ಪುರಸಭೆ : ಖಾಸಗಿ ಜಾಗದಲ್ಲಿ ಕಸ ವಿಲೇವಾರಿ ಕ್ರಮಕ್ಕೆ ಮಾಲೀಕರ ಆಗ್ರಹ

 

e-ಸುದ್ದಿ, ಮಸ್ಕಿ

ಬೆಳೆಯುತ್ತಿರುವ ಮಸ್ಕಿ ಪಟ್ಟಣದಲ್ಲಿ ಪ್ರತಿದಿನ ರಾಶಿ ಗಟ್ಟಲೇ ಸಂಗ್ರಹವಾಗುತ್ತಿರುವ ಕಸವನ್ನು ವಿಲೇವಾರಿ ಮಾಡುವದು ಪುರಸಭೆಗೆ ತಲೇ ನೋವಾಗಿ ಪರಿಣಮಿಸಿದೆ. ಕಸವಿಲೇವಾರಿಗೆ ಪಟ್ಟಣದಿಂದ 3 ಕೀ.ಮೀ ದೂರದಲ್ಲಿ ಜಾಗವನ್ನು ಗೊತ್ತು ಮಾಡಿ ಕಸ ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಇದೆ.
ಆದರೆ ಭೂಮಿ ಲಭ್ಯತೆ ಇಲ್ಲದ ಕಾರಣ ಪುರಸಭೆಯ ಸಿಬ್ಬಂದಿ ಕಸವನ್ನು ಪ್ರತಿದಿನ ಬೇರೆ ಬೇರೆ ಕಡೆ ಸಾಗಣೆ ಮಾಡುತ್ತಿದ್ದಾರೆ. ಹಳ್ಳದ ದಂಡಿಯ ಮೇಲೆ, ಮುದಗಲ್ ಕ್ರಾಸ್‍ನಲ್ಲಿ, ಸರ್ಕಾರಿ ಪದವಿ ಕಾಲೇಜು ಹತ್ತಿರ, ತುಂಗಭದ್ರ ಎಡದಂಡೆ ಕಾಲುವೆ ಹತ್ತಿರ ಹೀಗೆ ನಾನ ಕಡೆ ಕಸ ವಿಲೇವಾರಿ ಮಾಡುತ್ತಿರುವದು ಕಂಡು ಬಂದಿದೆ.
ಪುರಸಭೆ ಸಿಬ್ಬಂದಿಗಳಿಗೆ ಪ್ರತಿದಿನ ಕಸ ವಿಲೇವಾರಿ ಮಾಡಲು ಹೊಸ ಹೊಸ ಜಾಗದ ಹುಡುಕಾಟದಲ್ಲಿ ದಿನ ಕಳೆಯುವಂತಾಗಿದೆ.
ನಿರ್ಲಕ್ಷ್ಯ ಃ ಗ್ರಾಮದಲ್ಲಿ ಪರಿಸರ ನೈರ್ಮಲ್ಯ ಕಾಪಾಡಬೇಕಾದ ಪುರಸಭೆಯ ಅಧಿಕಾರಿಗಳು ಮತ್ತು ಸದಸ್ಯರು ಕಸವನ್ನು ಎಲ್ಲಿ ಬೇಕಲ್ಲಿ ಬೇಕಾ ಬಿಟ್ಟಿಯಾಗಿ ಹಾಕುತ್ತಿದ್ದು ಪರಿಸರ ಕಾಪಾಡುವಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಸದಸ್ಯರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.


———————–

ಖಾಸಗಿ ಮಾಲಿಕರಿಂದ ಸಿಬ್ಬಂದಿ ತಡೆ
ಪಟ್ಟಣದ ಕೇಂದ್ರ ಶಾಲೆ ಆವರಣದ ಹಿಂಭಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿ ಪುರಸಭೆಯವರು ಕಸ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಸುತ್ತಲಿನ ಪ್ರದೇಶದ ವಾತಾವರಣ ಕಲುಷಿತವಾಗಿ ನಮಗೆ ತೊಂದರೆಯಾಗುತ್ತಿದೆ. ನಮ್ಮ ಜಾಗದಲ್ಲಿ ಕಸ ವಿಲೇವಾರಿ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಜಮೀನಿನ ಮಾಲೀಕರಾದ ಮಲ್ಲೀಕಾರ್ಜುನ ಪಾಟೀಲ್ ಒತ್ತಾಯಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿ ಮತ್ತು ಕೇಂದ್ರ ಶಾಲೆ ಆವರಣದ ಹಿಂಭಾಗದಲ್ಲಿ ನಮ್ಮ 6.27 ಎಕರೆ ಖಾಲಿ ಜಮೀನು ಇದೆ. ಆದರೆ ಪುರಸಭೆಯವರು ಕಳೆದ ಹಲವು ದಿನಗಳಿಂದ ನಮ್ಮ ಜಾಗದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ ಈ ಕುರಿತು ಹಲವು ಬಾರಿ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಕಸ ಹಾಕದಂತೆ ಹೇಳಿದ್ದರು ನಿರ್ಲಕ್ಷ ಮಾಡುತ್ತಿದ್ದು, ನಿಲ್ಲಿಸದಿದ್ದಲ್ಲಿ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.
———————–
ಪಟ್ಟಣದ ಹೊರಗಡೆ ಕಸ ವಿಲೇವಾರಿಗೆ ಇದುವರೆಗೆ ಜಾಗ ಸಿಕ್ಕಿರಲಿಲ್ಲ. ಹಾಗಾಗಿ ಕಸವನ್ನು ತಾತ್ಕಲಿಕವಾಗಿ ಸಾಗಿಸಲಾಗುತ್ತಿತ್ತು. ಈಗಾಗಲೇ ಮಸ್ಕಿ ತಾಂಡ ಹತ್ತಿರ 18 ಎಕರೆ ಜಮೀನು ಗುರುತಿಸಿದ್ದು, ಇಲಾಖೆಯಿಂದ ಅನುಮತಿ ಸಿಕ್ಕ ಕೂಡಲೇ ಕಸ ವಿಲೇವಾರಿ ಸುಗಮವಾಗಲಿದೆ. ಈಗಾಗಲೇ ಕಸ ಹಾಕಿರುವದನ್ನು ಬೇರೆ ಕಡೆ ಸ್ಥಳಾಂತರಿಸಲಾಗುವದು.
-ರಡ್ಡಿರಾಯನಗೌಡ ಮುಖ್ಯಾಧಿಕಾರಿ, ಪುರಸಭೆ ಮಸ್ಕಿ

Don`t copy text!