ಸ್ವಯಂ ಪ್ರಸಾದಿಯಾದ ಬಸವಣ್ಣ

ಅಕ್ಕಮಹಾದೇವಿಯವರ ವಚನ ವಿಶ್ಲೇಷಣೆ -೧

ಸ್ವಯಂ ಪ್ರಸಾದಿಯಾದ ಬಸವಣ್ಣ

ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ
ಮನವಿಡಿದು ದಾಸೋಹವ ಮಾಡಿ
ಲಿಂಗಪ್ರಸಾದಿಯಾದ ಬಸವಣ್ಣ

ಧನವಿಡಿದು ದಾಸೋಹವ ಮಾಡಿ
ಜಂಗಮಪ್ರಸಾದಿಯಾದ ಬಸವಣ್ಣ.
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯ
ಅಕ್ಕಮಹಾದೇವಿ

೧೨ ನೇ ಶತಮಾನದ ಶ್ರೇಷ್ಠ ಶರಣೆಯವರಾದ ,ಮೊದಲ ಕವಿಯತ್ರಿಯವರಾದ ಅಕ್ಕಮಹಾದೇವಿಯವರು, ತನ್ನ ಅರಿವಿನ ಗಂಡನಾದ ಶ್ರೀ ಶೈಲ ಚೆನ್ನಮಲ್ಲಿಕಾರ್ಜುನನ್ನು ಲಿಂಗ ರೂಪದಲ್ಲಿ ಕಾಣುವ, ಶರಣ ಸತಿ ಲಿಂಗ ಪತಿ ಎಂಬ ಭಾವ .ಈ ಸೃಷ್ಟಿಯ ಜೀವ ರಾಶಿಗಳಲ್ಲಿ ಹುಡುಕುವ ಪರಿ ಅಮೋಘ. ಅದನ್ನು ವಿಸ್ತರಿಸುವ ಸನ್ನಡತೆ ನನ್ನಲ್ಲಿ .
ಈ ಸೃಷ್ಟಿಯ ಸೊಬಗಿನ ಪ್ರಜ್ಞೆಯು ಅದನ್ನು ಮೈ ಗೂಡಿಸಿಕೊಂಡು ಬೆಳೆದ ಪರಿ ಅಮೋಘ. ಮತ್ತು ಅಹ್ಲಾದಕರವಾದುದು .
ಅದನ್ನು ಹಿಡಿದಿಡುವ ವಚನಗಳ ಸಾರ ,ಅದರ ಹಿಂದಿರುವ ನೋವು ,ತುಮುಲ, ಕಳೆ ಕಟ್ಟಿದ ಕಾರ್ಮೋಡದ ಕಾಂತ ಕೌಶಿಕನನ್ನು ದಿಕ್ಕರಿಸಿ ನಡೆದ ಅಕ್ಕನವರ ಅಧ್ಯಾತ್ಮ. ಅಷ್ಟಾವರಣದ ವಿಸ್ತರಣ, ತನ್ನತ್ತ ಸೆಳೆಯುವ ಸಾವಿರ ಸಾವಿರ ಭಾವ ಪ್ರಪಂಚದ ಮಾಯಾ ಜಾಲದ ಸುಳಿಯಿಂದ ಬಿಡಿಸಿಕೊಳ್ಳುವ ಪರಿ ಅಕ್ಕನವರಲ್ಲದೇ ಬೇರೆ ಯಾವ ಒಂದು ಹೆಣ್ಣೂ ಕೂಡಾ ಈ ಅರಿವೆಂಬ ಗಂಡನನ್ನು ಹುಡುಕುವ ಗೊಡವೆಗೆ ಹೋಗಿರಲು ಸಾಧ್ಯವಿಲ್ಲ.
ಇದು ಮದುರ ಭಾವಗಳ ಅಂತರಾತ್ಮದ ಹುಡುಕಾಟ. ಈ ಹುಡುಕಾಟದಲ್ಲಿ ಜಯ ಗಳಿಸಿದ್ದು, ನಮ್ಮ ಅಕ್ಕನವರೇ .

ತನುವಿಡಿದು ದಾಸೋಹವ ಮಾಡಿ
ಗುರು ಪ್ರಸಾದಿಯಾದ ಬಸವಣ್ಣ

ಅಕ್ಕಮಹಾದೇವಿಯವರು ಉಡುತಡಿಯಿಂದ ಕಲ್ಯಾಣಕ್ಕೆ ತೆರಳುವ ಮಾರ್ಗ.
ತನ್ನ ಗುರು ಪ್ರಸಾದಿಯಾದ ಬಸವಣ್ಣನವರನ್ನು ಕಾಣುವ ಹಂಬಲ ಅಕ್ಕನವರಿಗೆ .
ಬಸವಣ್ಣನವರ ನುಡಿಗಳಿಗೆ ಅವರ ವಚನಗಳನ್ನು ಅರಿತ ಅಕ್ಕನವರನ್ನು ಕಲ್ಯಾಣದ ಕ್ಷೇತ್ರವು ಕೈ ಮಾಡಿ ಕರೆದಂತೆ ಅಕ್ಕನವರಿಗೆ .ಹೊರಟೇ ಬಿಟ್ಟರು ಅಕ್ಕ, ಉಡುತಡಿಯ ಕೌಶಿಕನನ್ನು ದಿಕ್ಕರಿಸಿ ನಡೆದಳು. ಬಟ್ಟ ಬಯಲ ರಾತ್ರಿಯಲ್ಲಿ ಒಂಟಿ ನಾರಿಯಾಗಿ .

 

ಅರಿವಿನ ಗುರುವಿನ ಪ್ರಸನ್ನತೆಯ ಭಾವ ಪ್ರಸಾದ ಮದುರ ಮಿಲನದ ತುಡಿತ ಮಿಡಿತ.
ಕಾಯದಲ್ಲಿ ಕಾಯಕ ಕಲಿಸಿದ ಪ್ರಸಾದಿ ಪುರುಷ ಬಸವಣ್ಣನವರ ನಿಲುವು ಅಂತರಾತ್ಮದ ಅವಲೋಕನ .
ಶ್ರಮದ ಬದುಕು ಸಾರ್ಥಕತೆಯ ಅರಿವು ಹೊರ ಚೆಲ್ಲಿದ ತೂಕದ ಮಾತುಗಳು ಬಸವಣ್ಣನವರ ಪಾದ ಕ್ಕೆ ಹಣೆ ಹಚ್ಚಿ ಆಲಂಗಿಸುವ ಕವಿ ಹೃದಯದ ಭಾವಕೆ ಥಳಮಳ. ಆಕುಂಚನ .
ದುಡಿವ ಮನಕೆ ಶ್ರಮದ ಕಾಯಕ.
ಜಾತಿ ಗೀತಿ, ಲಿಂಗ ತಾರತಮ್ಯ ಕಿತ್ತೊಗೆದ ಬೇರು .ತನು ಮನ ಭಾವ ಶುದ್ಧದಲಿ ಪ್ರಸಾದಿಯಾದ ಬಸವಣ್ಣ.
ಕೋಶಾಧಿಕಾರಿ ಯಾಗಿದ್ದರೂ, ಹಮ್ಮು ಬಿಮ್ಮು ಇಲ್ಲದ ಸಿದ್ಧ ಪುರುಷ ,ಬುದ್ಧಿ ಪುರುಷ ಬಸವಣ್ಣ ತಂದೆ .

ಮನವಿಡಿದು ದಾಸೋಹ ಮಾಡಿ ಲಿಂಗ ಪ್ರಸಾದಿಯಾದ ಬಸವಣ್ಣ

ಮನದ ಮಲೀನತೆ ಕಳೆದು ಕಪಿ ಚೇಷ್ಟೆಯಂತೆ ಕುಣಿವ ಮನಕೆ ತಡೆ ಗೋಡೆ ಕಟ್ಟಿ .
ಅವರಿವರೆನ್ನದೇ ಕಳ್ಳಕಾಕರಿಗೂ ,ಲಿಂಗಕೊಟ್ಟು ಲಿಂಗ ಮೂರ್ತಿಯಾದ ಬಸವಣ್ಣನವರು .
ಸಮ ಸಮಾಜದ ಸಮಷ್ಟಿಗೆ ದಾಸೋಹ ಮಾಡಿದ ಜ್ಞಾನಿ ನಮ್ಮ ಬಸವಣ್ಣನವರು .

ಧನವಿಡಿದು ದಾಸೋಹ ಮಾಡಿ
ಜಂಗಮ ಪ್ರಸಾದಿಯಾದ ಬಸವಣ್ಣ

ಧನ, ಘನ ನಿರಾಳ ಬದುಕು ಬಸವಣ್ಣನವರದು. ಅನ್ನದೊಳಗೊಂದು ಅಗುಳ..ನೂಲಿನೊಂದೆಳೆಯ
ಮುಟ್ಟಿದರೆ ಆಣೆ ಎಂದ ಬಸವಣ್ಣನವರು .ಅದೇ ಒಂದು ತತ್ವವನ್ನು ,ಸಿದ್ದಾಂತವನ್ನು ನಂಬಿ ನಡೆದ ಅನೇಕ ಶರಣರು .ಅತಿಯಾಸೆಗೆ ಬಲಿಯಾಗದೇ ಅಂದಿನ ಕಾಯಕ ಅಂದೇ ಮಾಡಿ ಮುಗಿಸಿ, ಅದರಲ್ಲಿಯ ಲಾಭವನ್ನು ದಾಸೋಹಕ್ಕೆ ಮೀಸಲಾಗಿಡುತ್ತಿದ್ದ ಶರಣರ ಗುಣ ನಮಗಿಂದು ಅನುಕರಣೀಯ ಬದುಕು .
ತೆರೆದ ಮನದಲ್ಲಿ ಘನವಂತರಾಗಿ ಹೃದಯದಲ್ಲಿ ಶ್ರೀಮಂತಿಕೆಯನ್ನು ತೋರುವ ಪರಿ .
ಇದ್ದುದರಲ್ಲಿಯೇ ತೃಪ್ತ ಭಾವವನ್ನು ಹೊಂದಿರಬೇಕೆಂದು ತೋರಿದ ಜಂಗಮ ಚೇತನ ,ನಮ್ಮ ಬಸವಣ್ಣನವರು .

ಕಾಯಾ ವಾಚಾ ಮನಸಾ ತ್ರಿಕರಣ ಶುದ್ಧವಾಗಿ ಬದುಕನ್ನು ಸವೆಸಿ .ಬಾಳು ಬಂಗಾರ ಮಾಡಿ ಕೊಳ್ಳುವ ಪರಿ ಶರಣರದು ಇದನ್ನು ಅಕ್ಕಮಹಾದೇವಿಯವರು ತಮ್ಮ ಈ ಒಂದು ವಚನದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದು ಅತ್ಯಂತ ಸೋಜಿಗ.
ಇಲ್ಲಿ ಬಸವಣ್ಣನವರೇ ಲಿಂಗವೂ ಹೌದು, ಜಂಗಮವೂ ಹೌದು . ಗುರೂವೂ ಹೌದು .ಇಂಥಹ ಗುರು, ಲಿಂಗ, ಜಂಗಮವಾದ ಬಸವಣ್ಣನವರ ನಿತ್ಯ ದಾಸೋಹದ ಕಾಯ, ಸತ್ಯದಲಿ ಉಸಿರಿನಲಿ ಉಸಿರಾಗಿ, ನೆಲೆ ನಿಂತ ಪರಿ ಅಮೋಘ ಅಪ್ರತಿಮ .


—-ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Don`t copy text!