ಹ್ಯಾಂಗ ಮರೆಯಲಿ

ಹ್ಯಾಂಗ ಮರೆಯಲಿ

ನಿನ್ನ ಹ್ಯಾಂಗ ಮರೆಯಲಿ
ಸುಲಗಾಯಿ ಕಡಲಿ
ಏರೆ ಹೊಲದ ಸಿಹಿ
ಎಳೆಯ ಸವತಿಕಾಯಿ

ಬಿಸಿಲಿಗೆ ತಂದವಳು
ಬಿಸಿ ಭಾವ ಬುತ್ತಿ
ಬೇವಿನ ನೆರಳಲ್ಲಿ
ಹುಳಿ ಬಾನ ಮಜ್ಜಿಗೆ

ಬಿಳಿ ಜೋಳದ ಕೂಡ
ಅರಳಿದವು ಹಕ್ಕರಕಿ
ಹಿಂಡಿ ಮೊಸರಿನ ಜೋಡಿ
ರುಚಿ ಬೆಣ್ಣಿ ಮೂಲಂಗಿ

ಸುಗ್ಗಿಯ ಕಣದೋಳಗ
ನುಗ್ಗಿ ಬಂದವು ಹಾಡು
ಹುಲ ಹುಲಿಗೆ ನೆನೆದೆವೊ
ಕಲ್ಯಾಣ ಬಸವನ

ರಾಶಿ ತೂರಿದ ನಾವು
ಕೊಡು ಆಯದ ಪಾಲು
ಕಾಯಕ ದಾಸೊಹ
ನಗೆ ಹಂಡೆ ಹಾಲು

ಮೈ ಮುರಿದು ದುಡಿದೆವ
ಬೆವರು ಪರಿಮಳ ಸೂಸಿ
ಜಂಗಮಕ ನೀಡುವೆವು
ಹೆರದುಪ್ಪ ಕಾಸಿ

ಭೂಮಿ ಮೇಲಿನ ಜೀವ
ಇಷ್ಟ ಲಿಂಗವೇ ದೇವ
ಕಡೆತನಕ ಉಳಿಸು ಅಭಿಮಾನ
ಮಹಾಗುರುವೆ ಈಶ ಬಸವ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!