ಐತಿಹಾಸಿಕ ಪ್ರಸಿದ್ಧ ಮಸ್ಕಿ ಬೆಟ್ಟದ ಮಲ್ಲಿಕಾರ್ಜುನ ಜಾತ್ರೆ
e- ಸುದ್ದಿ ಮಸ್ಕಿ
ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಎರಡನೇ ಶ್ರೀಶೈಲವೆಂದು ಖ್ಯಾತಿ ಪಡೆದಿದೆ.
ಶ್ರಾವಣಮಾಸ ಬಂತೆಂದರೆ ಇಲ್ಲಿನ ಜನರಿಗೆ ಹಬ್ಬದ ವಾತಾವರಣ, ಸುಮಾರು ೪೫೦ ಅಡಿ ಎತ್ತರದ ಬೆಟ್ಟದ ಮೇಲಿರುವ ಶ್ರೀಮಲ್ಲಿಕಾರ್ಜುನ ದೇವರಿಗೆ ನಿತ್ಯವು ಶ್ರದ್ಧಾ-ಭಕ್ತಿಯಿಂದ ರುದ್ರಾಭಿಷೇಕ, ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣದಲ್ಲಿ ನಿತ್ಯವು ಬೆಟ್ಟದ ಮೇಲೆ ಹೋಗುವ ಭಕ್ತರಿಗೆ ಸುಪ್ರಭಾತದ ಸಮಯದಲ್ಲಿ ಪ್ರಕೃತಿ ಸಹಜವಾದ ಹಚ್ಚ ಹಸಿರಿನಿಂದ ಕೂಡಿದ ಸುಂದರ ರಮಣೀಯ ದೃಶ್ಯ ಮನಮೋಹಕ.
ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು, ಸೇರಿದಂತೆ ಜಾತಿ ಬೇಧವಿಲ್ಲದೆ ಶ್ರಾವಣ ಸೋಮವಾರದಂದು ಸಾಲು ಸಾಲಾಗಿ ಇರುವೆಗಳಂತೆ ಬೆಟ್ಟ ಹತ್ತುತ್ತಿರುವುದನ್ನು ನೋಡುವುದೇ ಒಂದು ಸೊಬಗು.
ಮಸ್ಕಿಯಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲದಲ್ಲಿದಂತೆ ಪೂರ್ವ ದಿಕ್ಕಿಗೆ ಒಂದು ಮಹಾದ್ವಾರ, ದಕ್ಷಿಣೋತ್ತರವಾಗಿ ದ್ವಾರ ಬಾಗಿಲುಗಳಿವೆ. ದೇವಾಲಯದ ಹೊರಗೆ ಮತ್ತು ಹೊಳ ಗೋಡೆಗಳಿಗೆ ಇತಿಹಾಸ ಪ್ರಸಿದ್ಧ ಹಾಗೂ ಪುರಾಣ ಪ್ರಸಿದ್ಧ ಚಿತ್ರಗಳನ್ನು ಚಿತ್ರಿಸಲಾಗಿದೆ.
ಶ್ರಾವಣದ ಕೊನೆಯ ಸೋಮವಾರವನ್ನು ಸೆ.೧ ರಂದು ಇಲ್ಲಿ ರೂಢಿಗತವಾಗಿ ಕಡೆ ಸೋಮವಾರವೆಂದು ಕರೆಯುತ್ತಾರೆ. ತೇರ ಬಜಾರದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ, ಮುಖ್ಯಬೀದಿ, ದೈವದಕಟ್ಟೆ ಹಾಗೂ ಬಸವೇಶ್ವರ ದೇವಸ್ಥಾನದವರೆಗೆ ದೇವರ ಉಚ್ಚಾಯ ಉತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಬೆಟ್ಟದ ಅಡಿಯಲ್ಲಿ ಸಹಸ್ರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ.
ಕಡೆ ಸೋಮವಾರದಂದು ಬೆಟ್ಟದಡಿಯಲ್ಲಿನ ಭ್ರಮರಾಂಬ ದೇವಸ್ಥಾನದ ಬಳಿ ಜಾತ್ರೆ ನಡೆಯುತ್ತದೆ.
ಪಟ್ಟಣದ ಮುಖ್ಯ ಬೀದಿಯಲ್ಲಿರುವ ಮಲ್ಲಿಕಾರ್ಜುನ ದೇವರಿಗೆ ಭಾರತ ಹುಣ್ಣಿಮೆಯಂದು ಹಳ್ಳದ ಹತ್ತಿರ ಇರುವ ಮುದಿ ಮಲ್ಲಯ್ಯನಿಗೆ ಹಂಪಿ ಹುಣ್ಣಿಮೆಯಂದು ಶ್ರಾವಣ ಮಾಸದಲ್ಲಿ ಬೆಟ್ಟದ ಮಲ್ಲಿಕಾರ್ಜುನ ಜಾತ್ರೆ ನಡೆಯುವುದು ವಿಶೇಷ.
———————————-
ಐತಿಹಾಸಿಕ ಪ್ರಸಿದ್ಧವಾದ ಮಸ್ಕಿ ಮಲ್ಲಿಕಾರ್ಜುನ ದೇವರು ಭಕ್ತರಲ್ಲಿ ಭಕ್ತಿ ಮತ್ತು ಶಕ್ತಿಯನ್ನು ಮೈಳಸಿದೆ. ಹಚ್ಚಹಸಿರಿನ ನಡುವೆ ಕಂಗೊಳಿಸುವ ಬೆಟ್ಟದ ಮಲ್ಲಿಕಾರ್ಜುನ ದರ್ಶನ ಮಾಡುವುದೆ ಪುಣ್ಯದ ಕೆಲಸ
– ಶಂಕ್ರಪ್ಪ ದೇಸಾಯಿ ಗುಡದುರು
ಅಧ್ಯಕ್ಷರು ಭ್ರಮರಾಂಬ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಘ ಮಸ್ಕಿ
—————————————————-