ಮೋಳಿಗೆಯ ಮಹಾದೇವಿ
ಮೋಳಿಗೆಯ ಮಹಾದೇವಿ ಎಂದು ಹೆಸರಾದ ಶರಣೆ ಕಾಶ್ಮೀರದ ಸವಾಲಾಕ್ಷದ ದೊರೆ ಮಹಾದೇವ ಭೂಪಾಲನ ಸತಿ. ಆಕೆಯ ಮೊದಲ ಹೆಸರು ಗಂಗಾದೇವಿ. ಈ ಶರಣ ದಂಪತಿಗಳ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿವೆ. ಭೀಮ ಕವಿಯ ,’ಬಸವ ಪುರಾಣ’, ಗೌರವಾಂಕನ ‘ಮೋಳಿಗೆಯ ಮಾರಯ್ಯ ಪುರಾಣ’, ಭೈರವೇಶ್ವರ ‘ಕಾವ್ಯ ಕಥಾ ಸೂತ್ರ ರತ್ನಾಕರ’ದಲ್ಲಿ ಅವರ ಬದುಕಿನ ಬಗೆಗೆ ಹಲವಾರು ಚಿತ್ರಣಗಳು ಬಿತ್ತರಗೊಂಡಿವೆ. ಇರ್ವರು ಶಿವಭಕ್ತರು, ಜಂಗಮ ಆರಾಧಕರು ಬಸವಣ್ಣನ ಮಹಿಮೆಯನ್ನು ಕೇಳಿದ ಇವರಿಗೆ ಜೀವನದಲ್ಲಿ ವಿರಕ್ತಿ ಉಂಟಾಗಿ ಕಲ್ಯಾಣದತ್ತ ಹೊರಡಲು ಸಿದ್ದರಾಗುತ್ತಾರೆ. ತನ್ನ ಐಶ್ವರ್ಯ ಸುಖದ ಜೀವನವನ್ನು ತೊರೆದು ಗಂಗಾದೇವಿ ಪತಿಯನ್ನು ಅನುಸರಿಸುತ್ತಾಳೆ. ಸತಿಯ ವಿರಕ್ತಿ ಭಾವ ಮನಸ್ಸಿನ ಪರಿಪಕ್ವತೆಯನ್ನು ಪರೀಕ್ಷಿಸಲು ಬಯಸಿದ ದೊರೆ ನಡು ಬೀದಿಯಲ್ಲಿ ನಿರ್ವಾಣವಾಗುವೆಯಾ? ಎಂದು ಕೇಳುತ್ತಾನೆ. ಗಂಗಾದೇವಿ ಅದಕ್ಕೆ ಸಿದ್ದಳಾದಾಗ, ದೊರೆ ‘ನಿನ್ನಿಂದಲೇ ಮುಕ್ತಿ’ ಎಂದು ಹೇಳಿ ಸತಿಯೊಡನೆ ಕಲ್ಯಾಣಕ್ಕೆ ಬರುತ್ತಾನೆ.
ಎಲ್ಲವನ್ನು ತೊರೆದ ಮಾರಯ್ಯ, ಗಂಗಾದೇವಿ ಕಟ್ಟಿಗೆಯನ್ನು ಹೊತ್ತು ತಂದು ಮಾರುವ ಕಾಯಕವನ್ನು ಕಲ್ಯಾಣದಲ್ಲಿ ಕೈಗೊಳ್ಳುತ್ತಾರೆ. ಭಕ್ತಿಯಿಂದ ಜಂಗಮ ಆರೋಹಣೆ ಮಾಡಿಸುವ ಶ್ರದ್ಧಾಪೂರ್ವಕ ದಾಸೋಹಕ್ಕೆ ತಮ್ಮನ್ನ ಅರ್ಪಿಸಿಕೊಳ್ಳುತ್ತಾರೆ. ಹೀಗಿರುವಾಗ ಪತಿ ಪತ್ನಿಯರ ಭಕ್ತಿಯ ನಿಲುವನ್ನ ಪರೀಕ್ಷಿಸುವ, ಹಾಗೆ ತನ್ಮೂಲಕ ಲೋಕಕ್ಕೆ ಪ್ರಕಟಪಡಿಸುವ ಉದ್ದೇಶದಿಂದ ಬಸವಣ್ಣನವರು ಅವರ ಮನೆಗೆ ಆಗಮಿಸಿ ಆತಿಥ್ಯ ಪಡೆದು, ಅಮೃತ ಸದೃಶವಾದ ಅಂಬಲಿಯನ್ನುಂಡು, ಸಾವಿರ ಹೊನ್ನ ಜಾಳಿಗೆಗಳನ್ನಿರಿಸಿ ಹೋಗುತ್ತಾರೆ. ಮನ ತುಂಬಿ ಆ ಮನೆಯನ್ನ ಕೊಂಡಾಡುತ್ತಾರೆ.
‘ ಈ ಸದನವ ನೋಡಿದಾತನ ದೋಷವೆಲ್ಲವೂ ಕೆಟ್ಟು ಹೋಗದೆ। ಈ ಸದನದೊತ್ತಿನಲ್ಲಿ ಚರಿಸುವವಂ ಕೃತಾರ್ಥನಲಾ। ಈ ಸದನ ಸೀಮೆಯೊಳಗೆ ತಿರುಗುವ ವಾಸಿಸುವ ಜೀವಿಗಳ ಭಾಗ್ಯವದೇಸೋ। ಈ ಗೃಹರೇಣು ಸಿಕ್ಕಿದವಂಗಹುದು ಮುಕ್ತಿ। ಎಂದು ಕೊಂಡಾಡುತ್ತಾರೆ.
ಹೊನ್ನ ಜಾಳಿಗೆಗಳನ್ನ ನೋಡಿದ ಮಾರಯ್ಯನವರು ಮಹಾದೇವಿಯಿಂದ ವಿಷಯ ತಿಳಿದು, ಬಂದವರು ಬಸವಣ್ಣನವರೇ ಆಗಿರಬೇಕೆಂದು ಆ ಹೊರೆಗಳ ಮೇಲೆ ಪಾದೋದಕ ಸಿಂಪಡಿಸಿದಾಗ ಬಂಗಾರದ ಕಟ್ಟಿಗೆಗಳಾಗುತ್ತವೆ. ಮಾರಯ್ಯನವರ ಅವನ್ನು ಜಂಗಮರಿಗಿತ್ತು ಕೃತಾರ್ಥರಾಗುತ್ತಾರೆ. ಈ ವಿಷಯವನ್ನು ತಿಳಿದ ಬಸವಣ್ಣನವರು ಮಾರಯ್ಯನವರಲ್ಲಿ ಬಂದು ಕ್ಷಮೆಯಾಚಿಸುತ್ತಾರೆ. ಈ ಘಟನೆಯಿಂದ ಪತಿಯ ವೃತ ನಿಯಮಗಳಿಗೆ ಬದ್ಧಳಾಗಿ, ಶ್ರದ್ಧಾಪೂರ್ವಕ ಕಾಯಕ ದಾಸೋಹಗಳನ್ನು ನಿರ್ವಹಿಸುತ್ತಾ ಆದರ್ಶ ಗ್ರಹಿಣಿ, ಶ್ರೇಷ್ಠ ಶರಣೆಯಾಗಿ ಮೆರೆದಳೆಂಬ ವಿಷಯ ಸ್ಪಷ್ಟವಾಗುತ್ತದೆ. ಮಾರಯ್ಯನವರಿಗಿಂತ ಮಹಾದೇವಿ ಅಮ್ಮನ ವ್ಯಕ್ತಿತ್ವ ಇಲ್ಲಿ ಹೆಚ್ಚು ಉಜ್ವಲವಾಗಿ ಕಂಗೊಳಿಸುತ್ತದೆ.
*ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ? ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ? ನಿತ್ಯ ಅನಿತ್ಯವ ತಿಳಿದು, ಮರ್ತ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ, ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ, ಆ ಬಚ್ಚ ಬಯಲು ಬಳಗ ನಿನ್ನ ನೀನೆ ನೋಡಿಕೊ, ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.*
ನಿಜವಾದ ಭಕ್ತನಿಗೆ ಮರ್ತ್ಯ ಕೈಲಾಸ ಎಂಬ ಭೇದವಿಲ್ಲ. ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಸಂಪೂರ್ಣ ಸಾಮರಸ್ಯ ಹೊಂದುವುದು ಮುಖ್ಯ. ಹುಲ್ಲಿನ ಮೇಲಿನ ಹನಿ ಜಾರುವಂತೆ, ಒಣಗಿದ ಕುಸುಮ ಉದುರಿ ಬೀಳುವಂತೆ, ಪಕ್ವವಾದ ಹಣ್ಣು ಕಳಚಿ ಬೀಳುವಂತೆ ಭಕ್ತನಿಗೆ ಕೈವಲ್ಯ ಸಹಜವಾಗಿ ಕೈಗೆಟುಕುತ್ತದೆ. ಎಂದು ಹೇಳಿ ಮಾರಯ್ಯನವರ ಮನದ ಮರವೆಯನ್ನು ನಷ್ಟಗೊಳಿಸುತ್ತಾಳೆ. ಮೋಕ್ಷವೆಂಬುದು ಎಲ್ಲೋ ಇರುವ ಒಂದು ಸ್ಥಾನವಲ್ಲ. ಎಂದೋ ಒಂದು ದಿನ ಪಡೆಯಬೇಕಾದ ದೂರದ ಆದರ್ಶವಲ್ಲ. ಈ ಜೀವನದೊಂದಿಗೆ ಬೆರೆತು ಹೋದ ಸ್ವಾಭಾವಿಕ ಕ್ರಿಯೆ. ಕಾಯಕವೇ ಲಿಂಗೈಕ್ಯ ಎಂದು ತಿಳಿ ಹೇಳುತ್ತಾಳೆ.
ಕಲ್ಯಾಣದ ಸಮೀಪದ ಮೋಳಿಗೆ ಕೇರಿ ಎಂಬ ಹಳ್ಳಿಯಲ್ಲಿ ದಂಪತಿಗಳು ಐಕ್ಯರಾದರೆಂದು ತಿಳಿದು ಬರುತ್ತದೆ. ಪತಿಗೆ ಮಾರ್ಗದರ್ಶಕಗಳಾಗಿ ಸಂತೃಪ್ತಿಯ ಬದುಕನ್ನು ಬದುಕಿದಂತೆ ತೋರುತ್ತದೆ. ‘ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ’ ಎಂಬ ಅಂಕಿತದಲ್ಲಿ ಬರೆದ ಮೋಳಿಗೆ ಮಹಾದೇವಿಯ 69 ವಚನಗಳು ಪ್ರಕಟವಾಗಿವೆ.
–ಡಾ ಆಶಾ ಗುಡಿ ಹಾವೇರಿ