ಅದೃಷ್ಟವಂತರ ಸಂಸ್ಕಾರ ಮತ್ತು ಸಂವೇದನೆ
ನಮ್ಮ ಸುತ್ತಲೂ ನಡೆಯುವ ಎಲ್ಲಾ ವಿಷಯಗಳಿಗೆ ಪ್ರತಿಕ್ರಿಯೆ ನೀಡಲಾಗದ ಅಸೂಕ್ಷ್ಮ ಕಾಲದಲ್ಲಿ ನಾವಿದ್ದೇವೆ. ದೊಡ್ಡವರ ಮನೆಯಲ್ಲಿ ಇರುವವರ ಕ್ಷುಲ್ಲಕ ವರ್ತನೆ ಮತ್ತು ಸಣ್ಣ ನಡವಳಿಕೆ ಬಗ್ಗೆ ಹೇಳಲಾಗದು. ಆದರೆ ಇಂದು ನಾವು ಎಲ್ಲವನ್ನೂ, ಎಲ್ಲರನ್ನು ಕೆಲವೇ ಕ್ಷಣಗಳಲ್ಲಿ ಬೆತ್ತಲೆ ಮಾಡುವ ಸೋಷಿಯಲ್ ಮೀಡಿಯಾ ದುನಿಯಾದಲ್ಲಿದ್ದೇವೆ ಎಂಬ ಕನಿಷ್ಠ ಕಬರು, ಅರಿವು ಇರಬೇಕು.
ಅಂತದರಲ್ಲಿ ಮಗ ಸಂಸದ, ಪತಿ ಶಾಸಕ, ಮಾವ ಸಂಸದ ಮತ್ತು ಮಾಜಿ ಪ್ರಧಾನ ಮಂತ್ರಿ/ ಮುಖ್ಯಮಂತ್ರಿ, ಭಾವ ಮಾಜಿ ಮುಖ್ಯಮಂತ್ರಿ ಇಷ್ಟಲ್ಲಾ ಅದ್ಭುತ ಹಿನ್ನೆಲೆ, ತಾಕತ್ತು ಇರುವಾಗ ಇಂತಹ ಭಾಷೆ ಬಳಸಿ ಬಡವರ ಮೇಲೆ ಹರಿ ಹಾಯುವುದು ಸಹಜ! ಎಂಬ ಮೌನ ಅನಿವಾರ್ಯ?
ಐಷಾರಾಮಿ ಜನ ರಸ್ತೆಯಲ್ಲಿ ಓಡಾಡುವಾಗ, ಬಡಪಾಯಿಗಳು ದೂರ ಸರಿಯಲೇಬೇಕು. ಅದಕ್ಕೆ ಸೈರನ್ ಒದರಿಕೊಂಡು ಎಸ್ಕಾರ್ಟ್ ಮೂಲಕ ಓಡಾಡುತ್ತಾರೆ ದೊಡ್ಡವರು.
ರಾಜಕೀಯ ನಾಯಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಅಧ್ಯಯನಕ್ಕೆಂದು ವಿದೇಶಗಳಿಗೆ ಭೇಟಿ ಕೊಟ್ಟು ಬರುತ್ತಾರೆ ಆದರೆ ಬಂದ ಮೇಲೆ ಯಥಾಸ್ಥಿತಿ. ಏನೇನೂ ಬದಲಾವಣೆ ಇಲ್ಲ. ಸಾಮಾನ್ಯರು ಕೂಡ ಅಧಿಕಾರ ಹಿಡಿಯಲು ಹಂಬಲಿಸಲು ಇದೇ ‘ಪವರಿನ ಪೊಗರೇ’ ಮುಖ್ಯ ಕಾರಣ. ಅಧಿಕಾರದ ಜೊತೆ ಜೊತೆಗೆ ಭಯಂಕರ ಪ್ರೋಟೋಕಾಲ್, ಜನ ಜಂಗುಳಿ, ಹೇರಳ ಹಣ, ಇವೆಲ್ಲಕ್ಕಿಂತ ಮುಖ್ಯವಾಗಿ ಐಷಾರಾಮಿ ಸವಲತ್ತುಗಳು. ಈ ಐಷಾರಾಮಿ ಸವಲತ್ತುಗಳ ಕಾರಣದಿಂದ ರಾಜಕಾರಣಿಗಳು ಅಧಿಕಾರದಲ್ಲಿ ಉಳಿಯುವ ಹರ ಸಾಹಸ ಮಾಡುತ್ತಾರೆ. ಸಾವಿರಾರು ಕೋಟಿ ಹಣ ಇದ್ದರೂ, ಅದು ಅಧಿಕಾರಕ್ಕೆ ಸಮನಾಗುವುದಿಲ್ಲ.
ಹಣ+ಅಧಿಕಾರ+ ದರ್ಪ+ಅಹಂಕಾರ+ ಐಷಾರಾಮಿ = ರಾಜಕಾರಣ ಎಂಬ ವಿಕೃತಿ ಉಂಟಾಗಿದೆ.
ಕೋಟಿಗಟ್ಟಲೆ ಖರ್ಚು ಮಾಡಿ ಅಧಿಕಾರ ಹಿಡಿಯುವ ದಾಹಕ್ಕೆ ಕೊನೆ ಎಂಬುದೇ ಇಲ್ಲ ನಮ್ಮ ಶುದ್ಧ ಪ್ರಜಾಪ್ರಭುತ್ವ ದೇಶದಲ್ಲಿ!
ದೊಡ್ಡ ಅಧಿಕಾರ, ದೊಡ್ಡ ಮೊತ್ತದ ಭ್ರಷ್ಟಾಚಾರ, ದೊಡ್ಡ ಪ್ರಮಾಣದ ಹಿಂಬಾಲಕರು ಎಂಬ ಭಯಾನಕ ರಾಜಕೀಯ ಪರಿಕಲ್ಪನೆ ಇರುವುದು ಕೇವಲ ನಮ್ಮ ದೇಶದಲ್ಲಿ ಮಾತ್ರ!
ಸರಳತೆ ಮತ್ತು ಪ್ರಾಮಾಣಿಕತೆ ಎಂಬುದು ಈಗ ಕೇವಲ ಬರಹದ ನಿಷ್ಪ್ರಯೋಜಕ ಸವಕಲು ಪದಗಳು.
‘ಬಡವನ ಕೋಪ ದವಡೆಗೆ ಮೂಲ’ ಎಂಬ ಮಾತು ಕೂಡ ಈಗ ಅಪ್ರಸ್ತುತ. ಬಡವ ಬೈಸಿಕಲ್, ಬೈಕು, ಟ್ರ್ಯಾಕ್ಟರ್, ಜೀಪುಗಳಲ್ಲಿ ಓಡಾಡುವಾಗ ನಯ,ನಾಜೂಕಿನಿಂದ ಇರಬೇಕು. ಎದುರಿಗೆ ನೂರಾರು ಕಿಲೋಮೀಟರ್ ವೇಗದಲ್ಲಿ ದಾಳಿ ಮಾಡುವ, ಕೋಟಿ ಬೆಲೆ ಬಾಳುವ ವಿಐಪಿ ವಾಹನಗಳ ಬಗ್ಗೆ ಕಾಳಜಿ ಇರಬೇಕು. ಇಲ್ಲದೆ ಹೋದರೆ ಸಾವು ಗ್ಯಾರಂಟಿ. ಬರೀ ಸಾವಲ್ಲ, ಇರುವ ಗಾಡಿ ಸುಟ್ಟು ಹಾಕಬಹುದು ಹುಷಾರ್ !
ಬೈಕ್ ಮೇಲೆ ಹೋಗುವವನಿಗೆ ಸೈಕಲ್ ಸವಾರ ಹುಚ್ಚನಂತೆ ಕಾಣುವ ಈ ಹೈರಾರ್ಕಿ ಮನುಷ್ಯನ ಸಹಜ ಮನೋರೋಗ. ಈ ರೋಗ ದೊಡ್ಡ ವಾಹನಗಳಲ್ಲಿ ಸವಾರಿ ಮಾಡುವಾಗ ಇನ್ನೂ ಹುಚ್ಚು ಹೆಚ್ಚಾಗುತ್ತದೆ. ನಾವು ಒಂದು ಕಾಲಕ್ಕೆ ನಡೆದುಕೊಂಡು, ಸೈಕಲ್ ಮೇಲೆ, ಸಣ್ಣ ಪುಟ್ಟ ವಾಹನಗಳಲ್ಲಿ ಓಡಾಡಿದ್ದನ್ನೂ ಮರೆಯುವಷ್ಟು !
ಇರಲಿ ಸದರಿ ಘಟನೆಯ ಮೂಲಕ ಅನೇಕರು ಪಾಠ ಕಲಿಯುವುದರ ಜೊತೆಗೆ, ಸದರಿ ಚಳಿಗಾಲದ ಅಧಿವೇಶನದಲ್ಲಿ ಒಂದು ಸುದೀರ್ಘ ಚರ್ಚೆ ನಡೆದು, ಇಂತಹ ಪ್ರಸಂಗದಲ್ಲಿ ಜನ ಸಾಮಾನ್ಯರು, ಬಡವರು ಹೇಗೆ ರಸ್ತೆಯ ಮೇಲೆ ಓಡಾಡಬೇಕು ಎಂಬ ಕಾನೂನನ್ನು ಅಧಿಕಾರದಲ್ಲಿ ಇರುವ ಮಹನೀಯರು ತೀರ್ಮಾನ ಮಾಡಿ, ನೂತನ ಕಾನೂನು ರೂಪಿಸಲಿ. ಇಲ್ಲದೆ ಹೋದರೆ ದೊಡ್ಡವರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗುತ್ತದೆ.
ಕೋಟಿಗಟ್ಟಲೆ ಬೆಲೆ ಬಾಳುವ ಕಾರುಗಳಿಗೆ ಸುಭದ್ರತೆ ಮಾಯವಾಗುತ್ತದೆ. ಇಂತಹ ಘಟನೆಗಳು ನಡೆದಾಗ ಜನ ಸಾಮಾನ್ಯರ ವಾಹನಗಳ ಮುಟ್ಟುಗೋಲು ಹಾಕಿ, ಅದಕ್ಕೆ ಕಾರಣರಾದ ಸಾಮಾನ್ಯ ಮತದಾರನೆಂಬ ಮೂರ್ಖನಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಆದಷ್ಟು ಬೇಗ ಜಾರಿಯಾಗಿ, ಇಂತಹ ಪ್ರಸಂಗಗಳು ಮರುಕಳಿಸದಂತೆ ಎಚ್ಚರವಹಿಸಬೇಕು.
ಘಟನೆಯ ವೈರಲ್ ವಿಡಿಯೋ ನೋಡಿ ಆತಂಕ ಪಡುವ ಬದಲು, ದೊಡ್ಡ ಕಾರಿಗೆ ಹಾನಿ ಉಂಟು ಮಾಡಿದ ಬೈಕ್ ಸವಾರನ ಪರವಾಗಿ ದೊಡ್ಡವರಿಗೆ ಕ್ಷಮೆ ಕೆಳಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇನೆ.
–ಸಿದ್ದು ಯಾಪಲಪರವಿ.