ಗಾಂಧಿಗೊಂದು ಪತ್ರ
ಮಹಾತ್ಮಾ ಭಾಪು
ನಿನಗೆ ನೂರು
ನೂರು ನಮನ .
ನಿನ್ನನ್ನು ಗುಂಡು
ಹಾಕಿ ಕೊಂದ ಮೇಲೆ
ಇಲ್ಲಿ ನಡೆದ ಎಲ್ಲ
ಘಟನೆಗಳ ಸವಿವರ
ಬರೆಯುವೆ ಕವನ .
ಸತ್ಯ ಶಾಂತಿ ಪ್ರೀತಿ
ಸಮಾಧಿಯಾದವು .
ನಿನ್ನೊಂದಿಗೆ
ಮಣ್ಣು ಮಾಡಿದೆವು
ಇಲ್ಲ ನ್ಯಾಯ ನೀತಿ
ಗ್ರಾಮ ರಾಜ್ಯದ ಹೆಸರಲಿ
ಕೊಳ್ಳೆ ಹೊಡೆವ ಭಂಡರು
ಎಲ್ಲೆಂದರಲ್ಲಿ ಕೊಲೆ
ಸುಲಿಗೆ ರೇಪು ಹಿಂಸೆ
ಬಾಂಬ ಬ್ಲಾಸ್ಟ್
ನಿಂತಿಲ್ಲವಿನ್ನೂ
ಜಾತಿ ಧರ್ಮಗಳ ಕದನ
ಶ್ರೀಮಂತ ಮಲ್ಯ ನೀರವ
ಸಾಲ ಮಾಡಿ ಓಡಿ ಹೋದರು
ರೈತರ ನಿತ್ಯ ಆತ್ಮ ಹತ್ಯೆ
ಮೊನ್ನೆ ದೆಹಲಿ ಕೋಟೆ ಮೇಲೆ
ಪುಂಡರ ಗದ್ದಲ .
ಆಡಳಿತ ವಿರೋಧ ಪಕ್ಷದವರು
ಸಮಾನವಾಗಿ ದೋಚುವರು
ತಿನ್ನುವರು ಕೊಳ್ಳೆ ಹೊಡೆವರು
ವರ್ಷಕ್ಕೊಮ್ಮೆ ನಿನ್ನ ನೆನಪು
ಲೇಖನ ಕವನ ಭಾಷಣ
ಸರಕಾರಿ ಖರ್ಚಿನಲ್ಲಿ
ಜಯಂತಿ ಪುಣ್ಯ ತಿಥಿ
ಅದರಲ್ಲೂ ಅವ್ಯವಹಾರ
ಸದನ ಕಳ್ಳ ಕಾಕರ ಗೂಡು
ಕೇಳುವವರಿಲ್ಲ
ಬಡವರ ಕೂಗು
ದೊಡ್ಡದೊಡ್ಡ ನೂಲಿನ ಗಿರಣಿ
ಸಾಯುತ್ತಿರುವ ನೇಕಾರರು
ನಿನ್ನ ಕೊಂದವರಿಗೆ
ರಾಜಗೌರವ
ಮರ್ಯಾದೆ ಸತ್ಕಾರ
ಹಳ್ಳಿಗಳಲ್ಲಿ ಕಾಣುವೆವು
ಇಸ್ಪೇಟ ಕುಡಿತ ಬಾರು
ನಗರಗಳಲ್ಲಿ ಪಬ್ ಡ್ರಗ್ಸ್
ಕುಣಿತ ಜೋರು
ಬಂತು ಸ್ವಾತಂತ್ರ
ಹಣವಂತರಿಗೆ
ಕೋತಿಗಳ ಕೈಯಲ್ಲಿ
ಅಧಿಕಾರ ಕಾರುಬಾರು
ಬರುವುದಂತೆ
ವಿದೇಶಿ ಕಪ್ಪು ಹಣ
ಹಣೆಗೆ ಕೈ ಹಚ್ಚಿ
ಕಾಯುತ್ತಿರುವೆವು
ಈಗ ಅಕ್ಕಿ ಬೇಳೆ
ಎಲ್ಲಾ ಉಚಿತ
ಕೈಗೆ ಕೆಲಸವಿಲ್ಲ
ಮಕ್ಕಳಿಗೆ ಮದುವೆಯಿಲ್ಲ
ಅದೆಷ್ಟೋ ಜನ
ಇನ್ನೂ ಸ್ವಾತಂತ್ರ
ಪಿಂಚಣಿ ಪಡೆಯುತ್ತಿದ್ದಾರೆ .
ನಿನ್ನ ಜಯಂತಿಯ ದಿನ
ಮಂತ್ರಿಗಳ ಮೋಜು ಮಸ್ತಿ
ನಾವು ಕಣ್ಣು ಕಿವಿ ಬಾಯಿ
ಮುಚ್ಚಿದ ಮಂಗಗಳು
ಹರಾಮ್ ಆರಾಮ ಹೈ
ಇತಿ ನಿನ್ನ ಬಡ ಪ್ರಜೆ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ
9552002338