ನಿಮ್ಮ ಬದುಕಿನ ಲೋಟದಲ್ಲಿ ಏನಿದೆ??

ನಿಮ್ಮ ಬದುಕಿನ ಲೋಟದಲ್ಲಿ ಏನಿದೆ??

ತುಂಬಾ ಅಶಾಂತ ಮನಸ್ಥಿತಿಯಲ್ಲಿ ಆತ ಓರ್ವ ಆಧ್ಯಾತ್ಮಿಕ ಗುರುಗಳಲ್ಲಿ ಬಂದ. ತನ್ನೆಲ್ಲ ಸಮಸ್ಯೆಗಳನ್ನು ಅವರ ಮುಂದೆ ಹೇಳಿಕೊಂಡ…
“ನನ್ನ ಯಾವ ಸಹೋದ್ಯೋಗಿಗಳು ಸರಿಯಾಗಿಲ್ಲ, ಎಲ್ಲರೂ ಮೈಗಳ್ಳರೇ, ಎಲ್ಲ ಕೆಲಸವನ್ನು ನಾನೊಬ್ಬನೇ ಮಾಡಬೇಕು, ಅವರು ಕೆಲಸಕ್ಕಿಂತ ಹೆಚ್ಚಾಗಿ ಹರಟೆ ನಗು ತಮಾಷೆಗಳಲ್ಲಿ ಟೈಮ್ ಪಾಸ್ ಮಾಡ್ತಾರೆ, ಅದೆಷ್ಟೇ ಕೆಲಸದ ಒತ್ತಡ ಇದ್ದರೂ ಆರಾಮಾಗಿ ಕೆಲಸ ಮಾಡ್ತಾರೆ. ಆದರೆ ನಾನು ಮಾತ್ರ ಪ್ರತಿಯೊಂದಕ್ಕೂ ಟೆನ್ಶನ್ ಮಾಡಿಕೊಂಡು ಎಲ್ಲರ ಮೇಲೂ ಕೂಗಾಡುತ್ತೇನೆ. ಅವರಾರು ನನ್ನ ಮಾತನ್ನು ಕೇರ್ ಮಾಡೋದೇ ಇಲ್ಲ, ಇದರಿಂದ ನನ್ನ ಮನಸ್ಸು ಮತ್ತಷ್ಟು ಅಸಹನೆಯಿಂದ ಕೆರಳುತ್ತದೆ, ಸಿಟ್ಟಿನಿಂದ ಮೈ ಉರಿಯುತ್ತದೆ, ನನಗೆ ಬದುಕೇ ಬೇಸರವಾಗಿದೆ ನನ್ನ ಮನಸ್ಸು ನನ್ನ ಸ್ಥಿಮಿತದಲ್ಲಿ ಇಲ್ಲ ಏನು ಮಾಡುವುದು ತೋಚುತ್ತಿಲ್ಲ. ನಾನು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವೇ ಇಲ್ಲವೇ ಗುರುಗಳೇ? ಎಂದು ತುಂಬಾ ಆರ್ತ ಧ್ವನಿಯಲ್ಲಿ ಆತ ಕೇಳಿದನು.

ನಸುನಕ್ಕ ಗುರುಗಳು “ಮಗು, ನೀನು ಮಾನಸಿಕವಾಗಿ ದಣಿದಿರುವೆ, ನಿನ್ನ ಸಮಸ್ಯೆಗೆ ಖಂಡಿತ ಪರಿಹಾರ ಇದೆ. ಇಂದು ರಾತ್ರಿ ಆಶ್ರಮದಲ್ಲಿಯೇ ಇದ್ದು ಬಿಡು. ನಾಳೆ ಮುಂಜಾನೆ ನಿನ್ನ ಸಮಸ್ಯೆಗೆ ಪರಿಹಾರ ಹೇಳುತ್ತೇನೆ” ಎಂದು ಹೇಳಿ ಶಿಷ್ಯನಿಗೆ ಸನ್ನೆ ಮಾಡಿ ಆತನನ್ನು ಕಳುಹಿಸಿ ಕೊಟ್ಟರು.

ಆತನಿಗೆ ಸುಸಜ್ಜಿತವಾದ ಕೋಣೆಯೊಂದನ್ನು ತೋರಿದ ಶಿಷ್ಯ ಸರಿಯಾಗಿ 8 ಗಂಟೆಗೆ ಊಟದ ಸಮಯಕ್ಕೆ ಊಟದ ಹಾಲ್ಗೆ ಬರಲು ಹೇಳಿ ಹೊರಟು ಹೋದನು.

ಸರಿಯಾಗಿ 8:00 ಗಂಟೆಗೆ ಊಟದ ಹಾಲ್ಗೆ ಬಂದ ಆ ವ್ಯಕ್ತಿ ಅಲ್ಲಿನ ಸುಸಜ್ಜಿತ ಊಟದ ವ್ಯವಸ್ಥೆಯನ್ನು, ಪ್ರಶಾಂತವಾದ ವಾತಾವರಣವನ್ನು ಕಂಡು ತುಸು ಅಚ್ಚರಿಯಾದರೂ ಅತ್ಯಂತ ಸಮಾಧಾನದಿಂದ ಊಟ ಮಾಡಿ ತನ್ನ ಕೋಣೆಗೆ ಮರಳಿದನು. ಈಗಾಗಲೇ ಆತನ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನಗಳನ್ನು ಆಶ್ರಮದ ಲಾಕರ್ನಲ್ಲಿ ಇಟ್ಟು ಬಿಟ್ಟಿದ್ದರಿಂದ ಏನು ಮಾಡಲೂ ತೋಚದೆ ಆಶ್ರಮದ ಹೊರ ಆವರಣದಲ್ಲಿ ಹಾಕಿದ ಕಲ್ಲು ಬೆಂಚಿನ ಮೇಲೆ ಕುಳಿತು ಅಲ್ಲಿ ಕೃತಕವಾಗಿ ನಿರ್ಮಿಸಿದ ಕೆರೆಯನ್ನು ನೋಡುತ್ತಾ, ತಂಪಾದ ರಾತ್ರಿಯ ನೀರವ ವಾತಾವರಣವನ್ನು ಸವಿಯುತ್ತ ಬಹಳಷ್ಟು ಹೊತ್ತು ಕುಳಿತಿದ್ದು ನಂತರ ತನ್ನ ಕೋಣೆಗೆ ಮರಳಿದಾಗ ಈ ಹಿಂದೆ ಎಂದೂ ಬಾರದ ನೆಮ್ಮದಿಯ ನಿದ್ರೆ ಆತನನ್ನು ಆವರಿಸಿತ್ತು.

ಮರುದಿನ ಮುಂಜಾನೆ ಎದ್ದ ಆತನ ಮನಸ್ಸು ಹಿಂದೆಂದಿಗಿಂತಲೂ ಪ್ರಫುಲ್ಲಿತವಾಗಿತ್ತು. ಬಲು ಉತ್ಸಾಹದಿಂದ ನಿತ್ಯ ವಿಧಿಗಳನ್ನು ಪೂರೈಸಿ ಆಶ್ರಮದಲ್ಲಿ ನಡೆಯುವ ಭಜನೆಯಲ್ಲಿ ಪಾಲ್ಗೊಂಡು ಉಪಹಾರಕ್ಕೆ ಬಂದು ಕುಳಿತ ಆತ. ಉಪಹಾರ ಸೇವಿಸಿ ನೀರನ್ನು ಕೈಯಲ್ಲಿ ಹಿಡಿದು ತರುತ್ತಿರುವಾಗ ಆಶ್ರಮದ ಪರಿಚಾರಕನೊಬ್ಬ ಆತನನ್ನು ಹಾಯ್ದು ಲೋಟದಲ್ಲಿದ್ದ ನೀರು ಚೆಲ್ಲಿ ಹೋಯಿತು.
ಪರಿಚಾರಕ ಆತನ ಕ್ಷಮೆಯಾಚಿಸಿ ಮತ್ತೊಂದು ಲೋಟ ನೀರನ್ನು ಆತನಿಗೆ ತಂದುಕೊಟ್ಟು ನೆಲಕ್ಕೆ ಬಿದ್ದಿದ್ದ ನೀರನ್ನು ಬಟ್ಟೆಯಿಂದ ಒರೆಸಿ ಹೊರಟು ಹೋದನು. ಮೊದಲ ಬಾರಿಗೆ ತಾನು ಮತ್ತೊಬ್ಬರ ಮೇಲೆ ರೇಗದೇ ಇರುವುದು ಆತನ ಅರಿವಿಗೆ ಬಂತು.

ಕೆಲವೇ ಸಮಯದಲ್ಲಿ ಸ್ವಾಮೀಜಿಯವರ ಭೇಟಿಗೆ ಕರೆದೊಯ್ಯಲು ಬಂದ ಅದೇ ಪರಿಚಾರಕನನ್ನು ನೋಡಿ ಪರಿಚಯದ ಮುಗುಳ್ನಗೆ ನಕ್ಕ ಆತ ಸ್ವಾಮೀಜಿಯವರ ಬಳಿ ತೆರಳಿದನು.
ಕಣ್ಣು ಮುಚ್ಚಿ ಧ್ಯಾನದಲ್ಲಿ ಕುಳಿತಿದ್ದ ಸ್ವಾಮೀಜಿಯವರು ಆತ ಬಂದು ಕುಳಿತಾಗ ನಿಧಾನವಾಗಿ ಕಣ್ತೆರೆದು ಮುಗುಳ್ನಕ್ಕರು.

ಆಶ್ರಮದ ಊಟ ಹೇಗಿದೆ? ರಾತ್ರಿ ನಿದ್ದೆ ಬಂದಿತೇ ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದ ಸ್ವಾಮೀಜಿಯವರು ಮುಂಜಾನೆ ಉಪಹಾರದ ಸಮಯದಲ್ಲಿ ನಿನ್ನ ಲೋಟದಿಂದ ಏನು ಚೆಲ್ಲಿತು?! ಎಂದು ಕೇಳಿದರು.

ಮುಂಜಾನೆ ನಡೆದ ಘಟನೆಯನ್ನು ಗುರುಗಳಿಗೆ ಪರಿಚಾರಕ ಹೇಳಿರಬಹುದು ಎಂಬುದನ್ನು ಅರಿತ ಆತ “ನನ್ನ ಲೋಟದಲ್ಲಿದ್ದ ನೀರು ಚೆಲ್ಲಿ ಹೋಯಿತು ಸ್ವಾಮೀಜಿ” ಎಂದು ಉತ್ತರಿಸಿದನು.
ಮೆಲುನಕ್ಕ ಸ್ವಾಮೀಜಿ ” ನಿನ್ನ ಲೋಟದಲ್ಲಿ ನೀರಿತ್ತು ಆದ್ದರಿಂದ ಅದು ಚಲ್ಲಿತು, ಅಕಸ್ಮಾತ್ ನಿನ್ನ ಲೋಟದಲ್ಲಿ ಕಾಫಿ ಇದ್ದರೆ ಅದು ಚೆಲ್ಲುತ್ತಿತ್ತು ಅಲ್ಲವೇ” ಎಂದು ಮತ್ತೆ ಪ್ರಶ್ನಿಸಿದರು.

ಇದೆಂತಹ ಪ್ರಶ್ನೆ ಎಂದು ಆಶ್ಚರ್ಯವಾದರೂ ಹೌದು ಗುರುಗಳೇ ಎಂದು ಮರುತ್ತರಿಸಿದನು ಆತ.
ಹಾಗಾದರೆ “ಲೋಟದ ಒಳಗೆ ಏನಿರುತ್ತದೆಯೋ, ಅದು ಹೊರಗೆ ಚೆಲ್ಲುತ್ತದೆ ಅಂತಾಯ್ತು, ಅಲ್ಲವೇ.” ಎಂಬ ಗುರುಗಳ ಪ್ರಶ್ನೆಗೆ ಅಚ್ಚರಿಯಾದರೂ ಹೌದು ಎಂಬಂತೆ ತಲೆಯಾಡಿಸಿದ ಆತ.
ಹಾಗೆಯೇ ಜೀವನ ಮಗು…. ಬದುಕಿನ ಸವಾಲುಗಳು ನಿನ್ನನ್ನು ಅಲುಗಾಡಿಸಿದಾಗ ನಿನ್ನೊಳಗೆ ನೀನು ಏನನ್ನು ತುಂಬಿಕೊಂಡಿರುವೆಯೋ ಅದು ಹೊರಗೆ ಬರುತ್ತದೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಚೆನ್ನಾಗಿದ್ದೇವೆ ಎಂಬಂತೆ ತೋರಿಸಬಹುದು ಆದರೆ ಬದುಕಿನಲ್ಲಿ ಊಹಿಸದ ಘಟನೆಗಳು, ಅನಿರೀಕ್ಷಿತ ಸವಾಲುಗಳು ನಿಮ್ಮೊಳಗೆ ನೀವು ತುಂಬಿಕೊಂಡಿರುವುದನ್ನು ಹೊರ ಹಾಕುತ್ತದೆ.

ಪ್ರೀತಿ, ತಾಳ್ಮೆ, ಶಾಂತಿ ಸಹನೆ, ಮೆಚ್ಚುಗೆ ಕೃತಜ್ಞತೆ ಮತ್ತು ಸಮಾಧಾನಗಳು ನಿನ್ನ ಲೋಟದಲ್ಲಿದ್ದರೆ ನಿನ್ನ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಅವುಗಳೇ ಹೊರಬರುತ್ತವೆ.
ಆದರೆ ನಿನ್ನಲ್ಲಿ ಕೋಪ, ನಿಷ್ಠುರತೆ, ಅಶಾಂತಿ, ಅಸಮಾಧಾನ, ಅಸಹನೆ ಅಸಂತುಷ್ಟತೆಗಳು ತುಂಬಿದ್ದರೆ ಎಲ್ಲ ಪರಿಸ್ಥಿತಿಗಳಲ್ಲಿಯೂ ಅವುಗಳೇ ಹೊರಗೆ ಬೀಳುತ್ತವೆ ಎಂದು ಗುರುಗಳು ಹೇಳಿದಾಗ ಆತ ತುಸು ಗೊಂದಲದಿಂದ ಅವರೆಡೆ ನೋಡಿದನು.

ಗುರುಗಳು “ದೇವರು ಎಲ್ಲರಿಗೂ ಕೊಟ್ಟಿರುವುದು ಖಾಲಿ ಲೋಟವನ್ನು ಮಾತ್ರ .… ಅದರಲ್ಲಿ ಏನನ್ನು ತುಂಬಬೇಕು ಎನ್ನುವುದು ನಿಮಗೆ ಬಿಟ್ಟದ್ದು” ಎಂದು ಹೇಳಿದರು.

ಆತನ ಮನವನ್ನು ಮುಸುಕಿದ ಅಜ್ಞಾನದ ಮಂಜು, ಮುಂಜಾನೆಯ ಸೂರ್ಯನ ಎಳೆ ಬಿಸಿಲಿನಂತಹ ಗುರುಗಳ ವಾಣಿಗೆ ಕರಗಿದಂತಾಗಿ ಹೊಸ ಬೆಳಕು ಮೂಡಿತು. ಅತ್ಯಂತ ಸಮಾಧಾನದಿಂದ ಆತ
ಕಣ್ಣು ತೆರೆಸಿದಿರಿ ಗುರುಗಳೇ, ಮುಂದಿನ ಬಾರಿ ಬರುವಾಗ ನನ್ನ ಬದುಕಿನ ಲೋಟದಲ್ಲಿ ಖಂಡಿತವಾಗಿಯೂ ಒಳ್ಳೆಯ ವಿಷಯಗಳನ್ನು ತುಂಬಿ ತರುತ್ತೇನೆ ಎಂದು ಹೇಳಿ ಗುರುಗಳ ಕಾಲಿನನ್ನಗೆರಗಿದ

 

 

 

 

 

 

 

 

 

 

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

One thought on “ನಿಮ್ಮ ಬದುಕಿನ ಲೋಟದಲ್ಲಿ ಏನಿದೆ??

Comments are closed.

Don`t copy text!