*ಇಂದು ನಮ್ಮ ಶಾಲೆಯಲ್ಲೊಂದು ಘಟನೆ ಜರುಗಿತು…
ಹಕ್ಕಿಯೊಂದು ನುಗ್ಗಿ ಗುಬ್ಬಿಗೂಡಿನಿಂದ ಪುಟ್ಟ ಮರಿಯನ್ನು ಕೊಕ್ಕಲ್ಲಿ ಕಚ್ಚಿ ಎತ್ತಿಕೊಂಡು ಓಡೋಗಿದೆ
ನಾನಿಂದು ಶಾಲೆಗೆ ಚೂರು ತಡವಾಗಿ ಹೋದೆ. ಹೋದೊಡನೆ ಕೆಲವು ಮಕ್ಕಳು ಆತಂಕದಿಂದ ನನಗೆ ಹೈಫೈವ್ ಕೊಡುತ್ತಲೇ ಒಬ್ಬರಿಗೊಬ್ಬರು ಮುಗಿಬಿದ್ದು ಏನೋ ಹೇಳಲು ತವಕಿಸತೊಡಗಿದರು.
ನಾನು ಹತ್ತಿರ ಬಂದ ಎಲ್ಲರನ್ನೂ ಸಂತೈಸಿ… ಸಮಾಧಾನವಾಗಿ ಒಬ್ಬೊಬ್ಬರಾಗಿ ಹೇಳಿ ಎಂದು ಒಬ್ಬೊಬ್ಬರನ್ನೇ ಮಾತನಾಡಿಸಿದೆ.
ಆಗ ಗೊತ್ತಾದದ್ದೇನೆಂದರೆ ಬೇಟೆಗಾರ ಹಕ್ಕಿಯೊಂದು ಶಾಲಾ ಅಂಗಳಕ್ಕೆ ನುಗ್ಗಿ ನಮ್ಮ ಶಾಲೆಯ ಗುಬ್ಬಿಗೂಡಿನಿಂದ ಒಂದು ಪುಟ್ಟ ಮರಿಯನ್ನು ಕೊಕ್ಕಲ್ಲಿ ಕಚ್ಚಿ ಎತ್ತಿಕೊಂಡು ಓಡೋಗಿದೆ. ಇದನ್ನ ಎಲ್ಲರೂ ನೋಡಿದ್ದಾರೆ. ಆದರೆ ಗುಬ್ಬಚ್ಚಿಯನ್ನ ಬಿಡಿಸಿಕೊಳ್ಳಲಾಗಲಿಲ್ಲ ಎಂಬ ಆತಂಕ ಅವರಲ್ಲಿ ಗಾಬರಿಯುಂಟು ಮಾಡಿತ್ತು. ಅದನ್ನ ನನ್ನ ಮುಂದೆ ಹೇಳಲು ದುಂಬಾಲು ಬಿದ್ದಿದ್ದರು.
ನಾನವರಿಗೆ ಕೂರಿಸಿಕೊಂಡು ” ಇದು ಸಹಜ ಕಂದಮ್ಮಗಳ…. ಇಲ್ಲಿ ಗುಬ್ಬಚ್ಚಿಗೂ ಬದುಕುವ ಹಕ್ಕಿದೆ, ಬೇಟೆಗಾರ ಹಕ್ಕಿಗೂ ತಾನೂ ಬದುಕಲು ಅಷ್ಟೇ ಹಕ್ಕಿದೆ, ಪ್ರಕೃತಿ ಮಾತೆ ಎಲ್ಲರಿಗೂ ತುತ್ತು ಇಟ್ಟಿದ್ದಾಳೆ. ಈ ಬದುಕು ಸಾವುಗಳ ಅವಳ ಆಯ್ಕೆ. ಜಾಸ್ತಿ ಮನಸ್ಸಿಗೆ ಹಚ್ಚಿಕೊಬೇಡಿ. ಮತ್ತು ಮರಿಕಳೆದುಕೊಂಡ ಆ ಗುಬ್ಬಚ್ಚಿಯೂ ಕಾಲಾಂತರದಲ್ಲಿ ಹೊಂದಿಕೊಳ್ಳುತ್ತೆ, ಮತ್ತೆ ಮೊಟ್ಟೆ ಇಡುತ್ತೆ, ಮರಿ ಮಾಡುತ್ತೆ…. ಬೇಟೆಗಾರ ಹಕ್ಕಿಯೂ ಹಾಗೆಯೇ ಮಾಡುತ್ತೆ… ನಾವು ನೀವು ಎಲ್ಲರೂ ಎಲ್ಲದಕ್ಕೂ ನೆಪ ಮತ್ತು ಸಾಕ್ಷಿ ಅಷ್ಟೇ…. ಅಂತ ಏನೆಲ್ಲ ಹೇಳಲು ಪ್ರಯತ್ನಪಟ್ಟೆ.
ಆದರೂ ಮಕ್ಕಳ ಅವ್ಯಕ್ತ ಆತಂಕ ಹಾಗೆಯೇ ಇತ್ತು…
ದಾನು ಎಂಬ ವಿದ್ಯಾರ್ಥಿನಿ ” ಸರ್, ಅದಕ್ಕೂ ಬೇಕಿದ್ರೆ ಕಾಳು ಕೊಡತಿದ್ವಲ್ರಿ, ನಮ್ಮ ಗುಬ್ಬಿ ಮರಿ ಯಾಕ ಒಯ್ಬೇಕಿತ್ತು ರಿ ಅದು?” ಎಂದಳು….
ನಾನು “ಆ ಬೇಟೆಗಾರ ಹಕ್ಕಿಗೆ ಆ ಗುಬ್ಬಿ ಮರಿಯೇ ಕಾಳು” ಎಂದೆ…
ಅವರೆಲ್ಲರೂ ಯಾವ ಗೂಡಿನ ಯಾವ ಗುಬ್ಬಿಯ ಮರಿ ಹೊತ್ತೊಯ್ಯಿತು ಆ ಬೇಟೆಗಾರ ಹಕ್ಕಿ ಅಂತ…. ಶಾಲಾ ಅಂಗಳ ತಡಕಾಡಿ …. ಬೇಸರದಿಂದ ತರಗತಿಗೆ ಹೋದರು….
ಮಧ್ಯಾಹ್ನವಾಯಿತು….
ಎಲ್ಲ ಮಕ್ಕಳೂ ಊಟ ಮಾಡಿದರು…
ನಂತರ ಹತ್ತಾರು ಮರಿಗಳ ಕರೆದುಕೊಂಡು ಸಾಕಷ್ಟು ತಂದೆ ತಾಯಿ ಗುಬ್ಬಚ್ಚಿಗಳು ಮಕ್ಕಳು ಚಲ್ಲಿದ್ದ ಅನ್ನದ ಅಗುಳುಗಳನ್ನ ಕೊಕ್ಕಿನಲ್ಲಿ ಎತ್ತಿ ಎತ್ತಿ ಮರಿಗಳಿಗೆ ತುತ್ತುಣಿಸತೊಡಗಿದವು….
ಶಾಲಾ ಅಂಗಳದ ತುಂಬಾ ಚಿಲಿಪಿಲಿ ಚಿಲಿಪಿಲಿ… ಪುಟ್ಟ ಮರಿಗಳು ಮತ್ತೆ ಮತ್ತೆ ತುತ್ತಿಗಾಗಿ ರೆಕ್ಕೆ ಅಗಲಿಸಿ ರೆಕ್ಕೆ ನಡುಗಿಸಿ ಚಂದಗೆ ಅಮ್ಮಾ ಅಮ್ಮಾ ನಂಗೆ ನಂಗೆ ಅಂತ ಓಡಾಡುತ್ತಿದ್ದವು ಇನ್ನೂ ರೆಕ್ಕೆ ಬಲಿಯದ ಗುಬ್ಬಚ್ಚಿ…
ಕೆಲವು ಮಕ್ಕಳು ಅವು ಅನ್ನದ ಅಗುಳು ತಿನ್ನೋದನ್ನ ಪರಸ್ಪರ ಪ್ರೀತಿಸೋದನ್ನ ಬೆರಗಿನಿಂದ ನೋಡುತ್ತಿದ್ದರು… ಉಳಿದ ಮಕ್ಕಳು ಆಡುತ್ತಿದ್ದರೆ ಇವರು ಆಟಕ್ಕೆ ಹೋಗದೆ ಅವುಗಳ ಹತ್ತಿರ ಕೂತು ನೋಡುತ್ತ ಕುಳಿತಿದ್ದರು….
ಯಾಕ್ರೋ ಅಂತ ಕೇಳಿದೆ….
ಇಲ್ಲಿ ಇಷ್ಟೊಂದು ಮರಿಗಳಿವೆ ಸರ್… ಒಂದೊಂದು ತಾಯಿಗುಬ್ಬಿ ಮೂರು ನಾಲ್ಕು ಮರಿಗಳಿಗೆ ಅನ್ನ ತಿನ್ನಸ್ತಿವೆ… ಆ ಬೇಟೆಗಾರ ಹಕ್ಕಿ ಮತ್ತೆ ಬಂದ್ರೆ…. ಅದಕ್ಕೆ ಇಲ್ಲೇ ಕೂರ್ತೀವಿ… ಅವು ಹೊಟ್ಟೆ ತುಂಬಾ ತಿಂದು ಗೂಡು ಸೇರೋವರೆಗೂ… ನನಗೆ ಕೇಳಿಸಿತಾ ಬಿಟ್ಟಿತಾ ಲೆಕ್ಕಕ್ಕೆ ತೆಗೆದುಕೊಳ್ಳದೆ ಅವರು ಗುಬ್ಬಿಗಳ ಸಮೀಪ ಕೂತಿದ್ದರು… ಕೂತೇ ಇದ್ದರು…
ಮಕ್ಕಳು ಮಕ್ಕಳಲ್ಲ, ಗುರು ಗುರುವೇ ಆಗಿರಲ್ಲ… ಎಲ್ಲ ಸಮಯದಲ್ಲೂ…
– ವೀರಣ್ಣ ಮಡಿವಾಳರ