ಕಿರಿದಾದ ಕಾಯ
ಹಿರಿದಾದ ಭಾವ
ಗುರು-ಲಿಂಗ
ಕಿರಿದಾದ ಕಾಯ
ಹಿರಿದಾದ ಭಾವ
ಮೆಲು ದನಿಯಲಿ
ಒಸರುವ
ಬೆಲ್ಲದಚ್ಚಿನ
ಮೆದು ಮಧುರ ಮಾತು…..
ಗಿಡದಲರಳಿದ ಹೂವಂತೆ
ಸದಾ ಲಕಲಕಿಸುವ ಮೊಗ
ನೋವು ನಿರಾಸೆಗಳನೆಣಿಸದ
ಬಿರಿದ ಮೊಗ್ಗಂತೆ ಅಧರ …..
ಎರಡರಿಯದ ಮನ
ದಾರಿಯಲಿ ಕಂಡ
ಕಲ್ಲು ಮುಳ್ಳುಗಳ
ತೆಗೆಯುತ
ನಡೆಯುವವರಿಗೆ
ಹಾದಿಯ ಹಸನಾಗಿಸುತ
ತಾವೂ ಮಗುವಂತೆ
ಪಾಯ್ ಪಾಯ್
ನಡೆಯುತ
ಅಪಘಾತವರಿಯದೇ,
ಕೆಲವೊಮ್ಮೆ ಅದಕೂ
ಎಳಸದೆ,
ಎಲ್ಲರನೊಡಗೊಂಡು
ಬಾಳ ಗಮ್ಯದೆಡೆಗೆ
ಸಾಗಿರುವ ಸಾರ್ಥಕ
ಪಯಣಿಗ…
ಮಹಾಗುರುವಿನ
ಅರಿವನು ಹೀರಿ ,
ನಮ್ಮಂಥವರಿಗೆಲ್ಲ
ಎಡೆಬಿಡದೆ ಸೂರಾಡಿ
ದಣಿವರಿಯದೆ ಸದಾ
ಗುರುತನದ ಕಾಯಕದಿ
ಬೆರೆದು,
ನಮ್ಮೆಲ್ಲರ ಅಂಗೈಯೊಳು
ಲಿಂಗವಾದ
‘ಗುರುಲಿಂಗ’
ಆರು ಗುಣಗಳ ಹರಿದು
ಪ್ರೀತಿ ಸಾರವನೆರೆದು
ಬಾಳ ಹೊತ್ತಿಗೆಯಾದ
ಮಹಾಜಂಗಮ
–ಕೆ.ಶಶಿಕಾಂತ
ಲಿಂಗಸೂಗೂರ