ನಾ ಕಂಡ ಸರಳತೆಯ ಸಾಕಾರ ಮೂರ್ತಿ ಭೂದಾನಿ ಶ್ರೀ ಸಿದ್ದಪ್ಪ ಮಾನ್ವಿ

ನಾ ಕಂಡ ಸರಳತೆಯ ಸಾಕಾರ ಮೂರ್ತಿ ಭೂದಾನಿ ಶ್ರೀ ಸಿದ್ದಪ್ಪ ಮಾನ್ವಿ

 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೌಡೂರು ಗ್ರಾಮದ ಅಕ್ಷರ ಸಂತ ಭೂ ದಾನಿ ಸಿದ್ದಪ್ಪ ಮಾನ್ವಿ ಯವರು ಓದು ಬರಹ ಬಾರದ ಅನಕ್ಷರಸ್ಥರಾದರು ನಯ , ವಿನಯ , ಸದಾ ಹಸನ್ಮುಖಿ ಗುಣದವರು.

ತಮ್ಮ ಗ್ರಾಮದ ಮಕ್ಕಳ ಉನ್ನತ ಓದಿನ ವಿದ್ಯಾಭ್ಯಾಸಕ್ಕೆ ಫ್ರೌಢ ಶಾಲೆ ಮಂಜೂರಾದಾಗ ಅಂದಾಜು 3 ಎಕರೆಯಷ್ಟು ತಮ್ಮ ಸ್ವಂತ ಜಮೀನನ್ನು ಫ್ರೌಢ ಶಾಲೆ ನಿರ್ಮಾಣಕ್ಕಾಗಿ ಉಚಿತವಾಗಿ ದಾನ ನೀಡಿದ ಸದ್ಗುಣ ಸಂಪನ್ನ ಕರುಣಾಮಯಿ.

ಸಿದ್ದಪ್ಪನವರಿಗೆ ಅಂದಾಜು 75 ರ ಆಸು ಪಾಸು ವಯಸ್ಸು . ಪತ್ನಿ ಕೂಡಾ ಮುಗ್ದ ಸ್ವಭಾವದ ಗುಣದವರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಜಮೀನನ್ನು ಫ್ರೌಢ ಶಾಲೆ ನಿರ್ಮಿಸಲು 1998 ರಲ್ಲೆ ದಾನವಾಗಿ ನೀಡಿದ ಮಹಾದಾನಿ ಸಿದ್ದಪ್ಪನವರು.

ಸಿದ್ದಪ್ಪ ನವರಿಗೆ ಎಂಟು ಜನ ಮಕ್ಕಳಿದ್ದರು ಸಹ ಗ್ರಾಮದ ಒಳಿತಿಗಾಗಿ ತಮ್ಮ ಜಮೀನನ್ನು ನಿಡಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ಬೇಳಕಾದವರು.

ಕೇವಲ ಪ್ರಾಥಮಿಕ ಶಿಕ್ಷಣಕ್ಕೆ ಸಿಮಿತವಾಗಿದ್ದ ನಮ್ಮ ಗ್ರಾಮಕ್ಕೆ ಮಾನ್ಯ ಶ್ರೀ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಶಾಸಕರಾಗಿದ್ದ ಸಮಯದಲ್ಲಿ ಅಂದರೆ 1998 ರಲ್ಲಿ ಸರ್ಕಾರದಿಂದ ನಮ್ಮ ಗ್ರಾಮಕ್ಕೆ ಫ್ರೌಢ ಶಾಲೆ ಮಂಜೂರು ಮಾಡಿಸಿದರು. ಆದರೆ ಪ್ರೌಢಶಾಲೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಇರಲಿಲ್ಲ. ಆಗ ಶಾಲೆಯ ನಿರ್ಮಾಣಕ್ಕೆ ಯಾವುದೇ ಕರಾರು, ತಕರಾರು ಇಲ್ಲದೆ ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡುವಂತೆ ಹೇಳಿದರು. ಇದಕ್ಕೆ ತಮ್ಮ ಮಕ್ಕಳ ಕೂಡಾ ಯಾವುದೇ ಅಡೆತಡೆ ಇಲ್ಲದೆ ಒಪ್ಪಿಗೆ ಕೊಟ್ಟರು.ಅದು ಅವರ ಕುಟುಂಬದ ದೊಡ್ಡ ಗುಣ.

ಆಗಿನ ಕಾಲದಲ್ಲಿ ಫ್ರೌಢ ಶಿಕ್ಷಣಕ್ಕೆ ಇವರು ಭೂಮಿ ನೀಡದೆ ಹೋಗಿದ್ದರೆ ಬಡ ಮತ್ತು ಮಧ್ಯಮ ವರ್ಗದ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾಭ್ಯಾಸವನ್ನು ಮೋಟಕುಗೊಳಿಸಬೇಕಾದ ಪರಿಸ್ಥಿತಿ ಬರುತ್ತಿತ್ತೆನು. ಪ್ರೌಢ ಶಿಕ್ಷಣ ಪಡೆಯಲು ಆಗ ನೆರೆಯ ಗುರುಗುಂಟಾ ಇಲ್ಲವೇ ಹಟ್ಟಿಚಿನ್ನದ ಗಣಿ ಪಟ್ಟಣಕ್ಕೆ ಹೋಗಿ ಬರಬೇಕಾಗಿತ್ತು. ಅಲ್ಲದೇ ವಾಹನಗಳ ಸೌಕರ್ಯಗಳು ಅಂದಿನ ದಿನ ಮಾನಗಳಲ್ಲಿ ತುಂಬಾ ವಿರಳ. ನಮ್ಮೂರ ಪ್ರೌಢಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ಇಂದು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡು ಜೀವನ ರೂಪಿಸಿಕೊಂಡಿದ್ದಾರೆ.

ನನ್ನಂತ ಸಾವಿರಾರು ವಿದ್ಯಾರ್ಥಿಗಳು ಫ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ ಅಂದರೆ ಅದಕ್ಕೆ ಮೂಲ ಕಾರಣವೇ ಸಿದ್ದಪ್ಪ ಮಾನ್ವಿಯವರು.

ಎಲೆ ಮರೆಯ ಕಾಯಿಯಂತೆ ಸಮಾಜಕ್ಕೆ ತಮ್ಮದೆ ಆದ ಮಹತ್ತರ ಕಾರ್ಯ ಮಾಡಿದ ಹಲವರಂತೆ ಶ್ರಮ ಜೀವಿಗಳಾದ ಸಿದ್ದಪ್ಪ ಮಾನ್ವಿ ಯವರು ಕೂಡಾ ಇಡಿ ರಾಜ್ಯ, ದೇಶಕ್ಕೆ ಮಾದರಿಯಾಗುವಂತಹ ಮೇರು ವ್ಯಕ್ತಿತ್ವ ವುಳ್ಳವರ ಕಡೆಗೆ ಸರ್ಕಾರವು ಕೂಡಾ ಗಮನಹರಿಸಲಿ .ಇವರು ಈ ನಾಡಿಗೆ ಪರಿಚಿತರಾಗಲಿ ಇತರರಿಗೂ ಇವರ ಬದುಕು ಪ್ರೆರಣ ದಾಯಕವಾಗಲಿ ಎಂಬುದು ನನ್ನ ಆಶಯ.

ವೀರೇಶ ಅಂಗಡಿ ಗೌಡೂರು ಹವ್ಯಾಸಿ ಬರಹಗಾರರು

Don`t copy text!