ಶರಣ ಸೇವಾ ಪುರಸ್ಕಾರ – ಡಾ. ಶಶಿಕಾಂತ ಪಟ್ಟಣ
ಬಸವಾದಿ ಶರಣರ ವಚನಗಳು ಮಾನವನ ಬದುಕಿನ ದಾರಿಯಲ್ಲಿ ಹಚ್ಚಿಟ್ಟ ದೀಪಗಳು. ಸಮಾನತೆ, ಸಹಕಾರ- ಸಹಬಾಳ್ವೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯತೆಯ ಧರ್ಮದ ನುಡಿ ರಚನೆಗಳು. 12ನೇ ಶತಮಾನದ ಶರಣರ ಸ್ವಾನುಭಾವದಿಂದ ಮೂಡಿಬಂದಿರುವ ಈ ಶ್ರೇಷ್ಠ ನುಡಿಗಳು ಇಂದು ನಮಗೆ ಉಳಿದು ಬಂದಿದ್ದೆ ರೋಚಕದ ಸಂಗತಿ. ಶರಣರ ಬಲಿದಾನ ಹಾಗೂ ವೀರಗಾಥೆಯ ಕಾರ್ಯಗಳಿಂದ ಉಳಿದು ಬಂದಿರುವ ವಚನಗಳ ಸಂರಕ್ಷಣೆಯ ಸ್ಮರಣೆಯಲ್ಲಿ ಬೀದರ್ ನಲ್ಲಿ 2002ರಲ್ಲಿ ಸಂಸ್ಥಾಪನೆಗೊಂಡ ಬಸವ ಸೇವಾ ಪ್ರತಿಷ್ಠಾನವು ಬಸವ ತತ್ವ ಪ್ರಸಾರ, ಪ್ರಚಾರ ಹಾಗೂ ವಚನಗಳ ಆಶಯಗಳನ್ನು ಬಸವಜ್ಯೋತಿ ,ಶರಣ ಸಂಗಮ, ಮಹಾಮನೆ, ಸಾಹಿತ್ಯ ರಚನೆ ಹಾಗೂ ರಾಜ್ಯ , ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ವಚನ ವಿಜಯೋತ್ಸವ ಕಾರ್ಯಕ್ರಮಗಳ ಮೂಲಕ ತಮ್ಮ ಸಹಕಾರದಿಂದ ನಾಡಿನ ಜನಮನದಲ್ಲಿ ಬಿತ್ತುತ್ತಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದ ಸ್ವಾತಂತ್ರ್ಯ ಹೋರಾಟಗಾರರ ಮನೆತನದಲ್ಲಿ ಜನಿಸಿದ ಡಾ. ಶಶಿಕಾಂತ್ ಪಟ್ಟಣ ಅವರು ರಾಮದುರ್ಗ, ಸೈನಿಕ ಶಾಲೆ ವಿಜಯಪುರ, ಧಾರವಾಡಗಳಲ್ಲಿ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣ ಪಡೆದು ಮುಂದೆ ಬೆಳಗಾವಿಯ ಜೆ. ಎನ್.ಎಂ.ಸಿ ಮೆಡಿಕಲ್ ಕಾಲೇಜಿನಲ್ಲಿ ಬಿ. ಫಾರ್ಮ್ ಹಾಗೂ ಎಂ. ಫಾರ್ಮ್ ಪದವಿಯನ್ನು ಮುಗಿಸಿ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಔಷಧಿ ವಿಜ್ಞಾನದಲ್ಲಿ ಪಿ. ಎಚ್. ಡಿ ಪದವಿಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಪಡೆದುಕೊಂಡು, ಕೆ. ಎಲ್. ಇ ಸಂಸ್ಥೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ, ಮಹಾರಾಷ್ಟ್ರದ ಪುಣೆಯ ಫಾರ್ಮಸಿ ಕಾಲೇಜಿನಲ್ಲಿ ಪ್ರಾಚಾರ್ಯ ರಾಗಿ ಕಳೆದ 12 ವರ್ಷಗಳವರಗೆ ಸೇವೆ ಸಲ್ಲಿಸಿ, ಈಗ ಸಧ್ಯ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ ಕಾರ್ಯ ಮಾಡಿದ್ದಾರೆ. . ಕನ್ನಡ, ಮರಾಠಿ ಭಾಷಾ ಬಾಂಧವ್ಯದ ಬೆಳವಣಿಗೆಯನ್ನು ಸಮತೋಲನಗೊಳಿಸುವುದರ ಮೂಲಕ ಜನಾನುರಾಗಿಯಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದರೂ, ಅವರ ಕನ್ನಡ ಪ್ರೀತಿ ಅನುಪಮವಾಗಿದೆ. ಪ್ರಮುಖವಾಗಿ ಕವಿಯಾಗಿರುವ ಅವರು ಈಗಾಗಲೇ ಸಂಪಾದನೆ ಸೇರಿ 57 ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಸೃಜನಶೀಲ ಬರಹಗಾರರಾಗಿ, ಸಂಶೋಧಕರಾಗಿ ಉತ್ತಮ ವಾಗ್ಮಿಗಳಾಗಿ, ಬಂಡಾಯ ಧೋರಣೆಯ ಲೇಖಕರಾಗಿ ಜನಮನ ಸೂರೆಗೊಂಡಿದ್ದಾರೆ.
ಬಸವ ಸೇವಾ ಪ್ರತಿಷ್ಟಾನ- ಬಸವಗಿರಿ -ಬೀದರ ಇದರ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ. ಗಂಗಾoಬಿಕಾ ಅಕ್ಕ ಅವರು
ಡಾ. ಶಶಿಕಾಂತ ಪಟ್ಟಣ -ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಅವರಿಗೆ ಬಸವ ತತ್ವ ಪ್ರಸಾರ, ಪ್ರಚಾರ, ಸಾಹಿತ್ಯ ಸೇವೆ ಹಾಗೂ ಸಂಘಟನಾ ಚತುರತೆಗೆ ಶುಭ ಹಾರೈಸಿ, 23ನೆಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ” ಶರಣ ಸೇವಾ ಪ್ರಶಸ್ತಿ ಪುರಸ್ಕಾರ ” ನೀಡಿ ಗೌರವಿಸಿದ್ದಾರೆ ಎಂದು ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ಆಜೀವ ಸದಸ್ಯರು, ದತ್ತಿ ದಾಸೋಹಿಗಳು, ವಿಶ್ವಸ್ಥರಾದ ಪ್ರೊ. ಶಾರದಾ ಪಾಟೀಲ್, ಶರಣ ಶಿವಾನಂದ ಕಲಕೇರಿ, ಡಾ. ಉಮಾಕಾಂತ ಶೇಟ್ಕರ ಮತ್ತು ಸುಧಾ ಪಾಟೀಲ ಅವರು
ತಿಳಿಸಿದ್ದಾರೆ.