ಮೂಕ ಹಕ್ಕಿಯ ಹಾಡು
ಹೃದಯ ರಾಗ
ಹಾಡದಂತೆ ಕೊರಳ
ಕೊಯ್ದೆಯಲ್ಲ…
ಹೇಗೆ ಹಾಡಲಿ… ನೀನೇ ಹೇಳು
ಎದೆಯ ಮಾತು
ಆಡದಂತೆ
ತುಟಿಯ ಹೊಲಿದೆಯಲ್ಲ
ಹೇಗೆ ನುಡಿಯಲಿ…ನೀನೇ ಹೇಳು
ಎತ್ತರ ಹಾರುವ
ಕಂಗಳ ಕನಸ
ಬೆಳಕ ಕಸಿದೆಯಲ್ಲ
ಹೇಗೆ ಹಾರಲಿ…ನೀನೇ ಹೇಳು.
ರೆಕ್ಕೆ ಕತ್ತರಿಸಿ
ಆಕಾಶ ತೋರಿಸುತ
ನಕ್ಕುಬಿಡು ಎಂದೆಯಲ್ಲಾ
ಹೇಗೆ ನಗಲಿ..ನೀನೇ ಹೇಳು
ಭಾವಗಳ ಬಂಧಿಸಿ
ಮೌನವಾಗಿ ಜೀವ
ಕಡಲಲಿ ಎಸೆದೆಯಲ್ಲಾ
ಹೇಗೆ ತೇಲಲಿ…ನೀನೇ ಹೇಳು
ಉಸಿರ ಕಸಿದು
ಹಸಿರಾಗಿ ಹಾಯಾಗಿರು
ಎಂದು ಹರಸಿದೆಯಲ್ಲ
ಹೇಗೆ ಜೀವಿಸಲಿ… ನೀನೇ ಹೇಳು
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ