ದೇವರು – ದೈವ ಕೃಪೆ

ದೇವರು – ದೈವ ಕೃಪೆ

 

 

 

 

 

 

 

 

 

 

 

 

 

ಕೆಲ ದಶಕಗಳ ಹಿಂದಿನ ಮಾತಿದು. ಓರ್ವ ವ್ಯಾಪಾರಿಯ ಬಳಿ ಕೆಲಸ ಮಾಡುತ್ತಿದ್ದ ನೌಕರ ತನ್ನ ಮಾಲೀಕನ ಬಳಿ ಬಂದು ಸ್ವಾಮಿ ನಾನು ಪುರಿ ಜಗನ್ನಾಥ ರಥಯಾತ್ರೆಗೆ ಹೋಗಿ ಬರುವೆ… ನನಗೆ ಕೆಲ ದಿನಗಳ ರಜೆ ಬೇಕು ಎಂದು ಕೇಳಿದ.

ತನ್ನ ವ್ಯಾಪಾರದ ಬಹುದೊಡ್ಡ ಕಾರುಬಾರಿನಲ್ಲಿ ಆತನಿಗೆ ದೈವ ದರ್ಶನ ಸಾಧ್ಯವಾಗುತ್ತಿರಲಿಲ್ಲ, ಅಂತೆಯೇ ತನ್ನ ಸೇವಕನಿಗೆ 100 ರೂ ಹಣವನ್ನು ಕೊಟ್ಟು ಹುಂಡಿಯಲ್ಲಿ ಹಾಕಿ ದೇವರಿಗೆ ತನ್ನನ್ನು ಆಶೀರ್ವದಿಸು ಎಂದು ಕೇಳಿಕೊಳ್ಳಬೇಕೆಂದು ಸೇವಕನಿಗೆ ಹೇಳಿ ಆತನಿಗೆ ರಜೆ ಕೊಟ್ಟು ಕಳುಹಿಸಿದ.

ಆಗಲಿ ಎಂದು ತಲೆ ಆಡಿಸಿದ ಸೇವಕ ಮನೆಗೆ ಬಂದು ಎಲ್ಲ ತಯಾರಿಯನ್ನು ಮಾಡಿಕೊಂಡು ಪುರಿಯ ಜಗನ್ನಾಥ ರಥಯಾತ್ರೆಗೆ ಹೊರಟ. ಮಾರ್ಗ ಮಧ್ಯದಲ್ಲಿ ಅದೆಷ್ಟೋ ಸಂತರು ಸನ್ಯಾಸಿಗಳು ಹೊರಟಿದ್ದು ಆಹಾರ ದೊರೆಯದೆ ತಾಪತ್ರಯ ಅನುಭವಿಸುವುದನ್ನು ಕಂಡು ತನ್ನ ಯಜಮಾನ ಕೊಟ್ಟ ನೂರು ಹಣದಲ್ಲಿ ಸುಮಾರು 98 ರೂಗಳನ್ನು ಖರ್ಚು ಮಾಡಿ ಅವರಿಗೆ ಊಟದ ವ್ಯವಸ್ಥೆ ಮಾಡಿದ. ಮುಂದೆ ಪುರಿ ಕ್ಷೇತ್ರವನ್ನು ತಲುಪಿ ರಥಯಾತ್ರೆಯ ವೈಭವವನ್ನು ಕಣ್ತುಂಬಿಕೊಂಡ. ನಂತರ ದೇಗುಲವನ್ನು ದರ್ಶಿಸಿ ಬಲರಾಮ ಮತ್ತು ಸುಭದ್ರೆಯರೊಂದಿಗೆ ವಿರಾಜಮಾನನಾಗಿದ್ದ ಜಗನ್ನಾಥ
ದೇವರನ್ನು ಭಕ್ತಿಯಿಂದ ದರ್ಶಿಸಿ ಅಲ್ಲಿ ಉಳಿದ ಎರಡು ರೂ ಹಣವನ್ನು ದೇವರ ಗುಂಡಿಗೆ ಹಾಕಿ ನಮ್ಮೆಲ್ಲರ ಯೋಗ ಕ್ಷೇಮವನ್ನು ನೋಡಿಕೊಳ್ಳುವ ನನ್ನ ಮಾಲೀಕನಿಗೆ ಆಶೀರ್ವದಿಸು ಎಂದು ದೇವರಲ್ಲಿ ಬೇಡಿಕೊಂಡ.

ಇತ್ತ ಶ್ರೀಮಂತನ ಕನಸಿನಲ್ಲಿ ಪುರಿಯ ಜಗನ್ನಾಥ ದೇವರು ಪ್ರತ್ಯಕ್ಷನಾಗಿ ‘ಭಕ್ತ, ನೀನು ಕಳುಹಿಸಿದ 98 ರೂಗಳು ನನಗೆ ಮುಟ್ಟಿದವು ನಿನಗೆ ಒಳ್ಳೆಯದಾಗಲಿ’ ಎಂದು ಆಶೀರ್ವದಿಸಿದಂತೆ ಭಾಸವಾಯಿತು. ಎಚ್ಚರಗೊಂಡ ಆತ ನನ್ನ ಸೇವಕ ದೇವರಿಗೆ 98 ರೂಗಳನ್ನು ಅರ್ಪಿಸಿದ್ದಾನೆ,ಹಾಗಾದರೆ ಇನ್ನುಳಿದ ಎರಡು ರೂಗಳನ್ನು ಏನು ಮಾಡಿರಬಹುದು ಎಂದು ಕುತೂಹಲದಿಂದ ಇದ್ದ.
ಯಾತ್ರೆಯಿಂದ ಮರಳಿದ ಸೇವಕ ಪ್ರಸಾದದ ಪೊಟ್ಟಣವನ್ನು ಹಿಡಿದು ಮಾಲೀಕನನ್ನು ಭೇಟಿಯಾಗಿ ಕುಂಕುಮ ಅಕ್ಷತೆ ಮತ್ತು ಪ್ರಸಾದವನ್ನು ಮಾಲೀಕನ ಕೈಗೆ ನೀಡಿದ.
ಆಗ ಮಾಲಿಕ ದೇವರು ತನ್ನ ಕನಸಿನಲ್ಲಿ ಪ್ರತ್ಯಕ್ಷವಾಗಿ 98 ರೂಗಳು ಸಂದಾಯವಾಗಿರುವುದನ್ನು ಹೇಳಿದನೆಂದು ಸೇವಕನಿಗೆ ತಿಳಿಸಲು ಆ ಸೇವಕನು ಆಶ್ಚರ್ಯಗೊಂಡ.
ಮಾಲೀಕರೇ, ನೀವು ಕೊಟ್ಟ ನೂರು ರೂಪಾಯಿಯಲ್ಲಿ 98 ರೂ ಹಣವನ್ನು ನಾನು ಯಾತ್ರೆಗೆ ಹೊರಟಿದ್ದ ಸಾಧು ಸಂತರಿಗೆ ಊಟದ ವ್ಯವಸ್ಥೆಗಾಗಿ ಖರ್ಚು ಮಾಡಿ ಇನ್ನುಳಿದ ಎರಡು ರೂಗಳನ್ನು ಮಾತ್ರ ದೇವರ ಹುಂಡಿಗೆ ಹಾಕಿದೆ ಎಂದು ನಿಜವನ್ನು ಅರುಹಿದ.

ಇದೀಗ ದೇವರ ನಿಜವಾದ ಪ್ರೀತಿಗೆ, ಅನುಗ್ರಹಕ್ಕೆ ಪಾತ್ರರಾಗಲು ಏನು ಮಾಡಬೇಕೆಂಬುದನ್ನು ಅರಿತ ಮಾಲೀಕ ತನ್ನ ಸೇವಕನ ಬೆನ್ನು ತಟ್ಟಿ ಸಾಧು ಸಂತರಿಗಾಗಿ ನೀನು ಖರ್ಚು ಮಾಡಿದ 98 ರೂಪಾಯಿಗಳು ನೇರವಾಗಿ ದೇವರನ್ನು ತಲುಪಿದೆ. ಹುಂಡಿಗೆ ನೀನು ಹಾಕಿದ ಎರಡು ರೂಪಾಯಿ ದೇವಸ್ಥಾನದ ಆಡಳಿತವರ್ಗಕ್ಕೆ ತಲುಪಿದೆ ಎಂದು ಸಂಪ್ರೀತನಾಗಿ ಹೇಳಿದ.

ಅದೆಷ್ಟು ಸುಂದರವಾದ ಕಥೆ ಅಲ್ಲವೇ ಸ್ನೇಹಿತರೆ?
ದೇವರು ನಮ್ಮ ಮೇಲೆ ಕರುಣೆ ತೋರಲಿ ಎಂಬ ಆಶಯದಿಂದ ನಾವು ದೇವಸ್ಥಾನಕ್ಕೆ ಕಾಣಿಕೆ ನೀಡುತ್ತೇವೆ. ಆದರೆ ದೇವರು ಸಂಪ್ರೀತನಾಗುವುದು ನಾವು ನಮಗಿಂತ ಕಡಿಮೆ ಸ್ಥಿತಿಯಲ್ಲಿರುವ ಜನರ, ದೀನ ದುರ್ಬಲರ ಸೇವೆಗೆ ಆ ಹಣವನ್ನು ಬಳಸಿದಾಗ ಎಂಬ ಸತ್ಯವನ್ನು ನಾವು ಅರಿಯಬೇಕು.

ಇಂಥದೇ ಒಂದು ನೀತಿಯನ್ನು ಬುದ್ಧ ಭಗವಂತನ ಕಥೆಯ ಮೂಲಕ ಅರಿಯಬಹುದು. ಮಕ್ಕಳಿಲ್ಲದ ಓರ್ವ ಮಹಿಳೆ ತನಗೆ ಮಕ್ಕಳ ಭಾಗ್ಯವನ್ನು ಕರುಣಿಸು ಎಂದು ಬುದ್ಧ ಭಗವಾನನಲ್ಲಿ ಕೇಳಿದಾಗ ಮರುದಿನ ರುಚಿಕರವಾದ ಪಾಯಸವನ್ನು ಮಾಡಿ ತರಲು ಹೇಳಿದ.
ಮೊದಲೇ ಶ್ರೀಮಂತ ಮಹಿಳೆ… ಬುದ್ಧ ಭಗವಾನನೇ ಹೇಳಿದನೆಂದ ಮೇಲೆ ಕೇಳಬೇಕೇ?. ತುಪ್ಪದಲ್ಲಿ ಶಾವಿಗೆಯನ್ನು,ಗೋಡಂಬಿ ಬಾದಾಮಿ,ದ್ರಾಕ್ಷಿಗಳನ್ನು ಹದವಾಗಿ ಹುರಿದು,ಬಾಡಿಸಿಕೊಂಡು ಹಾಲಿನಲ್ಲಿಯೇ ಪಾಯಸವನ್ನು ಮಾಡಿ ಒಂದು ಡಬ್ಬದಲ್ಲಿ ತುಂಬಿದ ಆಕೆ ಬುದ್ಧ ದರ್ಶನಕ್ಕೆ ಹೊರಟಳು. ಘಮ್ಮೆಂದು ಹೊರ ಸೂಸುವ ಪಾಯಸದ ವಾಸನೆಯಿಂದ ಆಕರ್ಷಿತರಾದ ಮಕ್ಕಳು ಪಾಯಸದ ಆಸೆಗಾಗಿ ಆಕೆಯ ಬೆಂಬತ್ತಿದರು.
ಹಾಗೆ ಆಕೆಯ ಹಿಂದೆ ಬೆನ್ನು ಹತ್ತಿದ ಮಕ್ಕಳನ್ನು ಗದರಿಸಿದ ಆಕೆ ಪಾಯಸದ ಪಾತ್ರೆಯನ್ನು ಹೊತ್ತು ಬುದ್ಧ ಭಗವಾನನ ದರ್ಶನಕ್ಕೆ ಬಂದಳು.
ಪಾಯಸದ ಪಾತ್ರೆಯನ್ನು ಬುದ್ಧನ ಮುಂದೆ ಇಟ್ಟಾಗ ಅದರ ವಾಸನೆಯನ್ನು ಆಘ್ರಣಿಸಿದ ಬುದ್ಧ ಭಗವಾನ್ ದಾರಿಯಲ್ಲಿ “ಪಾಯಸ ಕೊಡು ಎಂದು ನಿನಗೆ ಯಾರೂ ಬೆಂಬತ್ತಲಿಲ್ಲವೇ’ ಎಂದು ಕೇಳಿದನು.
“ಅಯ್ಯೋ ಸ್ವಾಮಿ! ಸಾಕಷ್ಟು ಜನ ಮಕ್ಕಳು ಪಾಯಸ ಕೊಡು ಎಂದು ನನ್ನ ಹಿಂಬಾಲು ಬಿದ್ದರು, ಆದರೆ ನಾನು ಅವರೆಲ್ಲರನ್ನು ಗದರಿಸಿ ನಿಮಗಾಗಿ ಈ ಪಾಯಸವನ್ನು ತಂದೆ” ಎಂದು ಹೇಳಿದಳು.
ಆಕೆಯ ಮಾತನ್ನು ಕೇಳಿ ನಸುನಕ್ಕ ಬುದ್ಧ ಭಗವಾನ್ “ಅಷ್ಟೆಲ್ಲ ಮಕ್ಕಳು ಕೇಳಿದರೂ ನೀನು ತುಸು ಪಾಯಸವನ್ನು ಆ ಮಕ್ಕಳಿಗೆ ನೀಡಲಿಲ್ಲ ಎಂದಾಗ ನಿನಗೆ ಮಕ್ಕಳು ಏಕೆ ಬೇಕು?” ಎಂದು ಪ್ರಶ್ನಿಸಿದ.

ತನ್ನ ತಪ್ಪಿನ ಅರಿವಾಗಿ ತುಸು ಲಜ್ಜೆಯಿಂದ ತಲೆ ತಗ್ಗಿಸಿದ ಆಕೆ ‘ಭಗವಾನ್, ನಿಜವಾಗಿಯೂ ನನ್ನಿಂದ ಮಹಾಪರಾಧವಾಗಿದೆ ನನ್ನ ತಪ್ಪನ್ನು ಮನ್ನಿಸಿ’ ಎಂದು ಕೇಳಿಕೊಂಡಳು.

ಸ್ನೇಹಿತರೆ, ದೇವರು ಗುಡಿಯಲ್ಲಿ ಶಿಲೆಯ ರೂಪದಲ್ಲಿ ಇರುತ್ತಾನೆ ಎಂದು ನಾವು ತಿಳಿದುಕೊಂಡಿದ್ದೇವೆ, ಆದರೆ ದೇವರು ನಮ್ಮೆಲ್ಲರಲ್ಲೂ ಇದ್ದಾನೆ. ಈ ಜಗತ್ತಿನ ಪ್ರತಿಯೊಂದು ಕಣವು ಕೂಡ ಆ ದೇವರ ರೂಪವೇ. ನಮ್ಮ ಬಳಿ ಇರುವುದನ್ನು ಹಂಚಿ ತಿನ್ನುವ, ಬೇರೆಯವರ ಬಳಿ ಇಲ್ಲದೆ ಹೋದಾಗ ಅವರಿಗೆ ಸಹಾಯ ಮಾಡುವ ನೈತಿಕ ಜವಾಬ್ದಾರಿ ನಮ್ಮದಾಗಿರಬೇಕು. ಕೊಡುವವರು ಕೀಳಲ್ಲ, ಕೊಟ್ಟವನು ಮೇಲಲ್ಲ. ನಾವೆಲ್ಲರೂ ಒಂದು ರೀತಿಯಲ್ಲಿ ಕೇಳುವ ವರ್ಗದವರೇ… ಇಲ್ಲದವರು ಇದ್ದವರ ಬಳಿ ಬೇಡಿದರೆ, ಇದ್ದವರು ದೇವರ ಬಳಿ ಬೇಡುತ್ತಾರೆ.

ನಮ್ಮ ಬಳಿ ಇರುವುದರ ಕುರಿತು ದರ್ಪ, ಅಹಂಭಾವ ತೋರದೆ ಬೇರೊಬ್ಬರಿಗೆ ಸಹಾಯ ಮಾಡುವ ಅವಕಾಶವನ್ನು ಆ ದೇವರು ನಮಗೆ ಒದಗಿಸಿದ್ದಾನೆ ಎಂಬ ಕೃತಜ್ಞತೆಯನ್ನು ಹೊಂದಿದ್ದು ಬದುಕಿನಲ್ಲಿ ಮುನ್ನಡೆಯಬೇಕು ಅದುವೇ ಮಾನವನ ಸಹಜ ಧರ್ಮವಾಗಿರಬೇಕು.
ಏನಂತೀರಾ ಸ್ನೇಹಿತರೇ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!