ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ

ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ

ಸ್ವತಂತ್ರ ಪೂರ್ವದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಮೈಸೂರು ರಾಜ್ಯ, ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಎಂದು ಆಡಳಿತಾತ್ಮಕವಾಗಿ ವಿಭಾಗ ಮಾಡಲಾಗಿತ್ತು.ಸ್ವಾತಂತ್ರ್ಯದ ನಂತರವೂ ಈ ಪರಿಸ್ಥಿತಿ ಹಾಗೆಯೇ ಮುಂದುವರೆಯಲ್ಪಟ್ಟಿತು, ಇದರ ಜೊತೆಗೆ ಕೊಡಗು ಕೂಡ ಮತ್ತೊಂದು ಸಂಸ್ಥಾನವಾಗಿತ್ತು.ಕರ್ನಾಟಕದ ಈ ಎಲ್ಲ ಸಂಸ್ಥಾನಗಳಲ್ಲಿ ಆ ಎಲ್ಲಾ ರಾಜ್ಯಗಳು ಕರ್ನಾಟಕದ ಮೂಲವನ್ನೇ ಹೊಂದಿದ್ದರೂ ಆಯಾ ವಿಭಾಗಗಳಲ್ಲಿ ಆಯಾ ಭಾಷೆಗಳು ಎನ್ನುವಂತೆ ಮುಂಬಯಿ ಕರ್ನಾಟಕದಲ್ಲಿ ಮರಾಠಿ ಪ್ರಾಬಲ್ಯ ಮದ್ರಾಸು ಕರ್ನಾಟಕದಲ್ಲಿ ತೆಲುಗು ತಮಿಳುಗಳ ಪ್ರಾಬಲ್ಯ, ಹೈದ್ರಾಬಾದ್ ಕರ್ನಾಟಕದಲ್ಲಿ ಉರ್ದುವಿನ ಪ್ರಬಲತೆ ಆಡಳಿತಾತ್ಮಕವಾಗಿ ಜಾರಿಯಲ್ಲಿತ್ತು.ಇದು ಕನ್ನಡ ನಾಡಿನ ನುಡಿಯ ಕುಂಠಿತತೆಗೆ ಕಾರಣವೂ ಆಗಿತ್ತು.
ಆಗ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡ ನಾಡು ನುಡಿಯ ಉಳಿವಿಗಾಗಿ ಕರ್ನಾಟಕವನ್ನು ಏಕೀಕರಣ ಚಳುವಳಿ ಪ್ರಾರಂಭವಾಯಿತು.

1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಗಿತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಹಲವಾರು ನಾಯಕರು ಸೇರಿ ಕರ್ನಾಟಕ ಏಕೀಕರಣ ಚಳುವಳಿಗೆ ಮುನ್ನುಡಿ ಹಾಡಿದರು.1907/1908ರ ಸಾಲಿನಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ವನ್ನು ಆಲೂರು ವೆಂಕಟರಾಯರು ಸ್ಥಾಪಿಸಿದರು. 1915ರಲ್ಲಿ ನಾಲ್ವಡಿ ಕೃಷ್ಣರಾಜ ಅರಸರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡಿತ್ತು.ಪರಿಷತ್ತಿನ ನೇತೃತ್ವದಲ್ಲಿ ಅನೇಕ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಯಿತು ಕನ್ನಡ ಭಾಷೆಯ ಪ್ರಾದೇಶಿಕ ಸಾಹಿತಿಗಳು ಈ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಆಲೂರು ವೆಂಕಟರಾಯರು ಕರ್ನಾಟಕ ಗತವೈಭವ ಕನ್ನಡಿಗರ ಸಾಧನೆಗಳ ಕುರಿತ ಕೃತಿಯನ್ನು 1912 ರಲ್ಲಿ ಪ್ರಕಟಿಸಿದರು.
ಕೃಷ್ಣದೇವರಾಯನಿಂದ ಹಿಡಿದು ನಿಜಾಮರ ಆಳ್ವಿಕೆಯ ತನಕ, ಬ್ರಿಟಿಷ್ ಅಧಿಪತ್ಯ ಎಲ್ಲದರ ಕುರಿತು ಈ ಕೃತಿಯಲ್ಲಿ ಅವರು ವಿವರಿಸಿದ್ದಾರೆ. ಈ ಕೃತಿಯನ್ನು ಓದಿದ ಸಾಮಾನ್ಯ ಜನರು ಕೂಡ ಪ್ರಭಾವಿತರಾಗಿ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದರು. ಆಗ ತಾನೆ ಸ್ವಾತಂತ್ರ್ಯ ಹೋರಾಟವನ್ನು ಮುಗಿಸಿದ ಭಾರತ ದೇಶದಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕರ್ನಾಟಕ ಏಕೀಕರಣ ಚಳುವಳಿಯ ಕಾವು ಸ್ವತಂತ್ರ ಚಳುವಳಿಗಿಂತ ಹೆಚ್ಚಿನ ಕಾವನ್ನು ಗಳಿಸಿತು.ಪ್ರತ್ಯೇಕ ಕರ್ನಾಟಕ ರಾಜ್ಯದ ಸ್ಥಾಪನೆಗಾಗಿ ಜಾಥಾ, ಪ್ರತಿಭಟನೆಗಳು ಜೋರಾಗಿ ನಡೆಯಲಾರಂಭಿಸಿದವು.

ಗುದ್ಲೆಪ್ಪ ಹಳ್ಳಿಕೇರಿ, ಸರ್ ಸಿದ್ದಪ್ಪ ಕಂಬಳಿ, ರಾ ಹ ದೇಶಪಾಂಡೆ, ರಂಗರಾಜು ದಿವಾಕರ, ಶ್ರೀನಿವಾಸರಾವ್ ಕೌಜಲಗಿ, ಶ್ರೀನಿವಾಸ ರಾವ್ ಮಂಗಳವಾಡೆ, ಕೆಂಗಲ್ ಹನುಮಂತಯ್ಯ, ಎಸ್ ನಿಜಲಿಂಗಪ್ಪ, ಟಿ ಮರಿಯಪ್ಪ, ಸಾಹುಕಾರ್ ಚೆನ್ನಯ್ಯ, ಅನಕೃ , ಸುಬ್ರಹ್ಮಣ್ಯ, ಅನ್ನದಾನಪ್ಪ ದೊಡ್ಡಮೇಟಿ ಹನುಮಂತಯ್ಯ, ಬಿ ವಿ ಕಕ್ಕಿಲ್ಲಾಯ,ಅನ್ನದಾನಯ್ಯ ಪುರಾಣಿಕ್, ಬಿ.ಡಿ. ಜತ್ತಿ ಮುಂತಾದವರ ನೇತೃತ್ವದಲ್ಲಿ ಚಳವಳಿ ನಡೆಯಿತು.

ನಾಗಪುರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಸುಮಾರು 8೦೦ಕ್ಕೂ ಹೆಚ್ಚು ಜನ ಕನ್ನಡ ಭಾಷಿಕರು ಭಾಗವಹಿಸಿ ಚಳುವಳಿಯ ಕಾವನ್ನು ಇನ್ನಷ್ಟು ಹೆಚ್ಚಿಸಿದರು.ಇದೇ ಸಮ್ಮೇಳನದಲ್ಲಿ ಎಲ್ಲಾ ಕನ್ನಡ ಭಾಷೆಮಾತನಾಡುವ ಪ್ರದೇಶಗಳ ಏಕೀಕರಣಕ್ಕೆ ಅವಿರೋಧ ನಿರ್ಣಯವನ್ನು ಅಂಗೀಕರಿಸಲಾಯಿತು. ಆಗ ಆಲೂರು ವೆಂಕಟರಾಯರ ಸಲಹೆಯಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು(ಕೆಪಿಎಸ್ ಸಿ ) ರಚಿಸಲು ನಿರ್ಧರಿಸಿದರು.ಇದರಿಂದಾಗಿ ಎಸ್ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯನಂತಹ ರಾಜಕೀಯ ಮುಖಂಡರು ಕರ್ನಾಟಕ ಏಕೀಕರಣ ಚಳುವಳಿಯ ನೇತೃತ್ವವನ್ನು ವಹಿಸಿದರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧಿವೇಶನವನ್ನು ಮಹಾತ್ಮಾಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಇದೇ ಸಮಯದಲ್ಲಿ ಚೊಚ್ಚಲ ಕರ್ನಾಟಕ ಏಕೀಕರಣ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಸರ್ ಸಿದ್ದಪ್ಪ ಕಂಬಳಿಯವರು ಇದರ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂದಿನ ಗದಗ ಜಿಲ್ಲೆಯ ಆಲೂರಿನವರಾದ ಹುಯಿಲಗೋಳ ನಾರಾಯಣರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಹಾಡುವ ಮೂಲಕ ಗಾಂಧೀಜಿಯವರ ಮೆಚ್ಚುಗೆ ಪಡೆದರು.ಕನ್ನಡಿಗರ ಶಕ್ತಿ ಸಾಮರ್ಥ್ಯದ ಅರಿವನ್ನು ಹೊಂದಿದ ಗಾಂಧೀಜಿಯವರು ಕರ್ನಾಟಕ ಏಕೀಕರಣದ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು .

1928ರಲ್ಲಿ ಗುದ್ಲೆಪ್ಪ ಹಳ್ಳಿಕೇರಿಯವರ ಪರಿಶ್ರಮದ ಫಲವಾಗಿ ನೆಹರೂ ಸಮಿತಿಯು ಕನ್ನಡ ಭಾಷಿಕ ಕೇಂದ್ರಗಳನ್ನು ಒಗ್ಗೂಡಿಸಿ ಕರ್ನಾಟಕದ ಏಕೀಕರಣಕ್ಕೆ ಸದೃಡವಾದ ಪ್ರಾಥಮಿಕ ಅಗತ್ಯತೆಯ ವರದಿಯನ್ನು ನೀಡಿತ್ತು .ಜೊತೆಗೆ ಕನ್ನಡಿಗರ ಹೋರಾಟಕ್ಕೆ ಕುವೆಂಪು, ಬೇಂದ್ರೆ, ಗೋಕಾಕ್, ಬೆಟಗೇರಿ ಕೃಷ್ಣಶರ್ಮ, ಎಂ ಗೋವಿಂದ ಪೈ, ಶಿವರಾಮ ಕಾರಂತರು, ಕಯ್ಯಾರ ಕಿಞ್ಞಣ್ಣ ರೈಯವರು ಪತ್ರಿಕೆಗಳ ಮೂಲಕ ಚಳುವಳಿಗೆ ಬೆಂಬಲವಾಗಿ ಸಾಹಿತ್ಯಿಕ ಬರಹಗಳನ್ನು ಪ್ರಕಟಿಸಿದರು.ವಿವಿಧ ಪ್ರದೇಶಗಳ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳು ಕೂಡ ಹೋರಾಟಕ್ಕೆ ಧುಮುಕಿದವು.

೧೯೪೬ ರಲ್ಲಿ ಮುಂಬಯಿಯಲ್ಲಿ ನಡೆದ ಏಕೀಕರಣ ಚಳುವಳಿಯ ಸಮ್ಮೇಳನದ ಉದ್ಘಾಟಕರಾಗಿ ಆಗಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಸ್ವತಂತ್ರ ಭಾರತದ ಮೊತ್ತ ಮೊದಲ ಆದ್ಯತೆ ಭಾಷಾವಾರು ಪ್ರಾಂತ್ಯಗಳ ರಚನೆ ಎಂದು ಘೋಷಿಸಿದರು.ಅದೇ ವರ್ಷ ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು,ಆದರೆ ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಕನ್ನಡಿಗರ ಆಶಯವನ್ನು ನಿರ್ಲಕ್ಷಿಸಲು ಆರಂಭಿಸಿತು. ಸ್ವಾತಂತ್ರ್ಯ ನಂತರವೂ ಕೂಡ ಮುಂಬಯಿ ಮದ್ರಾಸ್ ಕೊಡಗು ಮೈಸೂರು ಮತ್ತು ಹೈದರಾಬಾದ್ ಪ್ರಾಂತಗಳನ್ನಾಗಿ ಕನ್ನಡ ಭಾಷಿಕ ಪ್ರದೇಶಗಳನ್ನು ವಿಂಗಡಿಸಿದರು.

ಕರ್ನಾಟಕ ಸೇರಿದಂತೆ ಏಕೀಕರಣಕ್ಕಾಗಿ ಹೋರಾಡುತ್ತಿರುವ ಎಲ್ಲ ಪ್ರದೇಶಗಳ ಕುರಿತು ವರದಿಯನ್ನು ನೀಡುವಂತೆ ಸೂಚಿಸಲಾಗಿತ್ತು ಆದರೆ ಧರ್ ಸಮಿತಿಯು ಪುನರ್ರಚನೆಯನ್ನು ತಳ್ಳಿ ಹಾಕಿತ್ತು. ಜವಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ್, ಡಾಕ್ಟರ್ ಪಟ್ಟಾಭಿ ಸೀತಾರಾಮಯ್ಯ ಅವರು ಈ ಸಮಿತಿಯ ಸದಸ್ಯರಾಗಿದ್ದರು.ಇದರಿಂದ ನೊಂದ ಕನ್ನಡಿಗರು ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿ 1951 ಚುನಾವಣೆಯಲ್ಲಿ ಕನ್ನಡ ಹೋರಾಟಗಾರರು ಸ್ಪರ್ಧಿಸಿದರು.1953 ರಲ್ಲಿ ನಡೆದ ಹೈದರಾಬಾದ್ ನ ಕಾಂಗ್ರೆಸ್ ಅಧಿವೇಶನದಲ್ಲಿ ಆಂಧ್ರಪ್ರದೇಶ ರಚನೆಗೆ ನಿರ್ಣಯವನ್ನು ಅಂಗೀಕರಿಸಿ ಮತ್ತೊಮ್ಮೆ ಕರ್ನಾಟಕದ ಹೆಸರನ್ನು ಕೈಬಿಡಲಾಯಿತು.ಇದನ್ನು ವಿರೋಧಿಸಿ ಅಂದಿನ ವಿಧಾನಸಭಾ ಸದಸ್ಯ ಅನ್ನದಾನಪ್ಪ ದೊಡ್ಡಮೇಟಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಅವರಿಗೆ ಬೆಂಬಲವಾಗಿ ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಸಾವಿರಾರು ಜನರು ದಂಗೆ ಎದ್ದರು.ದೊಡ್ಡಮೇಟಿಯವರ ರಾಜೀನಾಮೆಯ ನಂತರ ನಡೆದ ಮರುಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಹೋಯಿತು.ಎಚ್ಚೆತ್ತ ಪ್ರಧಾನಿ ನೆಹರೂ ಅವರು ರಾಜ್ಯ ಪುನರ್ರಚನಾ ಆಯೋಗವನ್ನು ನ್ಯಾಯಮೂರ್ತಿ ಫಜಲ್ ಆಲಿಯವರ ನೇತೃತ್ವದಲ್ಲಿ ರಚಿಸಿದರು.ಸಾಕಷ್ಟು ಒತ್ತಡಗಳ ಬಳಿಕ ಈ ಸಮಿತಿಯು ಭಾಷೆಯ ಆಧಾರದಲ್ಲಿ ಕರ್ನಾಟಕ ರಾಜ್ಯದ ಪುನರ್ ರಚನೆಗೆ ಶಿಫಾರಸ್ಸು ಮಾಡಿ ಅದನ್ನು ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟರೂ ಕಾಸರಗೋಡನ್ನು ಹೊರತುಪಡಿಸಿ ಸಂಪೂರ್ಣ ಕರ್ನಾಟಕ ಒಂದಾಯಿತು.೧೯೫೬ರ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಮೈಸೂರು ರಾಜ್ಯದ ಉದಯವಾಯಿತು.

ಮುಂದೆ 1973ರ ನವೆಂಬರ್ 1 ಕ್ಕೆ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.ಆಗ ಮುಖ್ಯಮಂತ್ರಿಯಾಗಿ ಇದ್ದದ್ದು ದೇವರಾಜ ಅರಸು. ಇಂದಿನ ವಿಜಯನಗರ ಜಿಲ್ಲೆಯಲ್ಲಿರುವ ಹಂಪಿಯಲ್ಲಿ ವಿರೂಪಾಕ್ಷೇಶ್ವರನ ದೇವಾಲಯದಲ್ಲಿ ಇರುವ ಭುವನೇಶ್ವರಿ ದೇವಿಯ ವಿಗ್ರಹಕ್ಕೆ ಪೂಜೆ ಮಾಡುವ ಮೂಲಕ ಮೈಸೂರು ರಾಜ್ಯವನ್ನು ವಿದ್ಯುಕ್ತವಾಗಿ ಕರ್ನಾಟಕ ಎಂದು ಘೋಷಿಸಲಾಯಿತು.
ನವಂಬರ್ ಮೂರರ ದಿನ ಗದುಗಿನ ವೀರ ನಾರಾಯಣ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸ್ ಮತ್ತು ಕೆ ಎಚ್ ಪಾಟೀಲ್ ಅವರು ಭಾಗವಹಿಸಿದ್ದು ಕಳೆದ ವರ್ಷ ಕರ್ನಾಟಕ ಎಂಬ ನಾಮಕರಣವಾದ ಸುವರ್ಣ ಸಂಭ್ರಮವನ್ನು
ಗದುಗಿನಲ್ಲಿ ಅತ್ಯಂತ ವೈಭವದಿಂದ ನೆರವೇರಿಸಲಾಯಿತು.

ಅರಿಷಿಣ ಕುಂಕುಮದ ಬಣ್ಣ ಹೊಂದಿರುವ ಕನ್ನಡ ಧ್ವಜ ಕೂಡ ಜಾರಿಯಲ್ಲಿ ಬಂದಿತು. ಪಾರ್ವತಿ ದೇವಿಯ ದರ್ಶನ ಅವತಾರಗಳಲ್ಲಿ ಒಂದಾದ ಭುವನೇಶ್ವರಿ ಇಡೀ ಭಾರತದಲ್ಲಿ ಪೂಜಿಸುವ ದೇವತೆ .ಆದರೆ ಕನ್ನಡದ ಮೊತ್ತಮೊದಲ ಕನ್ನಡ ರಾಜವಂಶ ಕದಂಬ ವಂಶದವರು ಕ್ರಿ ಶ.3ನೆಯ ಶತಮಾನದಲ್ಲಿಯೇ ಕದಂಬರ ಕುಲದೇವತೆಯಾಗಿ ಭುವನೇಶ್ವರಿ ದೇವಿಯನ್ನು ಪೂಜಿಸಿದರು.ಮುಂದೆ ವಿದ್ಯಾರಣ್ಯರ ತಪಸ್ಸಿಗೆ ಅನುಗ್ರಹಪೂರ್ವಕವಾಗಿ ಭುವನೇಶ್ವರಿದೇವಿಯೂ ಸಾಮ್ರಾಜ್ಯ ಸ್ಥಾಪನೆಯ ಮಹಾಕೈಂಕರ್ಯಕ್ಕೆ ಚಿನ್ನದ ಮಳೆಯನ್ನೇ ಸುರಿಸಿದಳು.ಗುರು ವಿದ್ಯಾರಣ್ಯರ ಪ್ರೇರಣೆಯಿಂದ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ಹರಿಹರ ಬುಕ್ಕರಾಯರು ಕೂಡ ಭುವನೇಶ್ವರಿ ದೇವಿಯನ್ನು ತಮ್ಮ ರಾಜ್ಯದಲ್ಲಿ ದೇಗುಲವೊಂದನ್ನು ನಿರ್ಮಾಣ ಮಾಡಿ ಕುಲದೇವತೆಯಾಗಿ ಪೂಜಿಸಿದರು. ಮುಂದೆ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಅರಸರು ಕೂಡ ತಮ್ಮ ಅರಮನೆಯ ಆವರಣದ ದೇಗುಲದಲ್ಲಿ ಭುವನೇಶ್ವರಿದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಹೀಗೆ ಕನ್ನಡದಲ್ಲಿ ಆಳಿದ ಎಲ್ಲಾ ರಾಜವಂಶಸ್ಥರು ಭುವನೇಶ್ವರಿ ದೇವಿಯನ್ನು ಪೂಜಿಸುವ ಮೂಲಕ ಭುವನೇಶ್ವರಿದೇವಿ ಕರ್ನಾಟಕದ ಕುಲದೇವತೆಯಾಗಿ ಇಂದು ನಮ್ಮೆಲ್ಲರ ಮನಗಳಲ್ಲಿ ಪ್ರತಿಷ್ಠಾಪಿಸಿದ್ದಾಳೆ.

ಸಿದ್ಧಾಪುರ ತಾಲ್ಲೂಕಿನ ಹಸಿರು ಸಿರಿಯ ನಡುವೆ ಭುವನಗಿರಿ ಬೆಟ್ಟದಲ್ಲಿ ಭುವನೇಶ್ವರಿಯ ದೇವಸ್ಥಾನ ಇದೆ.ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ಅಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಂಡಾಯದ ಕಹಳೆ ಊದಿದ ಅಂದಾನಪ್ಪ ದೊಡ್ಡಮೇಟಿ ಅವರ ಮನೆಯಲ್ಲಿ ತಾಯಿ ಭುವನೇಶ್ವರಿಯ ತೈಲವರ್ಣ ಚಿತ್ರವನ್ನು 1953 ರಲ್ಲಿ ಗೋಡೆಯಲ್ಲಿ ಒಡಮೂಡಿಸಿದ್ದಾರೆ. ಇಂದಿಗೂ ಪ್ರತಿನಿತ್ಯ ಪೂಜೆ ಮಾಡುವ ಮೂಲಕ ತಾಯಿ ಭುವನೇಶ್ವರಿಯ ಸೇವೆಮಾಡುತ್ತಿದ್ದಾರೆ ಜಕ್ಕಲಿಯ ದೊಡ್ಡಮೇಟಿ ಕುಟುಂಬದವರು.

ಕನ್ನಡ ನಾಡು ನುಡಿಯ ಉಳಿವಿಗಾಗಿ, ಕರ್ನಾಟಕದ ಏಕೀಕರಣಕ್ಕಾಗಿ ನಮ್ಮ ಹಿರಿಯರು ತಮ್ಮ ಜೀವನವನ್ನೇ ತೇದಿದ್ದಾರೆ.ನಾವೂ ಕೂಡ ಕನ್ನಡ ನಾಡು ನುಡಿಯನ್ನು ಉಳಿಸುವ ಮೂಲಕ ಅವರ ಶ್ರಮವನ್ನು ಸಾರ್ಥಕಗೊಳಿಸಬೇಕೆಂಬ ಮನೋಭಾವ ಎಲ್ಲ ಕನ್ನಡಿಗರ ಮನೆ ಮನಗಳಲ್ಲಿ ಮೂಡಲಿ.ಕನ್ನಡ
ರಾಜ್ಯೋತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಕನ್ನಡ ಭಾಷೆ ನಮ್ಮ ಅನ್ನದ ಭಾಷೆಯಾಗಲಿ,ಅರಿವಿನ ಭಾಷೆಯಾಗಲಿ ಕನ್ನಡಿಗರ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಜರುಗಲಿ ಆ ನಿಟ್ಟಿನಲ್ಲಿ ಸರ್ಕಾರಗಳು ಕ್ರಮವನ್ನು ಕೈಗೊಳ್ಳಲಿ ಮತ್ತು ಸಾರ್ವಜನಿಕರು ಅದಕ್ಕೆ ಒಡಂಬಡಲಿ.

ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ

Don`t copy text!