ಗ್ರಾ.ಪಂ, ಆಡಳಿತ ಮಂಡಳಿ, ಅಧಿಕಾರಿಗಳ ನಿರ್ಲಕ್ಷ
ಸಂತೆಕೆಲ್ಲೂರಲ್ಲಿ ಮೂರು ಶುದ್ದ ಕುಡಿವ ನೀರಿನ ಘಟಕಗಳು ಸ್ಥಗೀತ : ಸಾರ್ವಜನಿಕರ ಪರದಾಟ
e- ಸುದ್ದಿ ಮಸ್ಕಿ
ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿವ ನೀರು ಒದಗಿಸಲು ಅಳವಡಿಸಲಾಗಿದ್ದ ಮೂರು ಶುದ್ದ ಕುಡಿವ ನೀರಿನ ಘಟಕಗಳು ಸ್ಥಗಿತವಾಗಿದ್ದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಇದಕ್ಕೆಲ್ಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಿರ್ಲಕ್ಷ ಮತ್ತು ಸಿಬ್ಬಂದಿಗಳ ನಿರ್ವಹಣೆ ಕೊರತೆಯಿಂದ ನಿಸ್ತೇಜವಾಗಿದ್ದು ಸಾರ್ವಜನಿಕರು ಪರದಾಡುವ ಸ್ಥಿತಿ ಬಂದೊದಗಿದೆ.
ಜಲಮೂಲದ ಸಂಪರ್ಕವಿಲ್ಲ
ಗ್ರಾಮದಲ್ಲಿ ಶುದ್ದ ಕುಡಿವ ನೀರು ಒದಗಿಸಲು ಲಿಂಗಸಗೂರಿನ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂರು ಶುದ್ದ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ಗ್ರಾಮದ ಪಿಂಜಾರ ಮತ್ತು ಹರಿಜನ ವಾರ್ಡ ಜನತೆಗೆ ಶುದ್ದ ಕುಡಿವ ನೀರು ಪೂರೈಸಲು ೮ ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿದ ಘಟಕ ಆರಂಭ ಮಾಡಿದಾಗಿನಿಂದಲೂ ಜಲ ಮೂಲದ ಸಮಸ್ಯೆ ಎದುರಿಸುತ್ತಿದೆ.
ಗುತ್ತಿಗೆ ಪಡೆದ ಗುತ್ತಿಗೆದಾರ ಘಟಕಕ್ಕೆ ಪ್ರತ್ಯೇಕ ಬೋರ್‌ವೆಲ್ ಕೊರೆಸಿ ಜಲಮೂಲ ಗುರುತಿಸದೆ ಘಟಕ ಸ್ಥಾಪಿಸಿ ತಾತ್ಕಲಿಕವಾಗಿ ನಲ್ಲಿ ನೀರು ಪೂರೈಸಿ ನಾಪತ್ತೆಯಾಗಿದ್ದರಿಂದ ಜಲಮೂಲವಿಲ್ಲದೆ ಘಟಕ ಇದ್ದು ಇಲ್ಲದಂತಾಗಿ ನಿಷ್ಪ್ರಯೋಜಕವಾಗಿದೆ.
ಬಂದಾದ ಮೂರು ಘಟಕ
ಗ್ರಾಮದ ಸಂತೆ ಬಜಾರನಲ್ಲಿ ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿAದ ಪ್ರತ್ಯೇಕವಾಗಿ ೮ ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿದ ಇನ್ನೊಂದು ಘಟಕಕ್ಕೂ ಕೂಡಾ ಪ್ರತ್ಯೇಕ ಜಲಮೂಲ ವ್ಯವಸ್ಥೆ ಮಾಡದೆ ಈ ಘಟಕಕ್ಕೂ ತಾತ್ಕಲಿಕವಾಗಿ ನಲ್ಲಿ ನೀರಿನ ಪೈಪಗೆ ಜೋಡಣೆ ಮಾಡಲಾಗಿತ್ತು ಎರಡು ಮೂರು ತಿಂಗಳು ನೀರು ಪೂರೈಸಿದ ಘಟಕದಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಇತ್ತಿಚೆಗೆ ಸ್ಥಗೀತಗೊಂಡಿದೆ. ಕಳೆದ ಐದು ವರ್ಷಗಳ ಹಿಂದೆ ಗ್ರಾಮದ ಘನಮಠೇಶ್ವರ ಮಠದ ಬಳಿ ನಿರ್ಮಿಸಿದ ಶುದ್ದ ಕುಡಿವ ನೀರಿನ ಘಟಕ ಐದು ವರ್ಷಗಳಿಂದ ಕಾಲ ಶುದ್ದ ನೀರು ಪೂರೈಕೆಯಾಗುತ್ತಿತ್ತು. ಏಕಾಏಕಿ ಘಟಕದ ಶುದ್ದಿಕರಣ ಪಂಪಗಳು ದುರಸ್ತಿಗೆ ಬಂದಾಗ ಗ್ರಾಮ ಪಂಚಾಯಿತಿ ಅನುದಾನದ ಕೊರತೆ ನೆಪವೊಡ್ಡಿ ಕೈಚೆಲ್ಲಿದ್ದರಿಂದ ಗ್ರಾಮದ ಮೂರು ಘಟಕಗಳು ಸಂಪೂರ್ಣ ಬಂದಾಗಿದ್ದು ಗ್ರಾಮದಲ್ಲಿ ಬಹುತೇಕ ಕುಟುಂಬಗಳು ರೈತಾಪಿ ಮತ್ತು ಕೃಷಿ ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನತೆ ಶುದ್ದ ಕುಡಿವ ನೀರಿಲ್ಲದೆ ಹಿಡಿಶಾಪ ಹಾಕುತ್ತಿದ್ದಾರೆ.
ಕೋಟ್ಯಾಂತರ ರೂ ಖರ್ಚು:
ದಶಕದ ಹಿಂದೆ ಕೋಟ್ಯಾಂತರ ರೂ ಖರ್ಚು ಮಾಡಿ ಸಂತೆಕೆಲ್ಲೂರು ಸೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಸ್ಲಿಕರ‍್ಲಕುಂಟಿ, ಬೇಡರ ಕರ‍್ಲಕುಂಟಿ, ಹಾಗೂ ಬಸಾಪೂರ ಗ್ರಾಮಗಳಿಗೆ ಜಲ ನಿರ್ಮಲ ಯೋಜನೆಯಡಿ ಶುದ್ದ ಕುಡಿವ ನೀರು ಒದಗಿಸಲು ಪಕ್ಕದ ೫ ಕಿ.ಮೀ ಅಂತರದಲ್ಲಿರುವ ಮಸ್ಕಿ ನಾಲಾ ಯೋಜನೆಯ ಆಣೆಕಟ್ಟೆಯಿಂದ ನೀರು ತರಲು ಕೋಟ್ಯಾಂತರ ಹಣ ವಿನಿಯೋಗಿಸಿ ಜಾಕವೆಲ್ ಹಾಗೂ ಪೈಪ್‌ಲೈನ್ ಮತ್ತು ಮೇಲ್ಮಟ್ಟದ ಟ್ಯಾಂಕ ಹಾಗೂ ಜಲ ಶುದ್ದಿಕರಣ ಘಟಕ ನಿರ್ಮಿಸಲಾಗಿತ್ತು. ಈ ಯೋಜನೆಯಿಂದ ಒಂದು ಹನಿ ನೀರು ಪೂರೈಕೆ ಮಾಡದೆ ಯೋಜನೆ ಹಳ್ಳ ಹಿಡಿದು ಯೋಜನೆಗೆ ಖರ್ಚು ಮಾಡಿದ ಕೊಟ್ಯಾಂತರ ರೂ ಹೊಳೆಯಲ್ಲಿ ಹೋಮ ಮಾಡಿದಂತಾಗಿ ಇಂದಿಗೂ ಶುದ್ದ ಹಾಗೂ ಸಮರ್ಪಕ ಕುಡಿವ ನೀರು ಬಾರದೆ ಬೋರ್‌ವೆಲ್‌ನಿಂದ ಪೂರೈಸುವ ನಲ್ಲಿ ಮತ್ತು ತೆರೆದ ಬಾವಿ ನೀರೇ ಗತಿಯಾಗಿದೆ. ಕಲುಷಿತ ಅರ್ಸೆನಿಕ್ ಪ್ಲೂರೈಡ್ ನೀರು ಸೇವಿಸುವ ಜನತೆ ರೋಗ ರುಜಿನಗಳಿಂದ ನರಳಿ ಸಂಕಷ್ಟ ಎದುರಿಸುವಂತಾಗಿದೆ.
ಸಾರ್ವಜನಿಕರ ಸಂಕಷ್ಟ
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರುವ ಘಟಕಗಳು ಸಂಪೂರ್ಣ ಬಂದಾಗಿದ್ದರಿAದ ಗ್ರಾಮದ ನೂರಾರು ಜನರು ಪಕ್ಕದ ಮಿಟ್ಟಿಕೆಲ್ಲೂರ- ಕುಣಿಕೆಲ್ಲೂರ ಮತ್ತು ಮುಸ್ಲಿಕರ‍್ಲಕುಂಟಿ- ಬೇಡರ್‌ಕರ‍್ಲಕುಂಟಿ ಗ್ರಾಮಗಳಿಗೆ ತೆರಳಿ ದಿನನಿತ್ಯ ಕುಡಿವ ನೀರು ತರುವಂತಾಗಿದೆ. ವಾಹನ ಸೌಕರ್ಯವಿಲ್ಲದ ಜನತೆ ಅನಿವಾರ್ಯವಾಗಿ ಗ್ರಾಮದಲ್ಲಿ ಪೂರೈಕೆಯಾಗಿವ ಅರ್ಸೆನಿಕ ಮತ್ತು ಪ್ಲೂರೈಡ್ ಮಿಶ್ರೀತ ನಳದ ನಲ್ಲಿ ಮತ್ತು ತೆರೆದಬಾವಿ ಸೇವಿಸುವಂತಾಗಿದೆ. ಈಗಾಗಲೇ ರಾಜ್ಯದಲ್ಲಿ ಡೆಂಘೆ ಮತ್ತು ಪ್ಲೂ ಜ್ವರ ಪ್ರಕರಣಗಳು ಹೆಚ್ಚಳವಾಗುತ್ತಿದ್ದು ಶುದ್ದ ಕುಡಿವ ನೀರು ಬಳಸಲು ಸ್ವಚ್ಚತೆ ಕಾಪಾಡಲು ಸರ್ಕಾರ ಸೂಚಿಸಿದ್ದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಿದೆ. ಆದರೆ ಗ್ರಾಮದಲ್ಲಿನ ಮೂರು ಶುದ್ದ ಕುಡಿವ ನೀರಿನ ಘಟಕಗಳು ಬಂದಾಗಿದ್ದರೂ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಕಾರ್ಯದರ್ಶಿ ತಮಗೇನು ಸಂಬಂಧವಿಲ್ಲದಂತಹ ವರ್ತನೆಯಿಂದ ಜನತೆ ಬೇಸತ್ತಿದ್ದಾರೆ. ಮಸ್ಕಿ ತಾ.ಪಂ, ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ, ಸಾರ್ವಜನಿಕರು ದೂರವಾಣಿ ಕರೆಗೂ ಗ್ರಾ.ಪಂ, ಅಧಿಕಾರಿಗಳು ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲಂಬುದು ಸಾರ್ವಜನಿಕರ ಆರೋಪವಾಗಿದೆ.
—————————————–
ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮದಲ್ಲಿ ಇತ್ತಿಚೆಗೆ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸಿದ ಎರಡು ಶುದ್ದ ಕುಡಿವ ನೀರಿನ ಘಟಕಗಳಿಗೆ ಗುತ್ತಿಗೆ ಪಡೆದ ಗುತ್ತಿಗೆದಾರ ಕಂಪನಿಯವರು ಎರಡು ಘಟಕಗಳಿಗೆ ಪ್ರತ್ಯೇಕ ಬೋರ್‌ವೆಲ್ ಕೊರೆದು ಜಲಮೂಲ ಕಲ್ಪಿಸದೆ ಹೋಗಿದ್ದಾರೆ. ಮತ್ತು ನಿರ್ವಹಣೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಜನರಿಗೆ ತೊಂದರೆಯಾಗಬಾರದೆAದು ಘಟಕಕ್ಕೆ ನಲ್ಲಿ ಸಂಪರ್ಕ ಕಲ್ಪಿಸಲಾಗಿತ್ತು. ಇತ್ತಿಚೆಗೆ ತಾಂತ್ರಿಕ ತೊಂದರೆ ಉಂಟಾಗಿದೆ. ನಲ್ಲಿ ಸಂಪರ್ಕ ಕಲ್ಪಿಸಿದ್ದರಿಂದ ಗ್ರಾಮದ ನಲ್ಲಿಗಳಿಗೆ ನೀರು ಪೂರೈಕೆಯಾಗದೆ ತೊಂದರೆಯಾಗುತ್ತಿದೆ ಘಟಕಗಳಿಗೆ ಪ್ರತ್ಯೇಕ ಜಲಮೂಲದ ವ್ಯವಸ್ಥೆ ಕಲ್ಪಿಸಬೇಕಿದೆ.
– ಶೇರ್ ಪಾಶಾ ಗ್ರಾ.ಪಂ, ಸದಸ್ಯರು ಸಂತೆಕೆಲ್ಲೂರು.
–ನಾಗರಾಜ ಪಿಡಿಒ ಸಂತೆಕೆಲ್ಲೂರು