ಕುಷ್ಟಗಿ: ಶ್ರೀ ರಾಮಲಿಂಗೇಶ್ವರ ದೇವಾಲಯ

ನಮ್ಮ ಊರು ; ನಮ್ಮ ಹೆಮ್ಮೆ

ಶ್ರೀ ರಾಮಲಿಂಗೇಶ್ವರ ದೇವಾಲಯ

ಕುಷ್ಟಗಿ ನಗರದ ನಡು ಊರಿನೊಳೆಗೆ ಇರುವ ಪತ್ತಾರ ಓಣಿ ಎಂದು ಕರೆಯಲಾಗುವ/ ಗೌಡರ ಓಣಿಗೆ ಹೋಗುವ ,ದಾರಿ ಎಲ್ಲಿದೆ ಎಂದು ಕೇಳಿದರೆ ,ಯಾರಾದರೂ ತೋರಿಸುವ,
ಎತ್ತರದಗುಡಿಯೇ
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣದ ಶೈಲಿಯ ಪೂರ್ವದಿಕ್ಕಿಗೆ ಮುಖಮಾಡಿರುವ ಕ್ರಿ, ಶ ,ಸುಮಾರು ೧೨/ ೧೩ ನೆಯ ಶತಮಾನದ ದೆಂದು ಹೇಳಲಾಗುವ ಹಳೆ ಸ್ಮಾರಕ,
ದೇಗುಲವೆ, ರಾಮಲಿಂಗೇಶ್ವರ ದೇವಾಲಯ.
ಈ ದೇಗುಲವು ಇಂದಿಗೂ ,
ಉತ್ತಮ ಸ್ಥಿತಿಯಲ್ಲಿದ್ದು, ಗಟ್ಟಿಮುಟ್ಟಾದ ಕಟ್ಟಡ ವಾಗಿದೆ.ನೆಲಮಟ್ಟದಿಂದ ೩೦ ಪೀಟ್ ಎತ್ತರದಲ್ಲಿರುವ
ಈ ದೇವಾಲಯದ ಗರ್ಭಗೃಹವು ೮×೮=೧೬ ಚದರ ಅಡಿ ಜಾಗದಲ್ಲಿದ್ದು
ಅಂತರಾಳ ( ಗರ್ಭಗೃಹಮುಂದಿನ ಅರ್ಧಮಂಟಪವು) ಮತ್ತು ಸಭಾ ಮಂಟಪ ಗಳನ್ನು ಹೊಂದಿದ ದೇವಾಲಯವಾಗಿದೆ.

ಗರ್ಭಗೃಹ ದಲ್ಲಿ ಕಪ್ಪು ಶಿಲೆಯ ನಯವಾದ ಮೂರು ಅಡಿ ಎತ್ತರದ ಶಿವಲಿಂಗ ಇದ್ದು, ಇದರ ಪಕ್ಕದಲ್ಲಿ ಇನ್ನೊಂದು ಪ್ರತಿಷ್ಠಾಪನೆ ಇದ್ದು ಇದು ಯಾವ ದೇವರದು ಎನ್ನುವ ಮಾಹಿತಿ ಇರುವುದಿಲ್ಲ ಆಯತಾಕಾರದ ಕಟ್ಟೆಇರುವುದು ಕಾಣುತ್ತದೆ

ಸಪ್ತಮಾತೃಕೆಯರು (ಅಂದರೆ, ಸಪ್ತ ದೇವತೆಗಳಾದ ಬ್ರಾಹ್ಮಿ, ಮಾಹೇಶ್ವರೀ, ಕೌಮಾರಿ, ವೈಷ್ಣವಿ, ಮಾಹಿ, ಇಂದ್ರಾಣಿ, ಮತ್ತು ಚಾಮುಂಡ ಇರುವ, ಶಿಲ್ಪ ಪಟ್ಟಿಕೆಯನ್ನು ಕಟ್ಟೆಯಮೇಲೆ ಇಟ್ಟಿದ್ದಾರೆ

ಇದರ ಭುವನೇಶ್ವರಿ ಎಂದರೆ, (ಸೂಕ್ಷ್ಮ ಕೆತ್ತನೆಯ ಕೆಲಸದಿಂದ ಕೂಡಿರುವ ದೇಗುಲದ ಮೇಲ್ಛಾವಣಿಯ ಒಳಮೈ ಭಾಗವು)
ಪದ್ಮದ
ಅಲಂಕರಣೆಯಲ್ಲಿ ಕಲ್ಲಿನಿಂದ ಕಡೆಯಲಾಗಿದೆ

ಬಾಗಿಲುವಾಡದಲ್ಲಿ ಅರೆಗಂಬಗಳು ಹೂ ಮೊಗ್ಗು ಗಳು ಹಾಗೂ ಛಾಮರಧಾರಿಗಳ ಕೆತ್ತನೆಯ ಕೆಲಸವಿದೆ
ಆ ಛಾಮರಧಾರಿಗಳು ಎಡಕ್ಕೆ ಬಲಕ್ಕೆ ಮೂರುಜನ ತಮ್ಮ ಕೈಗಳಲ್ಲಿ ನಾಗ, ತ್ರಿಶೂಲ ಮತ್ತು ಗದೆಗಳನ್ನು ಹಿಡಿದಿರುವರು

ಮೇಲ್ಭಾಗದಲ್ಲಿ ಚೌಕಾಕಾರದ ಕೆತ್ತನೆಯ ಹಾಗೂ ಮುಂಚಾಚಿದ ಪಟ್ಟಿಕೆಗಳಿವೆ
ಲಲಾಟಬಿಂಬ ಎಂದರೆ ಬಾಗಿಲ ಚೌಕಟ್ಟಿನ ಮಧ್ಯಭಾಗದ ದ್ವಾರಬಂಧ
ದಲ್ಲಿ ಗಜಲಕ್ಷಿಯ ಉಬ್ಬು ಶಿಲ್ಪ ವಿದೆ

ದೇಗುಲದ ಸಭಾಮಂಟಪದಲ್ಲಿ ಅರು ಕಂಬಗಳಿವೆ ಬಲಭಾಗದ ಕಂಭದಲ್ಲಿ ಸುಂದರವಾದ ಕುಳಿತ ಗಣೇಶನ ಶಿಲ್ಪವಿದೆ, ಹಾಗೂ ದೇವಾಲಯದ ಕಂಬಗಳ ಮೇಲೆ, ಆನೆ, ಕೋತಿ, ಹುಲಿ,ನವಿಲು,ಯಕ್ಷಿಣಿ, ಮೀನು ಚಿತ್ರದ ಉಬ್ಬು ಶಿಲ್ಲಗಳು ಸ್ಷಷ್ಟವಾಗಿ ಕಾಣುತ್ತವೆ,

ಉತ್ತರ ಮತ್ತು ದಕ್ಷಿಣ ದಿಕ್ಕಿಗೆ ಎರಡುವರೆ ಪೀಟ್ ಅಗಲ ಮತ್ತು ನಾಲ್ಕು ಪೀಟ್ ಎತ್ತರದ ಕಲ್ಲಿನ ಕಿಟಕಿ ಗಳಿವೆ,ಎತ್ತರದ ದೇವಾಲಯದ ಸಭಾಂಗಣಕ್ಕೆ ಸಾಕಷ್ಟು ಗಾಳಿ ಬೆಳಕು ಬರಲಿ ಎನ್ನುವ ಆಶಯವಿರಬಹುದು,

ಸಭಾಂಗಣದಲ್ಲಿಯ, ಕಂಬಗಳು,ಚಚ್ಚೌಕ, ಅಷ್ಟ, ಎಂಟು ಅಕೃತಿಯ ಹಾಗೂ ವೃತ್ತಾಕಾರಗಳಲ್ಲಿವೆ,
ಅಲ್ಲದೆ ಇವುಗಳ ಮೇಲೆ ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ ಉಬ್ಬು ಶಿಲ್ಪ ಗಳನ್ನು ಕಡೆಯಲಾಗಿದೆ

ನಂದಿ ಶಿಲ್ಪವನ್ನು ಸಭಾ ಮಂಟಪದಲ್ಲಿ ಪ್ರತಿಷ್ಠಾನ ಮಾಡಲಾಗಿದೆ
ದೇವಾಲಯಕ್ಕೆ ಹತ್ತಬರಲು ೮ ಮೆಟ್ಟಿಲುಗಳ ಸೋಪಾನಗಳಿವೆ , ಮೇಲ್ಭಾಗದಲಿ ೧೬ ಪೀಟ್ ಉದ್ದದ ೨ಪೀಟ್ ಅಗಲದ ಇಳಿಜಾರಿನಂತಿರುವ ಲ್ಯಾವಿ ನಿರ್ಮಿಸಲಾಗಿದೆ ,ಅವುಗಳ ಒಳಗೆ ವಿವಿಧ ಆಕೃತಿಯ ರಂಗೋಲಿ ತರಹದ ಚಿತ್ರಗಳಿವೆ

ಎತ್ತರದ ಅಧಿಷ್ಟಾನವು ಬೂಮಟ್ಟದಿಂದ ೧೦ಪೀಟ್ ಎತ್ತರದಲ್ಲಿದ್ದು,(, ತಳಹದಿ ನೆಲೆಗಟ್ಟು ದೇವಾಲಯದ ಕೆಳಹಂತದಲ್ಲಿ ಕಟ್ಟಲಾದ ) ಈ ದೇಗುಲದ ಗರ್ಭಗೃಹ ದಮೇಲೆ ಏಕಲತ ಶಿಖರವಿದ್ದು ಕಳಸವಿದೆ,
ಗೋಪುರದ ಕೆಳಹಂತದಲ್ಲಿ ನಾಲ್ಕು ಚಿಕ್ಕದಾದ ಗುಂಡನೆಯ ಗೋಪುರಗಳಿದ್ದು ಕಳಸಗಳು ಇರುವುದಿಲ್ಲ

ದ್ರಾವಿಡ ಮಾದರಿಯ ಶಿಖರ ಎಂದರೆ (ದಕ್ಷಿಣ ಭಾರತೀಯ ದೇವಾಲಯಗಳ ವಾಸ್ತು ಶಿಲ್ಪ ಮಾದರಿಯನ್ನು ಹೊಂದಿರುವ ಶಿಖರದಲ್ಲಿ )
ಅರೆಗಂಬಗಳು, ಕೂಡುಗಳು ಮತ್ತಿತರ ಗಚ್ಚಿನಿಂದಮಾಡಿದ ಶಿಲ್ಪಗಳಿವೆ

ಅಧಿಷ್ಟಾನವು ಪಂಚ ಪಟ್ಟಕುಮುದ ಮತ್ತು ಪದ್ಮಗಳನ್ನು ಹೊಂದಿದೆ ದೇವಾಲಯದ
ಹೊರಗಿನಭಾಗದ, ಉತ್ತರ ಈಶಾನ್ಯ ಮೂಲೆಯಲ್ಲಿ ಶಿವಲಿಂಗಕ್ಕೆ ಆನೆಯು ಸೊಂಡಿಲಿನಿಂದ ನೀರು ಸುರಿಯುವ ಉಬ್ಬು ಶಿಲ್ಪವಿದೆ

ಇಂತಹ ವಿಶೇಷವಾದ ರಾಮಲಿಂಗೇಶ್ವರ ದೇವಾಲಯ ಕ್ಕೆ ಭಕ್ತರು ಇಂದಿಗೂ ಶಿವರಾತ್ರಿ ಮತ್ತಿತರ ದಿನಗಳಲ್ಲಿ ಭಕ್ತಿ ಭಾವದಿಂದ ನಡೆದುಕೊಳ್ಳತ್ತಿದ್ದಾರೆ,ಗುಡಿಯ ನೆಲಹಾಸು ಗ್ರಾನೈಟ್ ಬಂಡೆಗಳಿಂದ ಕೂಡಿದೆ.

ರಾಮಲಿಂಗೇಶ್ವರ ಅಂತ ಹೆಸರು ಯಾರು ಇಟ್ಟರು ಕರೆದರೂ ಅಂತ ಕೇಳಿದರೆ,ನಮ್ಮ ಹಿರಿಯರು ಅನಕೊಂತ ಬಂದಾರ್ರೀ ನಾವು ಹಂಗ ಕರೆತೀವ್ರೀ ಅನ್ನುತ್ತಾರೆ ಸ್ಥಳೀಯರು

ಒಂದು ಪುರಾಣೋಕ್ತ ಕತೆ ಹೀಗಿದೆ

ರಾಮಾಯಣದ ಕಾಲದಲ್ಲಿ ಬರುವ , ಶ್ರೀರಾಮದೇವರು ರಾವಣನನ್ನು ಸಂಹಾರ ಮಾಡಿದಾಗ ಬ್ರಹ್ಮ ಹತ್ಯಾ ದೋಷ ಬರಬಾರದು ಎಂದು ಪ್ರಾಯಶ್ಚಿತ್ತಕ್ಕಾಗಿ ದಂಡಕಾರಣ್ಯ ಪ್ರದೇಶದಲ್ಲಿ ರುದ್ರದೇವರ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದನಂತೆ, ಈ ರಾಮಪೂಜಿತ ರುದ್ರ ದೇವರ ಲಿಂಗಗಳೆ ಶ್ರೀ ರಾಮಲಿಂಗ ಎಂದು ಪ್ರಸಿದ್ಧಿ ಯಾಗಿವೆ,ಇಂತಹ ರಾಮಲಿಂಗೇಶ್ವರ ದೇವಾಲಯ ಗಳು ಬಹಳ ಕಡೆ ನೋಡಲು ಸಿಗುತ್ತವೆ ಕಾಲಾನುಕ್ರಮದಲ್ಲಿ ಕೆಲವು ದೇವರುಗಳಿಗೆ ಪೂಜೆ ಪುನಸ್ಕಾರಿಲ್ಲದೆ, ಕೆಲವು ದೇವರಿಗೆ ಪೂಜೆ ಜಪತಪ ಹೋಮ ಹವನಗಳು ನಡೆಯುತ್ತವೆ, ಇಂತಹ ದೇಗುಲಗಳಿಗೆ ಬ್ರಾಹ್ಮಣರು, ಶೈವರು, ಒಕ್ಕಲಿಗರು ಇತರರು,ಪೂಜಾ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ
ಕುಷ್ಟಗಿಯಲ್ಲಿ ನಂದಿಕೋಲಮಠದ ಕುಟುಂಬಸ್ಥರು ಪೂಜಾ ಪರಂಪರೆಯನ್ನು ನಡೆಸಿಕೊಂಡು ಬಂದಿದ್ದಾರೆ

ದೇವಾಲಯದ ಅಲ್ಲಲ್ಲಿ ತೃಟಿತಾವಾದ ಕಟ್ಟಡ ಕ್ಜೆ ತೇಪೆ ಹಾಕಿರುವುದು ಕಂಡುಬರುತ್ತದೆ ಆಲದಮರವು ಬೆಳೆದು ಅದರ ಬಿಲಗಳು ದೇವಾಲಯದ ಸಂದುಗಳಲ್ಲಿ ಕಾಣಿಸಿಕೊಂಡಿವೆ,

ಸುತ್ತ ಮುತ್ತ ಮನೆಗಳು ಇರುವುದರಿಂದ ದೇವಾಲಯ ಕ್ಕೆ ಯಾವುದೇ ದೊಡ್ಡ ವಾಹನಗಳ ಬರಲು ದಾರಿ ಇಲ್ಲದಂತಾಗಿದೆ

ಈ ದೇವಾಲಯ ಕುಷ್ಟಗಿ ಪಟ್ಟಣದ ಕೀರಿಟಪ್ರಾಯವಾದ ಕಲ್ಯಾಣ ಚಾಲುಕ್ಯರ ಕುರುಹು ಇದಾಗಿದ್ದು ನಮ್ಮೆಲ್ಲರ ಹೆಮ್ಮೆಯ ಪ್ರತೀಕವೆನಿಸಿದೆ.

ಸಹಕಾರ : ವಿರೇಶ ಬಂಗಾರಶೆಟ್ರ

ಬರಹ ; ನಟರಾಜ ಸೋನಾರ್, ಕುಷ್ಟಗಿ

 

Don`t copy text!