ತಮ್ಮನಿಕ್ಕಿ ನಿಧಾನವ ಸಾಧಿಸಬೇಕು.
ಹಗಲು ನಾಲ್ಕು ಜಾವ ಆಸನಕ್ಕೆ ಕುದಿವರು.
ಇರಳು ನಾಲ್ಕು ಜಾವಾ ವ್ಯಸನಕ್ಕೆ ಕುದಿವರು.
ಅಷ್ಟವಿಧಾರ್ಚನೆ ಷೋಡಶೋಪಚಾರ ಎಂಬರಲ್ಲದೆ
ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ
ಕೂಡಲಚೆನ್ನ ಸಂಗಮದೇವಾ ಚೆನ್ನ ಬಸವಣ್ಣ
ಬಸವಣ್ಣನವರು ಆರಂಭಿಸಿದ ಲಿಂಗಾಯತ ಚಳುವಳಿಯಲ್ಲಿ ಹಲವಾರು ಶರಣರು ಪಾಲ್ಗೊಂಡು ಸಮತೆ ಶಾಂತಿ ಸೈರಣೆ ಪದಗಳಿಗೆ ಹೊಸ ಭಾಷೆ ಬರೆದು ತಮ್ಮ ನಿಜ ಜೀವನದಲ್ಲಿ ಅಳವಡಿಸಿದರು. ಚೆನ್ನ ಬಸವಣ್ಣ ಬಸವಣ್ಣನವರ ಸೋದರಳಿಯ ಅಕ್ಕನಾಗಮ್ಮ ಮತ್ತು ಶಿವ ಸ್ವಾಮಿಯವರ ಮಗ..ಅನುಭವ ಮಂಟಪದ ಅನುಭವ ಕಾರ್ಯ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಳ್ಳುವದಲ್ಲದೆ ಬಿಜ್ಜಳನ ಆಸ್ಥಾನದಲ್ಲಿ ಚಿಕ್ಕ ದಂಡ ನಾಯಕನಾಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.
ಮಹಾ ಅನುಭಾವಿ ವಸ್ತು ನಿಷ್ಠ ವಚನಕಾರ ಚೆನ್ನ ಬಸವಣ್ಣ ತಮ್ಮ ಅನುಭವವನ್ನು ಭಕ್ತಿ ಸಾಧನ ಮತ್ತು ಅಂತರಂಗದ ಅರಿವಿನ ವಿಸ್ತಾರವನ್ನು ತಮ್ಮ ವಚನಗಳಲ್ಲಿ
ಹರವುಗೊಳಿಸುತ್ತಾರೆ.
ಹಗಲು ನಾಲ್ಕು ಜಾವ ಆಸನಕ್ಕೆ ಕುದಿವರು.
ಭವಿಯು ಬದುಕಿನಲ್ಲಿ ಭೋಗಾದಿ ವಿಷಯಗಳ ಬೆನ್ನು ಹತ್ತಿ ಅದುವೇ ನಿಜವಾದ ಸುಖವೆಂದು ನಂಬಿ ನಾಲ್ಕು ಜಾವ ಅಂದರೆ ಹನ್ನೆರಡು ತಾಸು ಹಗಲಿನಲ್ಲಿ
ತನ್ನ ಆಸ್ತಿ ಹಣ ಗಳಿಕೆ ಸಂಸಾರ ಪ್ರಾಪಂಚಿಕ ಪ್ರಲಾಪಕ್ಕೆ ಒಳಗಾಗಿ ಕಾಲ ಕಳೆಯುತ್ತಾನೆ.ಹಣ ಧನ ಕಾಂಚಾಣ ಕಾಮಿನಿ ಮಡದಿ ಮಕ್ಕಳು ಎಂಬ ಆಸನವು ನಿರಂತರವಾಗಿ ಕಾಡುತ್ತದೆ. ಪ್ರಾಪಂಚಿಕ ಚಿಂತೆಗೆ ಒದ್ದಾಡುವ ಮನುಷ್ಯ ಪಾರಮಾರ್ಥಿಕ ಚಿಂತನೆಗೆ ತನ್ನ ಸಿದ್ಧ ಪಡಿಸುವದಿಲ್ಲ . ಜಾವ ಅಂದರೆ ಮೂರು ಗಂಟೆಯ ಒಂದು ಕಾಲ . ಹಗಲಿನಲ್ಲಿ ತನ್ನ ಉಪಭೋಗಧಿಗೆ ಬೇಕಾಗುವ ಸೌಲಭ್ಯಗಳ ಶೇಖರಣೆಯಲ್ಲಿ ಕುದಿಯುತ್ತಿರುತ್ತಾನೆ ಮನುಷ್ಯ. ಇವರನ್ನು ಶರಣರು ಭವಿ ಎಂದು ಕರೆಯುತ್ತಾರೆ.
ಇರಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು
ಭವಿಯು ತಾನು ಕೂಡಿಟ್ಟ ಆಸ್ತಿ ಹಣ ಧನ ಕನಕವನ್ನು ಕಾಪಾಡುವ ಚಿಂತೆಯಲ್ಲಿ ರಾತ್ರಿ ಹನ್ನೆರಡು ತಾಸು ಚಿಂತಿಸುತ್ತಾನೆ. ಮನುಷ್ಯನಲ್ಲಿ ತನ್ನ ಕಾಮಿನಿಯ ಜೊತೆಗೆ ಸುಖವನ್ನು ಅನುಭವಿಸಬೇಕು ಎನ್ನುವ ಚಪಲ ಹೆಚ್ಚಾಗುತ್ತದೆ. ಮನುಷ್ಯನ ಆಸ್ತಿ ಹೆಚ್ಚಾದಂತೆ ಅನೇಕ ದುಶ್ಚಟಗಳಿಗೆ ವ್ಯಸನಕ್ಕೆ ಬಲಿಯಾಗುತ್ತಾನೆ .ಕುಡಿತ ಮಾದಕ ವಸ್ತುಗಳ ಸೇವೆನೆ ಗಾಂಜಾ ಅಫಿಮು ತಂಬಾಕು ಸೇವನೆ , ಅಂಗನೆಯರ ಸಹವಾಸ ಜೂಜು ಹೀಗೆ ಅನೇಕ ವ್ಯಸನಗಳ ದಾಸನಾಗುವ ಭವಿ ಸಂಪೂರ್ಣ ರಾತ್ರಿಯನ್ನು ತನ್ನ ವ್ಯಸನಗಳ ಅಮಲಿನಲ್ಲಿ ಕಳೆಯುತ್ತಾನೆ. ಇದರಿಂದ ತಾನು ದೈವೀ ಸಾಕ್ಷಾತ್ಕಾರ ಸಮಾಧಿ ಸ್ಥಳವನ್ನು ಪಡೆಯುವ ಪರಮ ಸುಖ ಸಾಧಿಸುವ ಮಾರ್ಗದಿಂದ ಬಲು ದೂರವಾಗುತ್ತಾರೆ.
ಅಷ್ಟವಿಧಾರ್ಚನೆ ಷೋಡಶೋಪಚಾರ ಎಂಬರಲ್ಲದೆ
ಇನ್ನು ಕೆಲವರು ಸಾಧನೆಯ ಹಾದಿಯಲ್ಲಿ ಪಂಚೇಂದ್ರಿಗಳ ಕ್ರಿಯೆಗಳ ಮೂಲಕ ಮನವ ತೃಪ್ತಿ ಪಡಿಸುವ ಕೃತಕ ಆರಾಧನೆ ಪೂಜೆಯಲ್ಲಿ ತೊಡಗುತ್ತಾರೆ .
ಜಲ ಅಕ್ಷತೆ ಪತ್ರ ಧೂಪ ದೀಪ ನೈವೆದ್ಯ ಪುಷ್ಪ ಗಂಧ ಹೀಗೆ ಅಷ್ಟವಿಧಾರ್ಚನೆಗಳನ್ನು ಮನುಷ್ಯ ಕೈಕೊಳ್ಳುತ್ತಾನೆ .ಅವುಗಳ ಜೊತೆಗೆ ಷೋಡಶೋಪಚಾರ
ಅರ್ಘ್ಯ ,ಪಾದ್ಯ ಆಚಮನ ಮುಂತಾದ ಹದಿನಾರು ಉಪಚಾರ್ರಗಳನ್ನು ಆಚರಿಸುತ್ತಾನೆ. ಒಳಗಿನ ಕುದಿಯುವ ಮನಕ್ಕೆ ತೃಪ್ತಿ ಪಡಿಸಲು ಹೊರಗಿನ ಬಾಹ್ಯ ಆಡಂಬರದ ಪೂಜೆ ಪ್ರವಚನ ಕೀರ್ತನೆ ಪುರಾಣಗಳನ್ನು ಅವಲಂಬಿಸುವ ಮನುಷ್ಯನು ನಿಜವಾದ ಧಾರ್ಮಿಕ ನಿಲುವನ್ನು ಅನುಸರಿಸಿ ಆಚರಿಸಲು ಸಾಧ್ಯವಾಗುವದಿಲ್ಲ.
ಅಂತರಂಗದ ಅರಿವು ಮುಖ್ಯ ಬಾಹ್ಯ ಆಡಂಬರವು ಶಬ್ದದ ಲಜ್ಜೆ ಜ್ಞಾನದ ನಷ್ಟ ಮಾತ್ರ .
ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ ಕೂಡಲಚೆನ್ನ ಸಂಗಮದೇವಾ
ವ್ಯಕ್ತಿ ತನ್ನ ಬದುಕಿನ ಅರ್ಧ ಭಾಗವನ್ನು ಚಿಂತೆ ಆಸನಕ್ಕೆ ಬಳಲುತ್ತಾನೆ . ಇನ್ನರ್ಧ ಭಾಗ ತನ್ನ ದುಶ್ಚಟ ವ್ಯಸನಕ್ಕೆ ಕಳೆಯುತ್ತಾನೆ .ಇನ್ನು ಕೆಲವರು ಅಂತರಂಗದ ಆಳಕ್ಕೆ ಇಳಿಯದೆ ಒಳಗಿನ ಚಿತ್ತವನ್ನು ಹಸನುಗೊಳಿಸದೆ ಬಹಿರಂಗ ಅರ್ಚನೆ ಉಪಾಸನೆಯಲ್ಲಿ ವ್ಯರ್ಥ ಕಾಲ ಕಳೆಯುತ್ತಾರೆ.
ತನ್ನ ತಾನರಿದೊಡೆ ತಾನೇ ದೇವಾ ನೋಡ ಎಂದು ಶರಣರು ಹೇಳಿದ್ದಾರೆ. ಮನುಷ್ಯನು ತನ್ನನ್ನು ಲಿಂಗ ತತ್ವ ಸಾಧನೆಗೆ ಸಮರ್ಪಿಸಿಕೊಂಡು
ಅರ್ಥ ಕಾಮ ಧರ್ಮ ಮೋಕ್ಷಗಳ ಮೀರಿ ನಿತ್ಯ ನಿರಂತರ ಪರಮ ಸುಖವನ್ನು ಪಡೆಯುವ ಸುಂದರ ಪ್ರಯತ್ನವನ್ನು ಮಾಡುವವರನ್ನು ಯಾರನ್ನು ಕಾಣೆನು ಎಂಬ ಆತಂಕ ಕಳವಳ ವ್ಯಕ್ತ ಪಡಿಸುವ ಚೆನ್ನ ಬಸವಣ್ಣನವರು ಅಂತರಂಗದ ಅರಿವಿಂಗೆ ನಿಲುಕುವ ಪರಮೋಚ್ಚ ಜ್ಞಾನವೇ ನಿಧಾನ . ನಿಧಾನ ಅಂದರೆ ಸಂಪತ್ತು ಬೌದ್ಧಿಕ ಪಾರಮಾರ್ಥಿಕ ಮೌಲ್ಯಯುತವಾದ ಸಂಪತ್ತೇ ಶೂನ್ಯ ಬಯಲು ನಿರಾಳ ..ಅಂತಹ ಸಂಪತ್ತನ್ನು ಗಳಿಸುವ ಸಾಧಿಸುವ ಮಾರ್ಗ ಶರಣ ಮಾರ್ಗ ಬಸವ ಪಾಠವಾಗಿದೆ. ಅದಕ್ಕೆ ಮೊದಲು ಭಕ್ತ ಇಂತಹ ಸಾಧನೆಗೆ ತನ್ನನ್ನು ಸಜ್ಜುಗೊಳಿಸುವ ಮನೋಬಲವನ್ನು ಹೆಚ್ಚಿಸಿಕೊಳಬೇಕು. ಮಾಡಿ ನೀಡಿ ಹೋಗುವುದು ದಾಸೋಹವಲ್ಲ ಹಂಗಿನ ಅರಮನೆಗಿಂತ ಭಕ್ತನ ಅಂಗಳವನ್ನು ಸಾಧಕ ಬಯಸುತ್ತಾನೆ. ತಮ್ಮ ಕರ್ತತ್ವ ಶಕ್ತಿಯನ್ನು ಬಳಸಿಕೊಂಡು ಅಂಗ ಶರೀರವನ್ನು ಲಿಂಗ ಶರೀರವನ್ನಾಗಿ ಮಾಡಿ
ಮಾಂಸ ಪಿಂಡವನ್ನು ಮಂತ್ರ ಪಿಂಡವನ್ನಾಗಿ ಆನಂದಿಸುವ ಬಗೆಯೇ ಪಾರಮಾರ್ಥಿಕ ಪರಮಸುಖವು. ಅಂತಹ ಸುಖವನ್ನು ಅನುಭವಿಸುವ ಕಾರ್ಯಕೆ ತೊಡಗುವವನೇ ಭಕ್ತನಾಗುತ್ತಾನೆ.ಇಂತಹ ಸಾಧನೆಯ ಹಾದಿಯಲ್ಲಿ ನಡೆದು ಪರಿಪೂರ್ಣನಾದ ನಿಷ್ಪತ್ತಿಯ ಮನಸು ಶರಣನೆನಿಸಿಕೊಳ್ಳುತ್ತಾನೆ .
ಅಂತೆಯೇ ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣನು ಎಂದಿದ್ದಾರೆ ಶರಣರು.
-ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ