ಜಗತ್ ಸರ್ವಂ… ಶಿವಮಯಂ!
ಶಿವ ಆಗಮ್ಯ, ಅಗೋಚರ, ಅನಂತ,ಅನಾದಿ ಶಿವನನ್ನು ಅರ್ಥಮಾಡಿಕೊಳ್ಳದ ಪಾಮರರಿಗೆ ಆತ ಕೇವಲ ಲಿಂಗ ರೂಪಿ ಎಂದು ತೋರಿದರೆ ಮತ್ತೆ ಕೆಲವರಿಗೆ ಆತ ಅರೆ ನಗ್ನ, ಬೂದಿ ಬಡಿದುಕೊಂಡಿರುವ ಸ್ಮಶಾನವಾಸಿ.
ಹುಲಿಯ ಚರ್ಮವನ್ನು ಅಂಗವಸ್ತವನ್ನಾಗಿ ಧರಿಸಿದ ಶಿವ ನಾಗರಹಾವನ್ನು ಕೊರಳಲ್ಲಿ ಧರಿಸಿದಾತ. ಶಿರದಲ್ಲಿ ಗಂಗೆಯನ್ನು ಹೊಂದಿರುವ ಆತ ಚಂದ್ರನನ್ನು ಕೂಡ ತನ್ನ ಶಿರೋಭರಣವನ್ನಾಗಿ ಧರಿಸಿದಾತ. ಇದು ಆತನ ಬಾಹ್ಯ ರೂಪವಾದರೆ ಅಂತರಂಗದಲ್ಲಿ ಆತ ಸಕಲವೂ ಹೌದು. ಹಲವಾರು ವೈರುಧ್ಯಗಳ ಸಂಗಮವಾಗಿರುವ ಶಿವನನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಬುದ್ಧಿ ಖರ್ಚು ಮಾಡಬೇಕಾಗಿಲ್ಲ. ಶಿವ ಅದಿಯೋಗಿ,ಭಕ್ತ ಪರಿಪಾಲಕ, ಅಭಿಷೇಕ ಪ್ರಿಯ, ಪಾರ್ವತಿ ಪತಿ ಹರ ಮಹಾದೇವ.
ನಮ್ಮ ಜನಪದರ ಪಾಲಿಗಂತು ಪಾರ್ವತಿ ದೇವಿ ಮನೆ ಮಗಳಾದರೆ ಶಿವ ಮನೆಯಳಿಯ. ಅವರ ಪ್ರೀತ್ಯಾದರ ಮತ್ತು ಭಕ್ತಿಯ ಭಗವಂತ ಈ ಮುಕ್ಕಣ್ಣ.
ಶಿವ ಶಿವ ಎಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲು ಬಂದೆರಗಿ ಕಡೆಗಾಗಿ
ಎಲೆ ಮನವೇ ಶಿವನೆಂಬೊ ಶಬುದ ಬಿಡಬ್ಯಾಡ
ಎಂಬ ಜನಪದರ ನುಡಿಯಂತೆ ಜನರು ತಮ್ಮ ಬದುಕಿನಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಕೂಡ ಶಿವನ ಆಟವೇ ಎಂದು ಭಾವಿಸುತ್ತಾರೆ.
ದೇವ ದಾನವರು ಕ್ಷೀರಸಾಗರ ಮಂಥನವನ್ನು ಮಾಡಿದಾಗ ಉದ್ಭವವಾದ ವಿಷವನ್ನು ಶಿವ ಕುಡಿದನು. ಕೊರಳಲ್ಲಿ ಹಾಲಾಹಲವೇ ತುಂಬಿದ್ದರೂ ಅದನ್ನು ನುಂಗದೆ ಪತ್ನಿಯ ಅಭೀಫ್ಸೆಯಂತೆ ಜಗತ್ಕಲ್ಯಾಣಕ್ಕಾಗಿ ತನ್ನ ಗಂಟಲಲ್ಲಿಯೇ ಇರಿಸಿಕೊಂಡ ಶಿವ ನೀಲಕಂಠನೆನಿಸಿದ… ಆ ಮೂಲಕ ಬದುಕಿನಲ್ಲಿ ಬರುವ ಎಲ್ಲಾ ಕಷ್ಟ, ದುಃಖ, ನೋವುಗಳನ್ನು ಸಹಿಸಿ ಬಾಳಬೇಕು ಎಂಬ ಸಂದೇಶವನ್ನು ನೀಡಿದ. ಲೋಕದ ದುಃಖವನ್ನೆಲ್ಲ ನನಗಿರಲಿ ಎಂದು ಸರ್ವ ಜನರ ಹಿತವನ್ನು ಕಾಯ್ದವ ಶಿವ…. ನೀಲಕಂಠ, ವಿಷಕಂಠ, ಶ್ರೀಕಂಠ ಅವನೇ ನಮ್ಮ ನಂಜುಂಡೇಶ್ವರ.
ವಾಸುಕಿ ಕಂಠಭರಣ… ತನ್ನ ಕೊರಳಲ್ಲಿ ಹಾವನ್ನು ಸುತ್ತಿಕೊಂಡಿರುವ ಶಿವನ ಕೊರಳಲ್ಲಿರುವ ಹಾವು ನಮ್ಮೆಲ್ಲ ಮನೋದೈಹಿಕ ವಾಂಛೆಗಳ ಪ್ರತೀಕ. ಕೊಂಚ ಏಮಾರಿದರೂ ನಮ್ಮನ್ನು ತನ್ನ ಹಿಡಿತದಲ್ಲಿ ಇನ್ನಿಲ್ಲದಂತೆ ಬಂಧಿಸುವ ಕಾರಣ ಸದಾ ಜಾಗೃತನಾಗಿರಬೇಕು ಎಂಬ ಪಾಠವನ್ನು ನಮಗೆ ಸದಾ ನೀಡುತ್ತಿರುವಾತ ನಾಗೇಶ. ಹಾವು ದ್ವೇಷ,ವೈಷಮ್ಯಗಳ ಸಂಕೇತವಾದರೂ ನಮ್ಮಲ್ಲಿ ಅಮೃತತ್ವ ಇರಬೇಕು ಎಂದು ಸಾರುವಾತ ಶಿವಶಂಕರ.
ಗಂಗಾಧರ ಗೌರಿ ಪ್ರಿಯ…. ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿದಾತ. ಬದುಕಿನಲ್ಲಿ ಅದೆಷ್ಟೇ ಒತ್ತಡಗಳು ನಮ್ಮನ್ನು ಬಾಧಿಸಿದರೂ ತಲೆಯನ್ನು ತಣ್ಣಗೆ ಇಟ್ಟುಕೊಳ್ಳಬೇಕು ಎಂದು ಬೋಧಿಸಿದಾತ. ಗೌರಿಯನ್ನು ತೊಡೆಯ ಮೇಲೆ ಹೊತ್ತು ಇಡೀ ಕುಟುಂಬದ ಭಾರವನ್ನು, ಸ್ತ್ರೀ ಕುಲದ ರಕ್ಷಣೆಗೆ ಕಟಿಬದ್ಧನಾದವನು.
ತನ್ನ ದೇಹದ ಅರ್ಧ ಭಾಗವನ್ನೇ ಪತ್ನಿ ಗೌರಿಗೆ ನೀಡಿ ಅರ್ಧನಾರೀಶ್ವರನಾದ ಶಿವ… ಶಕ್ತಿ ಇಲ್ಲದೆ ಶಿವನಿಲ್ಲ ಶಿವನಿಲ್ಲದೆ ಶಕ್ತಿ ಇಲ್ಲ ಎಂದು ಸ್ತ್ರೀ ಪುರುಷ ಸಮಾನತೆಯನ್ನು ಸಾರಿದಾತ. ಅರ್ಧನಾರೀಶ್ವರ ತತ್ವದ ಮೂಲಕ ಈ ಜಗತ್ತಿನ ಏಳಿಗೆಗೆ, ಮನುಕುಲದ ಉದ್ದಾರಕ್ಕೆ ಪುರುಷನಷ್ಟೇ ಹೆಣ್ಣು ಕೂಡ ಕಾರಣಳು ಎಂದು ಸಾರಿದಾತ. ಗಂಗೆ ಎಂದರೆ ನೀರು. ನೀರು ಶುದ್ಧತೆಯ ಸಂಕೇತ ನೀರಿಲ್ಲದೆ ಈ ಜಗತ್ತಿನ ಬದುಕಿಲ್ಲ ಆದ್ದರಿಂದ ನೀರಿನ ಪ್ರತಿರೂಪವಾದ ಗಂಗೆಯನ್ನು ತಲೆಯ ಮೇಲೆ ಹೊತ್ತು ಪೂಜಿಸಲು ಹೇಳಿದಾತ. ನಮ್ಮೆಲ್ಲಾ ಸಮಾಜ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಗಂಗಾ ಪೂಜೆಯೊಂದಿಗೆ ಎಲ್ಲ ಕಾರ್ಯಕ್ರಮಗಳು ಆರಂಭವಾಗುವುದು ಈ ಕಾರಣಕ್ಕಾಗಿಯೇ.
ವೃಷಭ ವಾಹನ…. ಕೃಷಿ ಪ್ರಧಾನವಾದ ನಮ್ಮ ಸಂಸ್ಕೃತಿಯಲ್ಲಿ ಎತ್ತುಗಳು ನಮ್ಮ ಜೀವನದ ಬಹುಮುಖ್ಯ ಸಂಗಾತಿಗಳು. ಸಾಂಘಿಕ ಜೀವನದ ಪರಿಕಲ್ಪನೆಯನ್ನು ಮೂಡಿಸುವ ಎತ್ತುಗಳು ಕೊರಳೆರಡಾದರೂ ಹೊರುವ ನೊಗ ಒಂದೇ ಎಂಬಂತೆ ಬದುಕು ಸಾಗಿಸುತ್ತವೆ, ಆದ್ದರಿಂದ ವೃಷಭ ವಾಹನ ಶಿವ ಈ ಜಗತ್ತು ಎಂಬ ಸಂಸಾರದ ಭಾರವನ್ನು ಪತ್ನಿ ಸಮೇತನಾಗಿ ತಾನು ಹೊತ್ತಿದ್ದು ಎತ್ತಿನಂತೆ ಪ್ರತಿಯೊಬ್ಬ ವ್ಯಕ್ತಿಯು ಕೂಡ ಕೌಟುಂಬಿಕ, ಸಾಮಾಜಿಕ ಮತ್ತು ಧಾರ್ಮಿಕ ಜವಾಬ್ದಾರಿಗಳನ್ನು ಹೊರಬೇಕೆಂಬ ಸಂದೇಶವನ್ನು ನೀಡುತ್ತಾನೆ.
ಇನ್ನು ನಮ್ಮ ಲೌಕಿಕರು ಮಾತಿನಲ್ಲಿ ಹೇಳುವಾಗ ಹೆಣ್ಣು ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ, ಹೆಣ್ಣು ಮಕ್ಕಳ ತಲೆ ಮೇಲೆ ಕೂಡಿಸಿಕೊಳ್ಳಬಾರದು ಎಂಬ ಮಾತಿಗೆ ಅಪವಾದವಾಗಿ ಹೆಣ್ಣು ಮಕ್ಕಳ ಸ್ಥಾನ ಉನ್ನತವಾದದ್ದು ಎಂದು ತನ್ನ ಪತ್ನಿಯರನ್ನು ತಲೆಯ ಮೇಲೆ ಮತ್ತು ತೊಡೆಯ ಮೇಲೆ ಕೂರಿಸಿ ತೋರಿದಾತ. ಈ ಸೃಷ್ಟಿಯಲ್ಲಿ ಗಂಡು ಹೆಣ್ಣು ಎಂಬ ಬೇಧ ವಿರುವುದು ಅವರ ದೈಹಿಕ ರಚನೆಯಲ್ಲಿ ಮಾತ್ರ. ಪುರುಷ ಸೃಷ್ಟಿಗೆ ಕಾರಣವಾದರೆ ಈ ಇಡೀ ಸೃಷ್ಟಿಯ ಕರ್ತೃ ಹೆಣ್ಣು ಎಂದು ತೋರಿಸಿಕೊಟ್ಟು ಉಮಾ ಮಹೇಶ್ವರ, ಗೌರಿ ಶಂಕರ ಗಿರಿಜಾಪತಿ ಎಂದು ಕರೆಸಿಕೊಂಡಾತ.
ಗಜ ಚರ್ಮಾಂಬರಧಾರಿ… ಭಕ್ತ ಪ್ರಿಯನಾದ ಶಿವನು
ಮಹಿಷಾಸುರನ ಪುತ್ರನಾದ ಗಜಾಸುರನನ್ನು ಸಂಹರಿಸುವ ಮುನ್ನ ಪ್ರಾಯಶ್ಚಿತಕ್ಕೊಳಗಾದ ಗಜಾಸುರನ ಬೇಡಿಕೆಯಂತೆ ಆತನ ಚರ್ಮವನ್ನು ಧರಿಸಿದ ಎಂಬ ಶಿವಪುರಾಣದ ಹೇಳಿಕೆಯು ಶಿವನು ನಾವು ನಮ್ಮ ತಪ್ಪುಗಳನ್ನು ಅರಿತು ಕ್ಷಮೆ ಯಾಚಿಸಿದಾಗ ಭಕ್ತ ವತ್ಸಲನಾದ ಶಿವ ನಮ್ಮನ್ನು ಕ್ಷಮಿಸಿ ನಮ್ಮನ್ನು ಪೊರೆಯುತ್ತಾನೆ ಎಂಬ ಸಂದೇಶವನ್ನು ನೀಡುತ್ತಾನೆ. ಇನ್ನು ಆತ ಧರಿಸಿರುವ ಹುಲಿಯ ಚರ್ಮವು ಕೂಡ ಭಯ ಮುಕ್ತರಾಗಿರಬೇಕು ಎಂಬುದನ್ನು ಸೂಚಿಸುತ್ತದೆ.
ಮುಕ್ಕಣ್ಣ ಹಣೆಗಣ್ಣ ಎಂದು ಜನಪದದಿಂದ ಕರೆಯಲ್ಪಡುವ ಶಿವ ತನ್ನ ಮೂರನೇ ಕಣ್ಣನ್ನು ತೆರೆದರೆ ಆತನ ಎದುರಿರುವ ಎಲ್ಲವೂ ಭಸ್ಮವಾಗುತ್ತದೆ ಎಂಬ ಪ್ರತೀತಿ ಇದೆ. ಜ್ಞಾನವೆಂಬ ಮೂರನೆಯ ಚಕ್ಶುವನ್ನು ತೆರೆಯುವ ಮೂಲಕ ನಮ್ಮಲ್ಲಿ ಅಡಗಿರುವ ಅಜ್ಞಾನ, ಅಂಧ ಶ್ರದ್ಧೆಗಳನ್ನು ಹೊಡೆದೋಡಿಸಬೇಕು ಎಂಬ ತಿಳುವಳಿಕೆಯನ್ನು ನೀಡುತ್ತಾನೆ.
ತ್ರಿಶೂಲ ಧಾರಿ…. ಹರಿತವಾದ 3 ಅಲಗುಗಳನ್ನು ಒಳಗೊಂಡ ತ್ರಿಶೂಲವೆಂಬ ಆಯುಧವನ್ನು ಹೊಂದಿರುವ ಶಿವನು ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು,,ದೇಹ ಮನಸ್ಸು ಮತ್ತು ಆತ್ಮಗಳ ಸಮ್ಮಿಲನದ ಮೂಲತತ್ವವನ್ನು ಹೇಳುತ್ತಾನೆ. ವ್ಯಕ್ತಿಯು ತನ್ನಲ್ಲಿ ಅಂತರ್ಗತವಾಗಿರುವ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳನ್ನು ತನ್ನ ಅಧೀನದಲ್ಲಿಯೇ ಇಟ್ಟುಕೊಳ್ಳಬೇಕು ಎಂಬ ರಹಸ್ಯವನ್ನು ನಮಗೆ ತ್ರಿಶೂಲವನ್ನು ಸದಾ ತನ್ನ ಕೈಯಲ್ಲಿ ಹಿಡಿದಿರುವ ಶಿವ ಬೋಧಿಸುತ್ತಾನೆ.
ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಶಿವ ಲಯಕರ್ತ. ಸೃಷ್ಟಿ, ಸ್ಥಿತಿಗಳಷ್ಟೇ ಮುಖ್ಯವಾದ ಕಾರ್ಯ ಲಯ. ನಮ್ಮಲ್ಲಿರುವ ತಾಮಸ ಗುಣಗಳನ್ನು ಸುಟ್ಟು ಹಾಕಬೇಕು ಸಾತ್ವಿಕ ತೇಜಸ್ಸನ್ನು ಹೆಚ್ಚಿಸಿಕೊಳ್ಳಬೇಕು ಭೋಗ ಲಾಲಸೆಗಳ ಬದುಕಿಂದ ದೂರವಿದ್ದು ಸದಾ ಸಂತೃಪ್ತಿಯ ನೆಮ್ಮದಿಯ ಬದುಕನ್ನು ಜೀವಿಸಬೇಕು.
ಶಿವನ ಕೈಯಲ್ಲಿರುವ ಡಮರುಗವು ಲಯ ಬದ್ಧವಾದ ನಾದವನ್ನು ಹೊರಡಿಸುವಂತೆ ವ್ಯಕ್ತಿಯು ತನ್ನ ಸಂಸಾರದಲ್ಲಿ ಲಯಬದ್ಧವಾಗಿ ಬದುಕಬೇಕು, ಬಾಳಬೇಕು. ತಾಳ ತಪ್ಪದಂತೆ ಬದುಕಿನ ಡಮರುಗವನ್ನು ನಮ್ಮ ಕೈಯಲ್ಲಿ ಇಟ್ಟುಕೊಂಡು ಒಳ್ಳೆಯನಾದ ಹೊರಡುವಂತೆ ಬಾರಿಸಬೇಕು ಎಂಬುದನ್ನು ಸೂಚ್ಯವಾಗಿ ಹೇಳುತ್ತಾನೆ ಶಿವ.
ಶಿವ ಆದಿ ಯೋಗಿ, ಧ್ಯಾನ ಸಮಾಧಿಯಲ್ಲಿ ಮುಳುಗಿ ಜಗದ ಜಂಜಡಗಳನ್ನು ಕಳೆದುಕೊಳ್ಳಬಹುದು ಎಂಬ ಸತ್ಯವನ್ನು ಜಗತ್ತಿಗೆ ಅರುಹಿದಾತ ಶಿವ. ಸತ್ಯಪ್ರಿಯ ನಾದ ಶಿವ ಭಕ್ತ ಪ್ರಿಯನು ಹೌದು ಭಕ್ತಿ ಪ್ರಿಯನು ಕೂಡ.
ಇಂತಹ ಶಿವನನ್ನು ಪೂಜಿಸಲು ಶಿವರಾತ್ರಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬ ಪರಿಕಲ್ಪನೆ ನಮ್ಮ ಪೂರ್ವಜರಲ್ಲಿದ್ದು ಇದಕ್ಕೆ ಅನೇಕ ಕಾರಣಗಳು ಉಂಟು. ಬ್ರಹ್ಮ ವಿಷ್ಣುವಿನಲ್ಲಿ ಯಾರು ದೊಡ್ಡವರು ಎಂಬ ವಾಗ್ವಾದಗಳು ಉಂಟಾದಾಗ ಅವರಿಬ್ಬರ ನ್ಯಾಯವನ್ನು ಬಗೆಹರಿಸಲು ಅಗ್ನಿ ಕಂಬ ರೂಪಧಾರಿಯಾಗಿ ತನ್ನ ಮೂಲವನ್ನು ಹುಡುಕಲು ಹೇಳಿದನು ಶಿವ. ಬ್ರಹ್ಮದೇವನು ಹಂಸದ ಮೇಲೆ ಕುಳಿತು ಶಿವನ ತಲೆಯ ಭಾಗವನ್ನು ನೋಡಲು ಮೇಲ್ಮುಖವಾಗಿ ಚಲಿಸಿದರೆ, ವರಾಹ ರೂಪದಲ್ಲಿ ವಿಷ್ಣು ಕೆಳಭಾಗಕ್ಕೆ ಚಲಿಸಿದನು. ಆದರೆ ಇಬ್ಬರಿಗೂ ಶಿವನ ಮೂಲ ದೊರೆಯಲಿಲ್ಲ. ಮೇಲಿನಿಂದ ಬೀಳುತ್ತಿದ್ದ ಕೇದಿಗೆ ( ಕೇತಕಿ )ಯ ಹೂವೊಂದನ್ನು ಕಂಡು ಬ್ರಹ್ಮದೇವನು ಪ್ರಶ್ನಿಸಿದಾಗ ತಾನು ಶಿವನ ತಲೆಯಿಂದ ಕೆಳಗೆ ಬೀಳುತ್ತಿರುವೆ ಎಂದು ಹೇಳಿದುದನ್ನು ಕೇಳಿ ಬ್ರಹ್ಮದೇವನು ಮರಳಿ ಬಂದು ತಾನು ಶಿವನ ತಲೆಯ ಮೇಲಿಂದ ಕೇದಿಗೆ( ಕೇತಕಿ) ಹೂವನ್ನು ತಂದಿದ್ದೇನೆ ಎಂದು ಸುಳ್ಳು ನುಡಿಯಲು ಕೋಪಗೊಂಡ ಶಿವನು ಭೂಲೋಕದಲ್ಲಿ ನಿನಗೆ ಪೂಜೆ ನಡೆಯದಿರಲಿ ಎಂದು ಶಾಪ ಕೊಟ್ಟು ತಾನು ಲಿಂಗರೂಪಿಯಾಗಿ ನಿಂತನು. ಆ ದಿನವೇ ಮಾಘ ಮಾಸದ ಚತುರ್ದಶಿಯಾಗಿತ್ತು.
ಮನದ ಅಂಧಕಾರವನ್ನು ಕಳೆಯುವ ತ್ರಯೋದಶಿ ಮತ್ತು ಚತುರ್ದಶಿಗಳ ನಡುವಿನ ಈ ರಾತ್ರಿ ಮನದ ತಮವನ್ನು ಹರಿದು ಸುಜ್ಞಾನದ ಬೆಳಕನ್ನು ಕೊಡು ಎಂದು ಶಿವನನ್ನು ಪೂಜಿಸುವ ಪವಿತ್ರವಾದ, ಎಚ್ಚರ ಸ್ಥಿತಿಯಲ್ಲಿರುವಂತಹ ಈ ರಾತ್ರಿಯಂದು ಶಿವನ ಧ್ಯಾನದಲ್ಲಿ, ಪೂಜೆ, ಜಪತಪಗಳಲ್ಲಿ, ಜಾಗರಣೆಯಲ್ಲಿ ಕಳೆದು ಶಿವನ ಆರಾಧನೆಯಲ್ಲಿ ತೊಡಗುವರು.
ಅಭಿಷೇಕ ಪ್ರಿಯನಾದ ನಿರಾಡಂಬರ ಶಿವನಿಗೆ ಕೇವಲ ನೀರಿನ ಅಭಿಷೇಕ ವಿಭೂತಿ ಬಿಲ್ವಪತ್ರೆ , ತುಂಬೆಯ ಇಲ್ಲವೇ ಕೇದಿಗೆಯ ಹೂವು ಇದ್ದರೆ ಸಾಕು ಆತ ಸಂತೃಪ್ತನಾಗುತ್ತಾನೆ.
ಆದ್ದರಿಂದಲೇ ನಮ್ಮ ಶಿವಶರಣರು ಶಿವನು ಕೇವಲ ನಾದ ಮತ್ತು ವೇದಗಳ ಪ್ರಿಯನಲ್ಲ… ಆತ ಭಕ್ತ ಪ್ರಿಯ ಎಂದು ಹಾಡಿ ಹೊಗಳಿದ್ದಾರೆ.
–ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ