಾಡಿ ಓಡಿಸಬೇಕಾಗತೈತಿ ನೋಡಿ ,ಬಸ್, ಟ್ರೇನ್,ವಿಮಾನ ,ಮುಂತಾದವರು ಅಪ್ಪಿ ತಪ್ಪಿಯೂ ಕಣ್ ಮುಚ್ಚಿ ನಿದ್ದಿ ಮಾಡಿದರೆ ಆತನ ಜೊತೆಗೆ ಸಹಪ್ರಯಾಣಿಕರೆಲ್ಲಾ ಸ್ವರ್ಗದಲ್ಲಿ ನಿದ್ದಿ ನೋಡಿ,.
ಅತಿಯಾಗಿ ಮಲಗೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅತಿಕಡಿಮೆ ನಿದ್ದೆ ಮಾಡೋದು ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ,
ಹಿತಮಿತವಾದ ಆಹಾರ ಸತ್ವಯುತವಾದ ಆಹಾರ ವಿಹಾರದಿಂದ ಉತ್ತಮ ನಿದ್ದಿ ಮಾಡಿದರೆ ಮನುಷ್ಯರು ಲವಲವಿಕೆಯಿಂದ ಇರುತ್ತಾರೆ ನೋಡಿ ಹೌದಲ್ಲವಾ,
ಯಾವಾಗ ನೋಡಿದರೂ ಬಿದ್ದುಕೊಂಡೆ ಇರೋದು, ದಾರಿದ್ರ್ಯವನ್ನು ಬರಮಾಡಿ ಕೊಂಡಂತೆ ನೋಡಿ
ಲೇಟಾಗಿ ಏಳುವವರಿಗೆ ಸೂರ್ಯನ ವಂಶದವರು ಅಂತಾ ಬೈಯತಿದ್ಲು ನಮ್ಮ ಅಮ್ಮ,
ಮಗ ಮಲಗಿ ಕೆಟ್ಟ ಸೊಸೆ ತಿರುಗಿ ಕೆಟ್ಟಳು ಅಂತ ಗಾದೆ ಮಾತು ,
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ನೋಡಿ ಹೌದಲ್ಲವಾ,
ಗಂಡಹೆಂಡರ ಜಗಳ ಉಂಡು ಮಲಗುವ ತನಕ ಎಂಬ ಮಾತು ಸಹ ಆದಿನದ ಕಹಿ ಘಟನೆಯನು ಆಕ್ಷಣಕೆ ಮರೆತು ಬಿಡಬೇಕು ಎಂಬ ತಿಳಿಮಾತು,
ಇನ್ನೂ ನಿದ್ದೆಯಲ್ಲಿ ಕನಸು, ಕನಸು ಕಾಣದವರು ಯಾರೂ ಇಲ್ಲ ನೋಡಿ, ಹುಟ್ಟಿದ ಮಗುವಿಗೂ ಸಹ ಕನಸು ಬೀಳುತ್ತದೆ ಎಂದು ವೈಜ್ಞಾನಿಕವಾಗಿ ಹೇಳಿದ್ದಾರೆ,
ನಿದ್ದೆಯಲ್ಲಿ ಕನಸು ಕಾಣುವದಲ್ಲ, ನಿದ್ದೆ ಬರದಂತೆ ಕನಸನ್ನು ಸಾಕಾರಗೊಳಿಸಬೇಕೆಂಬ ಕರೆ ಅಬ್ದುಲ್ ಕಲಾಂ ಅವರದು ,
ಇನ್ನು ಒಬ್ಬೊಬ್ರಿಗೆ ಇನ್ನೊಬ್ಬರ ಒಳ್ಳೆಯತನ,ಅವರು ಮೇಲೆ ಬರುವುದು ಕಂಡು ನಿದ್ದೆ ಬರುವುದಿಲ್ಲ, ಹೊಟ್ಟೆ ಉರಿ ಹೇಗಾದರೂ ಮಾಡಿ ಕಾಲೆಳೆಯುವ ಕುತಂತ್ರದ ಬುದ್ದಿಯವರು ಮೋಸದ ಜಾಲ ಬೀಸಿ,ಇನ್ನೊಬ್ಬರನ್ನು ಚಿಂತೆಗೆ ಹಚ್ಚಿ, ತಾವು ಸುಖ ನಿದ್ದೆಮಾಡುವವರು ಇರ್ತಾರಿ,
ಅಂದ ಹಾಗೆ ವರ್ಲ್ಡ್ ಸ್ಲೀಪ್ ಸೊಸೈಟಿಯ ವತಿಯಿಂದ 2008ರಲ್ಲಿ ವಿಶ್ವ ನಿದ್ರಾ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು, ಇದನ್ನು ಹಿಂದೆ ವರ್ಲ್ಡ್ ಅಸೋಸಿಯೇಷನ್ ಆಫ್ ಸ್ಲೀಪ್ ಮೆಡಿಸಿನ್ WASM ಎಂದು ಕರೆಯಲಾಗುತ್ತಿತ್ತು, ಪ್ರಪಂಚದಾದ್ಯಂತ ನಿದ್ರೆಯ ಆರೋಗ್ಯವನ್ನು ಉತ್ತೇಜಿಸುವ ಕೆಲಸವನ್ನು ಇದು ಮಾಡುತ್ತದೆ.
ದಿನಕ್ಕೆ 6ರಿಂದ 7ತಾಸು ಮಲಗುವದು ಆರೋಗ್ಯ ದ್ರೃಷ್ಟಿ ಯಿಂದ ಒಳ್ಳೆಯದು ಎಂಬುದು ತಜ್ಞರ ವೈಜ್ಞಾನಿಕ ಅಭಿಪ್ರಾಯವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಂ ನೈಟ್ ಶಿಫ್ಟ್ ಗಳು ಆ ನಿದ್ರೆಯನ್ನು ಕಸಿದುಕೊಂಡು ಜೊತೆ ಜೊತೆಗೆ ಹೆಸರು ಕೇಳಿದ ರೋಗಗಳಿಗೆ ಹದಿಹರೆಯದವರು ತುತ್ತಾಗುತ್ತಿದ್ದಾರೆ,
ಇತ್ತೀಚೆಗೆ ಈ ಮೊಬೈಲ್ ಸಹ ಎಲ್ಲರಿಗೂ ಹುಚ್ಚೆಬ್ಬಿಸಿ ಬಿಟ್ಟಿದೆ ,ನಿದ್ದೆ ಇಲ್ಲ ನೀರಡಿಕೆ ಇಲ್ಲ ಮೊಬೈಲ್ ದಾಸರಾಗಿ ಬಿಟ್ಟಿದ್ದಾರೆ,ಸಣ್ಣ ಸಣ್ಣ ಮಕ್ಕಳಿಗೂ ಸಹ ಆಟವಾಡಲು ಮೊಬೈಲ್ ಕೊಡುವುದು,ಅವರಿಗೆ ಊಟ ಮಾಡಿಸುವಾಗ ಮೊಬೈಲ್ ತೋರಿಸುವುದು, ಮಕ್ಕಳು ಮೊಬೈಲ್ ನೋಡ್ತಾ ನೋಡ್ತಾ ಮಲಗುವ ರೂಢಿ ಮಾಡಿಬಿಟ್ಟಿದ್ದಾರೆ,ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಆರೋಗ್ಯಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು,
ನಿದ್ದೆ ಸರಿಯಾಗಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು,
ಮೊದಲೆಲ್ಲ ಮಕ್ಕಳಿಗೆ ಕತೆ ಹೇಳಿ ಮಲಗಿಸುತ್ತಿದ್ದರು
ಹರೇ ಮಹಾಭಾರತದ ಒಂದು ಸನ್ನಿವೇಶದಲ್ಲಿ ಬರುವ ಶ್ರೀಕೃಷ್ಣನು ತುಂಬಿದ ಗರ್ಭಿಣಿ ಸುಭದ್ರೆಗೆ ದಾರಿಯ ಮಧ್ಯದಲ್ಲಿ ಕತೆ ಹೇಳುವಾಗ ಸುಭದ್ರೆಗೆ ನಿದ್ದೆ ಹತ್ತಲು,ಆಗ ಸುಭದ್ರೆಯ ಹೊಟ್ಟೆಯಲ್ಲಿರುವ ಮಗು ಕತೆ ಕೇಳ್ತಾ ಹುಂ, ಹುಂ ಅಂತಾ ಶಬ್ಧ ಬರುವುದನ್ನು ಕೇಳಿದ ಕ್ರಿಷ್ಣ ನಿಗೆ ಅಭಿಮನ್ಯು ವಿನ ಚತುರತೆ ಕಂಡು ಬೆರಗಾದ ಸನ್ನಿವೇಶ,
ಇರಲಿ ಬಿಡಿ ನಿದ್ದೆ ಎನ್ನುವುದು ಪ್ರತಿಜೀವಿಗೆ ಸಿಕ್ಕ ವರದಾನವಾಗಿದೆ, ನಿದ್ದಿ ಬೇಕು ಆದರೆ ನಿದ್ದಿಯೆ ಜೀವನ ಆಗಬಾರದು .
ಮಲಗಿದವರು ಸತ್ತವರು ಒಂದೆ ಸಮ ನೋಡಿ,
ಅದ್ಕೆ ಬೇಂದ್ರೆ ಅಜ್ಜ ಹೇಳಿದಂಗ
,”ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ, ಹೊಸ ಹುಟ್ಟು ನಿದ್ದೆಯಿಂದ ಎದ್ದರೆ,
ಅದ್ಕೆ ನಮ್ಕಡೆ ಬೆಳಿಗ್ಗೆ ಎದ್ದತಕ್ಷಣ ಎಲ್ಲರೂ ಕೇಳೋದು ಎದ್ರಾ, ಎದ್ದೀರಾ ನಿದ್ದೆ ಯಿಂದ ಗೆದ್ದೀರಾ ಸಾವಿನಿಂದ ಅನ್ನೋ ಅರ್ಥ ನೋಡಿ
–ಲಲಿತಾ ಅಂಗಡಿ ಮುಂಬಯಿ