ಶಿಕ್ಷಕರ ಕಂಠ, ಸೊಂಟ ಗಟ್ಟಿ ಇರಬೇಕು

ಶಿಕ್ಷಕರ ಕಂಠ, ಸೊಂಟ ಗಟ್ಟಿ ಇರಬೇಕು

ನಿವೃತ್ತ ಪ್ರಾಚಾರ್ಯ ಸಿದ್ದು ಯಾಪಲಪರ್ವಿ ಅಭಿಮತ
ಕೇಸರಹಟ್ಟಿಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ

e- ಸುದ್ದಿ  ಗಂಗಾವತಿ

ಶಿಕ್ಷಕರ ಕಂಠ ಮತ್ತು ಸೊಂಟ ಗಟ್ಟಿ ಇರಬೇಕು. ಕಂಠ ಗಟ್ಟಿ ಇದ್ದರೆ ನಿರಂತರವಾಗಿ ಪಾಠ ಮಾಡಲು, ಸೊಂಟ ಗಟ್ಟಿ ಇದ್ದರೆ ಸತತವಾಗಿ ನಿಂತು ಪಾಠ ಮಾಡಲು ಅನುಕೂಲವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಸಿದ್ದು ಬಿ. ಯಾಪಲಪರ್ವಿ ಅಭಿಪ್ರಾಯ ಪಟ್ಟರು.

ತಾಲೂಕಿನ ಕೇಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ಶಿಕ್ಷಕರಿಗಾಗಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಶಿಕ್ಷಕರು ಪರಿಪೂರ್ಣತೆಯ ಕಡೆಗೆ ಗಮನ ಕೊಡಬೇಕು. ಕಾಲ ಕಾಲಕ್ಕೆ ಅಪ್‌ಡೇಟ್ ಆಗಬೇಕು. ಪುರ್ವ ತಯಾರಿ ಮಾಡಿಕೊಂಡೇ ತರಗತಿಗೆ ಹೋಗಬೇಕು. ಪಗಾರ ಮತ್ತು ಗಡಿಯಾರ ನೋಡಿ ಕೆಲಸ ಮಾಡದೆ, ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಪಾಠ ಮಾಡಬೇಕು ಎಂದರು.

ಜಿಜಿಡಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀಧರ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಮೀಡಿಯಂ ಶಾಲೆ ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ 1ರಿಂದ 10ನೇ ತರಗತಿ ವರೆಗೆ ಅಭ್ಯಾಸ ಮಾಡಿದವರಿಗೆ ಶೇ.25ರಷ್ಟು ಮೀಸಲಾತಿ ಇದೆ. ಈ ಸೌಲಭ್ಯದ ಲಾಭವನ್ನು ಹಳ್ಳಿಗಳಲ್ಲಿನ ಪಾಲಕರು ಪಡೆದುಕೊಳ್ಳಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಜಯಶ್ರೀ ಜಿ. ಶ್ರೀಧರ ಮಾತನಾಡಿದರು. ಮುಖ್ಯಶಿಕ್ಷಕ ರಾಘವೇಂದ್ರ ದಂಡಿನ್ ನಿರೂಪಿಸಿದರು. ಆಡಳಿತಾಧಿಕಾರಿ ಲಿಂಗಾರೆಡ್ಡಿ ಆಲೂರು ವಂದಿಸಿದರು.

Don`t copy text!