ನೀನಲ್ಲವೇ ದೇವ

ನೀನಲ್ಲವೇ ದೇವ

ಸುರಿದ ಮುಳ್ಳುಗಳ ಬದಿಗೆ ಸರಿಸಿ
ಹೂವುಗಳ ಮಳೆ ಸುರಿಸಿ
ಹರಸ ಬೇಕಾದವನು ನೀನಲ್ಲವೇ…ದೇವ

ಅಳಿಸಿದ ಚಿತ್ತಾರವ ಮತ್ತೆ ಬಿಡಿಸಿ
ರಂಗು ರಂಗಿನ ಬಣ್ಣಗಳ ಬಳಿಸಿ ಹರುಷದಿ
ಹಸೆ ಬರೆಯಬೇಕಾದವನು ನೀನಲ್ಲವೇ ದೇವ

ಕಸಿದ ಮಲ್ಲಿಗೆ ಮನದ ನಗೆಯ
ಮತ್ತರಳಿಸಿ ಮೊಗದಿ ನಗೆಮಲ್ಲಿಗೆಯ
ಸುರಿಯ ಬೇಕಾದವನು ನೀನಲ್ಲವೇ…ದೇವ

ಬಿತ್ತಿ ಬೆಳೆದ ಭಾವಗಳ ಕಿತ್ತೆಸೆದ
ನೀನೇ ಹಸಿರಾಗಿಸಿ ಮತ್ತುಸಿರ
ತುಂಬ ಬೇಕಾದವನು ನೀನಲ್ಲವೇ.. ದೇವ

ಬೆಳೆದ ಕನಸುಗಳ ಕರಗಿಸಿದ ನೀನೇ
ಮತ್ತೆ ಉತ್ತಿ ನನಸ ಸೆರಗಿನಲಿ ಕಂಗಳ
ಬೆಳದಿಂಗಳಾಗಿಸಬೇಕಲ್ಲವೇ.. ದೇವ….

ಮುಡಿಸಿದ ಸಾಲು ದೀಪಗಳ ಆರಿಸಿದ
ನೀನೇ ಮತ್ತೆ ಬೆಳಕ ಮುಡಿಸಿ ತಮವ ಸರಿಸಿ
ದಾರಿ ತೋರಬೇಕಾದವನು ನೀನಲ್ಲವೇ ದೇವ…

ಹೊರದೂಡಿದ ಮನ ಮನೆಯ ಮಂದಿರದಿ
ಮತ್ತೆ ಕರೆದು ಸಮ್ಮಾನ ಸಂಪ್ರೀತಿ
ತೋರಬೇಕಾದವನು ನೀನಲ್ಲವೇ ದೇವ…

ರೆಕ್ಕೆ ಕಟ್ಟಿ ಬಾಂದಳಕೆ ಹಾರಿಬಿಟ್ಟ ಭಾವ ಹಕ್ಕಿಯ
ಜೀವವ ಮತ್ತೆಳೆದು ಪಂಜರದಿ ಬಂಧಿಸಿದೆ..
ಮತ್ತೆ ಹಾರಿ ಬಿಡಬೇಕಾದವನು ನೀನಲ್ಲವೇ ದೇವ…

ಅಪಮಾನ ಅಪನಿಂದೆ ಕಳೆದು ಪಯಣದ
ಜೊತೆ ಹೆಜ್ಜೆಯ ಗೆಜ್ಜೆಯಾಗಿಸಿ ಕೈ ಹಿಡಿದು
ನಡೆಸಬೇಕಾದವನು ನೀನಲ್ಲವೇ ದೇವ….

ನಿನ್ನೆದೆಯ ಸುವಿಶಾಲ ತಣ್ಣೆಳಲ ಗೆಳೆತನದ
ತಂಪ ನೀಲಿಯಾಗಸದಿ ಕಿರುತಾರೆಗೆ ತಾವ
ನೀಡಿ ಮಿನುಗಿಸಬೇಕಾದವನು ನೀನಲ್ಲವೇ ದೇವ

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Don`t copy text!