ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು…
ಸಾಧನೆಯ ಶಿಖರವೇರಿದ ಪುಟ್ಟ ಬಾಲಕರು
ಪಂಜಾಬ್ ರಾಜ್ಯದ ರೋಬರ್ ಜಿಲ್ಲೆಯ ಐದು ವರ್ಷದ ಬಾಲಕ ತೇಗ ಬೀರ್ ಸಿಂಗ್ ಆಫ್ರಿಕಾದ ಅತಿ ದೊಡ್ಡ ಪರ್ವತವಾದ ಮೌಂಟ್ ಕಿಲಿಮಾಂಜರೋ ವನ್ನು ಚಾರಣಗೈದ ಏಷ್ಯಾದ ಪ್ರಥಮ ಅತ್ಯಂತ ಕಿರಿಯ ವಯಸ್ಸಿನ ಬಾಲಕನಾಗಿದ್ದಾನೆ.
ಪ್ರಸ್ತುತ ವರ್ಷದ ಅಗಸ್ಟ್ 18ರಂದು ಚಾರಣ ಆರಂಭಿಸಿದ ಈ ಬಾಲಕ ಕಿಲಿಮಾಂಜರೋ ಪರ್ವತದ 5895 ಮೀಟರ್ ಎತ್ತರದ ಉಹರು ಪಾರ್ಕನ್ನು ಆಗಸ್ಟ್ 23ರಂದು ತಲುಪಿದ.
ಸಿಖ್ಖರ ಧರ್ಮ ಗ್ರಂಥದ ವಾಹೇ ಗುರುವನ್ನು ಜಪಿಸುತ್ತಾ ತನ್ನ ಕುಟುಂಬದ ಪ್ರೋತ್ಸಾಹ ಮತ್ತು ಬೆಂಬಲವನ್ನು ಹೊತ್ತು ಆ ಬಾಲಕ ತೇಗ್ ಬೀರ್ ಸಾಗಿದ. ಕಡಿದಾದ ಏರುಗಳಲ್ಲಿ ಆ ಬಾಲಕನ ಕುಟುಂಬ ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಾಲಕ ಒಂದೊಂದು ಹಂತಗಳನ್ನು ಏರಿದಾಗಲೂ ಸಂತಸದಿಂದ ಹುರಿದುಂಬಿಸುತ್ತಿದ್ದರು. ಅತ್ಯಂತ ಕಡಿಮೆ ಆಕ್ಸಿಜನ್ ಲೆವೆಲ್ ನ್ನು ಹೊಂದಿದ ಕಡಿದಾದ ಪರ್ವತಗಳನ್ನು ಏರುವಾಗ ಅತ್ಯಂತ ಕಡಿಮೆ ಜೀರೋ ಡಿಗ್ರಿ ತಾಪಮಾನದಲ್ಲಿ ಬಾಲಕ ಎದೆಗುಂದದೆ ತನ್ನವರ ಪ್ರೋತ್ಸಾಹದಿಂದ ಮುಂದೆ ಸಾಗಿದ. ಆತನ ದೃಢತೆ, ಆತ್ಮವಿಶ್ವಾಸ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಆತನ ಈ ಸಾಧನೆಗೆ ಇಂಬು ಕೊಟ್ಟವರು ಆತನ ತಂದೆ ಸುಖೀಂದರ್ ದೀಪ್ ಸಿಂಗ್ ಮತ್ತು ಆತನ ಕೋಚ್ ವಿಕ್ರಂ ಜೀತ್ ಸಿಂಗ್ ಗುಮಾನ್. ವಿಕ್ರಂಜೀತ್ ಓರ್ವ ಹ್ಯಾಂಡ್ ಬಾಲ್ ಕೋಚ್ ಆಗಿ ನಿವೃತ್ತರಾಗಿದ್ದು ಬಾಲಕ ತೇಗ್ ಬೀರ್ ಕಾರ್ಡಿಯೋ ವ್ಯಾಸ್ಕ್ಯುಲರ್ ತರಬೇತಿಯನ್ನು ನೀಡಿದ್ಧರಲ್ಲದೇ ಜೊತೆಗೆ ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುವ ಮತ್ತಷ್ಟು ವ್ಯಾಯಾಮಗಳನ್ನು ನಿರಂತರವಾಗಿ ತರಬೇತಿಯ ಮೂಲಕ ಆತನ ಕ್ಷಮತೆಯನ್ನು ಹೆಚ್ಚಿಸಿದ್ದರು. ಸುಮಾರು ಒಂದು ವರ್ಷ ಕಾಲ ಅಂದರೆ ತನ್ನ 4ನೇ ವಯಸ್ಸಿನಿಂದಲೇ ನಿರಂತರ ಒಂದು ವರ್ಷ ತರಬೇತಿ ಪಡೆದ ಬಾಲಕ ತೇಗ್ ಬೀರ್ ವಾರಾಂತ್ಯಗಳಲ್ಲಿ ಹತ್ತಿರದ ಪರ್ವತಗಳನ್ನು ಆರೋಹಣ ಮಾಡುತ್ತಾ ತನ್ನ ದೈಹಿಕ ಕ್ಷಮತೆಯ ಪರೀಕ್ಷೆ ನೀಡುತ್ತಿದ್ದನು. ಇದರ ಜೊತೆ ಜೊತೆಗೆ ಬಾಲಕ ಉತ್ತಮ ಡಯಟ್ ಪದ್ಧತಿಯನ್ನು ಕೂಡ ಅನುಸರಿಸುತ್ತಿದ್ದನು.
ಹವಾಮಾನ ಪ್ರತಿಕೂಲತೆಗಳು ಮತ್ತು ಹಿಮದ ಮಳೆಯ ಹೊರತಾಗಿಯೂ ಕೂಡ ತೇಗ್ ಬೀರ್ ತಂಡದಲ್ಲಿ ಆತನ ಜೊತೆಗೆ ಆತನ ತಂದೆ ಇಬ್ಬರೂ ಗೈಡ್ಗಳು ಮತ್ತು ಇಬ್ಬರು ಸಹಾಯಕರು ಇದ್ದು ಮೊದಲ ಹಂತದಲ್ಲಿ ವಿಫಲವಾದರೂ, ಪ್ರಯತ್ನವನ್ನು ಕೈಬಿಡದೆ ಮತ್ತೆ ಮುಂದುವರೆಸಿ ಎರಡನೇ ಬಾರಿ ಮೈಕಮ್ ಎಂಬ ದಾರಿಯಲ್ಲಿ ಸಾಗಿ ತಮ್ಮ ಚಾರಣವನ್ನು ಪೂರೈಸಿದರು.
ಈ ಹಿಂದೆ ಸೆರ್ಬಿಯಾದ ಇನ್ನೋರ್ವ ಬಾಲಕ ಓಜ್ಞಾನ್ ಜೆಕೋವಿಕ್ ಈ ಪರ್ವತವನ್ನು ಚಾರಣಗೈದ ದಾಖಲೆಯನ್ನು ಹೊಂದಿದ ಅತಿ ಕಿರಿಯ ವಯಸ್ಸಿನ ಬಾಲಕನಾಗಿದ್ದ. ಇದೀಗ ತೇಗ್ ಬೀರ್ ಕೂಡ ಈ ವರ್ಷದಲ್ಲಿ ಈ ಸಾಧನೆ ಮಾಡಿದ ಎರಡನೆಯ ಬಾಲಕನಾಗಿದ್ದು ಅತ್ಯಂತ ಕಿರಿಯ ವಯಸ್ಸಿನ ಚಾರಣಿಗ ಎಂದು ಆತನ ಹೆಸರು ದಾಖಲಾಗಿದೆ. 2024ರ ಆರಂಭದ ದಿನಗಳಲ್ಲಿ ತೆಗ್ದಿರ್ ಭಾರತ ದೇಶದ ಮೌಂಟ್ ಎವರೆಸ್ಟ್ ಪರ್ವತದ ಬೇಸ್ ಕ್ಯಾಂಪ್ ತಲುಪಿ ತನ್ನ ಆಸೀಮ ಸಾಹಸವನ್ನು ಮೆರೆದಿದ್ದಾನೆ.
ಇದೇ ಆಗಸ್ಟ್ 30ರಂದು ಭಾರತಕ್ಕೆ ಮರಳಲಿರುವ ತೇಗ್ ಬೀರ್ ತನ್ನೊಂದಿಗೆ ನ್ಯಾಷನಲ್ ಪಾರ್ಕ್ ನ ಅತಿ ಕಿರಿಯ ಚಾರಣಿಗ ಎಂಬ ಸರ್ಟಿಫಿಕೇಟ್ ಅನ್ನು ಮಾತ್ರ ತರುತ್ತಿಲ್ಲ. ಅಪಾರ ಬದ್ಧತೆ, ಸಾಧನೆಯ ತವಕ ಮತ್ತು ಶ್ರದ್ಧೆಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಪಾಠವನ್ನು ಹೊತ್ತು ತರುತ್ತಿದ್ದಾನೆ.
ಕೇವಲ ಐದರ ಹರೆಯದಲ್ಲಿ ವೇದ ಪಾಠಗಳಲ್ಲಿ ಪಾರಂಗತನಾಗಿದ್ದ ಶಂಕರಾಚಾರ್ಯರು ಮುಂದೆ ಬ್ರಹ್ಮ ಸೂತ್ರಕ್ಕೆ ಭಾಷ್ಯಗಳನ್ನು ಬರೆದು ಬ್ರಹ್ಮಜ್ಞಾನ ಪ್ರವರ್ತಕರೆನಿಸಿದರು ಎಂದು ಇತಿಹಾಸಕಾರರು ಹೇಳಿದರೆ ನಾವು ನಂಬುವುದಿಲ್ಲ.
ಪುರಾಣಗಳಲ್ಲಿ ನಚಿಕೇತ ಎಂಬ ಬಾಲಕ ಕೇವಲ ಐದು ವರ್ಷ ವಯಸ್ಸಿನಲ್ಲಿಯೇ ಬಹಳಷ್ಟು ಮಂತ್ರಗಳನ್ನು ಸ್ತೋತ್ರಗಳನ್ನು ಕರಾರುವಾಕ್ಕಾಗಿ ಪಠಿಸುತ್ತಿದ್ದ ಮತ್ತು ತಂದೆಯ ಆಣತಿಯ ಮೇರೆಗೆ ಸಶರೀರನಾಗಿ ಯಮನನ್ನು ಭೇಟಿಯಾದನು. ಸುಮಾರು ಮೂರು ದಿನಗಳ ಕಾಲ ಹಸಿವು ನೀರಡಿಕೆಗಳನ್ನು ತಡೆದುಕೊಂಡು ಯಮನು ಹಿಂದಿರುಗುವವರೆಗೆ ಯಮಲೋಕದ ಬಾಗಿಲಲ್ಲಿ ಕಾಯ್ದು ನಿಂತ ಬಾಲಕ ಅತ್ಯಂತ ಕರಾಳ ರೂಪದ ಯಮನನ್ನು ಕಂಡು ಅಂಜದೆ ಅಳುಕದೇ ಆತನೊಂದಿಗೆ ಸಂವಾದ ಮಾಡಿದ. ಐದರ ಪುಟ್ಟ ಬಾಲಕ ನಚಿಕೇತನ ಧೈರ್ಯ ಸಾಹಸ ಮತ್ತು ಜ್ಞಾನ ಪಿಪಾಸೆಯನ್ನು ಕಂಡು ಯಮ ಬೆರಗಾದ.
ಮುಂದೆ ನಚಿಕೇತ ಯಮನೊಂದಿಗೆ ಜೀವನ್ಮರಣಗಳ, ಮೃತ್ಯುವಿನ ನಂತರದ ಬದುಕಿನ ಅಸ್ತಿತ್ವದ ಕುರಿತು ಕೇವಲ ಐದು ವರ್ಷ ವಯಸ್ಸಿನಲ್ಲಿ ಜ್ಞಾನವನ್ನು ಪಡೆದುಕೊಂಡನು ಎಂಬುದನ್ನು ಪುರಾಣಗಳಲ್ಲಿ ಓದಿದಾಗಲೂ ಕೇಳಿದಾಗಲೂ ಸಂದೇಹ ವ್ಯಕ್ತಪಡಿಸುವ ನಮಗೆ ನಾವು ಮಾಡುತ್ತಿರುವ ಕೆಲಸದ ಕುರಿತಾದ ಅಸೀಮ ಶ್ರದ್ಧೆ, ಆತ್ಮವಿಶ್ವಾಸ ಮತ್ತು ದೃಢ ಮನಸ್ಕತೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಮೇಲಿನ ಮೂವರು ಸಾಧಕರ ಬದುಕಿನ ಪುಟಗಳಿಂದ ಅರಿಯಬಹುದು.
ಎಲ್ಲದಕ್ಕೂ ಪುರಾವೆಗಳನ್ನು ಕೇಳುವ ನಾವುಗಳು, ನಮ್ಮ ಪ್ರಾಚೀನ ಋಷಿ ಮುನಿಗಳು ಬರೆದಿಟ್ಟ ಗ್ರಂಥಗಳಲ್ಲಿ ಶಂಕರಾಚಾರ್ಯರು ಮತ್ತು ಬಾಲಕ ನಚಿಕೇತರ ವಿಷಯಗಳನ್ನು ಪುರಾವೆಗಳು ಎಂದು ಒಪ್ಪದೇ ವಿತಂಡವಾದದಿಂದ ತಳ್ಳಿ ಹಾಕುವುದು ನಮ್ಮ ಜ್ಞಾನದ ಬರವನ್ನು ಸೂಚಿಸುತ್ತದೆಯೇ ಹೊರತು ಅವರ ಅಪರಿಮಿತ ಜ್ಞಾನವನ್ನು ಕುಂದಿಸುವುದಿಲ್ಲ ಎಂಬುದರ ಅರಿವನ್ನು ನಾವು ಹೊಂದಬೇಕು.
ಗಾಳಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅದರ ಇರವನ್ನು ತಿರಸ್ಕರಿಸಲಾಗುತ್ತದೆಯೇ?
ನಮ್ಮ ದೇಹದಲ್ಲಿ ಆತ್ಮ ಇಲ್ಲ ಎಂದು ಸಾಧಿಸುತ್ತಿದ್ದ ವಿಜ್ಞಾನಿಗಳು ಕೂಡ ಇದೀಗ ವ್ಯಕ್ತಿ ಜೀವನವನ್ನು ಕಳೆದುಕೊಂಡ ಮರುಕ್ಷಣದಲ್ಲಿಯೇ ಆತನ ದೇಹದ ತೂಕ 17 ಗ್ರಾಮಗಳಷ್ಟು ಕಡಿಮೆಯಾಗುತ್ತದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದು ಅದು ಆತ್ಮದ ಅಸ್ತಿತ್ವವನ್ನು ನಂಬುವವರ ನಂಬಿಕೆಗೆ ಇಂಬು ಕೊಟ್ಟಂತಾಗಿದೆ.
ಕೆಲ ನಂಬಿಕೆಗಳು ನಮ್ಮನ್ನು ಸದಾ ಎಚ್ಚರಿಸುತ್ತವೆ.
ದೇವರ ಅಸ್ತಿತ್ವವನ್ನು ಒಪ್ಪುವ ಜನರು ತಮ್ಮೆಲ್ಲ ಕಷ್ಟ ಗಳನ್ನು ಪರಿಹರಿಸಲು, ಧೈರ್ಯದಿಂದ ಮುನ್ನಡೆಸಲು, ಸುಖದ ದಿನಗಳು ಮುಂದಿವೆ ಎಂಬ ಭರವಸೆಯನ್ನು ಹೊಂದಲು ಆ ದೇವರು ಇದ್ದಾನೆ ಎಂಬ ಭರವಸೆಯಿಂದ ಅದೆಷ್ಟೇ ಕಷ್ಟ-ನಿಷ್ಗುರಗಳು ಬಂದರೂ ಸಹಿಸಿ ಬದುಕಿನಲ್ಲಿ ಮುನ್ನಡೆಯುತ್ತಾರೆ.
ಮತ್ತೆ ದೇವರನ್ನು ನಂಬದ ಕೆಲ ನಾಸ್ತಿಕವಾದಿಗಳು ಕೂಡ ಪ್ರಕೃತಿಯಲ್ಲಿ ಅದಮ್ಯ ಶಕ್ತಿ ಇದ್ದು ಅದು ತನ್ನ ಸಮತೋಲನವನ್ನು ಸದಾ ಕಾಯುತ್ತದೆ ಎಂದು ಒಪ್ಪುತ್ತಾರೆ.
ಯಾವ ರೀತಿ ಬದುಕೆಂಬ ನದಿಯಲ್ಲಿ ಪುಟ್ಟ ದೋಣಿ ಎಂಬ ಮನುಷ್ಯ ನಂಬಿಕೆ ಎಂಬ ಹುಟ್ಟನ್ನು ಹಾಕುತ್ತಾ ಸಾಗುತ್ತಾನೆಯೋ,ಅವರವರ ವಾದಗಳು ಏನೇ ಇದ್ದರೂ ಬದುಕನ್ನು ಸಾಗಿಸಲು ಭರವಸೆ ಬೇಕೇ ಬೇಕು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.
ಏನಂತೀರಾ ಸ್ನೇಹಿತರೆ?
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್