ಡಾ.ಸರ್ವಮಂಗಳ ಸಕ್ರಿಯವರ ಮಹಾಪ್ರಬಂಧ
“ರಾಯಚೂರು ಜಿಲ್ಲೆಯ ತತ್ವಪದಕಾರರು ಮತ್ತು ಅವರ ಸಾಹಿತ್ಯ
ಕೃತಿ – ರಾಯಚೂರು ಜಿಲ್ಲೆಯ ತತ್ವಪದಕಾರರು ಮತ್ತು ಅವರ ಸಾಹಿತ್ಯ
ಮುದ್ರಣ ವರ್ಷ- 2024
ಪ್ರಕಾಶಕರು – ದೇವನಾಂಪ್ರಿಯ ಪ್ರಕಾಶನ ಮಸ್ಕಿ
ಪುಟಗಳು-272
ಬೆಲೆ-350 ರೂಪಾಯಿ
ಈ ಸುದ್ದಿ ಓದುಗರಿಗೆ 250 ರೂ.ಗೆ ಪುಸ್ತಕ ಸಿಗಲಿದೆ. ಸಂಪರ್ಕಿಸಿ-9448805067
ಡಾ.ಸರ್ವಮಂಗಳ ಸಕ್ರಿಯವರು ರಾಯಚೂರಿನ ಪ್ರತಿಭಾಸಂಪನ್ನರು. ೨೦೦೮ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಮಂಡಿಸಿದ ಮಹಾಪ್ರಬಂಧ ತಡವಾಗಿಯಾದರೂ ಪ್ರಕಟಗೊಂಡಿದ್ದು ಸಂತಸ ಹಾಗೂ ಹೆಮ್ಮೆಯ ವಿಷಯ. ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ ಮಸ್ಕಿ ಅವರ ಹಿರಿಮೆ ಕೊಡುಗೆ ಇದಾಗಿದೆ.
ಸಾಮಾನ್ಯವಾಗಿ ತತ್ವಪದಕಾರರು ಮನದ ಮಾಲೀಕರು. ಅಂಥ ತತ್ವಪದಕಾರರನ್ನು ಭೇಟಿಮಾಡಿ, ಪದಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದು ಇವರ ಸಂಶೋಧನಾ ಆಸಕ್ತಿ, ಸತತ ಅಧ್ಯಯನ ಧರ್ಮವು, ಆ ಕೃತಿಯನ್ನು ಓದಿದಾಗ ಮನದಟ್ಟಾಗುತ್ತದೆ.
ಸಂಪೂರ್ಣ ಮಹಾಪ್ರಬಂಧವನ್ನು ಸಮಾರೋಪ ಸೇರಿ ೭ ಅಧ್ಯಾಯಗಳಲ್ಲಿ ವಿಂಗಡಿಸಿ ಅಧ್ಯಯನಕ್ಕೆ ಒಳಪಡಿಸಿದ ಸಂಶೋಧನಾ ಕೃತಿಯಿದು.
ರಾಯಚೂರಿನ ಹಿರಿಯ ಸಾಹಿತಿ, ವಿಮರ್ಶಕ ದಿ|| ಶಾಂತರಸರ ಹಾಗೂ ಡಾ.ಬಸವರಾಜ ಸಬರದ ಅವರ ಲೇಖನಗಳಿರುವುದನ್ನು ಗಮನಿಸಿ ರಾಯಚೂರು ಭಾಗದ ತತ್ವಪದಕಾರರ ಬಗ್ಗೆ ಅಧ್ಯಯನ ನಡೆದಿಲ್ಲ ಎಂದು ಪರಿಶೀಲಿಸಿ ಸುಮಾರು ೩೦ಜನ ತತ್ವಪದಕಾರರನ್ನು ಅವರ ಸಾಹಿತ್ಯದೊಂದಿಗೆ ಸಂಶೋಧನೆಯನ್ನು ಸಂಶೋಧಕಿ ಡಾ.ಸಕ್ರಿಯವರು ಕೈಗೆತ್ತಿಕೊಂಡಿರುವುದು ಗಮನಾರ್ಹವಾದ ಸಂಗತಿ.
ತತ್ವಪದಕಾರರು ಸಂಘಟನೆಗಿಂತ ಏಕಾಂಗಿ ಹೋರಾಟಗಾರರು ವೈಯಕ್ತಿಕ ನೆಲೆಯ ಹೋರಾಟಗಾರರ ಇದುವರೆಗಿನ ಸಾಹಿತ್ಯ ಮತ್ತು ಭಜನೆ ಮೇಳದವರನ್ನು ಧ್ವನಿ ಸುರುಳಿಗಳನ್ನು ಸಂಗ್ರಹಿಸಿ ಅವರ ಸಾಹಿತ್ಯದ ಲಿಖಿತ, ಮೌಖಿಕ ಆಚರಣಾ ಮಾಹಿತಿ ಸಂಗ್ರಹಿಸಿ ಗರಿಷ್ಟ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ತತ್ವಪದಕಾರರ ಸಾಂಸ್ಕೃತಿಕ ಬದುಕಿನ ನಿರೂಪಣೆ ಆಧ್ಯಾತ್ಮಿಕ ತತ್ವದ ಮೇರುತನವನ್ನು ಅನಾವರಣಗೊಳಿಸಲಾಗಿದೆ.
ನಿಜಾಮ್‌ನ ಆಳ್ವಿಕೆಯ ಪ್ರಭಾವದ ನಾಡಾದ ರಾಯಚೂರಿನಲ್ಲಿ ಮುಸ್ಲಿಂ ಮುಂತಾದ ಹಲವು ಜಾತಿಯ ತತ್ವಪದಕಾರರಿದ್ದಾರೆ. ಅವರಲ್ಲಿ ವಿಭಿನ್ನ ಮನೋಧರ್ಮ, ತತ್ವ, ಪವಾಡ ಐತಿಹ್ಯ ಮುಂತಾದವು ಸೇರಿ, ಬಹುಮುಖಿ ಸಂವೇದನೆಯಿದೆ.
ಸಾಮಾನ್ಯವಾಗಿ ತತ್ವಪದಕಾರರು ಶೈವ, ತಾಂತ್ರಿಕ, ನಾಥ, ಸಿದ್ಧ, ಸಾಂಖ್ಯ ಪಂಥಕ್ಕೆ ಸೇರಿದವರಾದರೂ ಸಮಾಜದ ಏರುಪೇರು, ತಾರತಮ್ಯ, ಭೇದಭಾವ ನೋಡಿ ಕಟುವಾಗಿ ಮಾತುಗಳನ್ನು ಬಳಸುತ್ತಾರೆ. ರಾಯಚೂರಿನ ತತ್ವಪದಕಾರರಲ್ಲಿ ಹನುಮಾವಧೂತರು, ಹನುಮಂತವ್ವನ ರಚನೆಗಳು ಸಂಖ್ಯಾದೃಷ್ಟಿಯಿಂದ ಗಮನಸೆಳೆದರೆ ಸತ್ವದ ದೃಷ್ಟಿಯಿಂದ ಕೂಡಲೂರು ಬಸವಲಿಂಗ ಶರಣ ಪ್ರಮುಖನಾಗಿ ಕಾಣುತ್ತಾನೆ. ಅರವಲಿಯ ಬಿಜಲಿ ವಸ್ತಾದ, ಮಂಜರ್ಲಾದ ಖಾದರಸಾಬ್ ಹಿಂದೂ ಮುಸ್ಲಿಮರ ಸಾಮರಸ್ಯದ ಸಮನ್ವಯತೆಗೆ ಉದಾಹರಣೆಯಾಗುತ್ತಾರೆ. ರ‍್ರಮಾರೆಪ್ಪ ಹೊಸೂರು ತಿಪ್ಪಣ್ಣ, ದಲಿತ ಅನುಭಾವಿ ಕವಿಗಳು. ಹೀಗೆ ವಿವಿಧ ಊರುಗಳಿಂದ, ವಿವಿಧ ಜನಾಂಗಗಳಲ್ಲಿ ಹುಟ್ಟಿದರೂ ಪ್ರದೇಶ, ಲಿಂಗ, ಅಂತಸ್ತು, ಜಾತಿಯನ್ನು ಮೀರಿದ ಮಾನವೀಯತೆ, ಸೌಹಾರ್ದತೆ ಕಲಿಸಿದ ಈ ತತ್ವಪದಕಾರರು ಮಹನೀಯರು ಎಂದು ಸಂಶೋಧಕಿ ಗುರುತಿಸಿದ್ದಾರೆ.
ಮಧ್ಯಕಾಲೀನ ಸಾಹಿತ್ಯಕ ಅಧ್ಯಯನದ ನೆಲೆಯಿಂದ ತತ್ವಪದಗಳ ಸಂರಚನೆ ಕುರಿತು ಇಡೀಯಾದ ಅಧ್ಯಾಯದಲ್ಲಿ ತತ್ವಪದಗಳಲ್ಲಿ ತತ್ವ, ನೀತಿ, ಗುರು, ಮುಕ್ತಿ ಮುಂತಾದ ಮೌಲ್ಯಗಳು ಸಾಹಿತ್ಯ ರೂಪ ಪಡೆದು ಭಜನಾಮೇಳಗಳಾಗಿ ಪರಿವರ್ತಿತವಾಗಿವೆ ಎಂದು ಗುರುತಿಸಿ, ಜೈನಧರ್ಮ, ವಚನ, ಕೀರ್ತನ ಸಾಹಿತ್ಯ ಮುಂತಾದ ಲಿಖಿತ, ಮೌಖಿಕ ಸಾಹಿತ್ಯಗಳು ಆಧ್ಯಾತ್ಮಿಕ ಸತ್ವಗಳ ನಿವೇದನೆ ಎಂದು ಸಂಶೋಧಕಿ ತಿಳಿಸಿದ್ದಾರೆ. ಆರೂಢ ಸಂಸ್ಕೃತಿ, ಸ್ವರವಚನ, ಕೈವಲ್ಯಪದ ಮಧ್ಯದ, ಸೂಕ್ಷ್ಮವಾದ ಕೊಂಡಿಯನ್ನು ಗುರುತಿಸುವಲ್ಲಿ ಡಾ.ಸಕ್ರಿಯವರು ಯಶಸ್ಸನ್ನು ಕಂಡುಕೊಂಡಿದ್ದಾರೆ. ಹೇಗೆಂದರೆ ಸ್ವರವಚನ, ಕೈವಲ್ಯಪದ, ಶಿಷ್ಟತೆಯ ಕಡೆ ವಾಲಿದರೆ, ತತ್ವಪದಗಳು ಗ್ರಾಮೀಣ ಬದುಕಿಗೆ ಚೈತನ್ಯ ಕೊಟ್ಟಿವೆ ಎಂದಿದ್ದಾರೆ. ತಮ್ಮ ಅಧ್ಯಯನದ ದೃಷ್ಟಿಯಿಂದ ರಾಯಚೂರಿನ ತತ್ವಪದಕಾರರನ್ನು ಕಾಲ ಹಾಗೂ ಪರಂಪರೆಯ ದೃಷ್ಟಿಯಿಂದ ವಿಂಗಡಿಸಿದ್ದು ಪ್ರಶಂಸನಾರ್ಹವಾಗಿದೆ. ೧೯ನೇ ಶತಮಾನದ ಪ್ರಾರಂಭದ ತತ್ವಪದಕಾರರು ಶಕ್ತಿ ದೇವತೆಯ ಉಪಾಸನೆಯ ಹಾಡುಗಳನ್ನು ಕಟ್ಟಿದ್ದು “ಹರ ಮುನಿದರೆ ಗುರು ಕಾಯುವನು ಹರನಿಗೆ ಅತ್ಯಧಿಕ ಶಾಶ್ವತ ಗುರು” ಎಂಬ ಮೌಲ್ಯವನ್ನು ಹುಟ್ಟುಹಾಕಿ ಲೋಕೋದ್ಧಾರ ಮಾಡಿದ ಸಂಚಾರಿಗಳು ಎಂದು ಗುರುತಿಸಿದ್ದಾರೆ.
ಮುಂದೆ ಬಂದ ತತ್ವಪದಕಾರರು ಸ್ವಾತಂತ್ರ‍್ಯ ಸಂಗ್ರಾಮದ ಒತ್ತಡ, ದೈಹಿಕ, ಮಾನಸಿಕ ತಲ್ಲಣದ ಜನಸಾಮಾನ್ಯರಿಗೆ ಸಮಾಧಾನ ಹೇಳುತ್ತ ತಮ್ಮದೇ ಆದ ಗುರು ಪರಂಪರೆ ಬೆಳೆಸುತ್ತಾ ಮಠಗಳನ್ನು ಕಟ್ಟಿದ್ದರು. ಈ ಘಟ್ಟದಲ್ಲಿ ಹನುಮಂತವ್ವಳಂಥ ಏಕ ಮಹಿಳಾ ತತ್ವಪದಕಾರ್ತಿ ಇದ್ದುದ್ದದ್ದನ್ನು ಸಂಶೋಧಕಿ ಗುರುತಿಸಿದ್ದಾರೆ.
ನಂತರ ಬಂದ ತತ್ವಪದಕಾರರಲ್ಲಿ ನಿರ್ದಿಷ್ಟವಾದ ಮಠದ ಸೃಷ್ಟಿ, ತಮ್ಮದೇ ಗುಂಪು ಇಲ್ಲದೆ ಬಡತನದ ಬದುಕಿನಿಂದ ಅಂತರ್ಮುಖದತ್ತ ಸಾಗಿದರು ಎಂದು ತಿಳಿಸುತ್ತಾ “ನಾದ, ಗಣ್ಯ, ಗುಣಗಳ ಅನುಭಾವದ ನೆಲೆಯ ಕವಿಮನಸ್ಸಿನ ಹಾಡುಗಳು” ಎಂದು ಅವರು ಹೇಳಿದ್ದಾರೆ.
ಈ ನಾಡು ಕಂಡ ಯುದ್ಧಗಳಿಂದ ಇಲ್ಲಿನ ತತ್ವಪದಕಾರರ ಪರಂಪರೆಯು, ವಿರಕ್ತಿಯು ಪ್ರಭುತ್ವವನ್ನು ಧಿಕ್ಕರಿಸುವ ಸಶಕ್ತಿಯುಳ್ಳಂಥದ್ದು ಎಂದು ಗುರುತಿಸಿ, ಈ ವಿರಕ್ತಿಯು ಸನ್ಯಾಸವಲ್ಲ, ಪ್ರಾಪಂಚಿಕ ಸುಖದ ಮೇಲೆ ಅತೀ ಮೋಹವನ್ನು ಇಟ್ಟುಕೊಳ್ಳದ ಧಾರಣಶಕ್ತಿ ಎಂದಿದ್ದಾರೆ. ತ್ರಿವಿಧಗಳಾದ ಗುರು, ಲಿಂಗ ಜಂಗಮ ಪದದ ಅರ್ಥ ತತ್ವಪದಕಾರರಲ್ಲಿ ಭಿನ್ನವಾಗಿದೆ. ಗುರು ಇಲ್ಲಿ ಪೋಷಕನಲ್ಲ, ಸೂಚಕ, ಅಂತರಂಗದ ಬೆಳಕಾಗಿ ಕಾಣುತ್ತಾನೆ. ಲಿಂಗವು ಇಷ್ಟಲಿಂಗವಾಗದೇ, ಕರಸ್ಥಲ ಲಿಂಗವಾಗದೆ ಬಹುದೇವತೋಪಾಸನೆ ಕಂಡು ಬರುವುದು. ಜಂಗಮ ಶಬ್ದಕ್ಕೆ ಇಲ್ಲಿ ವಿಶೇಷ ಸ್ಥಾನವಿದೆ. ಅದು ವ್ಯಕ್ತಿಯಾಗದೇ ತತ್ವವಾಗಿದೆ.
ರಾಯಚೂರು ಭಾಗದ ಜಂಗಮರಲ್ಲಿ ೩ ಪ್ರಕಾರಗಳನ್ನು ಇವರು ಗುರುತಿಸುತ್ತಾರೆ. (೧) ಹಿಟ್ಟಿಗಾಗಿ ಬರುವ ಜಂಗಮ (೨) ಕಂತೆ ಭಿಕ್ಷೆ ಜಂಗಮ (೩) ವ್ರತ ಮಾಡುವ ಜಂಗಮ ಮಹಿಳೆಯರು. ದುಡಿಯದೆ ಉಣ್ಣುವ ದುರಂಹಕಾರಿ ಜಂಗಮರನ್ನು ಸ್ವಾವಲಂಬಿ, ಸ್ವಾಭಿಮಾನಿ ಜಂಗಮರೆAದು ತತ್ವಪದಕಾರರು ಬದಲಾಯಿಸಿದರು ಎಂದು ಸಂಶೋಧಕಿ ಸ್ಪಷ್ಟಪಡಿಸಿದ್ದಾರೆ. ಸ್ತಿತಿ ಭಾವದಲ್ಲೂ ಸ್ವಲ್ಪ ಭಿನ್ನತೆಯನ್ನು ಇವರು ಗುರುತಿಸಿದ್ದಾರೆ. ಸ್ತ್ರೀ ಪುರುಷ ಭಾವ ಬದಲಾಗಿ ಸತಿಗೆ ಪ್ರಥಮ ಸ್ಥಾನ ಭೋಗ ನೆಲೆಯಿಂದ ಭಿನ್ನವಾಗಿ ಬ್ರಹ್ಮಾನಂದ ಸ್ವರೂಪಿ ಎಂದು ತತ್ವಪದಕಾರರು ನಂಬಿದ್ದಾರೆ ಎಂದು ಗುರುತಿಸಿದ್ದಾರೆ. ‘ಮಿಸ್ಟಿಸಿಸಂ’ ಅನುಭಾವ ‘ದೇವರಿಗಿಂತ ಗುರು ದೊಡ್ಡವನೆಂಬ ಸೂಫಿ-ಈ ಮೂರಕ್ಕೂ ಭಿನ್ನವಾದ ಆತ್ಮಶಕ್ತಿ, ಆತ್ಮತತ್ವ ತತ್ವಪದಕಾರರಿಗೆ ಪ್ರಮುಖವಾಗಿತ್ತು. ಸಮಾಜದ ಆರೋಗ್ಯದ ಜೊತೆಗೆ ದೈಹಿಕ ಮಾನಸಿಕ ಆನಂದ ಮುಖ್ಯವಾದುದು ಎಂದು ಗುರುತಿಸಿ ಅವರದು ಬಹುಕೇಂದ್ರಿತ ಸ್ವರೂಪದ ಬದುಕು ಎಂದು ಇವರು ಸ್ಪಷ್ಟಪಡಿಸಿದ್ದಾರೆ.
ನಮ್ಮಲ್ಲಿನ ಆರೂಢ, ಅವಧೂತ ಕೊಡೆಕಲ್ ನಂಥ ಸಂಪ್ರದಾಯದೊಂದಿಗೆ ತತ್ವಪದಕಾರರು ಹೇಗೆ ಭಿನ್ನ ಎಂಬುದನ್ನು ಸಂಶೋಧಕಿ ಎಳೆಎಳೆಯಾಗಿ ವಿವರಿಸಿದ್ದಾರೆ. ಅಲ್ಲದೆ ತೋಂಡಿ ಸಂಪ್ರದಾಯದ ಬಗ್ಗೆಯೂ ಅಭ್ಯಸಿಸಿದ್ದಾರೆ. ಕಾಲಜ್ಞಾನ, ಖಂಡಜ್ಞಾನ, ಡಂಗುರಪದ ಫರಾಕುಗಳು ಅವುಗಳ ಅರ್ಥ, ತತ್ವಪದಕ್ಕೂ ಅವುಗಳಿಗಿರುವ ವ್ಯತ್ಯಾಸ, ಮುಂದೆ ಬೆಡಗಿನ ಪರಂಪರೆ ಹೀಗೆ ಇವರ ಅಧ್ಯಯನ, ಸಂಶೋಧನೆ ವಿಸ್ತ್ರತವಾಗುತ್ತ ಸಾಗುತ್ತದೆ. ಇಂದಿನ ಸಮಾಜದಲ್ಲಿ ಕಾಣುವ ಮೌಡ್ಯ ಭ್ರಷ್ಟಾಚಾರ, ಅಪ್ರಮಾಣಿಕತೆ, ಜಾತೀಯತೆಗೆ ತತ್ವಪದಕಾರರು ನುಡಿ ನಡೆ ಒಂದಾಗಿದ್ದುದ್ದನ್ನು ತಿಳಿಸಿದ್ದಾರೆ. ಯೋಗ ಮತ್ತು ಧ್ಯಾನದಂತಹ, ಯಾವ ಮತೀಯ ಶ್ರದ್ದೆಯೂ ಇಲ್ಲದೆ ಕೇವಲ ಜ್ಞಾನಚಿಂತನೆಯಿAದ ತಿಳಿಸಿದ್ದಾರೆ. ಸಮಾಜ ಸುಧಾಕರರಾದ ತತ್ವಪದಕಾರರ ನುಡಿಯ ಅನುಭಾವವನ್ನು ನಿಘಂಟು ಅಥವಾ ವಿಶ್ವಕೋಶ ಗ್ರಂಥಗಳಿಂದ ಅರಿತುಕೊಂಡು ಅಭ್ಯಸಿಸಲು ಸಾಧ್ಯವಿಲ್ಲ ಎಂದು ಸಂಶೋಧಕಿ ಸ್ಪಷ್ಟಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಹಿಂದು ಮುಸ್ಲಿಂ ಕೋಮು ಸೌಹಾರ್ದ, ಬ್ರಿಟಿಷರ ಮತ್ತು ನಿಜಾಮರ ಆಳ್ವಿಕೆಯ ಹಿನ್ನೆಲೆಯಲ್ಲಿ ಅವರ ನಡೆನುಡಿ ಹಿಂದು ಮುಸ್ಲಿಂ ಸೂಫಿ, ಸಂತರು ಎನ್ನುವ ವಿಭಾಗೀಕರಣವನ್ನು ಮೀರಿದಂಥವು ಎಂದು ಬಹಳ ನಿಖರವಾಗಿ ಡಾ.ಸಕ್ರಿಯವರು ನಿರ್ದೇಶಿಸಿದ್ದಾರೆ. ಅಲ್ಲದೆ ಬಹು ಮುಖ್ಯವಾಗಿ ಸಂತರನ್ನು ಅನುಭಾವಿಗಳನ್ನು ಅವರ ವೈಶಿಷ್ಟ್ಯದ ಜೊತೆಗೆ ಸಮಕಾಲೀನ ಆರ್ಥಿಕ, ಧಾರ್ಮಿಕ, ರಾಜಕಾರಣದ ಭಾಗಗಳಾಗಿ ಮುಂದುವರೆಯುತ್ತಿರುವುದರ ಬಗ್ಗೆ ಸಂಶೋಧಕಿ ಚಿಂತನೆಯೂ ಬಹಳ ಗಾಢವಾಗಿ ಅಭಿವ್ಯಕ್ತಗೊಂಡಿದೆ. ೨೦೦೮ರಲ್ಲಿ ಮಂಡಣೆಗೊಂಡ ಈ ಮಹಾಪ್ರಬಂಧವನ್ನು ಸಂಪೂರ್ಣವಾಗಿ ಓದಿ ಮನನಮಾಡಿದಾಗ ಇತ್ತೀಚೆಗೆ ಹೊಸ ಸಂಶೋಧನೆ ನಡೆದು ಹೊಸ ಹೊಸ ತತ್ವಪದಕಾರರ ಸಾಹಿತ್ಯ, ಬದುಕು ಸೇರಿಸಿ ಪ್ರಕಟಿಸಬಹುದಿತ್ತು ಎನ್ನುವ ಚಿಂತನೆಯು ಒಮ್ಮೆ ಮನಸ್ಸಿಗೂ ಬರುವುದು ನಿಜ ಆದರೆ ಒಮ್ಮೆ ಅಧ್ಯಯನ ಪೂರ್ವಕ ಮನಸಿಟ್ಟು ಓದಿದರೆ ಡಾ.ಸರ್ವಮಂಗಳ ಸಕ್ರಿಯವರ ಶ್ರಮ ಅದರ ಸಾರ್ಥಕತೆ ಇಲ್ಲಿಮೈವೆತ್ತಿ ನಿಂತಿರುವುದು ಗಮನಕ್ಕೆ ಬಾರದೇ ಇರದು.
ಯಾವುದೇ ವಿಮರ್ಶೆ ಸಂಶೋಧನೆ ಪೂರ್ಣವಾಯಿತು ಎಂದರೆ ಅದು ನಿಂತ ನೀರಾಗುವುದು. ಹಾಗಾಗಿ ಈ ಮಹಾಪ್ರಬಂಧವು ಮುಂದಿನ ಸಂಶೋಧಕರಿಗೆ ಜ್ಞಾನದೀವಿಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದುದರಿಂದ ಡಾ.ಸರ್ವಮಂಗಳ ಸಕ್ರಿಯವರು ಸದಾ ಅಭಿನಂದನಾರ್ಹರು.
-ಡಾ. ರಾಜಶ್ರೀ ಕಲ್ಲೂರಕರ್
ರಾಯಚೂರು.