ಸೋಲೊಪ್ಪಿಕೊಳ್ಳುವುದ ಕಲಿಯಿರಿ
ಆತ ಅತ್ಯಂತ ಜಾಣ ಹುಡುಗ. ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ತೆಗೆದುಕೊಳ್ಳುವುದು ಆತನಿಗೆ ನೀರು ಕುಡಿದಷ್ಟೇ ಸಲೀಸಾಗಿತ್ತು. ಮುಂದೆ ಉನ್ನತ ವಿದ್ಯಾಭ್ಯಾಸಕ್ಕೆ ಐಐಟಿಗೆ ಆಯ್ಕೆಯಾದ ಆತ ಅಲ್ಲಿಯೂ ಕೂಡ ಅತ್ಯುನ್ನತ ಅಂಕಗಳನ್ನು ಗಳಿಸಿದ.
ನಂತರ ಎಂಬಿಎ ಮಾಡಲು ಅಮೆರಿಕಾದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ತನ್ನ ಮೆರಿಟ್ ಆಧಾರದ ಮೇಲೆ ದಾಖಲಾದನು.
ಅಲ್ಲಿಯೂ ಕೂಡ ಅತ್ಯಂತ ಒಳ್ಳೆಯ ಅಂಕಗಳನ್ನು ಪಡೆದ ಆತ ಅಮೆರಿಕದಲ್ಲಿಯೇ ಒಳ್ಳೆಯ ನೌಕರಿ ಗಿಟ್ಟಿಸಿದನು.
ಮುಂದೆ ಆತನ ಪಾಲಕರು ಆತನಿಗೆ ವಿವಾಹ ಮಾಡಿದರು. ಪತ್ನಿಯೊಂದಿಗೆ ಅಮೆರಿಕದಲ್ಲಿಯೇ ಸೆಟ್ಲ್ ಆದ ಆ ವ್ಯಕ್ತಿ ತನ್ನ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತಾ ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿದ್ದ. 5 ಕೋಣೆಗಳ ಅತಿ ದೊಡ್ಡ ಮನೆಯನ್ನು, ಐಷಾರಾಮಿ ಕಾರನ್ನು ಖರೀದಿಸಿದ ಆತ ಮನೆಯಲ್ಲೆಲ್ಲಾ ಒಳ್ಳೆಯ ಪೀಠೋಪಕರಣಗಳನ್ನು ಹೊಂದಿದ್ದನು.
ಭವ್ಯವಾದ ಮನೆ, ಐಶಾರಾಮಿ ಕಾರು, ಮುದ್ದಿನ ಮಡದಿ ಮತ್ತು ಮೂರು ಮಕ್ಕಳು ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು ಎನ್ನುವಂತಿದ್ದ ಜೀವನ ಶೈಲಿ. ಆದರೆ ಒಂದು ದಿನ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಶೂಟ್ ಮಾಡಿ ಸಾಯಿಸಿದ ಆ ವ್ಯಕ್ತಿ ತಾನು ಕೂಡ ಗುಂಡಿಟ್ಟುಕೊಂಡು ಸತ್ತಿದ್ದ.
ಕಾರಣ ಮಾತ್ರ ಯಾರಿಗೂ ಗೊತ್ತಾಗಲಿಲ್ಲ.
ಆದರೆ ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ತಜ್ಞರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ
ಈ ಕುರಿತು ತನಿಖೆಯನ್ನು ಕೈಗೊಂಡರು. ತನಿಖೆಯ ಅಂಗವಾಗಿ ಆತನ ಹಲವಾರು ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ವಿಚಾರಣೆ ಮಾಡಲಾಗಿ ಬೆಳಕಿಗೆ ಬಂದದ್ದು ಇಷ್ಟು… ಕೆಲ ಸಮಯದ ಹಿಂದೆ ಆತ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದು ಬಹಳ ದಿನಗಳವರೆಗೆ ಆತನಿಗೆ ಬೇರೊಂದು ಉದ್ಯೋಗ ದೊರೆಯಲಿಲ್ಲ. ನಂತರ ದೊರಕಿದ ಉದ್ಯೋಗದಲ್ಲಿ ಆತನಿಗೆ ಈ ಮೊದಲು ದೊರೆಯುತ್ತಿದ್ದ ಸಂಬಳದ ಅರ್ಧ ಭಾಗದಷ್ಟು ಕೂಡ ಹಣ ದೊರೆಯುತ್ತಿರಲಿಲ್ಲ. ಈಗಾಗಲೇ ಕಂತಿನಲ್ಲಿ ಖರೀದಿಸಿದ ಮನೆ, ಕಾರುಗಳ ಕಂತನ್ನು ತೀರಿಸಲಾಗದೆ ಅವು ಆತನ ಕೈ ಬಿಟ್ಟು ಹೋಗುವ ದಿನಗಳು ದೂರವಿರಲಿಲ್ಲ. ಇದರ ಮೇಲೆ ಮಕ್ಕಳ ಶಾಲೆಯ ಫೀಸು, ಮತ್ತಿತರ ಖರ್ಚುಗಳು ಆತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೆಲ್ಲದರ ಪರಿಣಾಮವಾಗಿ ಆತ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದನು.
ಚಿಕ್ಕಂದಿನಿಂದಲೂ ಯಶಸ್ಸನ್ನೇ ಕಾಣುತ್ತಾ ಬಂದಿದ್ದ ಆತನಿಗೆ ಸೋಲಿನ ರುಚಿ ತಿಳಿದಿರಲಿಲ್ಲ, ಸೋಲುವುದು ಅವಮಾನ ಎಂದು ಭಾವಿಸಿದ್ದ ಆತ ತನ್ನ ಬದುಕಿನಲ್ಲಿ ಉಂಟಾದ ಆಕಸ್ಮಿಕ ಅಧಃಪತನಕ್ಕೆ ತಯಾರಿರಲಿಲ್ಲ. ಇದಲ್ಲವೇ ದುರಂತ !!
ಏನೆಲ್ಲಾ ದೊಡ್ಡ ದೊಡ್ಡ ಡಿಗ್ರಿಗಳನ್ನು
ಮುಡಿಗೇರಿಸಿಕೊಂಡಿದ್ದರು ಬದುಕಿನ ಏರಿಳಿತಗಳನ್ನು ಸಮನಾಗಿ ಸ್ವೀಕರಿಸುವ ಸ್ಥಿತ ಪ್ರಜ್ಞತೆ ಇಲ್ಲದೆ ಹೋದಾಗ ಇಂತಹ ವೈಪರೀತ್ಯಗಳು ಉಂಟಾಗುತ್ತವೆ.
ಕೆಲವು ವರ್ಷಗಳ ಹಿಂದೆ ನಮ್ಮ ಭಾರತದಲ್ಲಿಯೂ ಕೂಡ ಆರ್ಥಿಕ ಸ್ಥಿತಿ ಕುಸಿದು ಬಿದ್ದಾಗ ಹಲವಾರು ಜನ ಇಂಜಿನಿಯರಗಳು, ಸಾಫ್ಟ್ ವೇರ್ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡರು. ಆತ್ಮಹತ್ಯೆ ಬದುಕಿನ ಘನತೆಯನ್ನು ಕುಗ್ಗಿಸುವ ಕೆಲಸ.
ಯಾರಾದರೂ ಕೂಲಿ ಕಾರ್ಮಿಕ,ಗಾರೆ ಕೆಲಸದ ವ್ಯಕ್ತಿ, ಮನೆ ಮನೆಗಳಲ್ಲಿ ಪಾತ್ರೆ ,ಬಟ್ಟೆ ತೊಳೆಯುವ ಕೆಲಸ ಮಾಡುವವರು ದಿನಗೂಲಿ ನೌಕರರು ಎಂದಾದರೂ ಆತ್ಮಹತ್ಯೆ ಮಾಡಿಕೊಂಡದ್ದು ನೋಡಿದ್ದೀರಾ?? ಬಹುತೇಕ ಇಲ್ಲ. ಇಂದು ತಮ್ಮನ್ನು ಕೆಲಸದಿಂದ ತೆಗೆದು ಹಾಕಿದರೂ ನಾಳೆಯ ದಿನ ಮತ್ತೊಂದೆಡೆ ಕೆಲಸ ಸಿಗಬಹುದು ಎಂಬ ಭರವಸೆ ಅವರನ್ನು ತಪ್ಪು ನಿರ್ಧಾರ ಕೈಗೊಳ್ಳಲು ಬಿಡುವುದಿಲ್ಲ. ತಮ್ಮ ಕಾಲುಗಳ ಬಲದ ಮೇಲೆ ನಂಬಿಕೆ ಇರುವ ಗಿಡದ ಮೇಲಿನ ಪಕ್ಷಿ ಇದ್ದಂತೆ ಅವರು. ಯಾವುದೇ ಔಪಚಾರಿಕ ವಿದ್ಯೆ ಅವರಿಗೆ ಇಲ್ಲದಿದ್ದರೂ ಪ್ರಾಪಂಚಿಕ ಜ್ಞಾನ, ತಿಳುವಳಿಕೆ ಹೊಂದಿರುವ ಅವರು ಬದುಕು ತಮ್ಮತ್ತ ಎಸೆಯುವ ಪ್ರತಿ ಸವಾಲುಗಳಿಗೆ ಉತ್ತರ ಹುಡುಕಬಲ್ಲರು.
ಖ್ಯಾತ ಹಾಸ್ಯ ಕಲಾವಿದ ಅಭಿನವ ಬೀಚಿ ಎಂದೇ ಹೆಸರಾದ ಪ್ರಾಣೇಶ್ ಅವರು ಒಂದೆಡೆ ಹೇಳುತ್ತಾರೆ ನಮ್ಮ ಹಳ್ಳಿ ಊರುಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಜೀವನದಲ್ಲಿ ಯಾವತ್ತೂ ಸವಾಲುಗಳಿಗೆ ಅಂಜುವುದಿಲ್ಲ… ಸವಾಲುಗಳನ್ನು ಎದುರಿಸುವ ಅವಕಾಶವನ್ನು ಬದುಕು ಅವರಿಗೆ ಒದಗಿಸಿಕೊಟ್ಟಿರುತ್ತದೆ ಎಂದು.
ಹಾಗಾದರೆ ವಿದ್ಯಾವಂತರು ತಪ್ಪುತ್ತಿರುವುದು ಎಲ್ಲಿ???
ಇಂದಿನ ಜಗತ್ತು ಮುಖ ಮಾಡಿ ನಿಂತಿರುವುದು ಯಶಸ್ಸು ಮತ್ತು ಅದನ್ನು ಸಾಧಿಸುವ ಕಡೆ ಮಾತ್ರ. ಎಲ್ಲರೂ ಗೆಲ್ಲುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಾರೆಯೇ ಹೊರತು ಸೋಲಿನ ಪಾಠಗಳನ್ನು ಸೋತ ನಂತರ ಹೇಗೆ ಮತ್ತೆ ಚೇತರಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ಹೇಳಿಕೊಡುವಲ್ಲಿ ವಿಫಲರಾಗುತ್ತಿದ್ದಾರೆ
ವ್ಯಕ್ತಿಯ ನಿಜವಾದ ಯಶಸ್ಸು ಆತ ತನ್ನ ದೌರ್ಬಲ್ಯಗಳನ್ನು ಮೆಟ್ಟಿನಿಂತು ಬದುಕನ್ನು ಸವಾಲಾಗಿ ಸ್ವೀಕರಿಸುವಲ್ಲಿ ಇದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕಿನಲ್ಲಿ ಸೋಲುವುದು ತಪ್ಪಲ್ಲ, ಆದರೆ ಸೋತು ಆತ್ಮಹತ್ಯೆಗೆ ಶರಣಾಗುವುದು ಖಂಡಿತವಾಗಿಯೂ ತಪ್ಪು.
ಶಾಲೆಯ ಪಠ್ಯ ಪುಸ್ತಕಗಳ ಓದು ನಮಗೆ ಒಳ್ಳೆಯ ಉದ್ಯೋಗ ದೊರಕಿಸಿಕೊಡಲು, ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ ನಿಜ…. ಆದರೆ ಜೀವನದ ಸಮಸ್ಯೆಗಳನ್ನು ಎದುರಿಸಲು ವ್ಯಕ್ತಿ ಸಮಾಜದ ಭಾಗವಾಗಲೇಬೇಕು.
ಜೀವನದ ಅವಶ್ಯಕತೆಗಳನ್ನು ಪೂರೈಸಲು ಹಣ ಬೇಕಾಗುತ್ತದೆ ನಿಜ ಆದರೆ ಹಣ ಸಂಪಾದನೆಯೇ ಜೀವನದ ಅಂತಿಮ ಉದ್ದೇಶ ಅಲ್ಲ. ಅತ್ಯಂತ ಕಡಿಮೆ ಸಂಪಾದನೆಯಲ್ಲಿಯೂ ಸುಖವಾಗಿರುವ ಜನರಿದ್ದಾರೆ ಮತ್ತು ಐಶಾರಾಮಿ ಜೀವನ ನಡೆಸುವವರು ದುಃಖದಿಂದಿರಬಹುದು.ಕೌಟುಂಬಿಕವಾಗಿಯಂತೂ ಮನುಷ್ಯ ಸೋತು ಗೆಲ್ಲಲೇಬೇಕು.
ಒಳ್ಳೆಯ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿಸರ ವ್ಯಕ್ತಿಯ ಜೀವನವನ್ನು ಉತ್ತಮ ಧ್ಯೇಯೋದ್ದೇಶಗಳತ್ತ ಎಳಸುತ್ತವೆ. ಆಧ್ಯಾತ್ಮದ ಆತ್ಮವನ್ನು ಹೊಂದಿರುವ ಭಾರತದಲ್ಲಿ ಎಲ್ಲಾ ರೀತಿಯ ಪಾರಮಾರ್ಥಿಕ ಸಮಸ್ಯೆಗಳಿಗೆ ನಮ್ಮ ಪೂರ್ವಜರು ರಚಿಸಿರುವ ಗ್ರಂಥಗಳಿಂದ ಉತ್ತರ ಸಿಗುತ್ತದೆ.ನಾವು ಅಧ್ಯಯನ ಶೀಲರಾಗಬೇಕಷ್ಟೆ.
ಅಂತಿಮವಾಗಿ ಯಶಸ್ಸು ಅತ್ಯಂತ ಕೆಟ್ಟ ಶಿಕ್ಷಕನಾದರೆ ಸೋಲು ಒಳ್ಳೆಯ ಪಾಠವನ್ನು ಕಲಿಸುತ್ತದೆ.
ಆದ್ದರಿಂದ ನಿಮ್ಮ ಮಕ್ಕಳಿಗೆ ಅವರಿಗೆ ಅವಶ್ಯಕತೆ ಇಲ್ಲದ ಹೊರತು ಕೇಳಿದ ಕೂಡಲೇ ಎಲ್ಲವನ್ನೂ ಕೊಡಿಸಬೇಡಿ…. ನಿರಾಶೆಯ ನೋವನ್ನು ಚಿಕ್ಕಂದಿನಿಂದಲೇ ಅನುಭವಿಸಲು ಅವಕಾಶ ಮಾಡಿಕೊಡಿ. ಇದು ನೀವು ನಿಮ್ಮ ಮಕ್ಕಳ ಭವಿಷ್ಯ ಜೀವನಕ್ಕೆ ನೀವು ಕೊಡುವ ಒಳ್ಳೆಯ ಪಾಠವಾಗಿರುತ್ತದೆ.
ವಿಫಲತೆಯ, ಸೋಲು ಕಲಿಸುವಷ್ಟು ಒಳ್ಳೆಯ ಪಾಠ ಬದುಕಿನಲ್ಲಿ ಮತ್ತೊಂದಿಲ್ಲ, ಆದ್ದರಿಂದ ನಿಮ್ಮ ಮಕ್ಕಳಿಗೆ ಸೋಲನ್ನು ಒಪ್ಪಿಕೊಳ್ಳುವುದನ್ನು ಕಲಿಸಿ. ಸೋಲೊಪ್ಪಿಕೊಂಡ ವ್ಯಕ್ತಿ ನಂತರ ಗೆಲ್ಲುವ ಛಲ ಹೊತ್ತು ಮತ್ತೆ ಬದುಕಿನಲ್ಲಿ ಮುಂದುವರೆಯುತ್ತಾನೆ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯುತ್ತಾನೆ.
–ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ. ಗದಗ್