ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ (ಫೆಬ್ರುವರಿ 27)
ಹೆಸರೇ ಹೇಳುವಂತೆ ಸೇವೆ ಮಾಡುವ ಮನೋಭಾವವನ್ನು ಹೊಂದಿರುವ ಸಮಾನಮನಸ್ಕರ ಗುಂಪನ್ನು ಸ್ವಯಂ ಸೇವಾ ಸಂಸ್ಥೆ ಎಂದು ಹೇಳಬಹುದು. ಗ್ರಾಮ ಮಟ್ಟದಿಂದ ಹಿಡಿದು ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ತನ್ನದೇ ಆದ ನಿಯಮಾವಳಿಗಳನ್ನು ಹೊಂದಿರುವ ಈ ಸ್ವಯಂ ಸೇವಾ ಸಂಸ್ಥೆಗಳು ಅನೇಕ ಬಾರಿ ಸರ್ಕಾರಿ ಇಲಾಖೆಗಳಲ್ಲಿ ನೋಂದಾಯಿತ ಸಂಸ್ಥೆಗಳಾಗಿರುವುದಿಲ್ಲ.
ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಸರಕಾರಿ ಇಲಾಖೆಗಳಲ್ಲಿ ತಮ್ಮ ಸಂಸ್ಥೆಯ ನೋಂದಣಿಯನ್ನು ಮಾಡಿಸಿ ಆ ಪ್ರಕಾರ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾರೆ. ಇನ್ನು ಕೆಲವರು ತಮ್ಮದೇ ಆದ ಸ್ವಯಂಸೇವಾ ಸಂಸ್ಥೆಗಳನ್ನು ಹೊಂದಿದ್ದರು ಯಾವುದೇ ರೀತಿಯ ನೋಂದಣಿ ಮಾಡದೆ ತಮ್ಮ ಮನತೃಪ್ತಿಗಾಗಿ ಕಾರ್ಯನಿರ್ವಹಿಸುತ್ತಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರಾಸ್ ನಂತಹ ಸಂಸ್ಥೆಗಳು ಉತ್ತಮ ಸ್ವಯಂಸೇವಾ ಸಂಸ್ಥೆಗಳಾಗಿದ್ದರೆ ನಮ್ಮ ಭಾರತದಲ್ಲಿ ರಿಲಯನ್ಸ್ ಫೌಂಡೇಶನ್, ಮದರ್ ತೆರೆಸಾ ಅವರ ನಿರ್ಮಲ್ ಸದನ ಮತ್ತು ಕರ್ನಾಟಕದಲ್ಲಿ ಇನ್ಫೋಸಿಸ್ ಫೌಂಡೇಶನ್, ಅಜೀಂ ಪ್ರೇಮ್ ಜಿ ಫೌಂಡೇಶನ್ ಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಗಾತ್ರದಲ್ಲಿ ಅದೆಷ್ಟೇ ಹಿರಿಕಿರಿದಾಗಿದ್ದರೂ ತನ್ನ ಕಾರ್ಯನಿರ್ವಹಣೆಯಲ್ಲಿ ಈ ಸ್ವಯಂ ಸೇವಾ ಸಂಸ್ಥೆಗಳು ಹಿಂದೆ ಬಿದ್ದಿಲ್ಲ. ಯಾವುದೇ ರೀತಿಯ ಆರ್ಥಿಕ ಬೆಂಬಲ ಇಲ್ಲದೇ ಇದ್ದಾಗ್ಯೂ ಕೂಡ ತಮ್ಮ ಅಸಾಮಾನ್ಯ ಧೀಶಕ್ತಿಯಿಂದ ಸ್ವಯಂ ಸೇವಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಜನರಿದ್ದಾರೆ. ಆದ್ದರಿಂದಲೇ ಸೇವಾ ವಲಯದಲ್ಲಿ ಸ್ವಯಂಸೇವಾ ಸಂಸ್ಥೆಗಳಿಗೆ ಅಗ್ರ ಮನ್ನಣೆ ದೊರೆಯುತ್ತದೆ.
ದೇಶದ ಯಾವುದೇ ಭಾಗದಲ್ಲಿ ನೋಡಿದರೂ ಸ್ವಯಂ ಸೇವಾ ಸಂಸ್ಥೆಗಳು ಶಿಕ್ಷಣ, ವಸತಿ, ಆರೋಗ್ಯ ಮತ್ತಿತರ ವಿಷಯಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಯುದ್ಧ,ಬರ, ನೆರೆ, ಕ್ಷಾಮ ಡಾಮರಗಳಂತಹ ಪರಿಸ್ಥಿತಿಗಳಲ್ಲಿ ಸ್ವಯಂಸೇವಾ ಸಂಸ್ಥೆಗಳವರು ಹಗಲಿರುಳು ಕಾರ್ಯನಿರ್ವಹಿಸಿ ಸರ್ಕಾರದ ಜವಾಬ್ದಾರಿಯನ್ನು ಬಹಳಷ್ಟು ಹಗುರ ಮಾಡುತ್ತಾರೆ. ತಿಂಗಳುಗಟ್ಟಲೆ ತಮ್ಮ ಮನೆಗಳನ್ನು ತೊರೆದು ಸಂತ್ರಸ್ತರ ಸಹಾಯಕ್ಕೆ ಧಾವಿಸುವ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯನಿರ್ವಹಣೆಯಿಂದಾಗಿ ತುರ್ತು ಪರಿಸ್ಥಿತಿಗಳಲ್ಲಿ ಸರ್ಕಾರ ಸಮಾಧಾನದ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ. ತಮ್ಮ ಜೀವದ ಹಂಗು ತೊರೆದು ಪರಿಸ್ಥಿತಿಯ ನಿರ್ವಹಣೆಯನ್ನು ಮಾಡುವ ಸ್ವಯಂಸೇವಾ ಸಂಸ್ಥೆಯ ಸ್ವಯಂಸೇವಕರಿಗೆ ಯಾವುದೇ ರೀತಿಯ ಪ್ರಾಣಪಾಯವಾದರೂ ಅವರು ಹಿಂಜರಿಯುವುದಿಲ್ಲ.
ಯುದ್ಧಕಾಲದಲ್ಲಿ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಪೀಡಿತರಿಗೆ ಆಹಾರ, ಬಟ್ಟೆ, ವಸತಿಗಳನ್ನು ಸಮಾಜದ ವಿವಿಧ ಮೂಲಗಳಿಂದ ಸಂಗ್ರಹಿಸಿ ಒದಗಿಸುವುದಲ್ಲದೆ ಅವರ ಮುಂದಿನ ಬದುಕಿಗೆ ಬೇಕಾಗುವ ಅವಶ್ಯಕ ಸಹಾಯಗಳನ್ನು ಪಡೆಯುವಲ್ಲಿ ಅವಶ್ಯಕ ಸಹಾಯ ಸಹಕಾರವನ್ನು ನೀಡುತ್ತವೆ.
ಆದರೆ ಅದೇ ಸ್ವಯಂ ಸೇವಾ ಸಂಸ್ಥೆಗಳು ಶಾಂತಿಯ ಸಮಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಯ್ದುಕೊಳ್ಳಲು ಅನುವಾಗುವಂತೆ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ನಾಟಕಗಳನ್ನು ಆಡಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ಅಡಗಿರುವ ಅಜ್ಞಾನ, ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿ ಅವರಿಗೆ ಸನ್ಮಾರ್ಗವನ್ನು ತೋರುತ್ತವೆ. ಆರ್ಥಿಕ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಅವರಿಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ರೀತಿಯ ಉದ್ಯೋಗ ಆಧಾರಿತ ತರಬೇತಿಗಳನ್ನು ನೀಡುತ್ತಾ, ಅವರು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ ಮಾಡುತ್ತವೆ.
ಇತ್ತೀಚೆಗೆ ಇಡೀ ವಿಶ್ವವನ್ನು ನಡುಗಿಸಿದ ಕರೋನ ಪ್ಯಾಂಡೆಮಿಕ್ ನ ಸಮಯದಲ್ಲಿ ವಿಶ್ವದಾದ್ಯಂತ ಕಾರ್ಯನಿರ್ವಹಿಸಿದ್ದು ಇದೇ ಸ್ವಯಂ ಸೇವಾ ಸಂಸ್ಥೆಗಳು. ತಮ್ಮ ಜೀವದ ಹಂಗು ತೊರೆದು ಕರೋನ ವ್ಯಾದಿಪೀಡಿತರನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ ಈ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಮನೆಯವರೆ ಹೆದರಿದರು ಕೂಡ ತಾವು ಖುದ್ದಾಗಿ ನಿಂತು ಕೋವಿಡ್ ನಿಂದ ಮೃತರಾದ ಜನರ ಅಂತಿಮ ಕ್ರಿಯಾ ಕರ್ಮಗಳನ್ನು ನೆರವೇರಿಸಿದ್ದಾರೆ. ಮಾಸ್ಕ್ ಗಳ ವಿತರಣೆ, ಸ್ಯಾನಿಟೈಸರ್ ಗಳ ಬಳಕೆಯನ್ನು ವಿವರಿಸುವ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಜನರಿಗೆ ಒತ್ತಾಯಿಸಿದ ಈ ಸ್ವಯಂ ಸೇವಾ ಸಂಸ್ಥೆಗಳು ಕೊರೋನಾ ಸಂಕಷ್ಟಕಾಲದಲ್ಲಿ ಮನೆ ಮನೆಗೆ ಅವಶ್ಯಕ ದಿನಸಿ ಸಾಮಾನುಗಳನ್ನು, ಔಷಧಗಳನ್ನು ಪೂರೈಸುವ ಮೂಲಕ ಜನರ ಬವಣೆಯನ್ನು ನೀಡಿದ್ದಾರೆ.
ಮನೆಯಲ್ಲಿ ಇರುವ ವೃದ್ಧರಿಗೆ ರೋಗಪೀಡಿತರಿಗೆ ಸಹಾಯಕವಾಗುವಂತಹ ಅಭಿವೃದ್ಧಿ ಪಡಿಸಿ
ವಯಸ್ಕರ ಮಾನಸಿಕ ತೊಳಲಾಟವನ್ನು ಹೋಗಲಾಡಿಸಿ ಅವರೆಲ್ಲ ನೆಮ್ಮದಿಯ ನಿಟ್ಟಿಸಿರು ಬಿಡಲು ಕಾರಣರಾಗಿದ್ದಾರೆ.
ದೀಪದ ಅಡಿಯಲ್ಲಿ ಕತ್ತಲು ಇರುವಂತೆ ಎಷ್ಟೋ ಬಾರಿ ಕೆಲ ಸ್ವಯಂ ಸೇವಾ ಸಂಸ್ಥೆಗಳು ಸರಕಾರಿ ಕಾಗದಗಳಲ್ಲಿ ಮಾತ್ರ ಉಳಿದು ಹೋಗಿದ್ದು ಸರ್ಕಾರದಿಂದ ಮಂಜೂರಾಗುವ ಹಣಕ್ಕಾಗಿ ಮಾತ್ರ ತಮ್ಮ ಸ್ವಯಂಸೇವಾ ಸಂಸ್ಥೆಯನ್ನು ನೋಂದಣಿ ಮಾಡಿಸಿದ್ದು ಉಂಟು. ಇವುಗಳು ಅತ್ಯಂತ ಕಳಪೆ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಕೂಡ ಸರ್ಕಾರದಿಂದ ಈ ಕೆಲಸಕ್ಕಾಗಿ ದೊರೆಯುವ ಆರ್ಥಿಕ ಸಹಾಯವನ್ನು ಪಡೆಯುವಲ್ಲಿ ಮಾತ್ರ ಹಿಂದೇಟು ಹಾಕುವುದಿಲ್ಲ. ಅಂಗೈಯಲ್ಲಿನ ಗೆರೆಗಳಂತೆ ಇಂತಹ ಸ್ವಯಂ ಸೇವಾ ಸಂಸ್ಥೆಗಳು ಇದ್ದರೂ ಕೂಡ ಸರಕಾರ ಇವರನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ವಿಷಾದನೀಯ.
ಹೀಗೆ ಸ್ವಯಂ ಸೇವಾ ಸಂಸ್ಥೆಗಳು ಗಲ್ಲಿ ಗಲ್ಲಿಗಳಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೆ ಜನರ ಮೌನದ ಪಿಸು ಮಾತಿಗೆ ಗಟ್ಟಿ ದನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಯಾಂತ್ರಿಕ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿವೆ. ಜನರಲ್ಲಿ ನಂಬಿಕೆ ವಿಶ್ವಾಸಗಳ ತಂತುಗಳನ್ನು ಮೀಟಿ ಅವರು ಕೂಡ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಲ್ಲಿ ಸಫಲರಾಗಿದ್ದಾರೆ ಇಂತಹ ಸಮಾಜಮುಖಿ ಸಾರ್ವಜನಿಕ ಸೇವಾ ಸಂಸ್ಥೆಗಳ ದಿನಾಚರಣೆಯನ್ನು ಈ ದಿನ ಆಚರಿಸುತ್ತಿದ್ದು ಆ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಶುಭವಾಗಲಿ ಎಂದು ಹಾರೈಸೋಣ.., ಅಂಥವರ ಸಂತತಿ ಸಾವಿರವಾಗಲಿ ಎಂಬ ಮಹದೇಚ್ಚೆಯನ್ನು ವ್ಯಕ್ತಪಡಿಸುವ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್