ಬಸವಣ್ಣನವರನ್ನು ಭಕ್ತಿ ಭಂಡಾರಿ ಎನ್ನುವುದರ ಔಚಿತ್ಯವೇನು ?

ಬಸವಣ್ಣನವರನ್ನು ಭಕ್ತಿ ಭಂಡಾರಿ ಎನ್ನುವುದರ ಔಚಿತ್ಯವೇನು ?


ಬಸವಣ್ಣ ಮೂಲ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದನು .ಬ್ರಾಹ್ಮಣ್ಯ ಪರಿಪಾಲನೆ ವೈದಿಕ ಆಚರಣೆ ಮತ್ತು ಅಸ್ಪ್ರಶ್ಯತೆ ಜಾತೀಯತೆ ಮೇಲು ಕೀಳು ಎಂಬ ಕಿತ್ತಾಟದಲ್ಲಿ ಸಾಮಾಜಿಕ ವ್ಯವಸ್ಥೆ ನಲುಗಿ ಹೋಗಿತ್ತು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಶೈಕ್ಷಣಿಕ ಆರ್ಥಿಕ ರಂಗಗಳಲ್ಲಿ ಮಹಿಳೆಯರನ್ನು ಕಾರ್ಮಿಕರನ್ನು ದಲಿತ ಪಂಚಮ ಅಸ್ಪ್ರಶ್ಯ ದಮನಿತ ವರ್ಗದವರಿಗೆ ಎಲ್ಲ ಹಕ್ಕುಗಳನ್ನು ಕಸಿದುಕೊಂಡು ಕರ್ಮ ಸಿದ್ಧಾಂತವನ್ನು ಪ್ರಧಾನವಾಗಿಟ್ಟುಕೊಂಡು ಭಕ್ತಿ ಎನ್ನುವುದು ಕೇವಲ ಶಿಷ್ಟ ವರ್ಗಕ್ಕೆ ಮೀಸಲಾಗಿತ್ತು .
ಆದರೆ ಬಸವಣ್ಣನವರು ಇದಕ್ಕೆ ವಿರುದ್ಧವಾಗಿ ಭಕ್ತನು ಒಂದು ಕುಲ ಭವಿ ಒಂದು ಕುಲ ಎಂದನು. ಭಕ್ತ ಪರಿಪೂರ್ಣ ನಾಗರೀಕ ಮತ್ತು ಭವಿ ಪ್ರಾಪಂಚಿಕ ಬದುಕಿಗೆ ಮೀಸಲಾಗಿ ಆಸನ ವ್ಯಸನಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡವನು ಎಂದರ್ಥ.

ಜ್ಞಾನಿ ದಾಸೋಹಿ ಚಿಂತಕ ಬಸವಣ್ಣ ತಾನು ಭಕ್ತಿ ಇಲ್ಲದ ಬಡವನಯ್ಯ ಎನ್ನುತ್ತಾನೆ.

ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ ಉಂಕರಿಸಿ ಲಿಂಗ ಎಂಬ ಎಲೆಯಾಯಿತ್ತು .ವಿಚಾರವೆಂಬ ಹೂವು ಆಚಾರವೆಂಬ ಕಾಯಿ ಆಯಿತ್ತು ನಿಷ್ಪತ್ತಿ ಎಂಬ ಹಣ್ಣು ಸಮಾಜಕ್ಕೆ ಬೇಕೆಂದು ಕೂಡಲ ಸಂಗಮದೇವನೆತ್ತಿ ಕೊಂಡ ಎಂಬುದಾಗಿ
ಭಕ್ತಿ ಎನ್ನುವುದು ತಳದಿಂದ ಮೇಲೆ ಹರಿಯುವ ಸಹಜ ಪ್ರಕ್ರಿಯೆ ಎಂದು ಹೇಳಿದ ಜಗತ್ತಿನ ಪ್ರಥಮ ದಾರ್ಶನಿಕ .
ಶೃದ್ಧೆ ನಿಷ್ಠೆ ನಂಬಿಕೆ ವಿಶ್ವಾಸಗಳನ್ನು ಹೊಂದಿ ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರೀತಿಯನ್ನು ಕಾಣಬೇಕು. ಒಂದು ಅರ್ಥದಲ್ಲಿ ಭಕ್ತಿ ಎನ್ನುವುದು ಸಮಾಜ ಪ್ರೇಮ
ಭಕ್ತಿ ಎನ್ನುವುದು ಮಾನವೀಯ ಕಳಕಳಿ ಕಾಳಜಿ ಮನುಷ್ಯ ಪ್ರೀತಿ. ಮಹಾತ್ಮ ಬಸವಣ್ಣ ಕೆಳಗೆ ಬಿದ್ದವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯಶವ ಕಂಡನು ಇದಕ್ಕೆ ಮುಖ್ಯ ಕಾರಣ ಅವರಲ್ಲಿರುವ ಅಪಾರವಾದ ಭಕ್ತಿ ಭಂಡಾರವೆಂದರೆ ಸಂಪತ್ತು ಪ್ರೀತಿ. ಭಕ್ತಿಯನ್ನು ಭಂಡಾರವನಾಗಿ ಇಟ್ಟುಕೊಂಡವರು ಬಸವಣ್ಣನವರು. ಬಸವಣ್ಣನವರ ಭಕ್ತಿ ವಿಶ್ವ ಪ್ರೇಮ ವಿಶ್ವ ಬಂಧುತ್ವ , ಜಾಗತಿಕ ಮಾನವ ಸಂಬಂಧಗಳ ಪರಿಕಲ್ಪನೆ. ಹೀಗಾಗಿ ಶೋಷಿತ ಸಮುದಾಯವನ್ನು ಮತ್ತು ಮೇಲ್ವರ್ಗದ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಕ್ರಿಯೆಯೇ ಭಕ್ತಿ ಮನುಷ್ಯ ಮನುಷ್ಯ ಸಂಬಂಧ. ಇಂತಹ ಭಕ್ತಿಯಿಂದ ಬಸವಣ್ಣನವರು ಸಮಗ್ರ ಕ್ರಾಂತಿ ಮಾಡಿದ ಸಾಮಾಜಿಕ ಕ್ರಾಂತಿಯ ಬದಲಾವಣೆಯ ಹರಿಕಾರ ಎನಿಸಿಕೊಂಡರು. ಮನುಷ್ಯ ಮನುಷ್ಯನನ್ನ ಸಂಧಿಸುವ ಯೋಗವೇ ಭಕ್ತಿ.

ಭಕ್ತಿ ಎಂಬ ಪೃಥ್ವಿಯ ಮೇಲೆ ,ಗುರುವೆಂಬ ಬೀಜುಂಕರಿಸಿ
ಲಿಂಗವೆಂಬ ಎಲೆಯಾಯಿತ್ತು ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಗಿತ್ತು ,ನಿಷ್ಪತ್ತಿಯೆಂಬ ಹಣ್ಣಾಯಿತ್ತು .
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆಬೇಕೆಂದು ಎತ್ತಿಕೊಂಡ
ಬಸವಣ್ಣನವರು.

ಈ ವಚನವನ್ನು ನಾವು ಮತ್ತೆ ಮತ್ತೆ ಅವಲೋಕಿಸುವುದು ಅಗತ್ಯವಾಗಿದೆ. ಗುರುವೆಂಬ ಬೀಜ ಎಂದರೆ ಏನು ?. ಬಸವ ಪೂರ್ವ ಯುಗದ ಗುರು ಪದ್ದತಿಯನ್ನು ಭೌತಿಕ ಗುರುವಿನಿಂದ ಭೌದ್ಧಿಕ ಗುರುವಿಗೆ ಮಾರ್ಪಾಡುಗೊಳಿಸಿ. ಪ್ರತಿಯೊಬ್ಬ ವ್ಯಕ್ತಿಯ ಅರಿವಿನ ಆಳವನ್ನು ಜಾಗೃತಗೊಳಿಸಿ .ಅಂತಹ ಅರಿವನ್ನು ಗುರುವಾಗಿಸಿಕೊಂಡರು ನಮ್ಮ ಶರಣರು. ಪೃಥ್ವಿ ಇದು ಧೃಢತೆ ಹಾಗು ಸಂಚಲನದ ಗಟ್ಟಿಮುಟ್ಟಾದ ಸಂಕೇತವಾಗಿದೆ. ಇಂತಹ ಮನವುಳ್ಳ ಭಕ್ತನ ಮನದಲ್ಲಿ ಅರಿವೆಂಬ ಗುರುವು ಬೀಜವಾಗಿ ಉಂಕರಿಸಿ ಪಂಚ ಮಹಾಭೂತಗಳ ಶಕ್ತಿಯಿಂದಾಗಿ ಪಂಚೇಂದ್ರಿಯ ಮೂಲಕ ಸಮಷ್ಟಿಯನ್ನು ಗ್ರಹಿಸುವ ಅರಿವಿನ ಅನುಸಂಧಾನಕ್ಕೆ ಲಿಂಗವೆಂಬುದು ಸಾಧನವಾಗಿದೆ. ಅರಿವಿನ ಬೀಜ ಬಿದ್ದಲ್ಲಿ ಲಿಂಗವೆಂಬ ಎಲೆಯು ವಿಕಸಿತಗೊಂಡಿತು .ಸಸ್ಯದ ಸಮಗ್ರ ಬೆಳವಣಿಗೆಯಲ್ಲಿ ಎಲೆ ಮತ್ತು ಬೇರು ಪ್ರಮುಖ ಪಾತ್ರ ವಹಿಸುತ್ತವೆ. ಎಲೆಯು ಸೂರ್ಯ ಕಿರಣಗಳಿಂದ ದ್ಯುತಿ ಸಂಶ್ಲೇಷಣೆಗೆ ಕಾರಣವಾಗಿ (PHOTO SYNTHESIS ) ಸಸ್ಯಕ್ಕೆ ಬೇಕಾದ ಆಹಾರವನ್ನು ತಯಾರಿಸುವ ಘಟಕವಾಗಿದೆ,
ಎಲೆಯು ಮೂಡಿದ ಮೇಲೆ ಆಲೋಚನೆಗಳು ಸದ್ವಿಚಾರಗಳು ಹುಟ್ಟಿಕೊಳ್ಳುತ್ತವೆ. ಈವಿಚಾರಗಳ ಅರಳುವಿಕೆಯನು ಬಸವಣ್ಣ ಹೂವಾಗಿ ಕಂಡಿದ್ದಾರೆ.ವಿಚಾರ ಮತ್ತು ಆಚಾರಗಳ ಸಮನ್ವಯತೆಯೇ ಶರಣ ಸಂಸ್ಕೃತಿಯ ಜೀವಾಳ. ಹೀಗಾಗಿ ವಿಚಾರವೆಂಬ ಹೂವು ಆಚಾರವೆಂಬ ಕಾಯಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ಪರಿಪೂರ್ಣತೆ ಎಂಬ ನಿಷ್ಪತ್ತಿ ಎಂಬ ಹಣ್ಣಾಗಿ ರೂಪಗೊಳ್ಳುತ್ತದೆ. ಆ ಹಣ್ಣು ಕೂಡಲ ಸಂಗಮದೇವವೆಂಬ ಜಂಗಮ ಸಮಾಜವು ತನಗೆ ಬೇಕೆಂದು ಆಯ್ಕೆ ಮಾಡಿಕೊಳುತ್ತದೆ. ಸೃಷ್ಟಿಯೊಳಗಿನ ಸಸಿಯ ಬೆಳವಣಿಗೆಯನ್ನು ಭಕ್ತನ ಅಂತರಂಗದ ವಿಕಾಸಕ್ಕೆ ಹೋಲಿಸಿ ಸುಂದರವಾಗಿ ವಿವರಣೆ ನೀಡುವ ಬಸವಣ್ಣನವರು ಸಾರ್ವಕಾಲಿಕ ಗುರು .

ಅರಿವುಳ್ಳವರಿಗೇ ಗುರುವಿನ ಹಂಗೇಕೇ ?
ಅರಿವುಳ್ಳವರಿಗೇ ಲಿಂಗದ ಹಂಗೇಕೇ ?
ಅರಿವುಳ್ಳವರಿಗೇ ಪಾದೋದಕ ಪ್ರಸಾದದ ಹಂಗೇಕೇ ?
ಅರಿವುಳ್ಳವರಿಗೇ ಅಮುಗೇಶ್ವರವನರಿದವನೆಂಬ ಸಂದೇಹವೇಕೆ ?

ಕೆಳಸ್ತರದ ಶರಣೆ ಅಮುಗೆ ರಾಯಮ್ಮ ಅರಿವುಳ್ಳವರಿಗೆ ಗುರುವಿನ ಹಂಗೇಕೇ ? ಎಂದು ಕೇಳುವದರ ಮೂಲಕ ಸ್ಥಾಯಿಭಾವದ ಬಾಹ್ಯ ಗುರುವನ್ನು ಸಂಪೂರ್ಣ ಅಲ್ಲಗಳೆದಿದ್ದಾಳೆ. ಗುರು ಮನೋವಿಕಾಸದ ಮಾರ್ಗ. ದಾಸ್ಯತ್ವದ ಶ್ರೇಣಿಕೃತ ವ್ಯವಸ್ಥೆ ಅಲ್ಲ. ಗುರು ಪಾದ ಅಂದ್ರೆ ಜ್ಞಾನದ ಸಂಚಲನತೆ. ಇಷ್ಟೊಂದು ಸರಳ ಸಹಜ ಅರ್ಥವನ್ನು ನೀಡಿ ಸಮಸ್ತ ಜನರನ್ನು ನಾಗರೀಕ ಸಮಾಜ ಕಟ್ಟುವಲ್ಲಿ ಪ್ರೇರಣೆಯಾದ ಬಸವಣ್ಣ.
ವಚನಗಳು ಹಲವು ಅರ್ಥವನ್ನು ಕೊಡುವ ಅಮೂಲ್ಯ ರತ್ನಗಳು ಅರಿದಷ್ಟು ಜ್ಞಾನ ವಿಸ್ತಾರಗೊಳ್ಳುತ್ತದೆ. ಅಂದಿನ ಸನಾತನಕ್ಕೆ ಸಮಗ್ರವಾಗಿ ಪರ್ಯಾಯವಾಗಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶರಣರು ಅದರಲ್ಲೂ ಬಸವಣ್ಣನವರು ಹೆಣಗಾಡಿದರು.
ಅರಿವಿನ ನೈಜ ಮೂರುತಿಯಾದ ಬಸವಣ್ಣ ಸತ್ಯದ ಪ್ರತಿಪಾದಕ, ಬಸವಣ್ಣ ಸರ್ವಕಾಲಿಕ ಅರಿವಿನ ಸತ್ಯದ ಸಂಕೇತವಾಗಿ ನಿಲ್ಲುತ್ತಾನೆ .

ಅಂತೆಯೇ ಅಲ್ಲಮರು
ಮಹಾ ಮಣಿಹ ಸಂಗನ ಬಸವ ಎನಗೆಯು ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರ ಎಂದಿದ್ದಾರೆ
ಅಕ್ಕ ಬಸವನ ಅರಿವನರಿಯದೆ ಕೆಟ್ಟೆನಲ್ಲ ಎಂದಿದ್ದಾಳೆ. ಮಡಿವಾಳಮಾಚಿದೇವರು ಗುರುವು ಬಸವಣ್ಣನಿಂದಾ ಎಂದರೆ, ಚೆನ್ನ ಬಸವಣ್ಣ ಗುರುವು ಬಸವಣ್ಣನ ಪಾದದಿಂದ ಎಂದಿದ್ದಾರೆ. ಅನೇಕ ಶರಣರು ಬಸವಣ್ಣ ಕಂಡುಕೊಂಡ ಸತ್ಯವನ್ನು ಸಾರ್ವತ್ರಿಕಗೊಳಿಸಿದ್ದಾರೆ. ಹೀಗಿದ್ದಾಗ ಹೊರಗಿನ ಗುರು ಎಷ್ಟು ಸಮಂಜಸ ?

ಇದು ನನ್ನ ವ್ಯಕ್ತಿಗತವಾದ ಅಭಿಮತ ಚರ್ಚೆಗೆ ಕೊನೆ ಇರುವದಿಲ್ಲ. ಆದರೆ ನಾನು ಅಂತರಂಗದ ಅರಿವೇ ಅಷ್ಟಾವರಣದಲ್ಲಿನ ಗುರು ಎಂದು ಬಲವಾಗಿ ನಂಬಿದ್ದೇನೆ ಮತ್ತು ಅದಕ್ಕೆ ಬದ್ಧವಾಗಿದ್ದೇನೆ. ಇನ್ನು ಅವರವರ ಅಭಿಮತ ಅಭಿಪ್ರಾಯಕ್ಕೆ ಉತ್ತರಿಸುವ ಜಾಣತನ ಬುದ್ಧಿ ಮತ್ತೆ ಅಥವಾ ಪಾಂಡಿತ್ಯ ನನ್ನ ಬಳಿ ಇಲ್ಲ .ಸರಳ ವಚನಾಧಾರಿತ ಸತ್ಯವನ್ನು ಒಪ್ಪಿಕೊಂಡಿರುವೇನು. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ
ಬಸವಣ್ಣ ಮೇಲ್ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರೂ ಸಹಿತ ಪ್ರೀತಿ ಮಮತೆ ದಯೆ ಶಾಂತಿಯ ಪ್ರತೀಕವಾಗಿ ಸಮಾಜದ ಎಲ್ಲ ವರ್ಗದವರ ಪ್ರೀತಿಯನ್ನು ಭಕ್ತಿಯನ್ನಾಗಿ ಪರಿವರ್ತಿಸಿ ಸಮಸ್ತ ಸಮಷ್ಟಿಯನ್ನು ಪ್ರೀತಿಸುವ ಮಹಾಮಣಿಹ ಅದಕ್ಕೆಂತಲೇ ಅಲ್ಲಮರು ಬಸವಣ್ಣನವರನ್ನು ಮಹಾಮಣಿಹ ಸಂಗನ ಬಸವಣ್ಣ ನನಗೆಯು ಗುರು ನಿನಗೆಯು ಗುರು ಎಂದಿದ್ದಾರೆ.

ಬಿಜ್ಜಳನ ಆಸ್ಥಾನದ ಅರ್ಥ ಸಚಿವ ಮಹಾದಂಡನಾಯಕ ಮತ್ತು ಪ್ರಧಾನಿಯಾಗಿದ್ದರು ಸಹಿತ ಕೆಳ ವರ್ಗದ ಜನರನ್ನು ಅಪ್ಪಿಕೊಂಡು ಭಕ್ತಿ ಭಾವದಿಂದ ಅವರನ್ನು ಪ್ರೀತಿಸಿ ಸಮಸ್ತ ಜಂಗಮ ಸಮಾಜವನ್ನು ಪರಿವರ್ತಿಸಿದ ಕಾರಣಿ ಪುರುಷ.
ಚೆನ್ನ ಬಸವಣ್ಣ ಬಸವಣ್ಣನವರನ್ನು ದೇವಲೋಕದ ಬಟ್ಟೆ ಎಂದು ಕರೆದಿದ್ದಾರೆ. ಅಕ್ಕ ಮಹಾದೇವಿ ದೇವಲೋಕಕ್ಕೂ ಬಸವಣ್ಣನೇ ದೇವರು ಎಂದಿದ್ದಾಳೆ. ಜನಪದಿಗರು ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ,ಮೊಗ್ಗು ಮಲ್ಲಿಗೆ ಅರಳಿದವು,ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ “ಎನ್ನುತ್ತಾರೆ. ಪ್ರೀತಿಯನ್ನು ಭಕ್ತಿಯನ್ನಾಗಿ ಮಾಡಿ ಸಮಸ್ತ ಜೀವ ಜಾಲವನ್ನು ಪ್ರೀತಿಸಿದ ಪ್ರೀತಿಸಲು ಕಳಿಸಿದ ಮತ್ತು ಅದೇ ಪ್ರೀತಿಯನ್ನು ಭಕ್ತಿ ಎಂದು ಕರೆದ ನಿಜ ಅರ್ಥದಲ್ಲಿ ಭಕ್ತಿ ಭಂಡಾರಿ ಎಂದು ಕರೆಯುವುದು ನ್ಯಾಯ ಸಮ್ಮತ ಮತ್ತು ಔಚಿತ್ಯವೋ ಹೌದು.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!