ನಮ್ಮ ಮನೆಯ ಬಸವ,ನಮ್ಮ ಚಿಕ್ಕಮ್ಮ ಮನೆಯ ಗುಳ್ಳವ್ವ.
ನಾವು ಎಷ್ಟೇ ಆಡಂಬರದ, ಆಧುನಿಕ ಜೀವನಕ್ಕೆ ಒಗ್ಗಿ ಹೋದರು,ನಮ್ಮ ಆಚಾರ, ಸಂಸ್ಕಾರದ ವಿಷಯ ಬಂದಾಗ ನಾವು ಅದನ್ನು ತಪ್ಪದೇ ಪಾಲಿಸುತ್ತೇವೆ.ಪಟ್ಟಣಗಳಲ್ಲಿ ಕೆಲವು ಜನ,ಹಳ್ಳಿ ಸೊಗಡಿನ ಆಚರಣೆಗಳು ಇವೆಲ್ಲಾ ಎಂದು ಬೆನ್ನು ತಿರುಗಿಸಿದ್ದರೂ, ಹಳ್ಳಿಗಳಲ್ಲಿ ಈಗಲೂ ಎಲ್ಲ ಆಚರಣೆಗಳನ್ನು ಚಾಚು ತಪ್ಪದೇ ಪಾಲಿಸುವವರುಂಟು.
ಅದರಲ್ಲಿ ಒಂದು ಪದ್ಧತಿ ಗುಳ್ಳವ್ವ ಹಾಗೂ ಬಸವನನ್ನು ಮಾಡುವುದು.
ಆಷಾಡ ಮಾಸದಲ್ಲಿ ಬರುವ ನಾಲ್ಕು ಮಂಗಳವಾರಗಳಂದು, ನಾಲ್ಕು ಗುಳ್ಳವ್ವ ಹಾಗೂ ಬಸವನನ್ನು ಮಾಡುತ್ತಾರೆ. ಮಂಗಳವಾರ ಮಂಗಳಕರ ದಿನವೆಂದು ಆಷಾಡ ಮಾಸದ ಪ್ರತಿ ಮಂಗಳವಾರ ಈ ಪದ್ಧತಿಯನ್ನು ರೂಡಿಸಿಕೊಂಡು ಬಂದಿದ್ದಾರೆ.
ಒಂದೇ ಗುಳ್ಳವನನ್ನು ಮಾಡಿ,ಪ್ರತಿ ಸಾರಿಯೂ ಸ್ವಲ್ಪ, ಸ್ವಲ್ಪ ಹೊಸ ಮಣ್ಣನ್ನು ಸೇರಿಸುತ್ತಾ ದೊಡ್ಡ ಗುಳ್ಳವ್ವನಾ ಮಾಡಿ, ಐದು ಮಂದಿ ಮುತ್ತೈದೆಯರು,ಮಣ್ಣಿನ ಆರತಿ ಹಿಡಿದು,ಒಬ್ಬ ಹುಡುಗ (ಬಹಳ ದೊಡ್ಡವನು ಅಲ್ಲ,ಅತೀ ಚಿಕ್ಕವನು ಅಲ್ಲದ ನಡೆದಾಡುವ ಮಗುವು)ಗುಳ್ಳವ್ವನನ್ನು ಒಂದು ಕಟ್ಟಿಗೆಯ ಮಣೆಯ ಮೇಲಿ ಇಟ್ಟುಕೊಂಡು, ತಲೆಯ ಮೇಲೆ ಹೊತ್ತುಕೊಂಡು,ಐದು ಮನೆಗಳಿಗೆ ಹೋಗಿ,ಅದರ ಮೇಲೆ ನೀರು ಹಾಕಿಸಿಕೊಂಡು ಬರಬೇಕು.ಆ ವರ್ಷ ಆ ವರುಣ ಕೃಪೆ ಮಾಡಿ, ಕಾಲಕ್ಕೆ ಸರಿಯಾಗಿ,ಮಳೆಯು ಚೆನ್ನಾಗಿ ಆಗಲಿ ಎನ್ನುವ ಸಲುವಾಗಿ ಈ ಪದ್ದತಿಯನ್ನು ಆಚರಿಸುತ್ತಾರಂತೆ.ಗುಳ್ಳವ್ವನನ್ನು ಮಾಡಿದ ಮಣ್ಣಿನಿಂದಲೇ ಕೆಲವರು ಬಸವನನ್ನು ಮಾಡುತ್ತಾರಂತೆ.ಹೊಲದ ಬಿತ್ತನೆ ಸಮಯದಲ್ಲಿ ಅನ್ನದಾತನಾದ ರೈತನಿಗೆ ಮಗನಂತೆ ಹೆಗಲಿಗೆ ಹೆಗಲಾಗಿ ದುಡಿಯುವ ಬಸವನನ್ನು ಪೂಜಿಸಿದಂತೆ ಹಾಗೂ ಮಣ್ಣಿನಿಂದ ಮಾಡುವುದರಿಂದ,ಭೂಮಿ ತಾಯಿಗೂ ಕೂಡಾ ವಂದಿಸಿದಂತೆ ಎಂಬ ಭಾವದಿಂದ ಬಸವನನ್ನು ಮಣ್ಣಿನಿಂದ ಮಾಡುತ್ತಾರೆ.ಇದು ಒಂದು ಕಡೆಯ ಆಚರಣೆಯ ಪದ್ಧತಿ.
ಮತ್ತೋಂದು ಕಡೆಗೆ ,ಮಣ್ಣಿತ್ತಿನ ಅಮಾವಾಸ್ಯೆಯ ನಂತರ ಬರುವ ಮೊದಲನೆಯ ಮಂಗಳವಾರ ಒಂದು ತಟ್ಟೆಯಲ್ಲಿ ಮಣ್ಣು ತೆಗೆದುಕೊಂಡು ಹದ ಮಾಡಿ,ಪ್ರತಿವಾರವು ಬೇರೆ ಬೇರೆ ಗುಳ್ಳವ್ವನಾ ಮಾಡಿ,ಅದಕ್ಕೆ ಐದು ಸರಗಳು ಅಂದರೆ ಗೋಧಿ,ಕಡಲೆ, ಶೇಂಗಾ, ಚುರುಮುರಿ,ಹುಲ್ಲಿ ಕಾಳಿನ ಸರಗಳನ್ನು ಮಾಡಿ ಹಾಕಿ,ಗುಳ್ಳವ್ವನನ್ನು ಗರಿಕೆ,ಹೂವುಗಳಿಂದ ಪೂಜಿಸುತ್ತಾರೆ.ಗುಳ್ಳವ್ವನನ್ನು ಮಾಡಲು ತಂದ ಮಣ್ಣನ್ನು ಮರದ ಕೆಳಗೆ ಇಡಬೇಕು ಹಾಗೂ ಯಾವುದೇ ಕಾರಣಕ್ಕೂ ನಾವು ಆ ಮಣ್ಣನ್ನು ತುಳಿಯಬಾರದು,ಅಂದರೆ ಯಾರ ಕಾಲು ತಾಗದಂತೆ ನೋಡಿಕೊಳ್ಳಬೇಕು.ಇಲ್ಲವಾದರೆ ತುಳಿದವರಿಗೆ ಚರ್ಮ ರೋಗ ಬರುತ್ತದೆ,ಎಂದು ಬಲ್ಲವರು ಹೇಳುತ್ತಾರೆ.ಗುಳ್ಳವ್ವ ಹಾಗೂ ಬಸವನ ಮಾಡಿ ನಂತರ ಕೈ ತೊಳೆದ ನೀರು ಮತ್ತು ಉಪಯೋಗಿಸಿದ ಪಾತ್ರೆ ತೊಳೆದ ನೀರು ಎರಡನ್ನೂ ಯಾವುದಾದರೂ ಗಿಡಕ್ಕೆ ಹಾಕುತ್ತಾರೆ.
ಇದರೊಂದಿಗೆ(ಆಷಾಡದ ಮೊದಲನೇಯ ಮಂಗಳವಾರ) ಒಂದು ತಟ್ಟೆಯಲ್ಲಿ ಹದ ಮಾಡಿದ ಮಣ್ಣು ಹಾಕಿ,ಅದರಲ್ಲಿ ಸಜ್ಜಕವನ್ನು(ಗೋಧಿಯ ತೆರನಾದ ಒಂದು ಧಾನ್ಯ)
ಹಾಕಿ, ಹಸಿ ಬಟ್ಟೆಯಿಂದ ಮುಚ್ಚಿ ನೀರು ಹಾಕುತ್ತಾ ಹೊದರೆ,ನಾಲ್ಕು ಮಂಗಳವಾರ ಮುಗಿಯುವುದರೊಳಗೆ, ಒಂದು ಗೇಣಿನಷ್ಟು ಪೈರುಗಳಾಗಿರುತ್ತವೆ(ಅದಕ್ಕೆ ಕುರಚಗಿ ಎನ್ನುತ್ತಾರೆ),ಅದೇ ಪೈರುಗಳನ್ನು ನಾಗ ಪಂಚಮಿಯಂದು ನಾಗಪ್ಪನಿಗೆ ಪೂಜೆಗೆಂದು ಕೊಟ್ಟು,ಉಳಿದ ಪೈರುಗಳನ್ನು ತಲೆಯಲ್ಲಿ ಸ್ತ್ರೀಯರು ತಲೆಯಲ್ಲಿ ಮುಡಿದು ಕೊಳ್ಳುತ್ತಾರೆ.ಅದಲ್ಲದೇ ಮತ್ತೊಂದು ಪದ್ಧತಿಯನ್ನು ಕೂಡಾ ಆಚರಿಸುತ್ತಾರೆ ಅದೇನೆಂದರೆ ಆ ಕುರಚಿಗೆಯನ್ನು ಒಂದು ಚಿಕ್ಕ ಮಗು ಎಂದರೆ ನಡೆದಾಡುವಷ್ಟು ದೊಡ್ಡ ಮಗು ಬರೀ ಮೈಯಲ್ಲಿ ಅದನ್ನು ತಲೆಮೇಲೆ ಹೊತ್ತುಕೊಂಡು,ಅದರ ಮೇಲೆ ನೀರು ಹಾಕಿಸಿಕೊಂಡು ಬಂದರೆ,ಮಳೆ ಬೆಳೆ ಚೆನ್ನಾಗಿರುತ್ತೆ ಎಂಬ ವಾಡಿಕೆ ಇದೆ. ಆಷಾಢ ಮಾಸದ ಕಡೆಯ ಮಂಗಳವಾರ ನಾಲ್ಕು ಬಸವನನ್ನು ಒಂದು
ತಟ್ಟೆಯಲ್ಲಿ ಇಟ್ಟು, ಮಣ್ಣಿನಿಂದ ಮಾಡಿದ ಆರತಿ ತಟ್ಟೆಯಿಂದ ಆರತಿಯನ್ನು ಮಾಡಿ ನಮಿಸಿ, ಸರ್ವರಿಗೂ ಒಳಿತಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಮಾಹಿತಿ ಒದಗಿಸಿದವರು : ಶ್ರೀಮತಿ ಅಕ್ಷತಾ ಸತೀಶ ತಿಳಗಂಜಿ
ರಚನೆ: ಮಂಜುಶ್ರೀ ಬಸವರಾಜ ಹಾವಣ್ಣವರ