ಕಾಯಕನಿಷ್ಠ ದಂಪತಿಗಳು… ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ
ಈ ದಂಪತಿಗಳು ಪರಮ ಕಾಯಕನಿಷ್ಠ ದಾಸೋಹ ಜೀವಿಗಳು. ಕಾಯಕದಲ್ಲಿಯೇ ತಮ್ಮ ತನು ಮನಗಳನ್ನು ತೊಡಗಿಸಿಕೊಂಡವರು. ಇವರ ಕಾಯಕ ನಿಷ್ಠೆಯನ್ನು ಜಗಕ್ಕೆ ತೋರಿಸಲು ಒಮ್ಮೆ ಸಾಕ್ಷಾತ ಶಿವನು ಪತ್ನಿ ಸಮೇತನಾಗಿ ಭೂಲೋಕಕ್ಕೆ ಬಂದನು. ಅದು ಅತ್ಯಂತ ಚಳಿಗಾಲದ ದಿನಗಳು. ವಯಸ್ಸಾದ ಭಿಕ್ಷುಗಳ ವೇಷದಲ್ಲಿ ಬಂದ ಶಿವ ಪಾರ್ವತಿಯರು ಈ ದಂಪತಿಗಳ ಮನೆ ಮುಂದೆ ಬಂದು ನಿಂತರು. ಕಡುಚಳಿಗೆ ನಡುಗುತ್ತಿದ್ದ ವೃದ್ಧ ದಂಪತಿಗಳನ್ನು ನೋಡಿದ ಈ ದಂಪತಿಗಳು ಅವರಿಗೆ ಆರೋಗಣೆಗೆ ತಯಾರು ಮಾಡಿ ಉಣಬಡಿಸಿದರು. ಉಂಡು ಸಂತುಷ್ಟರಾದ ವೃದ್ಧ ದಂಪತಿಗಳು ಇನ್ನೇನು ತೆರಳಬೇಕೆನ್ನುವಾಗ ಹಾಕಿಕೊಳ್ಳಲು ಅವರುಟ್ಟ ಬಟ್ಟೆಯನ್ನೇ ದಾನವಾಗಿ ಕೇಳಿದರು. ಅವರ ಬಳಿ ಇದ್ದದ್ದು ಒಂದು ಜೊತೆ ಬಟ್ಟೆಗಳು ಮಾತ್ರ. ಆದರೂ ಅಳುಕದೆ ಒಂದು ತುಂಡು ವಸ್ತ್ರವನ್ನು ತಮ್ಮಮೈಗೆ ಸುತ್ತಿಕೊಂಡು ತಾವುಟ್ಟ ಬಟ್ಟೆಗಳನ್ನು ಕಳಚಿ ವೃದ್ಧ ದಂಪತಿಗಳಿಗೆ ಕೊಟ್ಟು ಕಳುಹಿಸಿದರು ಈ ಶರಣ ದಂಪತಿಗಳು…. ಅವರೇ ಕಾಯಕನಿಷ್ಠ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ.
ಮೂಲತಃ ರಾಯಚೂರು ಜಿಲ್ಲೆಯ ಅಮರೇಶ್ವರದಲ್ಲಿ ವಾಸವಾಗಿದ್ದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ದಂಪತಿಗಳು ದಲಿತ ವರ್ಗಕ್ಕೆ ಸೇರಿದವರು. ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ವಲಸೆ ಹೋದ ಈ ದಂಪತಿಗಳು ಅಲ್ಲಿ ಮಹಾ ಮನೆಯ ಉಗ್ರಾಣದ ಹೊರ ಭಾಗದಲ್ಲಿ ಹಸನು ಮಾಡುವಾಗ, ಚಪ್ಪರಿಸಿ ಸ್ವಚ್ಛ ಮಾಡುವಾಗ ಚೆಲ್ಲಿದ ಧಾನ್ಯಗಳನ್ನು ಆಯುವುದು ಈತನ ಕಾಯಕವಾಗಿತ್ತು. ಇದರ ಜೊತೆ ಜೊತೆಗೆ ಊರಿನ ಪ್ರತಿ ಮನೆಯ ಮುಂದೆ ಚೆಲ್ಲಲ್ಪಟ್ಟ ಅಕ್ಕಿಯನ್ನು ಪ್ರತಿದಿನವೂ ಅಂದಂದಿನ ಅವಶ್ಯಕತೆಗೆ ಬೇಕಾದಷ್ಟೇ ಆಯ್ದುಕೊಂಡು ಹೋಗುತ್ತಿದ್ದ ಮಾರಯ್ಯನವರು ಅಪರಿಗ್ರಹಕ್ಕೆ ಇನ್ನೊಂದು ನಿದರ್ಶನವಾಗಿದ್ದರು.
ಮಾರಯ್ಯನವರು ಮತ್ತು ಅವರ ಪತ್ನಿ ಲಕ್ಕಮ್ಮ ಬಸವಣ್ಣನವರ ಅನುಯಾಯಿಗಳಾಗಿದ್ದು ಮಹಾಮನೆಯ ಶರಣಗಣದ ಅನುಭಾವಿಗಳಲ್ಲಿ ಒಬ್ಬರಾಗಿದ್ದರು. ಅವರಿಬ್ಬರು ವಚನಗಳನ್ನು ರಚಿಸಿದ್ದು ಮಾರಯ್ಯನವರ ವಚನಗಳ ಅಂಕಿತ ಅಮರೇಶ್ವರ ಲಿಂಗ ಎಂದಾದರೆ ಲಕ್ಕಮ್ಮನ ವಚನಗಳ ಅಂಕಿತ ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಎಂದಾಗಿತ್ತು.
ಪ್ರತಿದಿನ ಮಾರಯ್ಯನವರ ಕಾಯಕವನ್ನು ನೋಡುತ್ತಿದ್ದ ಬಸವಣ್ಣನವರು,ತಮ್ಮ ಮನೆಯ ಮುಂದೆ ಮಾರಯ್ಯನವರು ಆಯ್ದುಕೊಳ್ಳಲು ಬರುವ ದಿನ ಮಾರಯ್ಯನವರಿಗೆ ಅನುಕೂಲವಾಗಲೆಂದು ಮನೆಯ ಅಂಗಳದಲ್ಲಿ ತುಸು ಹೆಚ್ಚೇ ಅಕ್ಕಿಯನ್ನು ಚಲ್ಲಿಸಿದರು. ಅಕ್ಕಿಯನ್ನು ಆಯಲು ಬಂದ ಮಾರಯ್ಯ ಚೆಲ್ಲಿದ್ದ ಹೆಚ್ಚು ಅಕ್ಕಿಯನ್ನು ಆಯ್ದುಕೊಂಡರು. ಮನೆಗೆ ತಂದು ಲಕ್ಕಮ್ಮನವರ ಕೈಯಲ್ಲಿ ಇಟ್ಟಾಗ ಲಕ್ಕಮ್ಮನವರು ಎಂದಿಗಿಂತ ತುಸು ಹೆಚ್ಚಾಗಿದ್ದ ಅಕ್ಕಿಯನ್ನು ನೋಡಿ ಇದೇನು ಇಷ್ಟೊಂದು ಅಕ್ಕಿ? ಎಂದು ಪ್ರಶ್ನಿಸಿದಳಲ್ಲದೇ ಉಳಿದ ಅಕ್ಕಿಯನ್ನು ಮಹಾಮನೆಗೆ ಮರಳಿಸಲು ಕೇಳಿಕೊಂಡಳು. ಅದಕ್ಕೆ ಉತ್ತರವಾಗಿ ಮಾರಯ್ಯ ಹಾಗೆ ಮರಳಿಸಲು ಹೋದರೆ ಬಸವಣ್ಣನವರು ತಪ್ಪು ತಿಳಿದುಕೊಳ್ಳುವುದಿಲ್ಲವೇ? ಇರಲಿ ಬಿಡು ಈಸಕ್ಕಿ ಏನು ಪಾಲು ಬೇಡೀತು ಎಂದನು.
ಅದಕ್ಕೆ ಉತ್ತರವಾಗಿ ಲಕ್ಕಮ್ಮನು
ಆಸೆ ಎಂಬುದು ಅರಸಂಗಲ್ಲದೆ ಶಿವ ಭಕ್ತರಿಗುಂಟೆ ಅಯ್ಶಾ? ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ
ಎಂದು ಹೇಳಿದಳು. ಜೊತೆಗೆ ಈ ರೀತಿ ಆಸೆ ಪಡುವುದರಿಂದ ಅರಿಷಡ್ಡ್ವರ್ಗಗಳಿಗೆ ನೀವು ದಾಸರಾಗುವಿರಿ ಎಂದು ಎಚ್ಚರಿಸಿದಳು. ಹಾಗಾದರೆ ನಾನು ಆಸೆ ಪಡುತ್ತಿದ್ದೇನೆಯೇ … ಅದು ಹೇಗೆಂದು ವಿವರಿಸು ಎಂದು ಮಾರಯ್ಯನವರು ಕೇಳಿದಾಗ ಲಕ್ಕಮ್ಮ ತಾಯಿ ಹೀಗೆ ಹೇಳುತ್ತಾಳೆ… ತುಸು ಹೆಚ್ಚು ಇರಲಿ ಎಂದು ನೀವು ಆಶಿಸುವುದು ಕಾಮ ವಾದರೆ, ಅದು ಸಿಗದೇ ಹೋದಾಗ ನಿಮಗೆ ಬರುವ ಸಿಟ್ಟು ಕ್ರೋಧ ಅನಿಸುತ್ತದೆ ಇನ್ನೂ ಹೆಚ್ಚು ಬೇಕೆಂಬ ಆಸೆ ಲೋಭ ಎನಿಸಿದರೆ ಹೀಗೆಯೇ ಹೆಚ್ಚು ಉಳಿಯಲಿ ಎಂಬುದು ಮೋಹ ಎನಿಸುತ್ತದೆ. ಹಾಗೆ ನಮ್ಮಲ್ಲಿ ಹೆಚ್ಚಿನ ವಸ್ತುಗಳ ಸಂಗ್ರಹವಾದಾಗ ನಮ್ಮಲ್ಲಿ ಸಹಜವಾಗಿಯೇ ಅಹಂ ಎಂಬ ಮದ ಬರುತ್ತದೆ. ನಮಗಿಂತ ತುಸು ಹೆಚ್ಚು ಬೇರೆಯವರ ಬಳಿ ಇದ್ದಾಗ ಸಹಜವಾಗಿಯೇ ಮಾತ್ಸರ್ಯ ಉಂಟಾಗುತ್ತದೆ. ಹೀಗೆ ಆಸೆ ಎಂಬ ರಕ್ತಬೀಜಾಸುರ ಸಂತತಿಯು ಅರಿಷಡ್ವರ್ಗಗಳ ಉದಯಕ್ಕೆ ಕಾರಣವಾಗುತ್ತದೆ ಎಂದು ಸಾದ್ವಿ ಲಕ್ಕಮ್ಮ ಹೇಳಿದಾಗ ಆಕೆ ತನ್ನ ಪತ್ನಿಯಂತೆ ತೋರದೆ ಅಜ್ಞಾನವನ್ನು ತೊಡೆದು ಹಾಕುವ ಗುರುವಾಗಿ ಕಂಡಳು ಮಾರಯ್ಯನವರಿಗೆ. ಆಕೆಯ ಜ್ಞಾನ ಮತ್ತು ವಿವೇಕದ ನುಡಿಗಳನ್ನು ಕಂಡು ಪರಮಾನಂದವಾಗಿ ಅಂತೆಯೇ ಮುಂದೇನು ಮಾಡಬೇಕು ಎಂದು ಪ್ರಶ್ನಿಸಿದ ಮಾರಯ್ಯನವರಿಗೆ ಲಕ್ಕಮ್ಮ ಅಕ್ಕಿಯನ್ನು ಮರಳಿಸಿ ಎಂದು ಹೇಳಿದಳಲ್ಲದೆ, ಆಸೆಪಟ್ಟುದಕ್ಕೆ ಪ್ರಾಯಶ್ಚಿತ್ತವಾಗಿ ಬಸವಾದಿ ಪ್ರಮಥರೆಲ್ಲರನ್ನು ದಾಸೋಹಕ್ಕೆ ಕರೆಯಬೇಕೆಂದು ಆಗ್ರಹಿಸಿದಳು. ನಾವು ಬಡವರು ಅವರೆಲ್ಲ ನಾವು ಕರೆದರೆ ಬರುವರೆ ಎಂಬ ಮಾರಯ್ಯನ ಮಾತಿಗೆ… ಶರಣರೆಲ್ಲರೂ ನಮಗೆ ಬಂಧುಗಳು
“ಅಂಜದಿರು ಎನ್ನಾಳ್ದ ,ಮನಶುದ್ದವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವ ಸದ್ಭಕ್ತ0ಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕ
ಎಂದು ಧೈರ್ಯ ಹೇಳಿದಳು. ಆಕೆಯ ಆಶಯದಂತೆ ಮಾರಯ್ಶನು ಎಲ್ಲಾ ಶರಣವನ್ನು ದಾಸೋಹಕ್ಕೆ ಆಮಂತ್ರಿಸಿದನು. ಅಂದು ಆಕೆ ಮಾಡಿದ ಅಡುಗೆಯನ್ನು ಸಮಸ್ತ ಶರಣರು ಹೊಟ್ಟೆ ತುಂಬ ಉಂಡರು. ಒಂದು ಲೆಕ್ಕದ ಪ್ರಕಾರ ಆಕೆ ಆ ದಿನ ಬೊಗಸೆ ಅಕ್ಕಿಯಲ್ಲಿ ಒಂದು ಲಕ್ಷ ತೊಂಬತ್ತಾರು ಸಾವಿರ ಗಣಗಳಿಗೆ ಉಣಬಡಿಸಿದಳು ಎಂದು ಹೇಳಲಾಗುತ್ತದೆ. ಭಕ್ತರ ಭಕ್ತಿಗೆ ಅವರ ಅಡುಗೆಯ ಮನೆ ಅಕ್ಷಯವಾಗದೇ ಇದ್ದೀತೆ??
ಅವರ ಮನೆಯ ಅಡುಗೆಯ ರುಚಿಯನ್ನು ಕಂಡು ಬಸವಣ್ಣನವರು
“ಮನೆ ನೋಡಾ ಬಡವರು ಮನ ನೋಡಾ ಸಂಪನ್ನರು
ಧನ ನೋಡಾ ಬಡವರು ಘನಮನ ಸಂಪನ್ನರು ಕೂಡಲಸಂಗನ ಶರಣರು ಕರುಳಿಲ್ಲದ ಕಲಿಗಳು
ಆರಿಗೆ ಉಪಮಿಸಬಹುದು”
ಎಂದು ಕೊಂಡಾಡಿದರು.
ಮತ್ತೊಮ್ಮೆ ಶರಣರೆಲ್ಲ ಅನುಭವ ಮಂಟಪದಲ್ಲಿ ಸೇರಿದಾಗ ಮಾರಯ್ಯನವರು ಕಾಯಕದ ಬಗ್ಗೆ ಶಾಸನವಾಗಬಲ್ಲಂತಹ ವಚನವೊಂದನ್ನು ಪ್ರಭುದೇವರ ಮುಂದಿರಿಸಿದರು
“ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು”.
ಕಾಯಕಕ್ಕೆ ಮಾರಯ್ಯನವರು ಪಟ್ಟ ಕಟ್ಟಿದ ರೀತಿಯನ್ನು ಕಂಡು ಅವರನ್ನು ಮತ್ತೆ ಮತ್ತೆ ಪ್ರಶ್ನಿಸಿ ಉತ್ತರವನ್ನು ಪಡೆದರು ಅಲ್ಲಮ ಪ್ರಭುದೇವರು.
ಕಾಯಕ ಕೇವಲ ಕಾಯಕವಾಗಿ ಉಳಿಯಬಾರದು ಮಾಟ ಮಾಟಕ್ಕೆ ನಿಲ್ಲಬಾರದು ಮಾಟದಿಂದಲೇ ಬೇರೊಂದ ನರಿಯಬೇಕು ಅಂತೆಯೇ ಕಾಯಕ ಅರಿವಿನತ್ತ ಕರೆದೊಯ್ಯಬೇಕು. ಆ ಅರಿವು ನೆಮ್ಮದಿಯನ್ನು ಒಡಗೂಡಿ ಬಯಲ ಭ್ರಮೆಯನ್ನು ಕಳೆಯಬೇಕು ಎಂದು ತಿಳಿ ಹೇಳಿದರು.
ಮಾಟ, ಅರಿವು, ನೆಮ್ಮುಗೆ ಎಂಬ ಮೂರು ಮಾತುಗಳನ್ನು ಪದೇ ಪದೇ ಹೇಳಿಕೊಳ್ಳುತ್ತಾ ಅದರ ಅರ್ಥವನ್ನು ಅರಿತು ಅದರಂತೆ ನಡೆಯಬೇಕು ಎಂದು ಮನದ ತಿಮಿರವನ್ನು ಕಳೆದುಕೊಳ್ಳುತ್ತಿದ್ದ ಮಾರಯ್ಯನವರನ್ನು ಪತ್ನಿ
ಕಾಯಕ ನಿಂದಿತ್ತು ಏಳಯ್ಯ ಎನ್ನಾಳ್ದನೆ, ಭಾವ ಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು ನಿಶ್ಚಯಿಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ಬೇಗ ಹೋಗಿ ಮಾರಯ್ಶಾ ಎಂದು ಎಚ್ಚರಿಸಿದಳು.
ಹೀಗೆ ಸತಿಪತಿಗಳೊಂದಾದ ಭಕ್ತಿಯನ್ನು ಹೊಂದಿದ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳು ಒಬ್ಬರಿಗೊಬ್ಬರು ಪೂರಕವಾಗಿ ಬದುಕಿದರು. ಇಂತಹ ಶರಣ ದಂಪತಿಗಳು ತೋರಿದ ಬೆಳಕಿನಲ್ಲಿ ನಾವು ನಡೆಯೋಣ ಎಂಬ ಸಂಕಲ್ಪವನ್ನು ಮಾಡುತ್ತಾ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್