ಪುಸ್ತಕ ಪರಿಚಯ
ಮನದಾಳದ ಮಾತು
ಕವನ ಸಂಕಲನ
ಡಾ. ನಿರ್ಮಲಾ ಬಟ್ಟಲ
ಅಕ್ಷರ ಮಂಟಪ ಪ್ರಕಾಶನ ಬೆಂಗಳೂರು
ಡಾ. ನಿರ್ಮಲ ಬಟ್ಟಲ ಅವರು ಮನದಾಳದ ಮಾತು
(ಕವಯತ್ತಿ ನಿರ್ಮಲಾ ಬಟ್ಟಲ)
ಮೊದಲ ಕವನ ಸಂಕಲನದ “ಸಂಭ್ರಮ”ದಲ್ಲಿ “ವಸಂತಗೀತ”ವ ಹಾಡಿ ಸಾಹಿತ್ಯ ಕ್ಷೇತ್ರದಲ್ಲಿ ಭದ್ರ “ಕೋಟೆ” ಕಟ್ಟಲು ಹೊರಟಿರುವ ನನ್ನ ಅಚ್ಚುಮೆಚ್ಚಿನ ಪ್ರಾಧ್ಯಪಕಿ ಹಾಗೂ ಬೆಳಗಾವಿ ಜಿಲ್ಲೆಯ ಕವಯಿತ್ರಿ. ಅವರ ”ಹೊಸಹುಟ್ಟು” ಈಗ ಅಧಿಕೃತವಾಗಿ ಪ್ರಾರಂಭವಾದರೂ, ಬೆರೂರಿದ್ದು ಬಹಳ ಹಿಂದೆಯೆ.
ಕವನ ಸಂಕಲನ ಒಟ್ಟು 73 ಕವನಗಳನ್ನು ಒಳಗೊಂಡಿದೆ.
ಮುನ್ನುಡಿಯನ್ನು ಖ್ಯಾತ ಸಾಹಿತಿ, ಪ್ರಗತಿಪರ ಚಿಂತಕರಾದ ಡಾ.ಶಶಿಕಾಂತ ಪಟ್ಟಣ ಅವರ ಬರೆದರೆ, ಬೆನ್ನುಡಿಯನ್ನು ಸಂಯುಕ್ತ ಕರ್ನಾಟಕ ಪುರವಣಿ ಸಂಪಾದಕರಾದ ರಾಜು ಮಳವಳ್ಳಿ ಯವರು ಬರೆದಿದ್ದಾರೆ.
ಹೆಣ್ಣು ಹೆತ್ತರಷ್ಟೆ ಸಾಲದು ಗೆಳತಿ ಎನ್ನುವ ಇವರ ಕವಿತೆಯ ಸಾಲುಗಳು ಹೆಣ್ಣುಕುಲಕ್ಕೆ ಹೊಸ “ಪ್ರತಿಜ್ಞೆ” ಮಾಡಿವೆ. “ಬೆಳಕಿನೆಡೆಗೆ” ಓದುಗರನ್ನು ಕೊಂಡೊಯ್ಯುವಂತೆ ಬಿತ್ತಿರುವ ಸಾಲುಗಳು ‘ಭಾಷಾ ತಾರತಮ್ಯ”ಕ್ಕೆ ಪೂರ್ಣ ವಿರಾಮವಿಡುತ್ತವೆ. “ಎಲ್ಲವೂ ನಿನ್ನದೆ” “ಪಾಂಡುರಂಗ” ಎನ್ನುತ್ತಾ ದೈವವನ್ನು ನೆನೆದು “ರಂಗನ ಜಾತ್ರೆ” ಮಾಡಿ “ಸೀತೆಯನ್ನು ಕುಣಿಸುವಂತೆ” ಸಾಲುಗಳಿಗೆ ಜೀವ ತುಂಬಿದ್ದಾರೆ.
“ಪುಟ್ಟ ಪಾದ”ವಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆಯುವ “ಆಶಾ ಕಿರಣ”ವು ಇವರಿಂದ ಎದ್ದು ಕಾಣುತ್ತಿದೆ. “ಅದು ಹೇಗೆ” ಅವಳು ಹೆಣ್ಣಲ್ಲವೇ? ಎನ್ನುವವರಿಗೆ “ನಾನು ಹೆಣ್ಣು” “ಬೆಳವಡಿಯ ಬೆಳಕು” ಕವನಗಳ ಮುಂದಿಟ್ಟು “ಪ್ರೀತಿ ಹೆಸರಲ್ಲಿ” “ಪ್ರೇಮಿಗಳ ದಿನ” ಆಚರಿಸುವವರಿಗೆ “ನಿಲ್ಲು ನಾ ಬರುವೆ”ಯೆಂದು ಹೇಳಿ ಇಂದು ನಮಗೆ “ಮನದಾಳದ ಮಾತು” ಎಂಬ ಕವನ ಸಂಕಲನದ ಮುಖಾಂತರ ಹೆಣ್ಣಿನ ಶಕ್ತಿಯನ್ನು ಇನ್ನು ಗಟ್ಟಿ ಮಾಡಿದ್ದಾರೆ.
” ತಿಂಗಳ ಆ ಮೂರು ದಿನಗಳಲಿ ನಾವು ಅಸ್ಪೃಶ್ಯರು” ಎಂದು ಹೇಳುವ ಇವರ “ಮುಟ್ಟು” ಕವನದ ಸಾಲುಗಳು ಹೆಣ್ಣಿನ ಗರ್ಭದ ಕಣ್ಣಿರಿನ ಬಗ್ಗೆ ದನಿಗೂಡಿಸುತ್ತವೆ. ಇದು ಪ್ರಕೃತಿಯ ಸಹಜ ಕ್ರಿಯೆಯಾದರೂ ಇದನ್ನು ನೋಡಿ ಸುಮ್ಮನಾಗುವ ಗಂಡ್ಮನಗಳಿಗೆ ಇದರ ನೋವಿನ ಅರಿವಾಗಲಿಯೆಂದು ಪ್ರಾರ್ಥಿಸುತ್ತಾರೆ.
ಸಮಾಜದಲ್ಲಿ ಕೀಳರಿಮೆಯಿಂದ ಕಾಣುವ, ಗಂಡು – ಹೆಣ್ಣೆಂಬ ಲಿಂಗಗಳ ಮಧ್ಯೆ ಜೀವಿಸುವ ತೃತೀಯ ಲಿಂಗಿಗಳ ಬದುಕಿನ ಓಟವನ್ನು ಬಣ್ಣಿಸುವ ಕವನ ” ನಡುವೆ ಸುಳಿವ ಆತ್ಮ.” ಸೃಷ್ಟಿಕರ್ತನ ಈ ಸೃಷ್ಟಿಗೆ ಶಾಪಿಸುತ್ತಾ, ಸಹಿಸಿಕೊಳ್ಳುತ್ತಾ. ಕುಟುಂಬದ ಎಲ್ಲೆ ಮೀರಿ ತಾನು ಹಂಬಲಿಸುವ ಹೆಣ್ಣಿನ ಮನದ,ಗಂಡಿನ ಜನ್ಮದ ರೋದನೆಯನ್ನು ಪ್ರತಿಬಿಂಬಿಸುವ ಈ ಕವಿತೆಯನ್ನು ಸಮಾಜಕ್ಕೆ ಪ್ರಶ್ನಿಸುವುದರ ಜೊತೆಗೆ, ತನ್ನೊಳಗಿನ ಆತ್ಮ ಗಂಡಾ – ಹೆಣ್ಣಾ? ಎಂದು ರೋದಿಸುವ ಮಂಗಳಮುಖಿಯ ಅಳಲನ್ನು ಓದುಗರ ಮುಂದಿಟ್ಟಿದ್ದಾರೆ.
ಭಾನುವಾರ ರಜೆ ಎಂಬುವುದು ಕೇವಲ ದುಡಿಯುವ ಗಂಡಸಿಗೆ ಹೊರತು ಹೆಂಗಸಿಗಲ್ಲ. ಅವಳು ರಜೆಗಾಗಿ ಹಾ ತೊರೆದರು ಅವಳಲ್ಲಿರುವ ಅಸ್ಮಿತೆ ಮನವರಿಕೆ ಮಾಡಿ ಹೇಳುತ್ತೆ, ರಜೆ ದಿನ ಇಂದು ಗಂಡನಿಗೆ ಮತ್ತು ಮಕ್ಕಳಿಗೆ ಏನಾದರೂ ತಿನ್ನಲು ಮಾಡಿ ಕೊಡು, ನಿನ್ನ ಮುಗಿಯದಿರುವ ಎಲ್ಲ ಕೆಲಸ ಮುಗಿಸಿಕೊ ಇಂದು, ಕೆಲಸ ಮುಗಿದ ಕೂಡಲೇ ಮುಂದೆ ಏನು ಮಾಡಬೇಕೆಂದು ಯೋಚಿಸುವ ಹೆಣ್ಣಿನ “ಭಾನುವಾರದ ಭವಣೆ”ಯನ್ನು ಇವರ ಕವನದಲ್ಲಿ ಅನುಭವಿಸಿಬಹುದು.
ಈಗಿನ ಸಮಾಜದಲ್ಲಿ ಒಬ್ಬರಿಗೊಬ್ಬರು ಹೋಲಿಕೆ ಮಾಡಿ ಬದುಕುವುದಂತು ಸಾಮಾನ್ಯವಾಗಿದೆ. ಇಂತಹ ಹೋಲಿಕೆಯನ್ನೇ ಶೀರ್ಷಿಕೆಯನ್ನಾಗಿಟ್ಟುಕೊಂಡು ತೇತ್ರಾಯುಗ, ದ್ವಾಪರಯುಗದ ಸ್ತ್ರೀಯರನ್ನು ಈ ಆಧುನಿಕ ಯುಗದಲ್ಲೂ ಮಾದರಿಯನ್ನಾಗಿ ಇಟ್ಟುಕೊಂಡವರಿಗೆ, ಕಲಿಯುಗದ ಸ್ತ್ರೀಯರು ಆ ಎರಡು ಯುಗದ ಸ್ತ್ರೀಯರಿಗಿಂತ ಮಿಗಿಲು ಎಂಬುದನ್ನು ತುಂಬಾ ವಿಭಿನ್ನವಾಗಿ ಇವರು “ಹೋಲಿಕೆ” ಕವನದಲ್ಲಿ ತೋರಿಸಿಕೊಟ್ಟಿದ್ದಾರೆ.
ಪ್ರತಿಯೊಂದು ಹೆಣ್ಣಿಗೂ ತನ್ನ ತವರೆಂದರೆ ಹೇಳಲಾಗದ ಪ್ರೀತಿ, ಆ ಪ್ರೀತಿಯ ಕಡಲನ್ನು ಕವಯಿತ್ರಿ ನಿರ್ಮಲ ಬಟ್ಟಲ ಅವರು ” ನನ್ನ ತವರು ” ಕವನದ ಮುಖಾಂತರ ಅತ್ತೆಯ ಮನೆಯ ಸೊಸೆಯಂದಿರಿಗೆ ತವರಿನ ವಾತ್ಸಲ್ಯದ ಮಮತೆಯನ್ನ ಧಾರೆಯರೆದಿದ್ದಾರೆ. ತವರೆಂದರೆ ತನ್ನ ಕುಟುಂಬ ಮಾತ್ರವಲ್ಲದೆ, ತಾನು ಆಡಿ ಬೆಳೆದ ಪ್ರತಿಯೊಂದು ಸ್ಥಳದ ನೆನಪನ್ನ ಮರುಕಳಿಸುವ ಬುತ್ತಿ. ಅಂತಹ ಬುತ್ತಿಯನ್ನು ಕಾವ್ಯಸ್ತಕರ ಮುಂದೆ ಬಿಚ್ಚಿಡುವ ಪ್ರಯತ್ನ ಈ ಕವನದಲ್ಲಿ ಕಾಣಬಹುದು.
ಆ ನೀಲಿ ನೀಲಿ ಅಂಬರಕೆ
ಬೆಳ್ಳಿ ಮೋಡ ಸಿಂಗಾರ
ಕಪ್ಪು ಮೋಡ ಕೆಳಗಿಳಿದು ಬಂದರೆ
ಭುವಿಯಲ್ಲ ಬಂಗಾರ
“ಸಂಭ್ರಮ” ಕವನದಲ್ಲಿ ಬರುವ ಸಾಲುಗಳನ್ನು ಧಾಟಿಹಚ್ಚಿ ಹಾಡಿದರೆ ಒಂದು ಉತ್ತಮ ಹಾಡಾಗಿ ಸಂಗೀತ ಪ್ರೇಮಿಗಳನ್ನು ಕುಣಿಸುವುದು ಖಂಡಿತ. ರೈತನು ಮಳೆಗಾಗಿ ಕಾಯ್ದು ಬೆಸತ್ತಾಗ. ಒಮ್ಮೆಲೆ ಮಳೆ ಬಂದು ಭೂತಣಿಸಿದಾಗ ಅವನಿಗಾಗುವ ಸಂತಸವೇ ಇಲ್ಲಿ ಬಿಂಬಿತವಾಗಿದೆ. ಇದು ಮಕ್ಕಳ ಪ್ರಿಯವಾದ ಕವನವಾಗಲು ಸಾಧ್ಯವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಇದೇ ರೀತಿಯಾಗಿ ಇವರ “ಕಾವ್ಯ ಕನ್ನಿಕೆ”ಯು ಹೊರಹೊಮ್ಮಿ ಕಾವ್ಯ ಪ್ರೇಮಿಗಳಿಗೆ ತಮ್ಮ ಕವನಗಳನ್ನು ಉಣಬಡಿಸಿ ಯಾವುದೇ “ಹೋಲಿಕೆ”ಗಳಿಗೆ ಕಿವಿಗೊಡದೆ, “ಚಂದಿರ”ನ ಬೆಳಕಿನ ಹಾಗೆ ತಾವು “ಸಾಹಿತ್ಯ ದೇವಿಯ ಆಸ್ತಿ”ಯಾಗಿಯೆಂದು “ನಿರೀಕ್ಷೆ” ಪಡುತ್ತಿರುವ ಎಲ್ಲ ಕಾವ್ಯ ಪ್ರೇಮಿಗಳಿಗೆ “ಮರೆಯದ ಮಾಣಿಕ್ಯ”ದ ಹಾಗೆ ನಿಮ್ಮ ಕವನಗಳನ್ನು ಇನ್ನು ಹೆಚ್ಚಿಗೆ ಬರೆದು ನಮಗೆಲ್ಲ ಓದಲು ನೀಡಿ ಎಂದು ಆಶಿಸುವದರೊಂದಿಗೆ ಶುಭಕೋರುವೆ
_ವಿನಾಯಕ ನಂದಿ.
ಬೆಳಗಾವಿ