ನಿರ್ಭಿತ ಶರಣ ಅಂಬಿಗರ ಚೌಡಯ್ಯ

ನಿರ್ಭಿತ ಶರಣ ಅಂಬಿಗರ ಚೌಡಯ್ಯ

ಅದೊಂದು ಸೋಮವಾರದ ದಿನ ಮಂತ್ರಿಮಂಡಲಕ್ಕೆ ರಜೆ. ಅಣ್ಣ ಬಸವಣ್ಣನವರು ತಮ್ಮ ಇಬ್ಬರು ಪತ್ನಿಯರನ್ನು ಕರೆದು ಇಂದು ಹೊಳೆಯ ಆಚೆಗಿನ ಶಿವ ದೇವಾಲಯಕ್ಕೆ ಹೋಗಿ ಬರೋಣ ಎಂದು ಹೇಳಿದರು. ಸಪತ್ರಿಕರಾಗಿ ಶಿವ ದೇವಾಲಯಕ್ಕೆ ಹೊರಟ ಬಸವಣ್ಣನವರು ಹೊಳೆಯ ಈಚೆ ಬದಿಯಲ್ಲಿ ಬಿಜ್ಜಳ ಮಹಾರಾಜನು ಕಟ್ಟಿಸುತ್ತಿದ್ದ ಅರಮನೆಯನ್ನು ವೀಕ್ಷಿಸಿದರು. ನಂತರ ಹೊಳೆಯ ಬಳಿ ಸಾಗಿ ತೆಪ್ಪ ನಡೆಸುವ ಅಂಬಿಗನನ್ನು ಹೊಳೆಯಾಚೆಗಿನ ಶಿವ ದೇವಾಲಯಕ್ಕೆ ಬರುವಿರಾ ಎಂದು ಕೇಳಿದಾಗ ಆತ ಅತ್ಯಂತ ಅದ್ಭುತವಾಗಿ ಈ ಹೊಳೆಯನ್ನು ನಾನು ದಾಟಿಸಬಲ್ಲೆ ಭವದ ಹೊಳೆಯಲ್ಲ ಎಂದು ಹೇಳಿದನು. ಆತನ ಮಾತಿನಿಂದ ಚಕಿತರಾದ ಬಸವಣ್ಣನವರು ಆತನ ನಿರ್ಭಿಡೆಯ ವ್ಯಕ್ತಿತ್ವ, ಬಿರುಸಾದ ಮಾತುಗಳು ಒಂದು ಕ್ಷಣ ಅವನನ್ನೇ ದಿಟ್ಟಿಸಿ ನೋಡುವಂತೆ ಮಾಡಿದವು. ಮುಂದೆ ಲೋಕಾಭಿರಾಮದ ಮಾತುಗಳನ್ನಾಡುತ್ತಾ ಆಚೆ ದಡ ಸೇರಿದ ಬಸವಣ್ಣನವರು ಬನ್ನಿ ದೇವರ ದರ್ಶನ ಮಾಡಿ ಬರೋಣ ಎಂದು ಅಂಬಿಗನನ್ನು ಕರೆದರು…. ಮತ್ತೊಮ್ಮೆ ಚಾಟಿ ಏಟಿನಂತೆ ನಮ್ಮಂತ ಹೀನ ಜಾತಿಯವರಿಗೆ ಯಾವ ದೇವರು ಇಲ್ಲ ದಿಂಡರು ಇಲ್ಲ ಎಂದು ಉತ್ತರಿಸಿದನು ಆ ಅಂಬಿಗ.

ಈಗ ಬಸವಣ್ಣನವರಿಗೆ ನಿಚ್ಚಳವಾಯಿತು. ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಬಹಿಷ್ಕೃತರೆನಿಸಿಕೊಂಡ ದೇವರ ಪೂಜೆಗೆ ಅನರ್ಹರೆನಿಸಿಕೊಂಡ ಹಿಂದುಳಿದ ವರ್ಗದ ಜನರ ಮನದಾಳದ ನೋವು ಈ ರೀತಿ ವ್ಯಕ್ತಗೊಳ್ಳುತ್ತಿದೆ ಎಂದು. ಆ ಅಂಬಿಗರ ವ್ಯಕ್ತಿಯೇ ನೇರ ನಿಷ್ಠುರವಾದಿಯಾದ ಅಂಬಿಗರ ಚೌಡಯ್ಯ. ಬಸವಾದಿ ಶರಣರ ಜೊತೆಯಲ್ಲಿಯೇ ಕಲ್ಯಾಣದ ವಚನಕಾರರ ಪಂಕ್ತಿಯಲ್ಲಿ ಕಾಣಿಸಿಕೊಂಡಾತ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅಂದಿನ ಶಿವಪುರ ಇಂದಿನ ಚೌಡದಾನಪುರ ಎಂಬ ಊರಿನಲ್ಲಿ ಜನಿಸಿದವರು ಅಂಬಿಗರ ಚೌಡಯ್ಯ. ಇವರ ಗುರುಗಳು ಉದ್ಧಾಲಕರು. ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಭದ್ರಾನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾಂಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು. ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವಮಂಟಪಕ್ಕೆ ಬಂದ ಈ ಶರಣದಂಪತಿಯನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರು.

ಬಸವಣ್ಣನೇ ಭಕ್ತ ಪ್ರಭುದೇವರೇ ಜಂಗಮರು
ಇಂತೆಂಬ ಭೇದವಿಲ್ಲಯ್ಯ, ಅರಿವೇ ಗುರು,
ಗುರುವೇ ಪರಶಿವನು ಇದು ತಿಳಿದವನೇ
ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ’

ಎಂಬ ವಚನದ ಮೂಲಕ ಬಸವಣ್ಣ ಮತ್ತು ಪ್ರಭುದೇವರನ್ನು ಚೌಡಯ್ಯನವರು ಮನಸಾರೆ ಹೊಗಳಿದ್ದಾರೆ. ಶಿವಶರಣರ ಸಂಗದಲ್ಲಿ ಕಾಲಕಳೆದು ಪರಿಪಕ್ವರಾದ ಇವರು ರಚಿಸಿದ ವಚನಗಳು ಹಸಿಗೋಡೆಯಲ್ಲಿ ಹರಳು ಎಸೆದಂತಿವೆ. ಇವರ ವಚನಗಳನ್ನು ಕೂಲಂಕುಶವಾಗಿ ಅಧ್ಯಯನಗೈದ ಕವಿ ಕಾವ್ಯಾನಂದರು
ನಿಜದ ನಗಾರಿ ನಿರ್ಭಯತೆಯ ಭೇರಿ
ಈ ಅಂಬಿಗರ ಚೌಡಯ್ಯ’ ಎಂದಿದ್ದಾರೆ.

ಮುಪ್ಪಿನ ಷಡಕ್ಷರಿಯವರು ತಮ್ಮ ಸುಬೋಧ ಸಾಗರದಲ್ಲಿ ‘ಅಂಬಿಗರ ಚೌಡಯ್ಯನ ಮುಂಬಾಗಿಲನ್ನು ಕಾಯುವ ನಂಬಿಗೆಯ ಸೇವಕರು ಕುಂಭಿನಿಯೊಳಗಿನ್ನು ಸರಿಯದಾರು?’ ಎಂದು ಹಾಡಿ ಹರಸಿದ್ದಾರೆ.

ಘನಲಿಂಗದೇವನು (1480) ‘ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯಯಿಂತಿಪ್ಪ ಶಿವಶರಣರ ಮನೆ ಬಾಗಿಲನಿಕ್ಕುವ ಸೊಣಗನ ಮಾಡಿ ಎನ್ನಿರಿಸಯ್ಯ ಎಂದು ತಮ್ಮ ವಚನವೊಂದರಲ್ಲಿ ಹೇಳಿರುವುದೇ ಇದಕ್ಕೆ ನಿದರ್ಶನವಾಗಿದೆ. ಮಹಾಕವಿ ಷಡಕ್ಷರಿಯವರು ತಮ್ಮ ‘ಬಸವರಾಜ ವಿಜಯ’ದಲ್ಲಿ ‘ನಿಡುಗುಡಿಮಾರನಂಬಿಗರ ಚೌಡಯ್ಯ’ ಎಂದು ಸ್ಮರಿಸಿದ್ದರೆ, ಮಹಾಲಿಂಗ ವಿರಚಿತ ಗುರುಬೋಧಾಮೃತದ ಕುಂಬಾರ ಗುಂಡಯ್ಯ
ಅಂಬಿಗರ ಚೌಡಯ್ಯ, ಕೆಂಭಾವಿಯೊಳಗೆ ಮೆರೆವ ಬೋಗಣ್ಣನಿಗೆ ಸಂಭ್ರಮದೊಳೆರಗಿ ನಮಿಸುವೆ ಎಂಬ ಪದಗಳು ಅಂಬಿಗರ ಚೌಡಯ್ಯನವರ ಮೇರು ವ್ಯಕ್ತಿತ್ವವನ್ನು ಪರಿಚಯಿಸುತ್ತವೆ.
ಚೌಡಯ್ಯನವರ ಪಾರಮಾರ್ಥ ಸಾಧನೆಯನ್ನು ಕಂಡು ಮಾರುಹೋದ ಗುತ್ತಲ ಪ್ರಾಂತ್ಯದ ಅರಸನು ಅವರಿಗೆ ದಾಸೋಹಕ್ಕೆಂದು ಶಿವಪುರಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಕಾಣಿಕೆಯಾಗಿ ನೀಡಿದನು. ತಮಗೆ ನೀಡಿದ ಈ ಭೂಮಿಯನ್ನು ಚೌಡಯ್ಯನವರು ತಮ್ಮ ಮಗ ಪುರವಂತ ಹಾಗೂ ಶಿವದೇವರಿಗೆ ದಾನವಾಗಿ ನೀಡಿದರು. ಅದೇ ಕಾರಣಕ್ಕಾಗಿ ಶಿವಪುರಕ್ಕೆ ‘ಚೌಡಯ್ಯ ದಾನಪುರ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತಿದ್ದು, ಅದೇ ಇಂದು ಚೌಡದಾನಪುರವಾಗಿದೆ. ಬಸವಣ್ಣನವರ ಗರಡಿಯಲ್ಲಿ ಪಳಗಿದ ಇವರ ಅನುಭವವು ಅಮೃತಧಾರೆಯಾಗಿ ವಚನಗಳ ರೂಪದಲ್ಲಿ ಹರಿದುಬಂದಿವೆ. ನಿಜವಾದ ಭಕ್ತನಾರು? ಎಂಬುದನ್ನು ಕುರಿತು ತಮ್ಮ ವಚನದಲ್ಲಿ

ಓಡುವಾತ ಲೆಂಕನಲ್ಲ ಬೇಡುವಾತ ಭಕ್ತನಲ್ಲ
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು
ಓಡೆನಯ್ಯ, ಬೇಡೆನಯ್ಯ ಎಂದ ಅಂಬಿಗರ ಚೌಡಯ್ಯ’
ಎಂದು ಸಾರಿದ್ದು ಅಮೋಘವಾಗಿದೆ.

ಪರಮಾತ್ಮನ ನಿಜಸ್ವರೂಪವನ್ನು ಕುರಿತು

ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ
ಬ್ರಹ್ಮಕಪಾಲವಿಲ್ಲ ಭಸ್ಮಭೂಷಣನಲ್ಲ
ವೃಷಭ ವಾಹನನಲ್ಲ, ಋಷಿಯ ಮಗಳೊಡನಿರ್ದಾತನಲ್ಲ
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದೆಂದಾತ ಅಂಬಿಗರ ಚೌಡಯ್ಯ’

ಎಂದಿದ್ದಾರೆ
ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಬಸವಣ್ಣ ಮತ್ತಿತರೆ ಶಿವಶರಣರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರವಾದ ವಾಸ್ತವ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೊತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ ಪುರಸ್ಕಾರಗಳು ಕೇವಲ ನೇಮವಂತರ, ಬ್ರಾಹ್ಮಣರ ಗುತ್ತಿಗೆಯಾಗಿದ್ದ ಸಮಯದಲ್ಲಿ ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯ ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗ ಬಾರದೆಂದು ಸ್ಪಷ್ಟಪಡಿಸುತ್ತಾನೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತವೆ.

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ. ದೋಣಿ ನಡೆಸುವುದು ಅವನ ಕಾಯಕ ಅಂಬಿಗ ವೃತ್ತಿ.

ಸ್ಥಿತಪ್ರಜ್ಞರಾದ ಅವರು ಕೊನೆಯಲ್ಲಿ ಚೌಡದಾನಪುರದ ನದಿಯ ದಡದಲ್ಲಿ ಸಮಾಧಿಸ್ಥರಾದರೆಂದು ತಿಳಿದುಬರುತ್ತದೆ. ಆದ್ದರಿಂದ ಈ ನದಿದಡದಲ್ಲಿರುವ ದಿಬ್ಬದ ಮೇಲಿರುವ ಸಮಾಧಿಯನ್ನು ‘ಅಂಬಿಗರ ಚೌಡಯ್ಯನವರ ಸಮಾಧಿ’ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಅಂಬಿಗರ ಚೌಡಯ್ಯನವರ ಜಯಂತಿಯ ನಿಮಿತ್ಯ ಸಂಕ್ರಮಣದ ಪರ್ವ ಕಾಲದಲ್ಲಿ ಬಹು ಸಡಗರ ಸಂಭ್ರಮದಿಂದ ಇಲ್ಲಿ ಜಾತ್ರಾಮಹೋತ್ಸವವು ಜರಗುತ್ತಲಿತ್ತು. ಈಗ ಪ್ರತಿವರ್ಷ ಜನವರಿ 21ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ನಮ್ಮ ಕರ್ನಾಟಕ ಸರಕಾರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಿಜಶರಣ ಅಂಬಿಗರ ಚೌಡಯ್ಯನವರ ದಿವ್ಯ ವ್ಯಕ್ತಿತ್ವಕ್ಕೆ ಶಿರಬಾಗಿ ನಮಿಸುತ್ತಾ ಅವರು ತೋರಿದ ದಾರಿಯಲಿ ನಾವೆಲ್ಲರೂ ನಡೆದು ಸಾಗುವ

ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!