ವಿಜಯ ಮಹಾಂತರು ಗುರುಮಹಾಂತರು ಬಸವ ಬಂಡಿಯ ಹೂಡ್ಯಾರ
ಬಸವತತ್ವದ ಬುತ್ತಿಯ ತಗೊಂಡು ಜ್ಞಾನವ ನೀಡುಲು ಬಂದಾರ ತಂಗಿ ಅರಿವಿನ ಬೆಳಕನು ನೀಡತ್ತ ಸಾಗ್ಯಾರ,/ಪ/
ಮೂಢನಂಬಿಕೆ ಕಂದಾಚಾರದ ಜಡಬೇರನು ಕಿತ್ತಿ ಎಸೆದಾರ,
ತನುವೆಂಬ ಹೊಲದಲಿ ಮಂಗಮನವನು ಹದವ ಮಾಡ್ಯಾರ ತಂಗಿ ನಿಜದ ನಿಲುವನು ತಿಳಿಸ್ಯಾರ, /1/
ಇಷ್ಟಲಿಂಗದ ಮಹಿಮೆಯ ತಿಳಿಸಿ ನಿಷ್ಠೆಯ ಬೆಳೆಸಿರಿ ಎಂದಾರ,
ಅಂಗದ ಮೇಲೆ ಲಿಂಗವಿಲ್ಲದೆ ನೀವು ಇರಬ್ಯಾಡ್ರೀ ಅಂದಾರ ತಂಗಿ
ಭಕ್ತರ ಜೀವನ ಪಾವನ ಮಾಡ್ಯಾರ,/2/
ಗುರು ಲಿಂಗ ಜಂಗಮ ದಾಸೋಹ ಭಾವನೆ ಬರುವಂತೆ ಮಾಡ್ಯಾರ,
ಶರಣರ ವಚನದ ಅಮೃತರಸವನು ನೀಡುತ ಜೀವನ ಸಾರ್ಥಕ ಮಾಡ್ಯಾರ ತಂಗಿ ಬಸವತತ್ವದ ಬೆಳಕ ಚೆಲ್ಯಾರ,/3/
ದುಡ್ಡು ದುಗ್ಗಾಣಿ ಬೇಡದ ಮಹಾಂತರು ಕರುಣೆ ನೀಡ್ಯಾರ ಭಕ್ತರ ಜೀವನ ಹಾಳು ಮಾಡುವ ದುಶ್ಚಟ ಬೇಡ್ಯಾರ ತಂಗಿ ಮಹಾಂತ ಜೋಳಿಗೆ ತಂದಾರ,/4/
ಬಸವನ ನೆನೆದರೆ ಜೀವನ ಸುಂದರ ಎನ್ನುವ ಮಂತ್ರವ ತಿಳಿಸ್ಯಾರ,
ಬಸವನ ಮಹಿಮೆಯ ಸಾರುತ ಮಹಾಂತರು ಮುಂದಕ ಸಾಗ್ಯಾರ ತಂಗಿ ಬಸವತತ್ವದಂತೆ ನುಡಿದಂತೆ ನಡೆದಾರ./5/
ತಾಯಿ ಹೃದಯದ ಸವಿ ವಚನದ ಸಾರವ ಹೇಳುವ ಅಜ್ಜಾರು
ನಮಗೆಲ್ಲಿ ಸಿಗತಾರ,
ಇಂಥಾ ಮಹಾಂತರು ನಮಗೆಲ್ಲಿ ಸಿಗತಾರ ಹೇಳವ್ವ ತಂಗಿ ನಮಗೆಲ್ಲಿ ಸಿಗತಾರ,/6/
ದಿಟ್ಟ ಮಾತಿನ ಗಟ್ಟಿ ನಿರ್ಧಾರ ಮಾಡುವ ಪೂಜ್ಯರು
ಮೃದು ಮಾತಿನ ವಿನಯದ ಪೂಜ್ಯರು
ವಿಜಯ ಮಹಾಂತರು ಗುರುಮಹಾಂತರು
ದಿವ್ಯ ಕರುಣವ ಪಡೆದ ನಾವೇ ಧನ್ಯರು ನೋಡವ್ವ ತಂಗಿ ನಾವೇ ಧನ್ಯರು ನೋಡವ್ವ./7/
–ರಚನೆ:ಸುನಿತಾ ಅಂಗಡಿ.
ಅಕ್ಕನ ಬಳಗ ಇಳಕಲ್ಲ.