ಶ್ರಾವಣ ಮಾಸದ ಶರಣ ಮಾಲಿಕೆ ೭
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ……
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆ ಯಾಡುವಂತೆ
ಕೂಡಲಸಂಗನ ಶರಣರೊಡನೆ
ಮರೆತು ಸರಸವಾಡಿದಡೆ,ಸುಣ್ಣದ ಕಲ್ಲ ಮಡಿಲಲ್ಲಿ
ಕಟ್ಟಿಕೊಂಡು ಮಡುವ ಬಿದ್ದಂತೆ
-ಬಸವಣ್ಣನವರು
12 ನೇ ಶತಮಾನದ ಬಸವಣ್ಣನವರ ಬದುಕು ಒಂದು ರೀತಿ ಹೋರಾಟದಿಂದ ಕೂಡಿದ್ದು ಆಗಿತ್ತು .ಸಮಾಜದಲ್ಲಿರುವ ಅಜ್ಞಾನ, ಮೂಢಾಚರಣೆ ,ಕಂದಾಚಾರಗಳ ಕಪಿ ಮುಷ್ಠಿಯಿಂದ ಜನರ ಬದುಕು ನಲುಗುತ್ತಿರುವುದನ್ನು ಕಂಡು ಮಮ್ಮಲ ಮರುಗಿ ,ಅದನ್ನು ಹೇಗೆ ಸರಿಪಡಿಸಬೇಕೆಂದು ಆತ್ಮಾವಲೋಕನ ಮಾಡಿಕೊಂಡವರು .
ಧರ್ಮ, ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯ ಅತಿರೇಕ ಕಂಡು ಮರುಗಿದ ಬಸವಣ್ಣನವರ ಬದುಕು ಮಥಿಸಿತು. ಶರಣರು ನುಡಿದಂತೆ ನಡೆದರು .ನಡೆದಂತೆ ನುಡಿದರು .ಅವರ ಆದರ್ಶದ ಕಲ್ಪನೆಯನ್ನು ನೆನಪಿಸಿಕೊಂಡು ಅಡಿ ಇಟ್ಟು ಸಾಗಿದಾಗ ,ವಿಶ್ವ ಜ್ಯೋತಿ ಬಸವಣ್ಣನವರ ಒಂದು ವಚನವು ನನಗೆ ನೆನಪಿಗೆ ಬರುತ್ತದೆ .
ಬಸವಣ್ಣನವರ ಶರಣ ನಡೆ ನುಡಿಗಳಿಗೆ ಅಪಮಾನ ಆದರೆ ಅದನ್ನು ಸಹಿಸಿಕೊಳ್ಳುತ್ತಿರಲಿಲ್ಲ .ಶರಣರ ಮನ ತುಂಬಾ ಸೂಕ್ಷ್ಮ. ಅಷ್ಟೇ ಗಂಭೀರ. ಕಾಯಕ ನಿಷ್ಠೆಯನ್ನು ಮೆರೆದ ಶರಣರಿಗೆ ನೋವಾದರೆ ಬಸವಣ್ಣನವರಿಗೂ ಕೂಡಾ ನೋವಾಗುತ್ತಿತ್ತು. ಶರಣರ ನೋವೇ ತನ್ನ ನೋವೆಂದು ಭಾವಿಸಿಕೊಂಡ ಬಸವಣ್ಣನವರು .
ಶರಣರು ತಮಗಾದ ನೋವನ್ನೆಲ್ಲ ಸಹಿಸಿಕೊಳ್ಳುವ ಸಹನಾ ಮೂರ್ತಿಗಳು .
ಇಂತಹ ಶರಣರ ಜೊತೆಗೆ ಮರೆತು ನಾವೇನಾದರೂ ಆಟ ಆಡಿದರೆ
ಅದು
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಡ ಹಾಗೆ
ನಮ್ಮ ಗಲ್ಲಕ್ಕೆ ತುರಿಕೆಯಾದಾಗ ನಮ್ಮ ಕೈಯಿಂದ ಆ ತುರಿಕೆಯನ್ನು ತುರಿದುಕೊಳ್ಳದೇ ಪಕ್ಕದಲ್ಲಿ ಹರಿದು ಹೋಗುವ ಹಾವನ್ನು ಹಿಡಿದು ಅದರಿಂದ ನಮ್ಮ ಗಲ್ಲವನ್ನು ತುರಿದು ಕೊಂಡರೆ ,ಆ ಹಾವು ನಮ್ಮ ನ್ನು ಕಚ್ಚದೇ ಬಿಡುವುದೇ ಹಾಗೆ ನಮ್ಮ ಶರಣರ ಮನ .
ಯಾರಿಗೂ ಮನಕೆ ಗಾಯ ಮಾಡದೇ ತಾವಾಗೆ ತಮ್ಮ ಕಷ್ಟವನ್ನು ಎಳೆದುಕೊಂಡಂತೆ
ಇಲ್ಲಿ ಇಂದ್ರಿಯ ಸುಖದ ಆಕರ್ಷಣೆಯನ್ನು ಹಿಡಿದು ಜಂಜಾಡಿಸುವ ಜಾಣತನ ಸಾಮರ್ಥ್ಯ ಬೇಕು .
ಹಾಗೇ ಇಂದ್ರಿಯಾಸಕ್ತಿಯನ್ನು ಗೆಲ್ಲಬಲ್ಲ ಸಾಮರ್ಥ್ಯವಿದ್ದರೆ
ಆ ಪರಮಾತ್ಮನ ಒಲುಮೆಯ ಕರುಣೆಗಳಿಗೆ ನಾವು ಪಾತ್ರರಾಗುತ್ತೇವೆ
ಎನ್ನುವ ಅರ್ಥವನ್ನು ನಾವಿಲ್ಲಿ ಕಾಣಬಹುದು .
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ
ಇಲ್ಲಿ ಉರಿ ಎಂದರೆ ಸಂಸಾರ ಮಂಡೆ ಎಂದರೆ ಬಂಧನ ಸಿಕ್ಕು ಎಂದರೆ ಬೇಲಿ ಎನ್ನುವುದು ನನ್ನ ವಕ್ತಿಗತ ಅಭಿಪ್ರಾಯ.
ಈ ಸಂಸಾರ ಎನ್ನುವ ಬಂಧನದ ಬೇಲಿಯಿಂದ ಆಚೆ ಹೋಗಿ ಬದುಕಲು ಆಗದು .ಏಕೆಂದರೆ ಶರಣರು ಸಂಸಾರದಲ್ಲಿ ಇದ್ದುಕೊಂಡೇ ಕಾಯಕ ಜೀವಿಗಳಾಗಿ ನಡೆದು ನುಡಿದು ತೋರಿದ ಕಾಯಕ ಜೀವಿಗಳು .
ಈ ಕಾಯಕವೇ ಅವರ ಬದುಕು ಅದರಿಂದ ಬಂದ ಒಂದಿಷ್ಟು ಲಾಭವನ್ನು ದಾಸೋಹಕ್ಕೆ ಮಿಡಿಪಿಟ್ಟು ಜೀವಿಸುವ ಶರಣರು
ಎಂದೂ ತಮ್ಮ ಬದುಕಿನ ಬಗ್ಗೆ ಜಿಗುಪ್ಸೆಗೊಂಡವರಲ್ಲಿ ಅತ್ಯಂತ ಪ್ರೀತಿಯಿಂದಲೇ ಬದುಕು ಕಂಡವರು .ಈ ಬದುಕಿನ ಕೆಂಡದಲ್ಲಿ ಸುಟ್ಟುಕೊಂಡವರಲ್ಲ .ಹಾಗೇನಾದರೂ ಆದರೆ ನಿಧಾನವಾಗಿ ಸಮಸ್ಯೆಯ ಸಿಕ್ಕನ್ನು ಬಿಡಿಸಿಕೊಂಡು ಸಾಗಿದವರು ಶರಣರು .
ತಲೆಯು ಸಿಕ್ಕಾಗಿದೆ ಎಂದು ಉರಿಯ ಕೊಳ್ಳಿಯಿಂದ ತಲೆಯ ಕೂದಲನ್ನು ಬಾಚಿಕೊಳ್ಳಲು ಆಗುವುದೇ ? ಹಾಗೇನಾದರೂ ಬಾಚಿಕೊಂಡರೆ ಇರುವ ತಲೆಯ ಕೂದಲು ಎಲ್ಲವೂ ಸುಟ್ಟು ಹೋಗುತ್ತವೆ .ಎನ್ನುವ ಅರ್ಥವನ್ನು ತಿಳಿಯಬಹುದಾಗಿದೆ .
ಮತ್ತೆ ಮುಂದುವರಿದು
ಹುಲಿಯ ಮೀಸೆಯನ್ನು ಹಿಡಿದುಕೊಂಡು ಉಯ್ಯಾಲೆಯನ್ನು ಆಡಲು ಆಗುವುದೇ
ಇಲ್ಲಿ ಹುಲಿ ಎಂದರೆ ಇಂದ್ರಿಯಂಗಳ ಹಸಿವು .
ತ್ರಿಕರಣ ಶುದ್ಧಿಯಿಂದ ಪರಮಾತ್ಮನನ್ನು ವಲಿಸಿಕೊಳ್ಳುವ ಮಾರ್ಗ. ಆ ಪರಮಾತ್ಮನು ವಲಿಯಬೇಕಾದರೆ ನಮ್ಮ ಪಂಚೇಂದ್ರಿಯಗಳನ್ನು ಮೊದಲು ಗೆಲ್ಲಬೇಕು .ಅದಕ್ಕೆಂದೇ .ಬಸವಣ್ಣನವರು ಎಕದೇವೋಪಾಸನೆಗಾಗಿ ,ಒಂದು ವೈಜ್ಞಾನಿಕ ಕುರುವು, ಅರಿತುಕೊಂಡು ಸುಜ್ಞಾನದ ಭಕ್ತಿಯ ಪಥವನ್ನು ಕಂಡುಕೊಂಡ ಮಹಾನ್ ಕ್ರಾಂತಿ ಪುರುಷ ವಿಶ್ವ ಗುರು ಬಸವಣ್ಣನವರು .
ಈ ಪಂಚೇಂದ್ರೀಯಗಳು ನಮ್ಮನ್ನು ಸುಪಥದತ್ತ ಕೊಂಡೊಯ್ಯುವ ಒಂದು ಬದುಕಿನ ಕ್ರೂರ ಪ್ರಾಣಿ .ಒಳಗಿರುವ ಈ ಕ್ರೂರವಾದ ಪ್ರಾಣಿಯನ್ನು ನಾವು ಭಕ್ತಿ ಭಾವ ದಿಂದ ಪಳಗಿಸುವ ಅತ್ಯಂತ ದೊಡ್ಡ ಕೆಲಸ ನಮ್ಮದು .
ಹಾಗೇನಾದರೂ ಆದರೆ ಹೋದರೆ ಆ ಹುಲಿಯು ನಮ್ಮನ್ನು ತಿಂದು ಹಾಕುವುದನ್ನು ಬಿಡುವುದೇ ?
ಎನ್ನುವ ಅರ್ಥವನ್ನು ನಾನಿಲ್ಲಿ ಕಂಡು ಕೊಂಡಿರುವೆ .
ನಮ್ಮ ಕೂಡಲಸಂಗನ ಶರಣರೊಡನೆ ಮರೆತುನಾವೇನಾದರು ಸರಸ ಆಡಿದರೆ
ಸುಣ್ಣದ ಕಲ್ಲನ್ನು ಮೈಗೆ ಕಟ್ಟಿಕೊಂಡು ನೀರಿನಲ್ಲಿ ಬಿದ್ದಂತೆ
ಶರಣ ಸತಿ ಲಿಂಗ ಪತಿ ಎಂಬ ಭಾವದಿಂದ ನಡೆದ ಶರಣರ ಜೊತೆಗೆ ನಾವು ಕೂಡಾ ಶರಣರಾಗಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ ನಡೆಯುವ ,ಈ ಶರಣರು ಪರಮಾತ್ಮ ಸ್ವರೂಪರು ,ಅಂಕುಡೊಂಕಾದ ಸಮಾಜವನ್ನು ಸಮಾಜದಲ್ಲಿರುವ ಮನಗಳನ್ನು ತಿದ್ದಿ ನಡೆದು ಶರಣತ್ವದ ಹಾದಿಯನ್ನು ಕಂಡುಕೊಂಡ ಶ್ರಮ ಜೀವಿಗಳು ಸಹನಾ ಮೂರ್ತಿಗಳು ನಿಷ್ಕಲ್ಮಷ ಮನೋಭಾವದ ಮಾತೃ ಹೃದಯದ ಶರಣರೊಡನೆ ಮರೆತು ಸರಸವಾಡಿದರೆ ಸುಣ್ಣದ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಬಿದ್ದಂತೆ ಆಗುವುದು ಎನ್ನುವ ಮಾತನ್ನು ಬಸವಣ್ಣನವರ ಈ ಒಂದು ವಚನದಲ್ಲಿ ಕಂಡುಕೊಳ್ಳಲಾಗಿದೆ .
ಸುಣ್ಣಕ್ಕೆ ನೀರು ತಾಗಿದರೆ ಸಾಕು ಅದು ಸುಟ್ಟುಕೊಂಡು ಅರಳಿ ಸುಣ್ಣವಾಗುತ್ತದೆ .
ಸುಣ್ಣದ ಕಲ್ಲಿನಂತೆ ಇರುವ ತನುವಿಗೆ ಸರಸ ಎನ್ನುವ ನೀರು ತಾಗಿದರೆ ಬಿಡುವುದೇ .
ಮೊದಲೇ ಕಾಯಕದಲಿ ಬೆಂದು ಅರಳಿದ ಶರಣ ಕುಲಕ್ಕೆ ಸರಸ ಎನ್ನುವ ನೀರನ್ನು ಬೆರೆಸಿದರೆ
ಈ ತನು ಎನ್ನುವುದು ಸುಟ್ಟು ಸುಣ್ಣವಾಗಿ ಹೋಗುತ್ತದೆ.
ಎನ್ನುವ ಅರ್ಥವನ್ನು ನಾನಿಲ್ಲಿ ಕಂಡುಕೊಂಡಿರುವೆ .
ಒಟ್ಟಿನಲ್ಲಿ ಮೃದು ಧೋರಣೆಯ ಶಿವಶರಣರ ವ್ಯಕ್ತಿತ್ವವನ್ನು ನಾವು ಇಲ್ಲಿ ಕಾಣಬಹುದಾಗಿದೆ .
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ