ಜತೆಯಾದವಳು

21-03-3025 – ವಿಶ್ವ ಕಾವ್ಯ ದಿನ

ಜತೆಯಾದವಳು

ಊರ ಹುಡುಗಿಯರೆಲ್ಲ
ನನ್ನನ್ನು ಒಲ್ಲೆನೆಂದರೂ
ಇವಳೊಬ್ಬಳೆ ಹೆದರದೆ
ನನಗೆ ಜತೆಯಾದವಳು.

ರೇಶ್ಮೆಯಂತೆ ಮಿರುಗುವ ನವಿರಾದ
ತಲೆಕೂದಲು,ಹಣೆ,
ಬೆಳಕು ಚೆಲ್ಲುವ ಕಣ್ಣುಗಳು,
ಅದರ ಹುಬ್ಬು, ಕೆನ್ನೆ, ಮೂಗು,
ತುಟಿ, ಅದರೊಳಡಗಿರುವ
ಹೊಳೆವ ಹಲ್ಲುಗಳು,
ಜೇನು ಸುರಿಸುವ ನಾಲಿಗೆ,
ಪದ-ಆಕಾರಗಳಿಗೆ ಸಿಗದ
ಮುಖ,ಅದರಡಿಯಲಿ
ಒಪ್ಪವಾದ ದೇಹ……

ಹೀಗಿರುವ ಇವಳು
ನನ್ನ ಜತೆಯಲಿದ್ದುದ
ಕಂಡು ಜಗವೇ
ಮತ್ಸರಗೊಂಡಿರುವದು
ಕಾಲಕಾಲದ ಸತ್ಯ…..

ಯಾವ ಲಿಪಿಕಾರನಿಗೂ
ನಿಲುಕದ ಪದಾತೀತಳು
ಯಾವ ಕುಂಚಕೂ
ಎಟುಕದ ರೂಪಾತೀತಳು
ಏಳು ಬಣ್ಣಗಳಿಗೂ
ಸಾಧ್ಯವಲ್ಲದ
ವರ್ಣಾತೀತಳು
ಉಡುಗೆ-ತೊಡುಗೆಗಳ
ಹಂಗು ಹರಿದವಳು
ತನಗಾಗಿ ಏನನ್ನೂ
ಕಾಡಿ-ಬೇಡದವಳು

ಜಗದ ಜಂಜಡಗಳಿಗೆ
ಸದಾ ಎದುರಾಗಿ
ಯಾವ ಪರಾಕ್ರಮಿಗೂ
ಮಿಗಿಲಾಗಿ ನಿಲ್ಲುವವಳು
ನನಗೆ ಸೋಲೇ
ಇಲ್ಲದಂತಾಗಿಸಿದವಳು……

ನನಗರಿಯದಂತೆಯೇ
ನನಗೆ ಯೌವ್ವನ ತಾಗುವ
ಮೊದಲೇ
ಊರ ಹುಡುಗಿಯರ
ಹುಸಿ ವೈಯ್ಯಾರ
ತೋರುವ ಮೊದಲೇ
ಅವರೆಲ್ಲರೂ ಒಲ್ಲೆನೆಂದು
ನಾನು ಕೊರಗುವ ಮೊದಲೇ
ನನ್ನೊಳಗೆ ಮಿಂಚಾಗಿ
ಬೆಳಕಾಗಿ ಹೊಳಪಾಗಿ
ನನ್ನನ್ನೂ ಮೀರಿ
ಜಗದ ದಾರಿಗೆ ದೀಪವಾಗಿ
ಬಂದವಳು ಇವಳೇ ಇವಳೇ
“ಕಾವ್ಯ” “ಕಾವ್ಯ” “ಕಾವ್ಯ”
ಯಾರ ಅಂಕಿತಕ್ಕೂ ಸಿಗದೇ
ನನ್ನ ಅಂಕಿತವಾದವಳು.
ನನ್ನನ್ನು ಕವಿಯಾಗಿಸಿದವಳು.

 

 

 

 

 

 

 

 

-ಕೆ.ಶಶಿಕಾಂತ

ಲಿಂಗಸೂಗೂರ
21-03-3025
(ವಿಶ್ವ ಕಾವ್ಯ ದಿನ)

Don`t copy text!