ವಚನ ದರ್ಶನ ಮುಟ್ಟುಗೋಲು ಮತ್ತು ಶರಣರ ಶಕ್ತಿ ಚಲನಚಿತ್ರ ನಿಷೇಧಕ್ಕೆ ಆಗ್ರಹ

ವಚನ ದರ್ಶನ ಮುಟ್ಟುಗೋಲು ಮತ್ತು ಶರಣರ ಶಕ್ತಿ ಚಲನಚಿತ್ರ ನಿಷೇಧಕ್ಕೆ ಆಗ್ರಹ

 

 

 

 

 

 

 

 

 

 

ಕೆಲ ಸಂಪ್ರದಾಯವಾದಿ ಶಕ್ತಿಗಳು ಇಂದು ವಚನ ಸಾಹಿತ್ಯವನ್ನು ತಮ್ಮ ಅನಕೂಲಕ್ಕೆ ತಕ್ಕಂತೆ ಖೋಟಾ ವಚನ ಪ್ರಕ್ಷಿಪ್ತ ವಚನ ಮತ್ತು ಸಂಸ್ಕೃತ ಉಕ್ತಿಗಳನ್ನು ಒಳಗೊಂಡ ಕೆಲ ದೋಷಪೂರಿತ ವಚನಗಳನ್ನು ಉಲ್ಲೇಖಿಸಿ ವಚನ ಚಳುವಳಿಗೆ ಆಗಮ ವೇದ ಶಸ್ತ್ರ ಉಪನಿಷದ ಆದರ್ಶಪ್ರಾಯವಾಗಿದ್ದು ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯವು ವೇದ ಆಗಮ ಉಪನಿಷದಗಳ ವಿಕಾಸ ಎಂದು ನಿರೂಪಿಸುವ ಹುಸಿ ಪ್ರಯತ್ನವೆಂದು ಕಂಡು ಬರುತ್ತದೆ . ಇಂದು ಬಸವ ತತ್ವವು ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡುಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ವಚನ ದರ್ಶನ ಕೃತಿ ರಚಿಸಿದ್ದಾರೆ .
ಬಸವಣ್ಣನವರು ವರ್ಗ ವರ್ಣ ಲಿಂಗಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಂಡಾಯ ಧೋರಣೆ ಹೊಂದಿದ ಪುರೋಗಾಮಿ ವಿಚಾರಗಳಿಂದ ವಚನ ಚಳುವಳಿಯನ್ನು ಹುಟ್ಟು ಹಾಕಿದರು. ಎಲ್ಲಾ ಕಾಯಕದ ವರ್ಗದವರು ಇಂತಹ ಅಪೂರ್ವ ವೈಚಾರಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ಕಂಬಾರ ಕುಂಬಾರ ಅಗಸ ಬೆಸ್ತ ಮಾದಿಗ ಮೇದಾರ ಹೀಗೆ ಬದುಕಿನಲ್ಲಿ ಅಗತ್ಯವಿರುವ ಶ್ರಮ ಸಂಸ್ಕೃತಿಯ ವಾರಸುದಾರರು ಶರಣರು. ಶರಣರು ಹೊರಗಿನ ಭೌತಿಕ ದೇವರಗಳನ್ನು ಗುಡಿ ಸಂಸ್ಕೃತಿ ಕಂದಾಚಾರ ಬಹುದೇವೋಪಾಸನೆ ಸಾಂಪ್ರದಾಯಿಕ ಅಂಧ ಶೃದ್ಧೆಗಳ ವಿರುದ್ಧ ಬಂಡೆದ್ದರು ಶರಣರು.. ವಚನ ಚಳುವಳಿಗೆ ತನ್ನದೇ ಆದ ಸ್ವಾನುಭಾವದ ನೆಲೆ ಇದೆ. ಅದು ವೇದ ಆಗಮ ಶಾಸ್ತ್ರ ಪುರಾಣಗಳಿಂದ ಪ್ರಭಾವಿತವಾಗದೆ ಅದಕ್ಕೆ ಭಿನ್ನವಾಗಿ ತನ್ನ ಕಾಯಕದ ಪಾರಿಭಾಷಿಕ ಪದಗಳಿಂದ ಸುಂದರ ಮುಕ್ತ ಶೈಲಿಯ ಗದ್ಯ ಪದ್ಯ ಮಿಶ್ರಿತ ಪುರೋಗಾಮಿ ಸಾಹಿತ್ಯ ಎನ್ನುವುದು ಹಲವು ಶತಕಗಳಿಂದ ದಾಖಲಾಗಿದೆ. ಇಂತಹ ಸುಂದರ ವಚನ ಸಾಹಿತ್ಯವೂ ಹನ್ನೆರಡನೆಯ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಸುಮಾರು 250 ವರ್ಷಗಳ ವರೆಗೆ ಕಾಲಗರ್ಭದಲ್ಲಿ ಹೂತು ಹೋಗಿತ್ತು.
ಹದಿನೈದನೆಯ ಶತಮಾನದ ಹಂಪಿಯ ಪ್ರೌಢದೇವರಾಯನ ಕಾಲದಲ್ಲಿ ಮತ್ತೆ ವಚನಗಳು ಸಂಕಲನಕ್ಕೆ ಮತ್ತು ಸಂಪಾದನೆಗೆ ಒಳಪಟ್ಟವು . ಶೂನ್ಯ ಸಂಪಾದನೆ ಕೃತಿಯೂ ಸಹಿತ ಅನ್ಯ ಧರ್ಮಿಯರ ಪೈಪೋಟಿಗೆ ಇಳಿದು ಕೆಲವು ಪವಾಡ ಪುರಾಣ ಕಲ್ಪಿತ ದೃಶ್ಯಗಳನ್ನು ಸೇರಿಸಿದರು. ಆಗ ಸಂಸ್ಕೃತ ಉಕ್ತಿಗಳ ಸೇರಿಕೆ ಪ್ರಕ್ಷಿಪ್ತತೆ ಮತ್ತು ಖೋಟಾ ವಚನಗಳ ಸೇರ್ಪಡೆಯಿಂದಾಗಿ ವಚನ ಚಳುವಳಿಯಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು ಸಹಜ ಮತ್ತು ಸ್ವಾಭಾವಿಕ . ಇಂತಹ ಪ್ರಕ್ಷಿಪ್ತತೆ ಪರಿಷ್ಕರಣೆಯ ಬಗ್ಗೆ ಡಾ ಫ ಗು ಹಳಕಟ್ಟಿ ಪ್ರೊ ಶಿ ಶಿ ಬಸವನಾಳ ಡಾ ಆರ್ ಸಿ ಹಿರೇಮಠ ಡಾ ಎಂ ಎಂ ಕಲಬುರ್ಗಿ ಮುಂತಾದ ಅನೇಕ ಸಂಶೋಧಕರು ವಚನಗಳಲ್ಲಿನ ಪ್ರಕ್ಷಿಪ್ತತೆಯ ನಿವಾರಣೆ ಒಂದು ವೈಜ್ಞಾನಿಕ ಮತ್ತು ವೈಚಾರಿಕ ಶರಣರ ಆಶಯಗಳ ಮೇಲೆ ನಡೆಯಬೇಕು ಎಂದೆನ್ನುವ ಅಭಿಪ್ರಾಯಗಳು ದಾಖಲಾಗಿವೆ. ಈಗ ಅಯೋಧ್ಯಾ ಪ್ರಕಾಶನದವರು ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ವಚನ ದರ್ಶನ ಎಂಬ ಕೃತಿಯು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ.

ಸರಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಆದೇಶ ಹೊರಡಿಸಿ ಅತ್ಯಂತ ಹೆಮ್ಮೆಯ ಗೌರವ ಸಂತಸದ ವಿಷಯ ತಮ್ಮ ಬಸವ ಭಕ್ತಿಗೆ ಅನಂತ ಶರಣು.


ಮಾನ್ಯರೆ ಸಧ್ಯ ಶ್ರೀಮತಿ ಅನುರಾಧಾ ಕುಲಕರ್ಣಿ ನಿರ್ಮಾಪಕರು ಮತ್ತು ದೀಲಿಪ ಶರ್ಮ ಸಾಹಿತ್ಯ ಸಂಭಾಷಣೆ ನಿರ್ದೇಶಕರು ಶರಣರ ಶಕ್ತಿ ಎಂಬ ವಿವಾದಿತ ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಇದು ಬಸವ ಭಕ್ತರಿಗೆ ತುಂಬಾ ನೋವಾಗಿದೆ. ಅತ್ಯಂತ ಅನಾಗರಿಕ ಸಂಭಾಷಣೆ ಮತ್ತು ಅಕ್ಕನಾಗಮ್ಮನವರನ್ನು ಪುಂಡ ಜಂಗಮರ ಜಾರಿಣಿತನಕ್ಕೆ ಚೆನ್ನ ಬಸವಣ್ಣನವರ ಜನ್ಮಕ್ಕೆ ಕಾರಣ ಎಂಬ ಮಹಾ ಪ್ರಮಾದವನ್ನು ಚಿತ್ರಿಸಿದ್ದಾರೆ. ಶರಣರ ಬದುಕನ್ನು ಕ್ರೌರ್ಯದಿಂದ ಅಸಂಬದ್ಧ ಮಾತುಗಳಿಂದ ಚಲನ ಚಿತ್ರವನ್ನು ನಿರ್ಮಿಸಿದ್ದು ಕನ್ನಡದ ಹೆಮ್ಮೆಯ ಶರಣ ಸಂಸ್ಕೃತಿಗೆ
ಅಪಮಾನ ಮಾಡಿದ್ದಾರೆ. ಇಂತಹ ಚಲನ ಚಿತ್ರದ ಅನೇಕ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಶೀಘ್ರವಾಗಿ ಚಲನ ಚಿತ್ರ ಬಿಡುಗಡೆಗೊಳ್ಳಲಿದೆ . ಕಾರಣ ತಕ್ಷಣ ಶರಣರ ಶಕ್ತಿ ಪ್ರದರ್ಶನಕ್ಕೆ ನಿಷೇಧ ಹೇರಲು ಭಕ್ತಿ ಪೂರ್ವಕ ಆಗ್ರಹ.

ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ . ವಚನ ಚಳುವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿಯಲ್ಲಿ ಬಿಂಬಿಸುವ ವಚನ ದರ್ಶನವು ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯವಾಗಿದೆ. ಸಾರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ ಸಮ ಬಾಳು ಸಮಪಾಲು ಎನ್ನುವ ಶ್ರೇಷ್ಠ ಧ್ಯೇಯ ಹೊಂದಿದ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ವಚನ ದರ್ಶನವನ್ನು ಈ ಕೂಡಲೇ ಸರಕಾರ ಮುಟ್ಟುಗೋಲು ಹಾಕಬೇಕೆಂದು ಮತ್ತು ಬಸವ ಭಕ್ತರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಚಿತ್ರಿಸಲಾಗಿದ್ದು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಇದಾಗಿದ್ದು ಇದರ ಪ್ರದರ್ಶನದ ಮೇಲೆ ಸರಕಾರ ನಿಷೇಧ ಹೇರಿ ಮುಂದಾಗುವ ಅನಾಹುತಗಳನ್ನು ನಿಯಂತ್ರಿಸಬೇಕೆಂದು
ಎಲ್ಲ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಸನ್ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ಇವರ ಮೂಲಕ ಕರ್ನಾಟಕ ಸರಕಾರವನ್ನು ಒತ್ತಾಯಿಸುತ್ತೇವೆ . ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮತ್ತು ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಸವ ಪರ ಸಂಘಟನೆಗಳ ಜೊತೆಗೆ ನಮ್ಮ ಸಂಸ್ಥೆಗಳಾದ ಕಲ್ಬುರ್ಗಿ ಫೌಂಡೇಶನ್ ಮತ್ತು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇವುಗಳ ಅಧ್ಯಕ್ಷರು ಪದಾಧಿಕಾರಿಗಳು ಅಜೀವ ಸದಸ್ಯರು ಸರಕಾರವನ್ನು ಒತ್ತಾಯಿಸುತ್ತೇವೆ.
ಈ ನಿಟ್ಟಿನಲ್ಲಿ ನಾಳೆ ದಿನಾಂಕ 16 ಅಕ್ಟೋಬರ್ 2024 ರಂದು ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು 16 ಅಕ್ಟೋಬರ್ 2024 ಬೆಳಿಗ್ಗೆ 11 ಘಂಟೆಗೆ ಉಪಸ್ಥಿತವಿರಲು ಕೋರಲಾಗಿದೆ

ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ

ಶ್ರೀ ಶಿವಲಿಂಗಪ್ಪ ಕಲಬುರ್ಗಿ ಕಲ್ಬುರ್ಗಿ ಫೌಂಡೇಶನ್ ಸಿಂದಗಿ ವಿಜಯಪುರ

Don`t copy text!