ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ

ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ

(ಹಸಿರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ)

ಅದು 1973ರ ನವಂಬರ್ ಒಂದನೇ ದಿನ.ಕನ್ನಡ ನಾಡನ್ನು ಶತಮಾನಗಳ ಕಾಲ ಆಳಿದ ವಿಜಯನಗರ ಸಾಮ್ರಾಜ್ಯದ ಆರಾಧ್ಯದೈವವಾದ ಹಂಪಿಯ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ಸಂಭ್ರಮ,ಸಡಗರ ಮನೆ ಮಾಡಿತ್ತು. ಕನ್ನಡ ನಾಡಿನ ಎಲ್ಲಾ ಹಿರಿಯ ಮುತ್ಸದ್ದಿಗಳು, ಕನ್ನಡ ಪರ ಹೋರಾಟಗಾರರು,ಜನರು ಮುಖ್ಯಮಂತ್ರಿಗಳ ಆ ಘೋಷಣೆಗಾಗಿ ಕಾಯುತ್ತಿದ್ದರು. ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯಿಂದ ತಂದ ನಾಡದೇವಿಯ ಚಿತ್ರಪಟಕ್ಕೆ ಪೂಜಿಸಿದ ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರು ಮೈಸೂರು ರಾಜ್ಯವನ್ನು “ಕರ್ನಾಟಕ ರಾಜ್ಯ’ ಎಂದು ಅಧಿಕೃತವಾಗಿ ಘೋಷಿಸಿದರು. ಜೊತೆಗೆ ತಾವು ಪೂಜಿಸಿದ ನಾಡದೇವಿಯ ಚಿತ್ರವನ್ನು ಅಧಿಕೃತವಾಗಿ ಕನ್ನಡ ಭುವನೇಶ್ವರಿಯ ಚಿತ್ರವೆಂದು ಅಂಗೀಕರಿಸುವುದಾಗಿ ಹೇಳಿದರು.

ಕನ್ನಡ ನಾಡು ಒಂದು ಸಮಾಸ ಪದ ಕರು+ನಾಡು… ಕರುನಾಡು ಎಂದಾಗಿದ್ದು ಮುಂದೆ ಅದೇ ಕನ್ನಡ ಎಂದಾಯಿತು. ಕರು ಅಂದರೆ ಎತ್ತರದಲ್ಲಿರುವ ಪ್ರದೇಶ ಎಂದು ಅರ್ಥ. ಕನ್ನಡ ಎಂದರೆ ಏನು ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ ಕನ್ನಡ ಎಂಬುದೊಂದು ಭಾಷೆ, ಮನೆ ಮನೆಗಳಲ್ಲಿ ಝೆಂಕರಿಸುವ ಮಾತು ಕನ್ನಡ, ಮನ ಮನಗಳಲ್ಲಿ ಭಾವ ಲಹರಿಯನ್ನು ಉಕ್ಕಿಸುವ ಸಂಗೀತ ಕನ್ನಡ, ಕನ್ನಡ ಎಂದರೆ ದೀಪದ ಹಣತೆ, ಕನ್ನಡ ಎಂದರೆ ನೃತ್ಯದ ಲಾವಣ್ಯ, ಕನ್ನಡ ಎಂದರೆ ಸಿರಿಗಂಧದ ನಾಡು, ಕನ್ನಡ ಎಂದರೆ ಸಂಸ್ಕೃತಿಯ ನೆಲೆವೀಡು, ಕನ್ನಡ ಎಂದರೆ ಕವಿ ಸಾಹಿತಿಗಳ ಶಿಲ್ಪಕಲೆಗಳ ತವರೂರು, ಕನ್ನಡ ಎಂದರೆ ಕೃಷ್ಣೆ ತುಂಗೆ ಕಾವೇರಿಯರು ಹರಿದಿರುವ ನಾಡು, ಅಲ್ಲಾ ಮತ್ತು ಅಲ್ಲಮರನ್ನು, ಗುರು ಗೋವಿಂದ ಮತ್ತು ಶರೀಫರನ್ನು ಒಟ್ಟಾಗಿ ಪೂಜಿಸಿದ ಭಾವೈಕ್ಯದ ಬೀಡು. ಆದ್ದರಿಂದಲೇ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ತಾಯಿಯನ್ನು ಭಾರತ ಜನನಿಯ ತನುಜಾತೆ ಎಂದು ಕರೆದಿರುವುದು.

ಪ್ರತಿ 40 ಕಿ.ಮೀ ಗೆ ನಾವು ಮಾತನಾಡುವ ಕನ್ನಡ ಭಾಷೆಯ ಸೊಗಡು ಬದಲಾಗುತ್ತದೆ. ಮೈಸೂರಿನಲ್ಲಿ ಅಚ್ಚ ಕನ್ನಡ, ಬೆಂಗಳೂರಿನಲ್ಲಿ ತಿಳಿ ಕನ್ನಡ, ಮಂಡ್ಯ, ಕೋಲಾರ ಮತ್ತು ಚಾಮರಾಜಪೇಟೆಗಳಲ್ಲಿ ಗ್ರಾಮ್ಯ ಛಾಯೆಯ ಕನ್ನಡವಾದರೆ, ಹುಬ್ಬಳ್ಳಿಯದು ಗಂಡು ಮೆಟ್ಟಿನ ಕನ್ನಡ, ಜಮಖಂಡಿ ವಿಜಾಪುರ ಬಾಗಲಕೋಟೆಯಲ್ಲಿ ಕೇಳಿದರೆ ಮತ್ತಷ್ಟು ಕೇಳಬೇಕೆನ್ನುವ ಹಿಂದಿ ಮಿಶ್ರಿತ ಕನ್ನಡ, ಯಲ್ಲಾಪುರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಗಳಲ್ಲಿ ಹವ್ಯಕ, ಕೊಂಕಣಿ ಮತ್ತು ತುಳು ಮಿಶ್ರಿತ ಭಾಷೆಯ ಕನ್ನಡವಾದರೆ, ಗಡಿ ಭಾಗವಾದ ಬೆಳಗಾವಿ ಗೋಕಾಕಗಳಲ್ಲಿ ಮರಾಠಿ ಮಿಶ್ರಿತ ಕನ್ನಡ…. ಹೀಗೆ ಕನ್ನಡದಲ್ಲಿ ಹಲವಾರು ಬಗೆ ಇದ್ದರೂ ಆತ್ಮ ಮಾತ್ರ ಮೂಲ ಕನ್ನಡದ್ದು. ಪ್ರತಿಯೊಂದು ಭಾಷೆಯ ಕನ್ನಡವೂ ತನ್ನದೇ ಆದ ಸೊಗಡನ್ನು ಹೊಂದಿದ್ದು ಕೇಳಲು ಅಪ್ಯಾಯಮಾನವಾಗಿದೆ. ಕನ್ನಡ ನಮ್ಮೆಲ್ಲರ ಭಾವ ಬಂಧದಲ್ಲಿ, ನಂಬಿಕೆ ವಿಶ್ವಾಸಗಳಲ್ಲಿ ಪ್ರೀತಿ ಒಡನಾಟದಲ್ಲಿ ಒಂದುಗೂಡಿಸಿದೆ.

ಅಂತೆಯೇ ಆದಿ ಕವಿ ಪಂಪನು

ಜಾಗದ ಭೋಗದ ಗೇಯದಕ್ಕರದ ಗೊಟ್ಟಿಯ ಲಂಪಿನಿಂಪುಗಳ್ಗಾಗರವಾದ ಮಾನಿಸರೆಮಾನಿಸದಂತವರಾಗಿ ಕವಲಾಗಿಯುಮೇನು ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಮರಿದುಂಬಿಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್

ತ್ಯಾಗದ, ದುಡಿದದ್ದನ್ನು ಸರಿಯಾಗಿ ಬಳಸುವ ಉಪಭೋಗಿಸುವ, ಅಕ್ಕರೆ ಪ್ರೀತಿಯನ್ನು ತೋರಿಸುವ, ನೃತ್ಯ ಕವಿ ಕಾವ್ಯ ಕವನ ಗೋಷ್ಠಿಗಳನ್ನು ನಡೆಸುವ ಸಂಗೀತದ ಸವಿ ತೋರಿಸುವ, ಈ ಕನ್ನಡ ನಾಡಿನ ಬನವಾಸಿ ದೇಶದಲ್ಲಿ ಪುಟ್ಟ ಕೋಗಿಲೆಯಾಗಿ ಹುಟ್ಟುವೆನು ಮರಿ ದುಂಬಿಯಾಗಿ ಹುಟ್ಟುವೆನು ಎಂದು ಕವಿ ಹೇಳಿದ್ದಾನೆ ಎಂದರೆ ಅದು ಕನ್ನಡಿಗರ, ಕನ್ನಡ ನಾಡು-ನುಡಿಗಳ ಹಿರಿಮೆಯನ್ನು ತೋರುತ್ತದೆಯಲ್ಲವೇ.

ಈಗಿನ ಕರ್ನಾಟಕವು ಮೊದಲು ಮೈಸೂರು ರಾಜ್ಯವಾಗಿತ್ತು. 1956ರ ನವೆಂಬರ್‌ 1ರಂದು ರಾಜ್ಯೋತ್ಸವದ ಆಚರಣೆ ಪ್ರಾರಂಭವಾಯಿತು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹಾಗೂ ಮದ್ರಾಸ್‌ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಕನ್ನಡದ ಮೊಟ್ಟಮೊದಲ ಕೃತಿ ಕವಿರಾಜಮಾರ್ಗದಲ್ಲಿ ಕುರಿತೋದದೆಯುಂ ಕಾವ್ಯ ಪರಿಣತಿಮತಿಗಳ….ಎಂದು ಕನ್ನಡಿಗರನ್ನು ಹಾಡಿ ಹೊಗಳಿದ್ದಾರೆ. ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಮಯದಲ್ಲಿ ಉಗ್ರ ಹೋರಾಟಕ್ಕೆಳಸುವ, ಶಾಂತಿಯ ಸಮಯದಲ್ಲಿ ಕಲೆ ಸಂಸ್ಕೃತಿ ಸಾಹಿತ್ಯ ಶಿಲ್ಪ ಕಲೆಗಳಿಗೆ ಪ್ರೋತ್ಸಾಹ ನೀಡುವ ಅತ್ಯಂತ ಶ್ರೀಮಂತ ನಾಡು ನಮ್ಮ ಕನ್ನಡ ನಾಡು. ಆದರೆ ನಮ್ಮ ಕನ್ನಡಿಗರ ಉದಾರತೆಯಿಂದಾಗಿ ಕೆಲವೊಮ್ಮೆ ವಿಸ್ಮೃತಿಗೆ ಜಾರಿದ್ದೂ ಉಂಟು. ಪೂರ್ಣ ಕನ್ನಡ ನಾಡು ನಾಲ್ಕು ಹೋಳಾಗಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸು ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಎಂದು ಕರೆಯಲ್ಪಟ್ಟವು. ಗಡಿ ಭಾಗದಲ್ಲಿರುವ ಬೆಳಗಾವಿ ನಿಪ್ಪಾಣಿಗಳು ತಮಗೆ ಬೇಕೆಂದು ಮಹಾರಾಷ್ಟ್ರದವರು ತಂಟೆ ತೆಗೆದರೆ ಕೇರಳದವರು ಕಾಸರಗೋಡನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು ರಾಯಭಾಗ ಕೊಲ್ಲಾಪುರ ಪ್ರಾಂತಗಳನ್ನು ಮಹಾರಾಷ್ಟ್ರ ಪಡೆದುಕೊಂಡಿತು.ಅಕ್ಕಲಕೋಟೆ,ಇಚಲಕರಂಜಿ,ಕೊಲ್ಲಾಪುರ ಮತ್ತು ರಾಯಭಾಗಗಳು ಮಹಾರಾಷ್ಟ್ರದಲ್ಲಿ ಸೇರಿಕೊಂಡಿವೆ. ಆಂಧ್ರಪ್ರದೇಶದಿಂದ ಆದವಾನಿ ಮತ್ತು ಕರ್ನೂಲು, ಹೀಗೆ ಕನ್ನಡ ಮಾತನಾಡುವ ಜನರನ್ನು ಒಳಗೊಂಡಿರುವ ಜಿಲ್ಲೆಗಳು ದೇಶದ ಬೇರೆ ರಾಜ್ಯಗಳಿಗೆ ಹಂಚಿ ಹೋಗಿದ್ದು ಇಂದಿಗೂ ಕೂಡ ಅಖಂಡ ಕರ್ನಾಟಕದ ಕನಸು ಕನಸಾಗಿಯೇ‌ ಉಳಿದಿದೆ.ಭಾಷೆಯಾಗಿ ನಾವು ಭಾರತದಲ್ಲಿ ಆರನೇ ಸ್ಥಾನದಲ್ಲಿದ್ದು ಕನ್ನಡ ಪತ್ರಿಕೆಗಳನ್ನು ಓದುವವರಾಗಿ ನಾವು ಒಂಬತ್ತನೇ ಸ್ಥಾನದಲ್ಲಿದ್ದೇವೆ. ಇದೀಗ ಬೆಂಗಳೂರಿನಲ್ಲಿ ಕೇವಲ 27 ಪ್ರತಿಶತ ಜನರು ಮಾತ್ರ ಕನ್ನಡವನ್ನು ಮಾತನಾಡುತ್ತಾರೆ ಅಂದರೆ ಕನ್ನಡ ನಾಡಿನ ರಾಜ್ಯದ ರಾಜಧಾನಿಯಲ್ಲಿ ಕನ್ನಡದ ಪರಿಸ್ಥಿತಿ ಏನಾಗಿದೆ ಎಂಬುದರ ಅರಿವು ನಮಗಾಗಬಹುದು

ಕನ್ನಡ ನಾಡಿನಲ್ಲಿ ಹುಟ್ಟಿರುವ, ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಓದಿ ಇದೀಗ ಐಟಿಬಿಟಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡದ ಶಿಶುಗಳು ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಹಿಂಜರಿಯುತ್ತಿರುವುದು ಅವರ ಭಾಷೆಯ ಕುರಿತ ಅಸಡ್ಡೆಯನ್ನು ತೋರಿಸುತ್ತದೆ. ಬೆಂಗಳೂರಿನ ಮನೆಗಳಲ್ಲಿ ಕನ್ನಡ ಮಿಶ್ರಿತ ಇಂಗ್ಲಿಷ್ ಮಾತನಾಡುವುದು ಹೊಸ ಫ್ಯಾಶನ್ ಆಗಿದೆ. ನಮ್ಮ ಭಾಷೆಯ ಕುರಿತ ನಮ್ಮ ಜನರ ಅಸಡ್ಡೆ ಅವರ ಮುಂದಿನ ತಲೆಮಾರಿನ ಮಕ್ಕಳು ಕನ್ನಡವೆಂದರೆ ಮೂಗು ಮುರಿಯುವಂತೆ ಆಗಿದೆ. ಪುಣ್ಯಕ್ಕೆ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕೆಂಬ ನಿಯಮವಿದ್ದು ಕನಿಷ್ಠತಮ ಕನ್ನಡದ ಅ ಆ ಇ ಈ ಯನ್ನು ಮಕ್ಕಳು ಕಲಿಯುವ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರೇ ಕರ್ನಾಟಕವಲ್ಲ ನಿಜ…. ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಕನ್ನಡ ಇದ್ದು ಕನ್ನಡದ ನೆಲ ಜಲವನ್ನು ಬಳಸುವ, ಕನ್ನಡದ ಗಾಳಿಯನ್ನು ಉಸಿರಾಡುವ ಜನರು ಕರ್ನಾಟಕದ ರಾಜಧಾನಿಯಲ್ಲಿ ಕನ್ನಡದ ಕಂಪನ್ನು ಸೂಸುವಲ್ಲಿ ಎಡವಲು ಕಾರಣ ನಮ್ಮ ಶಿಕ್ಷಣ ಪದ್ಧತಿ ಮತ್ತು ಎಲ್ಲದಕ್ಕೂ ಪಾಶ್ಚಿಮಾತ್ಯರನ್ನು ಅನುಕರಿಸುವ ಮತ್ತು ವೈಭವೀಕರಿಸುವ ನಮ್ಮ ಜನರ ಮೌಢ್ಯ ಎಂದರೆ ತಪ್ಪೇನಿಲ್ಲ

1826ರಲ್ಲಿ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಅತ್ಯಂತ ಹೆಚ್ಚಾಗಿದ್ದು ಸುಮಾರು 26 ಮರಾಠಿ ಶಾಲೆಗಳು ಇದ್ದು ಕೇವಲ ಐದು ಕನ್ನಡ ಶಾಲೆಗಳು ಇದ್ದವು. ಮರಾಠಿ ಮಾತನಾಡುವವರನ್ನು ಅರಸರೆಂದು ಉರ್ದು ಮಾತನಾಡುವರನ್ನು ಸರಸಿಗರೆಂದು ಕನ್ನಡ ಮಾತನಾಡುವ ಜನರನ್ನು ಕೊರಸರೆಂದು ಕರೆಯುವಂತಹ ಪರಿಸ್ಥಿತಿ ನಮ್ಮದಾಗಿತ್ತು. ಕರ್ನಾಟಕದಲ್ಲಿ ಕನ್ನಡದ ಅಸ್ತಿತ್ವವೇ ಇಲ್ಲದಂತಾಗುವ ಪರಿಸ್ಥಿತಿ ಒದಗಿದಾಗ ಎಚ್ಚೆತ್ತುಕೊಂಡ ಮೈಸೂರು ಸಂಸ್ಥಾನದ ಒಡೆಯರ್ ರಾಜ ಮನೆತನದವರು ಅಂದಿನ ಎಲ್ಲಾ ಕನ್ನಡದ ಸಾಹಿತಿಗಳನ್ನು ಮತ್ತಿತರ ದಿಗ್ಗಜರೊಡಗೂಡಿ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು.

ಮುಂದೆ ಕರ್ನಾಟಕ ಏಕೀಕರಣವನ್ನು ಪುಷ್ಠಿಕರಿಸಲು ಒಟ್ಟು ಎಂಟು ಆಯೋಗಗಳು ರಚನೆಯಾಗಿದ್ದವು, ಮೋತಿಲಾಲ್ ನೆಹರು ಆಯೋಗ ಎವಿಪಿ ಆಯೋಗ ಧರ ಆಯೋಗ ಮುಜರ ಆಯೋಗ ಕೆ ಎಮ್ ಪಣಿಕರ್ ಆಯೋಗ ಮಹಾಜನ ಆಯೋಗಗಳು ರಚನೆಯಾಗಿ ಕಾರ್ಯನಿರ್ವಹಿಸಿದರು ಯಾವುದೇ ಆಯೋಗದಿಂದ ರಾಜ್ಯಕ್ಕೆ ಉಪಯೋಗ ಆಗಲಿಲ್ಲ. ಆದರೂ 1956 ನವಂಬರ್ ಒಂದರಂದು ರಲ್ಲಿ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಆರಂಭಿಸಿದರು.

ಉತ್ತರ ಕರ್ನಾಟಕದ ಹಿರಿಯ ನಾಯಕರೊಬ್ಬರು ಕರ್ನಾಟಕ ಏಕೀಕರಣ ಸಮಿತಿಯ ಅಗ್ರ ಹೋರಾಟಗಾರರಾಗಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸುಮಾರು 21 ದಿನಗಳ ಮೌನ ವ್ರತ ಮತ್ತು 7 ದಿನಗಳ ಕಾಲ ಉಪವಾಸ ಆಚರಣೆ ಕೈಗೊಂಡು ‘ಕನ್ನಡಿಗರೆಲ್ಲರೂ ಒಂದಾಗಬೇಕು, ಕರ್ನಾಟಕ ಏಕೀಕರಣ ಹೋರಾಟಕ್ಕೆ ಪ್ರಾತಿನಿಧಿಕ ಶಕ್ತಿಯ ರೂಪದಲ್ಲಿ ತಾಯಿ ಭುವನೇಶ್ವರಿ ಮಾತೆಯ ಚಿತ್ರವು ಹೋರಾಡುವ ಎಲ್ಲರಿಗೂ ಚೈತನ್ಯ ಶಕ್ತಿಯನ್ನು ತುಂಬಬೇಕು’ ಎಂಬ ಆಶಯದೊಂದಿಗೆ ಸಮಗ್ರ ಕರ್ನಾಟಕದ ಕಲ್ಪನೆಯನ್ನು ಹೊತ್ತ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ರಚಿಸಲು ಪ್ರೇರೇಪಣೆ ನೀಡಿದ ಮಹನೀಯರು. ಅವರೇ ಅಂದಾನಪ್ಪ ದೊಡ್ಡಮೇಟಿ.

ಕರ್ನಾಟಕದ ಏಕೀಕರಣಕ್ಕೆ ಮೊಟ್ಟ ಮೊದಲು ಆಶಯವನ್ನು ವ್ಯಕ್ತಪಡಿಸಿದವರು ಕನ್ನಡದ ಕುಲ ಪುರೋಹಿತರೆಂದೆ ಹೆಸರಾದ ಆಲೂರು ವೆಂಕಟರಾಯರು. ಅವರೊಂದಿಗೆ ಅದರಗುಂಚಿ ಶಂಕರಗೌಡರು, ಅಂದಾನಪ್ಪ ದೊಡ್ಡಮೇಟಿ, ಹಳ್ಳಿಕೇರಿ ಗುದ್ಲಪ್ಪ, ಸರ್ ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ರಂಗರಾಜು ದಿವಾಕರ, ಶ್ರೀನಿವಾಸ್ ರಾವ್ ಕೌಜಲಗಿ, ಕೆಂಗಲ್ ಹನುಮಂತಯ್ಯ, ಶ್ರೀನಿವಾಸ್ ರಾವ್ ಮಂಗಳವಾಡೇ, ಎಸ್ ನಿಜಲಿಂಗಪ್ಪ, ಟಿ. ಮರಿಯಪ್ಪ, ಸಾಹುಕಾರ್ ಚೆನ್ನಯ್ಯ, ಹನುಮಂತಯ್ಯ, ಬಿ ವಿ ಕಕ್ಕಿಲಾಯ, ಅನ್ನದಾನಯ್ಯ ಪುರಾಣಿಕಮಠ, ಬಿ.ಡಿ. ಜತ್ತಿ ರಂತಹ ಏಕೀಕರಣದ ಅಗ್ರ ಹೋರಾಟಗಾರರು ಮತ್ತು
ಕುವೆಂಪು, ಬೇಂದ್ರೆ, ಗೋಕಾಕರು, ಬೆಟಗೇರಿ ಕೃಷ್ಣಶರ್ಮ, ಗೋವಿಂದ ಪೈ, ಶಿವರಾಮ ಕಾರಂತರು, ಕಯ್ಶಾರ
ಕಿಂಇ ಣ್ಣ ರೈ, ಅ.ನ. ಕೃಷ್ಣರಾಯ ರಂತಹ ಏಕೀಕರಣ ಹೋರಾಟದ ಸಾಹಿತಿಗಳು .ನಮ್ಮ ನಾಡು ನುಡಿಗಾಗಿ ಕರ್ನಾಟಕದ ಏಕೀಕರಣಕ್ಕಾಗಿ ಮಂಚೂಣಿಯಲ್ಲಿದ್ದರು.

ಅಂತಿಮವಾಗಿ ಇವರೆಲ್ಲರ ಹೋರಾಟದ ಫಲವಾಗಿ 1973ರ ನವಂಬರ್ ಬಂದರಂದು ಹಂಪಿಯ ವಿರೂಪಾಕ್ಷ ಸ್ವಾಮಿಯ ದೇವಾಲಯದಲ್ಲಿರುವ ತಾಯಿ ಭುವನೇಶ್ವರಿಯ ಮೂರ್ತಿಗೆ ಪೂಜೆ ಸಲ್ಲಿಸಿ, ಜಕ್ಕಲಿಯ ಅಂದನಪ್ಪ ದೊಡ್ಡಮೇಟಿಯವರು ಚಿತ್ರ ಕಲಾವಿದ ಸಿಎನ್ ಪಾಟೀಲರಿಗೆ ಹೇಳಿ ಬರೆಯಿಸಿದ ತಾಯಿ ಭುವನೇಶ್ವರಿಯ ತೈಲ ವರ್ಣ ಚಿತ್ರವನ್ನು ಪೂಜಿಸಿ ಕರ್ನಾಟಕ ಎಂದು ಮೈಸೂರು ರಾಜ್ಯಕ್ಕೆ ಮರುನಾಮಕರಣ ಮಾಡಿದರು.
ಹೀಗೆ ನಾಮಕರಣಗೊಂಡ ಕರ್ನಾಟಕ ರಾಜ್ಯಕ್ಕೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. ಹಸಿರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧೇಯ ವಾಕ್ಯದೊಂದಿಗೆ ಕರ್ನಾಟಕದಾದ್ಯಂತ 50ನೇ ವರ್ಷಾಚರಣೆಯ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರವು ಹಾಕಿಕೊಂಡಿದ್ದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಕನ್ನಡ ಪರ ಸಂಘಟನೆಗಳು ಸರ್ಕಾರದ ಜೊತೆ ಕೈಜೋಡಿಸಿದ್ದು ಮನೆ ಮನೆಯಲ್ಲೂ ಕನ್ನಡದ ಸವಿ ಹೆಚ್ಚಾಗಲಿ, ಪ್ರತಿ ಮನೆಯಲ್ಲಿಯೂ ಕನ್ನಡ ಮಾತನಾಡುವವರು ಇರಲಿ, ಕನ್ನಡ ನಮ್ಮ ಉಸಿರಿನ ಭಾಷೆಯಾಗಲಿ, ಕನ್ನಡ ನಮ್ಮ ದುಡಿಮೆಯ ಭಾಷೆಯಾಗಲಿ, ಕನ್ನಡ ನಮ್ಮ ಕೆಚ್ಚೆದೆಯ ಆಳ್ತನದ ಭಾಷೆಯಾಗಲಿ, ಕನ್ನಡ ನಮ್ಮ ಸ್ವಾಭಿಮಾನದ ಪ್ರತೀಕವಾಗಲಿ ಕನ್ನಡ ನಮ್ಮ ಅನ್ನದ ಭಾಷೆಯಾಗಲಿ…. ಬಾರಿಸು ಕನ್ನಡ ಡಿಂಡಿಮವ ಎಂಬ ಘೋಷವಾಕ್ಯ ಅನುರಣಿಸಲಿ ಎಂದು ಆಶಿಸುವ ಮತ್ತು ಹಾಗೆಯೇ ಅದರ ಅನುಷ್ಠಾನಕ್ಕೆ ಪ್ರಯತ್ನಿಸುವ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಶುಭಾಶಯಗಳು.

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

Don`t copy text!