ಅಯ್ಯಪ್ಪಯ್ಯ

ಅಯ್ಯಪ್ಪಯ್ಯ

ಇವರಪ್ಪ ತಿಳಿದೋ-ತಿಳಿಯದೆಯೋ
ಈತನಿಗೆ ಎಂಥ ಹೆಸರಿಟ್ಟು ಬಿಟ್ಟ……!
ಅಯ್ಯ+ಅಪ್ಪ+ಅಯ್ಯ=ಅಯ್ಯಪ್ಪಯ್ಯ….
ಮತ್ತೇ ಮತ್ತೇ ಕೂಡಿದ ಪದಗಳು
ಅರ್ಥ ಒಂದೇ…..
ಈತ ನಿಜಕ್ಕೂ ತಂದೆ…..

ಐದಡಿ ಎತ್ತರದ ದೇಹ
ಬಾಯಿ ತೆರೆದು ನಕ್ಕರೆ
ಮುಗಿಲೇ ಬೆರಗಾಗಬೇಕು
ತುಟಿ ಬಿಚ್ಚಿ ನುಡಿದರೆ
ತನಗೂ-ಪರರಿಗೂ
ಶಹಬ್ಬಾಷ್ ಎಂಬ
ಮಾತೇ ರಿಂಗಣಿಸಬೇಕು
ನೆಲಮುಗಿಲನು ಮುತ್ತುವ
ಬೆಳಕಂತೆ
ಎಲ್ಲರನೂ ಅಪ್ಪುವ ಭಾವದ
ಸವಿ ಸವಿಯ ಸೊಲ್ಲು.

ಸ್ವಚ್ಛ ಮನವೇ ಮೈದಳೆದಂತೆ
ಬಿಳಿ ಹಾಳೆಯನು ಹಾಸಿ
ಲೆಕ್ಕಣಿಕೆ ಹಿಡಿದು ಬರೆದನೆಂದರೆ
ಸ್ವಾತಿಯ ಮುತ್ತೇ ನಾಚುವಂಥ
ಅಕ್ಕರದ ಮಾಲೆ
ಸರಸತಿ ಕೊರಳಲಿ ತೂಗಿ
ನಗುವಂತೆ ಸೊಗಸು.

ತಪ್ಪಿಲ್ಲ ತಡೆಯಿಲ್ಲ
ಕೆಡುವ ಪದಗಳೂ ಇಲ್ಲ
ಸದಾ ಒಪ್ಪ ಓರಣವು
ಈ ಅಯ್ಯಪ್ಪನ ಬರೆವು.

ವೀರಭದ್ರನ ಭಕ್ತ
ಬಸವ ವಚನದ ಶಕ್ತ
ಕನ್ನಡದ ಹೂಬನದಿ
ಅನವರತ ಸುಳಿದಾಡುವನು
ದುಂಬಿಯಂತೆ ಝೇಂಕರಿಸುತ್ತ…….

ಎಪ್ಪತ್ತಾಯಿತೆಂದು
ಆಗಾಗ ಸುಳ್ಳು ಹೇಳುವ
ಈತನೆದುರಲಿ
ಇಪ್ಪತ್ತರ ಹರೆಯಕೂ
ಉತ್ತರಕುಮಾರನ ಪೌರುಷ.

ಇದು ಬರೀ ಮನಸಲ್ಲ….
ಸ್ವಚ್ಛ ಬೆಳಕಿನ ಮುಗಿಲು
ಇದು ಬರೀ ನಗುವಲ್ಲ
ಬಸವನ ಹಾಲತೊರೆಯು
ಬರೆದುದು ಬರೀ ಅಕ್ಕರವಲ್ಲ
ನುಡಿದೀವಿಯ ತೇಜದ
ಮೊಗವು

ತಾನೇ ಅಯ್ಯಪ್ಪನಾದರೂ
ಎಲ್ಲರಿಗೂ ಕೂಗುವದು
ಅಯ್ಯ….ಅಪ್ಪ ಎಂಬ
ಅಕ್ಕರೆಯ-ಸಕ್ಕರೆಯ ನುಡಿಯು

ಇಂಥ ಅಯ್ಯಪ್ಪಯ್ಯನ
ಎಪ್ಪತ್ತಕ್ಕೆ ಸೋಲಾಗಲಿ ಎಂಬ
ನನ್ನ ಶಾಪವಿರಲಿ
ಸದಾ ನಗೆ ಚೆಲ್ಲುವ
ಈ ಮುಗಿಲು
ನಮಗೆಲ್ಲ ಸದಾ

ಬೆಳಕಾಗಿರಲಿ.

 

 

 

 

 

 

 

 

-ಕೆ.ಶಶಿಕಾಂತ ಲಿಂಗಸೂಗೂರ.

Don`t copy text!