ಈ ಸುಂದರ ಜಗತ್ತು ಈಗ ಎಲ್ಲಿ ಹೋಗಿದೆ?
ಅಪ್ಪನ ಹೆಗಲೇರಿ ನೋಡಿದ
ಈ ಸುಂದರ ಜಗತ್ತು ಈಗ ಎಲ್ಲಿ ಹೋಗಿದೆ?
ಅಪ್ಪನ ವಿಳಾಸ ಹುಡುಕುತಾ,
ಹುಮ್ಮಸ್ಸೂ, ನಮ್ಮಿಂದ ಹೊರಟು ಹೋಗಿದೆ!
ಅಪ್ಪನ ಬೆವರಲಿ ಬೆಳೆದ
ಮರಗಳಲ್ಲಿ ಹಣ್ಣು ಈಗ ಕಾಣೆಯಾಗಿದೆ!
ಅಪ್ಪನ ಆಸರೆ ಇಲ್ಲದೇ ಹೈರಾಣಾಗಿ ಹಕ್ಕಿಗಳು
ಈಗ ಕಡಿಮೆ ಹಾರಾಡುತಿವೆ!
ಅಪ್ಪನ ಕಣ್ಗಳು ಅರಳದೇ
ಆಗಸದ ಆಯಸ್ಸೂ ಇಳಿಯುತಿದೆ!
ಅಪ್ಪನ ಹೆಜ್ಜೆ ಬೀಳದೇ
ಭೂಮಿಯ ರಭಸವೂ ತಗ್ಗುತಿದೆ!
ತೊರೆಗಳೆಲ್ಲಾ ತೇಜಸ್ಸು ತೊರೆದಿವೆ
ತಾವರೆಗಳು ತೊಂದರೆಗೀಡಾಗಿವೆ
ಅಪ್ಪನ ನೆರಳು ತಾಗದೆ ತೋಟಗಳು
ತಾಳ್ಮೆ ಮೀರಿ ತಡವರಿಸುತಿವೆ!!
ಅಪ್ಪನ ಉಸಿರ ಬಿಸಿ ಇಲ್ಲದೇ,
ಮನೆಯ ಸೂರು ಸೋರುತಿದೆ
ಅಪ್ಪನ ಬರುವಿಕೆಯನೇ ಕಾಯುತಿದ್ದ
ಬಾಗಿಲುಗಳೀಗ ಬಾಗಿಹೋಗಿವೆ!!
ಅಪ್ಪ ಹಾಕಿದ್ದ ಬಿಸ್ಕತ್ತು ತಿಂದ
ನಿಯತ್ತಿನ ನಾಯಿ ದಿನಾ ನೋಡುತಿದೆ
ಸಂಬಂಧಗಳ ಕಳೆಗುಂದಿಸಿದ ಮನುಜರ
ಮನಸ್ಸು, ದಿಕ್ಕುದೋಚನೆ ದಾರಿ ಮರೆತಿದೆ!
ಅಪ್ಪನ ಹೆಗಲೇರಿ ನೋಡಿದ
ಈ ಸುಂದರ ಜಗತ್ತು ಈಗ ಎಲ್ಲಿ ಹೋಗಿದೆ?
ಅಪ್ಪನ ವಿಳಾಸ ಹುಡುಕುತಾ,
ಹುಮ್ಮಸ್ಸೂ, ನಮ್ಮಿಂದ ಹೊರಟು ಹೋಗಿದೆ!
–ಫರ್ಹಾನಾಜ್ ಮಸ್ಕಿ
ಸಾಹಿತಿಗಳು ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು
ಸ.ಪ್ರ.ದ.ಕಾಲೇಜು. ನೆಲಮಂಗಲ
Beautiful words
Thank you