ರಾಜ ಮರೆಯಾದ ಕ್ಷಣ

ರಾಜ ಮರೆಯಾದ ಕ್ಷಣ

ಸದಾ ತಮಾಷೆ ಮಾಡಿ ಹಗುರಾಗಿಸುವವ
ರಾಜ ಮೀಸೆ ತಿರುವಿ ನಕ್ಕ ಶ್ರೀಸಾಮಾನ್ಯನು
ಧೀಮಂತ ಎದೆಗಾರಿಕೆ ಹೃದಯದ ಧಣಿಯು
ಎಲ್ಲಿ ಮರೆಯಾದನು ನೋಡು ನೋಡುತಲೆ?

ರಾಜರೆಲ್ಲ ಮರೆಯಾಗುತಿರುವ ಈ ಗಳಿಗೆಯಲಿ
ಸಾಂಸ್ಕೃತಿಕ ರಾಯಭಾರಿಯೆಡೆ ಹೊರಟನೇ?
ಅಲ್ಲಿಯೂ ಮಾಡುವಿರೇನೂ ಇಬ್ಬರೂ ಸೇರಿ
ಸುರಗಿರಿಯ ಸುಂದರ ಸಾಹಿತ್ಯ ಸಮ್ಮೇಳನ?

ವೇದಿಕೆಗೆ ನೀವು ಬಂದರೇ ಆಗ್ತಿತ್ತು ಸಂಚಲನ
ಸಿಂಹ ಘರ್ಜನೆಗೆ ಅದುರುತಿತ್ತು ದುರುಳಕೂಟ
ದೀನ ದಲಿತರ ಎದೆ ಬಾನಿನ ಸೂರ್ಯ ಎಲ್ಲಿ?
ಅದೋ ಅಲ್ಲಿ ಬಾನಲ್ಲಿ ರಾಜಠೀವಿಯ ದೊರೆ!

ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ
ಸಹಸ್ರ ಸಹಸ್ರ ಜನ ಪ್ರವಾಹ ಬಂದೇ ಬರುತಿದೆ
ಎಂಥ ಮೋಡಿಗಾರ ನೀ ಶುಭ್ರಶ್ವೇತವಸ್ತ್ರಧಾರಿ?
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬಾ!

ಇನ್ನೂ ಬೇಕಿತ್ತು ಈ ಪುಣ್ಯದ ಮಣ್ಣಿಗೆ ನಿನ್ನ ಸೇವೆ
ನಾಲ್ವಡಿ ರಾಜಾ ವೆಂಕಟಪ್ಪರ ಅಮರ ಭೂಮಿಗೆ
ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
ಇದು ಬರೀ ಮಾತಲ್ಲ ರಾಜಾಮರನುಡಿತೋರಣ!

ಮತ್ತೆ ಬರ್ರಿ ಸಂಧಿಸೋಣ ಇಲ್ಲಿಯೇ ನಾವ್ನಿವೆಲ್ಲ
ಮಾಡೋಣ ಅದ್ದೂರಿಯ ದೈವತ್ವದ ಸಮ್ಮೇಳನ
ಪ್ರೀತಿ ವಾತ್ಸಲ್ಯ ಅಂತಃಕರುಣಗಳ ಹಂಚೋಣ
ಬಡಬಗ್ಗರ ದಮನೀತರ ಗೋಷ್ಠಿಗಳ ಮಾಡೋಣ
ಪ್ರತಿ ಗೋಷ್ಠಿಗೂ ನೀವೇ ಆಗಬೇಕು ಅಧ್ಯಕ್ಷರು
ಜೊತೆಗಿರಲಿ ಸಾಂಸ್ಕೃತಿಕ ರಾಯಭಾರಿ ಸಾರಥ್ಯ!

ಹೋಗಿಬನ್ನಿ ಸರ್ವಜನಾಂಗದ ಭಾವೈಕ್ಯಬಂಧು ಸದಾ ಜನಹಿತ ಬಯಸಿದ ಸುರಗಿರಿಯ ನಾಯಕ
ನೆನಪಿಡುತ್ತದೆ ಈ ವೀರನೆಲ ನಿಮ್ಮನು ಸದಾಕಾಲ
ಪ್ರೀತಿ ಹಂಚಿಯೆ ಹೋದಿರಲ್ಲ ನೀವಿಲ್ಲಿ ಭರಪೂರ!

ಶ್ರೀನಿವಾಸ ಜಾಲವಾದಿ
ಸುರಪುರ

3 thoughts on “ರಾಜ ಮರೆಯಾದ ಕ್ಷಣ

  1. good tribute to the departed soul. His moustache says it all. Nalwadi krishnaraj Wodeyar was a towering figure in the art of giving and known by the name rishi.

  2. ಅದ್ಭುತ ಬರಹ ಸರ್ ನಿಜವಾಗಲೂ ನಾವೆಲ್ಲರೂ ತುಂಬಾ ಮಿಸ್ ಮಾಡ್ಕೊಳ್ತಾ ಇದ್ದೇವೆ

Comments are closed.

Don`t copy text!