ಮಣ್ಣಿನ ಅಳಲು

ಮಣ್ಣಿನ ಅಳಲು

ನಾನು ಸಧೃಢವಾಗಿದ್ದಾಗ
ಎಷ್ಟು ಹುಲುಸು ಹಸಿರು
ಬಾಳೆ ತೆಂಗು ಸೊಬಗು
ಭೂಮಿ ದೇವತೆ ಎಂಬ
ಗೌರವ ಪೂಜೆ

ನದಿ ಹಳ್ಳಗಳು ಕೊಚ್ಚಿದವು
ನಾನೀಗ ನದಿ ಸಮುದ್ರದ
ಮಡಿಲು ಸೇರಿದೆ
ಹಣದ ಆಸೆಗೆ ರಾಸಾಯನಿಕ
ವಿಷದ ಗೊಬ್ಬರ

ಕಬ್ಬು ಸಿಹಿ ಅಲ್ಲ
ನನ್ನ ಬರಡು ಮಾಡಿದ ಕಹಿ
ನಿತ್ಯ ಬಂಜೆಯಾಗುತ್ತಿದ್ದೇನೆ
ಮುಂದೊಮ್ಮೆ ನನ್ನೊಡಲಲಿ
ಹುಲ್ಲು ಹುಟ್ಟದು

ನನ್ನೆದೆಯ ಮೇಲೆ
ಸಿಮೆಂಟ್ ಜೆಲ್ಲಿ ಕಲ್ಲು
ಡಾಂಬರನಲ್ಲಿ ನನ್ನ
ಹೂತು ಬಿಟ್ಟರು
ಉಸಿರುಗಟ್ಟಿದೆ ಸಾಯದೆ ಬದುಕಿರುವೆ

ಕೆರೆ ಹಳ್ಳಗಳಿಗ ಮಾಯ
ಅವುಗಳ ಮೇಲೆ ಕಾಂಕ್ರೀಟ್ ಕಾಡು
ಮುಗಿಲು ಮುಟ್ಟುವ ಕಟ್ಟಡ
ನನ್ನ ಕರುಳ ಅಗೆದು ನಕ್ಕವು
ನಾನು ಮೌನ

ಫಲವತ್ತಾದ ಭೂಮಿಗಳಿಗ
ಆಟದ ಕ್ರೀಡಾಂಗಣ
ವಿಶ್ವ ಕಪ್ ಕೋಟಿ ಭಾಜಿ
ಹರಾಜು ಹಾಕಿದ್ದಾರೆ ನನ್ನನು
ಹುಣ್ಣು ಮಾದಿಲ್ಲ ರಕ್ತ ಸುರಿದು

ಭೂ ಕಬಳಿಕೆ ಅರಣ್ಯ ನಾಶ
ರೆಸಾರ್ಟ್ ಕುಡಿತ ಮೋಜು ಮಸ್ತಿ
ಕಡಲ ತೀರದಲಿ ದಬ್ಬಾಳಿಕೆ
ಭೂ ಕುಸಿತ ಕಡಲ ಕೊರೆತ
ಉಪ್ಪು ನೀರಿನಲ್ಲಿ ಬಂಧಿಯಾದೆನು

ನಾನು ನಿಮ್ಮನ್ನು ಪ್ರೀತಿಸುತ್ತೇನೆ
ನಿಮ್ಮಅನಾದಾರಕ್ಕೆ ಬೇಸರ
ಮಣ್ಣಲ್ಲಿಯೇ ನನ್ನನ್ನು ಮಣ್ಣು ಮಾಡಿದಿರಿ
ನೀವಾದರೂ ಉಳಿವಿರೋ
ಉಳಿದು ಬಿಡಿ ನಾನು ಮೌನ

ಸಾವಿರು ಎಕರೆ ನೆಲ ಖಾಸಗಿಯವರಿಗೆ
ಉದ್ಧಿಮೆ ವಾಣಿಜ್ಯ ವ್ಯವಹಾರಕೆ
ನೀಚ ಮಂತ್ರಿಯಿಂದ ನನಗೆ ಪೂಜೆ
ಬಹುಮಹಡಿ ಕಟ್ಟಡಕೆ ಶಂಕು ಶಿಲಾನ್ಯಾಸ
ಮತ್ತೆ ತಿವಿದರು ಗುದ್ದಲಿ ಸಲಾಕೆಯಲಿ

ನೀವೆಲ್ಲ ನಕ್ಕು ಚಪ್ಪಾಳೆ ತಟ್ಟಿದಿರಿ
ಮಿಠಾಯಿ ತಿಂದಿರಿ ಗುತ್ತೆಗೆದಾರರ ಲೆಕ್ಕಾಚಾರ
ಹದುಳ ಮಣ್ಣನು ಬಳಸಿ ಬಿಸಾಕಿದಿರಿ
ಜನನಿ ಜನ್ಮ ಭೂಮಿ ಸ್ವರ್ಗವೆಂಬ ಹುಸಿ ಮಾತು
ಇಂದು ವಿಶ್ವ ಮಣ್ಣಿನ ದಿನ

ನನ್ನ ನೀವು ಉಳಿಸಿ
ನಿಮ್ಮನ್ನು ಉಳಿಸಿ ಬೆಳೆಸುವೆನು
ಇದು ಮಣ್ಣಿನ ಅಳಲು

 

 

 

 

 

 

 

 

 

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!