ಅಂಬಿಗರ ಚೌಡಯ್ಯ
ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ 12 ನೇ ಶತಮಾನದಲ್ಲಿಯೇ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮೆಕನ್ನಡನಾಡಿನದು.ಆ ಕಾಲವನ್ನು ಅವಿಸ್ಮರಣೀಯವಾಗಿ ಮಾಡಿದವರು ಬಸವಾದಿ ಶರಣರು.10 ನೇಯ ಶತಮಾನದಲ್ಲಿಯೇ ವಚನ ಸಾಹಿತ್ಯದ ಉಗಮವಾಗಿ ಸೂಳ್ನುಡಿ ಎನಿಸಿ ಸಾಮಾಜಿಕ ಉದ್ದೇಶಗಳನ್ನು ಹೊಂದಿ ಅಭಿವ್ಯಕ್ತಿಯನ್ನು ಪಡೆದಿದ್ದರೂ 12ನೇಯ ಶತಮಾನವೇ ಇದರ ಸಮೃದ್ಧಿಯ ಹಾಗೂ ಉತ್ಕರ್ಷದ ಕಾಲವಾಗಿದೆ.ಬಸವ,ಅಲ್ಲಮ,ಚೆನ್ನಬಸವಣ್ಣ,ಸಿದ್ಧರಾಮ,ಅಕ್ಕಮಹಾದೇವಿ,ಮಡಿವಾಳ ಮಾಚಿದೇವ,ಅಂಬಿಗರ ಚೌಡಯ್ಯ,ಮೋಳಿಗೆಯ ಮಾರಯ್ಯ,ಮಾದಾರ ಚನ್ನಯ್ಯ ಅನೇಕ ಜನ ಶಿವಶರಣರಿಂದ ಆ ಶತಮಾನದ ಕೊನೆಯಲ್ಲಿಯೇ ಉನ್ನತ ಶಿಖರವನ್ನು ಮುಟ್ಟಿ ಮತ್ತೆ 15 ನೇ ಶತಮಾನದಲ್ಲಿ ಮುಂದುವರೆದಿದೆ. ವಚನಗಳ ರಚನೆಯ ಉದ್ದೇಶ ಮನರಂಜನೆಯಲ್ಲ.ಆಳರಸರನ್ನು ಮೆಚ್ಚಿಸುವದೂ ಅಲ್ಲ.ಕೇವಲ ವಯಕ್ತಿಕ ಪ್ರೇಮ-ವಿರಹಗಳ ನೋವು-ನಲಿವುಗಳ ಅಭಿವ್ಯಕ್ತಿಯಲ್ಲ.ವಚನಗಳು ಪರಿಸರವನ್ನು ಬದಲಿಸುವ ಸಂಕಲ್ಪದಿಂದಲೇ ಅವಿರ್ಭಾವಗೊಂಡವು.ಸಮಾಜ ಜೀವನವನ್ನು ವ್ಯಕ್ತಿಯ ಬದುಕನ್ನು ಎತ್ತರಿಸಬೇಕೆಂಬ ದೃಡನಿರ್ಧಾರ ಅಂದಿನ ವಚನಕಾರರಲ್ಲಿ ಸ್ಪಷ್ಟವಾಗಿದೆ. ಶೋಷಣೆಗೊಳಗಾದ,ವಿಘಟನೆಗೊಂಡ ವ್ಯಕ್ತಿ ವ್ಯಕ್ತಿಗಳಲ್ಲಿ ಬಿರುಕು ನಿರ್ಮಾಣವಾದ,ಆತ್ಮವಿಶ್ವಾಸವನ್ನು ಹತ್ತಿಕ್ಕಿದ ಹಲವು ರೀತಿಯ ಧಾರ್ಮಿಕ ದಬ್ಬಾಳಿಕೆಗಳು,ಪ್ರಭುತ್ವದ ದರ್ಪದಂಡಗಳು ವಚನಗಳ ಹುಟ್ಟಿಗೆ ಪರೋಕ್ಷ ಪ್ರೇರಣೆಗಳಾಗಿವೆ.ಇವರಾರೂ ಯಾವ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ.ಅಭೂತಪೂರ್ವವಾದ ವಚನಗಳ ಸೃಷ್ಟಿಗೆ ಕಾರಣರಾಗಿ ಇಂದು ಶರಣರು ನಮ್ಮೊಡನೆ ವಚನಗಳ ರೂಪದಲ್ಲಿ ಜೀವಂತವಾಗಿದ್ದಾರೆ. ಅಂಬಿಗರ ಚೌಡಯ್ಯ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೊತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ-ಮೋಕ್ಷ ಕೇವಲ ನೇಮವಂತರ, ಬ್ರಾಹ್ಮಣರ ಗುತ್ತಿಗೆಯಾಗಿದ್ದ ಸಮಯದಲ್ಲಿ ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯ ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗ ಬಾರದೆಂದು ಸ್ಪಷ್ಟಪಡಿಸುತ್ತಾನೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತವೆ.
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕ ಅಂಬಿಗ ಎಂದರೆ ಯಾರು ಅವನ ವಚನವೊಂದರಲ್ಲಿ ಉತ್ತರಿಸುತ್ತಾನೆ:
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರಿ
ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ”
ಈತ ಒಳ್ಳೆಯ ವಚನಕಾರ, ಸುಮಾರು ಈತನ ೨೭೮ ವಚನಗಳು ದೊರಕಿವೆ. ವಚನಾಂಕಿತವನ್ನು ತನ್ನ ಹೆಸರಿನಲ್ಲೆ ಬಳಸಿದ್ದಾನೆ. ಅಂಬಿಗರ ಚೌಡಯ್ಯ ಪರಿಣಾಮ ಬೀರುವಂತೆ ರಚಿಸಿರುವ ಅವನ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಈತನ ಜನ್ಮಸ್ಥಳ ಗುಲ್ಬರ್ಗ ಜಿಲ್ಲೆಯ ಅಫಜಲ್ ಪುರ ತಾಲ್ಲೋಕಿನ ಚೌಡದಾನಪುರವೆಂದು ಸಂಶೋಧಕರು ಹೇಳಿದ್ದಾರೆ. ಅಂಬಿಗರ ಚೌಡಯ್ಯನ ಒಂದು ವಚನ ಹೀಗಿದೆ….
” ಅಂಗವ ಅಂದ ಮಾಡಿಕೊಂಡು ತಿರುಗುವ
ಭಂಗಗೇಡಿಗಳು ನೀವು ಕೇಳಿರೋ.
ಅಂಗಕ್ಕೆ ಅಂದವಾವುದೆಂದರೆ:
ಗುರುವಿಗೆ ತನುವ ಕೊಟ್ಟಿರುವುದೆ ಚೆಂದ,
ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ,
ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ.
ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ
ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ.
ಶಿವನ ಪಾದವ ಹೊಂದುವುದೆ ಚೆಂದ.
ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು
ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು,
ಒಂದು ಕಾಸನಾದರೂ ಪರರಿಗೆ ಕೊಡದೆ,
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರಿ
ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ”
ಈತ ಒಳ್ಳೆಯ ವಚನಕಾರ, ಸುಮಾರು ಈತನ ೨೭೮ ವಚನಗಳು ದೊರಕಿವೆ. ವಚನಾಂಕಿತವನ್ನು ತನ್ನ ಹೆಸರಿನಲ್ಲೆ ಬಳಸಿದ್ದಾನೆ. ಅಂಬಿಗರ ಚೌಡಯ್ಯ ಪರಿಣಾಮ ಬೀರುವಂತೆ ರಚಿಸಿರುವ ಅವನ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಈತನ ಜನ್ಮಸ್ಥಳ ಗುಲ್ಬರ್ಗ ಜಿಲ್ಲೆಯ ಅಫಜಲ್ ಪುರ ತಾಲ್ಲೋಕಿನ ಚೌಡದಾನಪುರವೆಂದು ಸಂಶೋಧಕರು ಹೇಳಿದ್ದಾರೆ. ಅಂಬಿಗರ ಚೌಡಯ್ಯನ ಒಂದು ವಚನ ಹೀಗಿದೆ….
” ಅಂಗವ ಅಂದ ಮಾಡಿಕೊಂಡು ತಿರುಗುವ
ಭಂಗಗೇಡಿಗಳು ನೀವು ಕೇಳಿರೋ.
ಅಂಗಕ್ಕೆ ಅಂದವಾವುದೆಂದರೆ:
ಗುರುವಿಗೆ ತನುವ ಕೊಟ್ಟಿರುವುದೆ ಚೆಂದ,
ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ,
ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ.
ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ
ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ.
ಶಿವನ ಪಾದವ ಹೊಂದುವುದೆ ಚೆಂದ.
ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು
ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು,
ಒಂದು ಕಾಸನಾದರೂ ಪರರಿಗೆ ಕೊಡದೆ,
ತಾನೇ ತಿಂದು, ನೆಲದಲ್ಲಿ ಮಡಗಿ,
ಕಡೆಗೆ ಯಮನ ಕೈಯಲಿ ಸಿಲ್ಕಿ
ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ.
ಇಂತಹ ಅಂದಗೇಡಿಗಳ ಮುಖವ ನೋಡಲಾಗದೆಂದಾತ,
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.”
ಆತ್ಮೊನ್ನತಿಯು ಜಂಗಮನ ಗುರಿಯಾಗಿದೆ.ಆದರೆ ಜಂಗಮ ತನ್ನಷ್ಟಕ್ಕೆ ತಾನು ಸದ್ಗುಣಿಯಾಗಿ ಆತ್ಮೋನ್ನತಿ ಪಡೆದರೆ ಸಾಲದು.ಸಕಲರ ಒಳತಿಗೆ ಶ್ರಮಿಸುತ್ತ ಜನರ ಜೀವನ ಮಟ್ಟವನ್ನು ಎತ್ತರಕ್ಕೊಯ್ಯಬೇಕು.ನಮ್ಮ ಬದುಕು ಜಡವಲ್ಲ ಚಲನಶೀಲ ಆಗಿದೆ. ಹರಿವ ನದಿಯಾಗಿದೆ.ನಿಂತ ನೀರಲ್ಲ. ಹರಿಯುವ ನೀರು ತನ್ನ ಹರಿವಿನಲ್ಲಿ ವೈವಿಧ್ಯತೆಯನ್ನು ಪಡೆದುಕೊಳ್ಳುವ ಹಾಗೆ ಬದುಕು ಕೂಡ ಹರಿವಿನಲ್ಲಿ ವೈವಿಧ್ಯತೆಯನ್ನು ಮತ್ತು ಸೌಂಧರ್ಯವನ್ನು ಹಾಗೂ ಹೊಸತನವನ್ನು ಪಡೆದುಕೊಳ್ಳುತ್ತದೆ.ನಿಷ್ಕ್ರೀಯ ಬದುಕು ಬದುಕಲ್ಲ ಅದು ಸ್ಥಾವರವೆನಿಸುತ್ತದೆ.ಎಲ್ಲ ದಾರ್ಶನಿಕರೂ ಬದುಕನ್ನು ಜಡತ್ವದಿಂದ ಜಂಗಮಗೊಳಿಸಲು ಹೋರಾಡಿದ್ದಾರೆ. ವ್ಯಕ್ತಿ ಕೇಂದ್ರಿತ ಶ್ರೇಷ್ಠತೆಯನ್ನು,ಪಾವಿತ್ರ್ಯವನ್ನು ಅಲ್ಲಗಳೆದು ಸಮಾನತೆಯ ಮೂಲಕ ಸದಾಚಾರದ ಮಾನದಂಡದಿಂದ ಪ್ರಜಾಸತ್ತಾತ್ಮಕವಾಗಿಸುವಲ್ಲಿ ಶರಣರ ಜಂಗಮತತ್ವ ಮಹತ್ವದ ಪಾತ್ರ ವಹಿಸಿದೆ. ಜ್ಞಾನಕೇಂದ್ರಿತ ವ್ಯವಸ್ಥೆಯನ್ನು ಅನುಭವಕೇಂದ್ರಿತ ಪ್ರಜ್ಞೆಯನ್ನಾಗಿಸಿದ ಶರಣರು ಅನುಭಾವದ ಸ್ವರೂಪವನ್ನು ನೀಡುವದರ ಮೂಲಕ ಜಂಗಮಗೊಳಿಸಿದರು.
ಅಂಧಾನುಕರಣೆಯ ಕಡೆಗೆ ಮುಖ ಮಾಡಿದ್ದ ಮನುಷ್ಯನನ್ನು ವೈಚಾರಿಕತೆಯ ಮೂಲಕ ಸಮಾಜಮುಖಿಯಾಗಿಸಿದರು.ಸುಜ್ಞಾನದ ಬೆಳಕಿನಿಂದ ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಜ್ಞಾನದ ಮಹತ್ವ ತಿಳಿಸಿಕೊಟ್ಟರು.
ಕಂಥೆ ತೊಟ್ಟವ ಗುರು ಅಲ್ಲ,ಕಾವಿ ತೊಟ್ಟವ ಜಂಗಮನಲ್ಲ,ಶೀಲ ಕಟ್ಟಿದವ ಶೀವಭಕ್ತನಲ್ಲ”ಶರಣ ಅಂಬಿಗರ ಚೌಡಯ್ಯ ಜಂಗಮ ಎನ್ನುವವ ಕಾವಿ ತೊಟ್ಟವನಲ್ಲ ಎಂದಿದ್ದಾನೆ.ಬಸವಣ್ಣನವರೂ ಲಾಂಛನಕ್ಕೆ ಶರಣೆಂಬೆ,ಆದರೆ ಲಾಂಛನಕ್ಕೆ ತಕ್ಕ ನಡತೆ ಇಲ್ಲದಿದ್ದರೆ ಛೀ ಎಂಬೆ ಎಂದಿದ್ದಾರೆ.ವೇಷಕ್ಕೆ ತಕ್ಕ ನಡತೆ ಮುಖ್ಯ.ವೇಷದ ಮರೆಯ ಮೋಸ ಖಂಡನಾರ್ಹವಾಗಿದೆ.ಜಂಗಮ ಎಂದರೆ ವ್ಯಕ್ತಿಯಲ್ಲ ಅದೊಂದು ತತ್ವ.ಜಂಗಮ ಎಂಬುದು ಸಮಾಜ.ಸಮಾಜದ ಸೇವೆಯಲ್ಲಿ ತೊಡಗಿದವನು ಜಂಗಮ.ಸಮಾಜದ ಒಳತಿಗೆ ಶ್ರಮಿಸುವ,ಜನಮನ ತಿದ್ದುವ,ಬುದ್ಧಿ ಹೇಳುವ,ಸಮಾಜವನ್ನು ಶುದ್ಧಿಕರಿಸುವವನು ಜಂಗಮ. ಸಮಾಜದ ಹಿತಕ್ಕಾಗಿ ಸ್ವಹಿತ ಮರೆತು ಸೇವಕನಾಗಿ ಸಮಾಜದ ಕಲ್ಯಾಣಕ್ಕಾಗಿ ಪ್ರಜಾಪ್ರತಿನಿಧಿಗಳು ಶ್ರಮಿಸಬೇಕೆಂಬುದು ಬಸವಣ್ಣನವರ ನಿಲುವಾಗಿತ್ತು. ಸಮೂಹದ ಜನರು ಸದಾಚಾರದಿಂದ ಇರುವುದು ಅವರ ನಿಲುವಾಗಿತ್ತು. ಅಂಬಿಗರ ಚೌಡಯ್ಯ ವಿಚಾರವಂತ, ಹಿರಿಯರು ಹೇಳಿದ್ದಾರೆಂದು ಯಾವುದೇ ತತ್ವವನ್ನು ಕುರುಡಾಗಿ ಅನುಸರಿಸುತ್ತಿರಲಿಲ್ಲ, ದಾಕ್ಷಿಣ್ಯ ವಿಲ್ಲದೆ ಚರ್ಚೆ ಮಾಡಿ ಮನಸ್ಸು ಒಪ್ಪಿದರೆ ಮಾತ್ರ ಅಂಗೀಕರಿಸುತ್ತಿದ್ದನು.
ಅಂಬಿಗರ ಚೌಡಯ್ಯ ಏಕದೇವೋಪಾಸಕನು, ಇಷ್ಟಲಿಂಗ ಆರಾಧಕನು, ದೇವಾಲಯ ಗುಡಿಗುಂಡಾರ ವಿರೋಧಿಯಾತ, ಇಷ್ಟಲಿಂಗಪೂಜೆ ಪ್ರತಿಯೊಬ್ಬರು ಮಾಡಬೇಕು. ಇಲ್ಲಿ ಯಾವ ಭೇಧಭಾವ ಇಲ್ಲ. ದೇಹವನ್ನೇ ದೇವಾಲಯವಾಗಿಸಿಕೊಳ್ಳಲು ಅದು ಸಾಧನ ಎಂದನು. ಇಷ್ಟಲಿಂಗವನ್ನು ಪೂಜಿಸದೆ ಬೆಟ್ಟದ ಲಿಂಗ, ಅಂದರೆ ಸ್ಥಾವರಲಿಂಗಕ್ಕೆ ಹೋಗಿ ಬೀಳುವ ಮೂಢರನ್ನು ಕಂಡ ಚೌಡಯ್ಯ ಹೀಗೆ ಹೇಳಿದ್ದಾನೆ.
“ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆಮೂಳರ ಕಂಡಡೆ
ಗಟ್ಟಿ ಪಾದರಕ್ಸೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯ.”
ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯ ನಿಜ ಶರಣನು. ಸಮಾಜದ ಅನಾಚಾರ, ಅತ್ಯಾಚಾರ, ಢಂಬಾಚಾರಗಳನ್ನೂ ನಿರ್ಭಿತಿಯಿಂದ ಕಟುವಾಗಿ ಟೀಕಿಸಿದವನು. ತನ್ನ ವಚನಗಳನ್ನು ವೈಚಾರಿಕ ವಾಗಿ ನಿರೂಪಿಸಿ ಮಹಾಮಾನವತಾವಾದಿಯಾಗಿದ್ದಾನೆ.
-.ಜಯಶ್ರೀ.ಭ.ಭಂಡಾರಿ.
ಬಾದಾಮಿ