ಒಳಗನರಿದು ಹೊರಗೆ ಮರೆದವರ

ಒಳಗನರಿದು ಹೊರಗೆ ಮರೆದವರ


ಕೊಳಲ ದನಿಗೆ ಸರ್ಪ ತಲೆದೂಗಿದಡೇನು
ಒಳಗಣ ವಿಷದ ಬಯಕೆ ಬಿಡದನ್ನಕ್ಕ?
ಹಾಡಿದಡೇನು ಕೇಳಿದಡೇನು
ತನ್ನಲುಳ್ಳ ಅವಗುಣ ಬಿಡದನ್ನಕ್ಕ?
*ಒಳಗನರಿದು ಹೊರಗೆ ಮರೆದವರ*
ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನಾ
                   – ಅಕ್ಕಮಹಾದೇವಿ

ಇದು ಅಕ್ಕ ಮಹಾದೇವಿ ಅವರ ವಚನ ಉತ್ತಮ ರೂಪಕದೊಂದಿಗೆ ಚಿಂತಿಸುವ ಅವರ ಸುಂದರ ಸರಳ ಬದುಕಿನ ವಿಚಾರ ಶ್ಲಾಘನೀಯ.

ಕೊಳಲ ದನಿಗೆ ಸರ್ಪ ತಲೆದೂಗಿದಡೇನು
ಒಳಗಣ ವಿಷದ ಬಯಕೆ
ಬಿಡದನ್ನಕ್ಕ?

ಹಾವಾಡಿಗ ಹಾವನ್ನು ಆಡಿಸಲು ತನ್ನ ಕೊಳಲು ಮತ್ತು ಪುಂಗಿಯನ್ನು ಬಳಸಿ ಅದರ ಮುಂದೆ ಊದುತ್ತಾನೆ. ಹಾವು ಕೊಳಲಿನ ಮಧುರ ಧ್ವನಿಗೆ ತೆಲೆ ತೂಗುವದಿಲ್ಲ. ಕಾರಣ ಅವುಗಳಿಗೆ ಕೇಳಲು ಕಿವಿ ಇರುವದಿಲ್ಲ. ಆದರೆ ಹಾವಾಡಿಗ ಊದುವ ಕೊಳಲಿನ ಚಲನ ವಲನ ನೋಡಿ ಹಾವು. ತನ್ನ ತಲೆ ಆಡಿಸುತ್ತದೆ. ಇಂಪಾದ ಮಾಧುರ್ಯದ ಕೊಳಲು ಧ್ವನಿ ಕೇಳಿದರೂ ಸಹಿತ ತನ್ನ ಹಲ್ಲಿನೊಳಗೆ ಇರುವ ಕಾಳ ಕೂಟ ವಿಷವನ್ನು ಬಿಡಲಾರದ ವಿಷ ಜಂತು.
ಇನ್ನೊಬ್ಬರನ್ನು ಕಚ್ಚಿ ಕೊಲ್ಲುವ ಮಾರಕ ವಿಷ ತನ್ನೊಳಗೆ ಇಟ್ಟು ಕೊಂಡಿರುವುದನ್ನು ಬಿಡಲು ಸಾಧ್ಯವಿಲ್ಲ. ಅನೇಕರು ತಮ್ಮ ಬಾಹ್ಯ ಬದುಕಿನ ಅಂದ ಚೆಂದ
ತೋರಿದ ಮಾತ್ರಕ್ಕೆ. ಅಂತರಂಗದ ತಾಮಸ ಗುಣ ಅಳೆಯಲು ಹೇಗೆ ಸಾಧ್ಯ?

ಹಾಡಿದಡೇನು ಕೇಳಿದಡೇನು ತನ್ನಲುಳ್ಳ ಅವಗುಣ ಬಿಡದನ್ನಕ್ಕ?
ಪ್ರಾರ್ಥನೆ ಭಜನೆ ಹಾಡುಗಳ ಹಾಡಿದರೇನು ಪುರಾಣ ಪ್ರವಚನ ಕೇಳಿದೊಡೆ ಏನು ಮನುಷ್ಯ ತನ್ನ ತಾಮಸ ಬುದ್ಧಿಯ ತೊರೆದು ಸಾತ್ವಿಕ ಗುಣ ಹೊಂದಲು ಸಾಧ್ಯವೇ ?
ಪೂಜೆ ಭಕ್ತಿಯಿಂದ ಮಾಡುವ ಹರಕೆ ವಿಧಿ ವಿಧಾನಗಳನ್ನು ಅನುಸರಿಸಿದರೆ ಮಾತ್ರಕ್ಕೆ ವ್ಯಕ್ತಿಯ ತನ್ನೊಳಗೆ ಇರುವ ಅವಗುಣ ಬಿಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾಳೆ ಅಕ್ಕ. ಬಾಹ್ಯ ಆಡಂಬರದ ಆಚರಣೆ ಅಂತರಂಗದ ಅವಗುಣ ಶುದ್ಧಿಗೊಳಿಸದೆ ಇರುವವರ ವೈರುಧ್ಯತೆ ಅನಾವರಣ ಮಾಡುತ್ತಾಳೆ ಅಕ್ಕ.

ಒಳಗನರಿದು ಹೊರಗೆ ಮರೆದವರ
ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನಾ

ಅಂತರಂಗದಲ್ಲಿ ಸತ್ಯ ಪ್ರಮಾಣ ಮಾಡಿಕೊಂಡು ಅರಿವಿನ ಅನುಸಂಧಾನಕ್ಕೆ ಒಳಪಟ್ಟ ಜನರು ಹೊರಗೆ ಆಚರಣೆಯಲ್ಲಿ ನಡವಳಿಕೆ ಸಮನ್ವಯ ಹೊಂದಿದ ಅನೇಕರು ಆದರ್ಶ ಪ್ರಾಯರು
ಒಳಗೆ ಅರಿದು ಹೊರಗೆ ಮರೆಯುವವರು ಸತ್ಯ ಸಮತೆ ಅರಿವು ಇವು ಬಾಹ್ಯದಲ್ಲಿ ಪ್ರದರ್ಶನವಾಗದ ಪ್ರಜ್ಞೆ ಇಂತಹ ನಿರಾಳ ಉದಾತ್ತ ಧ್ಯೇಯ ಉತ್ತಮ ಬುದ್ಧಿಯ ಮನುಷ್ಯರನ್ನು ಮಾತ್ರ ನನಗೆ ತೋರು ಎಂದು ಅಕ್ಕ ಮಹಾದೇವಿ ಸೃಷ್ಟಿಕರ್ತನ ಮೊರೆ ಹೋಗುತ್ತಾಳೆ.

_ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!