ರೇಷ್ಮೆ ಬಟ್ಟೆ”

ರೇಷ್ಮೆ ಬಟ್ಟೆ”

 

 

 

 

 

 

 

 

 

ಇತ್ತೀಚಿಗೆ ನಾನು ಓದಿದ ಅದ್ಭುತ ಕಾದಂಬರಿಗಳಲ್ಲೊಂದು. ಕ್ರಿಸ್ತಶಕ ಎರಡನೆಯ ಶತಮಾನದ ಕಾಲಘಟ್ಟದಲ್ಲಿ ನಿಂತುಕೊಂಡು ಐತಿಹಾಸಿಕ ವಿಷಯಗಳ ಜೊತೆಗೆ ಅಂದಿನ ವಿದ್ಯಮಾನಗಳನ್ನು ಅಕ್ಷರಗಳಲ್ಲಿ ಕಟ್ಟಿ ಕೊಡುವ ವಸುಧೇಂದ್ರರವರು ನನಗೆ ವರ್ತಮಾನದ ಕುವೆಂಪುರವರೆನೋ ? ಎಂದು ಭಾಸವಾಗುತ್ತಾರೆ.

ವಾಯುವ್ಯ ಭಾರತದಲ್ಲಿ ಹರಡಿಕೊಂಡಿರುವ ಹಿಮಾಲಯ ಪರ್ವತಗಳ ಕಾಡುಮೇಡುಗಳಲ್ಲಿ ಅಲೆಮಾರಿಗಳಾಗಿ ತಿರುಗುವ ತುಷಾರ ಜನಾಂಗ ನಿತ್ಯ ಒಡನಾಡುವ ಕಾಡಿನ ವರ್ಣನೆ, ಬಣ್ಣಗಳಲ್ಲಿರುವ ವೈವಿಧ್ಯಗಳು, ಅವರ ಆಚರಣೆ,ನಂಬಿಕೆ ನಿಯಮಗಳನ್ನು ಶಿಖನೇಮ, ಹವಿನೇಮ ಮತ್ತು ಸಗನೇಮಿ ಪಾತ್ರಗಳ ಮೂಲಕ ಸೊಗಸಾಗಿ ಕಥನ ಕಟ್ಟುವ ವಸುಧೇಂದ್ರರವರು ನನಗೊಬ್ಬ ಮಾಂತ್ರಿಕನಂತೆ ಕಾಣುತ್ತಾರೆ.

ಪ್ರಕೃತಿಯ ಆರಾಧಕರಾದ ತುಷಾರ ಜನಾಂಗ, ಅಗ್ನಿ ಆರಾಧಕರಾದ ಪಾರಸಿಕ ಜನಾಂಗ,ಯಜ್ಞರಾದಕರಾದ ವೈದಿಕ ಜನಾಂಗದ ಜೊತೆ ಜ್ಞಾನ ಸೇನ ಮತ್ತು ಬುದ್ಧ ಮಿತ್ರರ ಮೂಲಕ ಬೌದ್ಧ ಧರ್ಮವನ್ನು ಮುಖಾಮುಖಿಯಾಗಿಸಿದಾಗ ಅ ಜನಾಂಗಗಳಲ್ಲಿ ಉಂಟಾಗುವ ತಳಮಳ,ತಲ್ಲಣಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ.

ಹೊಸ ವ್ಯಾಪಾರದ ದಾರಿಯಿಂದಾಗಿ ಪಾರಸಿಕ ಜನಾಂಗ ಅನುಭವಿಸುವ ಸಂಘರ್ಷ ಮತ್ತು ತಲ್ಲಣಗಳನ್ನು ಮಿತ್ರವಂದಕ,ಮಧುಮಾಯ ಮತ್ತು ಅಜ್ಞಾತಕರ ಪಾತ್ರಗಳ ಮೂಲಕ ಸೊಗಸಾಗಿ ಹೇಳುತ್ತಾ ಹೋಗುವ ಶೈಲಿ ಬೆರಗು ಹುಟ್ಟಿಸುತ್ತದೆ.

1800 ನೂರು ವರ್ಷಗಳ ಹಿಂದಿನ ಚೀನಾದ ಸಾಮಾಜಿಕ ಶ್ರೇಣಿಗಳು,ರಾಜಪ್ರಭುತ್ವದ ಆಡಳಿತ, ಅಧಿಕಾರಿಶಾಹಿ,ಜನಸಾಮಾನ್ಯರ ಜನಜೀವನ ಹೊರ ಜಗತ್ತಿಗೆ ಅನಾವರಣಗೊಳ್ಳದಂತೆ ಚೀನಿಯರು ಹೇಗೆ ಕಾಪಾಡಿಕೊಂಡು ಬಂದಿದ್ದರು ಎಂಬುದನ್ನು ಚಾಂಗ್, ಶಿ, ವಾನ್, ಚಾನ್ ಮುಂತಾದ ಪಾತ್ರಗಳ ಮೂಲಕ ಹೇಳುತ್ತಾ ಹೋಗುತ್ತಾರೆ.

ಪೂರ್ವಕಾಲದಿಂದಲೂ ರೇಷ್ಮೆ ಬಟ್ಟೆ ತಯಾರಿಕೆಯ ತಂತ್ರಜ್ಞಾನ ಹೊರ ಜಗತ್ತಿಗೆ ಗೊತ್ತಾಗದಂತೆ ಕಾಪಾಡಿಕೊಂಡು ಬಂದಿದ್ದ ರಹಸ್ಯ ಕೊನೆಗೊಂದು ದಿನ ಬುದ್ಧನ ಮೂಲಕವೇ ಚೀನಾ ಸಾಮ್ರಾಜ್ಯದ ರಾಜ್ಯದ ಮೇರೆಗಳನ್ನು ದಾಟಿ ಭಾರತಕ್ಕೆ ಪರಿಚಯವಾಗುವ ಮೂಲಕ ಕಾದಂಬರಿ ಅಂತ್ಯವಾಗುತ್ತದೆ.

ವಾಯುವ್ಯ ಭಾರತವನ್ನು ಆಳುತ್ತಿದ್ದ ಕುಶಾನ ಸಾಮ್ರಾಜ್ಯದ ಕನಿಷ್ಕನ ಕಾಲದಲ್ಲಿ ವ್ಯಾಪಾರದ ಹೊಸ ದಾರಿಯ ಮೂಲಕ ಜಾಗತೀಕರಣಕ್ಕೆ ಅನಿವಾರ್ಯವಾಗಿ ಏಷ್ಯಾ ಖಂಡದ ಜನ ತೆರೆದುಕೊಂಡರು. ಈ ಜಾಗತೀಕರಣದ ಕಾಲದಲ್ಲಿ ಕೇವಲ ಸರಕುಗಳಷ್ಟೇ ಅತ್ತಿಂದಿತ್ತ ಸಾಗಾಣಿಕೆ ಆಗಲಿಲ್ಲ, ಅವುಗಳ ಜೊತೆ ಜೊತೆಗೆ ಧರ್ಮ,ಭಾಷೆ,ಲಿಪಿ, ಕೌಶಲ್ಯ, ಕಲೆ, ತಂತ್ರಜ್ಞಾನ ಹೀಗೆ ಹಲವು ಪ್ರಕಾರಗಳು ಚಲಿಸಿದವು.

ಈ ಪ್ರಕಾರಗಳು ಯಾವ್ಯಾವ ಪ್ರದೇಶಗಳಲ್ಲಿ ಚಲಿಸಿದವು ಅಲ್ಲೆಲ್ಲ ಭೌತಿಕ ಹಾಗೂ ಬೌದ್ಧಿಕ ಸಂಘರ್ಷಗಳು ಉಂಟಾದವು. ಪಾರಸಿ,ವೈದಿಕ ಹಾಗೂ ಬೌದ್ಧ ಧರ್ಮದ ನೀತಿ, ನಿಯಮ,ನಡವಳಿಕೆಗಳಿಗೆ ಹೊಸ ವ್ಯಾಖ್ಯಾನಗಳೇ ಸೃಷ್ಟಿಯಾದವು. ಎಲ್ಲ ಕಾಲದಲ್ಲಿಯೂ ಪ್ರಭುತ್ವಗಳು ತಮ್ಮ ಖಜಾನೆಗಳನ್ನು ತುಂಬಿಸಿಕೊಳ್ಳಲು ಪ್ರಚಲಿತದಲ್ಲಿರುವ ಧರ್ಮಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾ ಬಂದಿವೆ ಎನ್ನುವುದಕ್ಕೆ ಕನಿಷ್ಕನ ಕುಶಾನ ಸಾಮ್ರಾಜ್ಯವು ಹೊರತಾಗಿರಲಿಲ್ಲ.

ಜಾಗತೀಕರಣ ಎಲ್ಲಾ ಕಾಲಕ್ಕೂ ಅಂದಂದಿನ ಧರ್ಮ, ಭಾಷೆ, ಕಲೆ, ಲಿಪಿ, ಕೌಶಲ್ಯಗಳ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತಾ ಬದಲಾವಣೆಯ ಪರ್ವವನ್ನೇ ಪ್ರಾರಂಭಿಸುತ್ತದೆ ಎನ್ನುವುದಕ್ಕೆ ಇಂದು ಪ್ರಚಲಿತ ಜಗತ್ತಿನಲ್ಲಿ ನಡೆದಿರುವ ಜಾಗತೀಕರಣ ಸಾಕ್ಷಿ ಎನ್ನುವುದನ್ನು ಈ ಕಾದಂಬರಿಯ ಮೂಲಕ ತಿಳಿಸುವ ಪ್ರಯತ್ನ ವಸುಧೆಂದ್ರ ಮಾಡಿದ್ದಾರೆ.

ವಸುಧೆಂದ್ರರವರು ಈ ಕಾದಂಬರಿಯನ್ನು ಬರೆಯಲು ತೆಗೆದುಕೊಂಡ ಕಾಲ ಸುಮಾರು ಎಂಟು ತಿಂಗಳು,ಆದರೆ ನಾಲ್ಕು ವರ್ಷಗಳ ಕಾಲ ವಾಯುವ್ಯ ಭಾರತದ ಸಿಂಧು,ಗಾಂಧಾರ ಬಯಲಿನಲ್ಲಿ ತಿರುಗುತ್ತಾ, ಹಿಮಾಲಯ ಪರ್ವತಗಳಲ್ಲೆಲ್ಲ ಚಾರಣ ಮಾಡುತ್ತಾ ಅಲ್ಲಿನ ನದಿ, ಪರ್ವತ, ತಪ್ಪಲು ಪ್ರದೇಶ, ಅರಣ್ಯ, ಮರುಭೂಮಿಗಳಲ್ಲಿ ತಿರುಗುತ್ತಾ ಕ್ರಿಸ್ತಶಕ ಎರಡನೆಯ ಶತಮಾನಕ್ಕೆ ತಮ್ಮನ್ನು ತಾವೇ ಕರೆದುಕೊಂಡು ಹೋಗಿ ಅನುಭೂತಿಯ ಅನುಭವವನ್ನು ಅನುಭವಿಸುತ್ತಾ ಆ ಕಾಲಕ್ಕೆ ಸಂಬಂಧಪಟ್ಟ ಸುಮಾರು ಐವತ್ತು ಆಕರ ಗ್ರಂಥಗಳನ್ನು ಅಭ್ಯಾಸ ಮಾಡಿ ಈ ಕಾದಂಬರಿಯನ್ನು ರಚಿಸಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ.

ಕಾದಂಬರಿಯ ಕೊನೆಯ ಪ್ಯಾರಾದ ಈ ಕೆಳಗಿನ ನುಡಿಗಳು ಓದುಗರನ್ನು ಚಿಂತನೆಯ ಮಡುವಿಗೆ ದೂಡುವುದರಲ್ಲಿ ಯಶಸ್ವಿಯಾಗಿವೆ ಎಂದೆನಿಸುತ್ತದೆ.

ಹೆಣ್ಣನ್ನು ಕೂಡದ ಗಂಡು ಪರಿಪೂರ್ಣನಲ್ಲ ಎನ್ನುವ ಧರ್ಮ ಅದೆಷ್ಟು ವಿಶಾಲ ಹೃದಯವುಳ್ಳದ್ದು”
“ಕುಟುಂಬ ಜೀವನ ಬ್ರಹ್ಮಚರ್ಯಕ್ಕಿಂತಲೂ ಶ್ರೇಷ್ಠ ಎಂದು ನಂಬುವ ಧರ್ಮ ಎಷ್ಟೊಂದು ಭಿನ್ನವಾದದ್ದು”

ರೇಷ್ಮೆ ಬಟ್ಟೆ”ಕಾದಂಬರಿ ಬಹುದಿನಗಳ ಕಾಲ ಓದುಗನನ್ನು ಕಾಡುತ್ತಲೇ ಇರುತ್ತದೆ…

 

Don`t copy text!